ADVERTISEMENT

ಇರಾಕ್‌ನಿಂದ ಭಾರತಕ್ಕೆ ಗರಿಷ್ಠ ತೈಲ ಪೂರೈಕೆ

ಏ‍ಪ್ರಿಲ್‌ನಲ್ಲಿ ಒಪೆಕ್‌ ಉತ್ಪಾದನೆ ನಾಲ್ಕು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆ

ಪಿಟಿಐ
Published 1 ಮೇ 2019, 18:15 IST
Last Updated 1 ಮೇ 2019, 18:15 IST
   

ನವದೆಹಲಿ: ಸತತ ಎರಡನೇ ಹಣಕಾಸು ವರ್ಷದಲ್ಲಿಯೂ ಇರಾಕ್‌ನಿಂದ ಭಾರತಕ್ಕೆ ಅತಿ ಹೆಚ್ಚು ಕಚ್ಚಾ ತೈಲ ಪೂರೈಕೆಯಾಗಿದೆ.

2018–19ನೇ ಹಣಕಾಸು ವರ್ಷದಲ್ಲಿ 4.55 ಕೋಟಿ ಟನ್‌ ಕಚ್ಚಾ ತೈಲ ಆಮದಾಗಿದೆ. 2017–18ನೇ ಹಣಕಾಸು ವರ್ಷದಲ್ಲಿ 4.57 ಕೋಟಿ ಟನ್‌ ಆಮದಾಗಿತ್ತು ಎಂದು ವಾಣಿಜ್ಯ ಮಾಹಿತಿ ಮತ್ತು ಲೆಕ್ಕಪತ್ರಗಳ ಮಹಾ
ನಿರ್ದೇಶನಾಲಯ ಮಾಹಿತಿ ನೀಡಿದೆ.

2017–18ನೇ ಹಣಕಾಸು ವರ್ಷದವರೆಗೂ ಸೌದಿ ಅರೇಬಿಯಾ ಭಾರತಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಪೂರೈಕೆ ಮಾಡುತ್ತಿತ್ತು. ಆದರೆ 2017–18ರಿಂದ ಇರಾಕ್‌ ಮೊದಲ ಸ್ಥಾನಕ್ಕೇರಿದೆ.

ADVERTISEMENT

ಭಾರತಕ್ಕೆ ಅತಿ ಹೆಚ್ಚು ತೈಲ ಪೂರೈಸುವ ದೇಶಗಳ ಪಟ್ಟಿಯಲ್ಲಿ ಇರಾನ್‌ ಮೂರನೇ ಸ್ಥಾನದಲ್ಲಿದೆ. ಆದರೆ, ಅಮೆರಿಕವು ಇರಾನ್‌ ಮೇಲೆ ರಫ್ತು ನಿಷೇಧ ಹೇರಿರುವುದರಿಂದ ಭಾರತವು ಆಮದನ್ನು ನಿಲ್ಲಿಸಿದೆ.

ಅಮೆರಿಕಾದ ಪಾಲು ಹೆಚ್ಚಳ: 2018–19ನೇ ಹಣಕಾಸು ವರ್ಷದಲ್ಲಿ ಅಮೆರಿಕದಿಂದ ಭಾರತಕ್ಕೆ ತೈಲ ಪೂರೈಕೆ ನಾಲ್ಕುಪಟ್ಟು ಹೆಚ್ಚಾಗಿದ್ದು 64 ಲಕ್ಷ ಟನ್‌ಗಳಿಗೆ ತಲುಪಿದೆ.2017–18ರಲ್ಲಿ 14 ಲಕ್ಷ ಕೋಟಿ ಟನ್‌ ತೈಲವನ್ನು ಭಾರತ ಆಮದು ಮಾಡಿಕೊಂಡಿತ್ತು.

ಒಪೆಕ್‌ ತೈಲ ಉತ್ಪಾದನೆ ಕುಸಿತ: ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆಯ (ಒಪೆಕ್‌) ಏಪ್ರಿಲ್‌ನ ತೈಲ ಉತ್ಪಾದನೆ ನಾಲ್ಕು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.

ಏಪ್ರಿಲ್‌ನಲ್ಲಿ ಒಂದು ದಿನಕ್ಕೆ 3.02 ಕೋಟಿ ಬ್ಯಾರೆಲ್‌ಗಳಷ್ಟು ತೈಲ ಉತ್ಪಾದನೆ ಮಾಡಿವೆ. ಮಾರ್ಚ್‌ನಲ್ಲಿದ್ದ ಉತ್ಪಾದನೆಗೆ ಹೋಲಿಸಿದರೆ ಒಂದು ದಿನದ ಉತ್ಪಾದನೆಯಲ್ಲಿ 90 ಸಾವಿರ ಬ್ಯಾರೆಲ್‌ಗಳಷ್ಟು ಕಡಿಮೆಯಾಗಿದೆ.

ತೈಲ ದರ ನಿಯಂತ್ರಿಸಲು ಒಪೆಕ್‌ನ 11 ಸದಸ್ಯ ದೇಶಗಳು ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಭರವಸೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ತಗ್ಗಿಸಿವೆ.ಮಾರ್ಚ್‌ನಲ್ಲಿ ಒಪೆಕ್‌ ಸದಸ್ಯ ರಾಷ್ಟ್ರಗಳ ಉತ್ಪಾದನೆ ದಿನಕ್ಕೆ 5.5 ಲಕ್ಷ ಬ್ಯಾರೆಲ್‌ಗಳಷ್ಟು ಕಡಿಮೆಯಾಗಿದ್ದು, 3 ಕೋಟಿ ಬ್ಯಾರೆಲ್‌ಗಳಿಗೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.