ADVERTISEMENT

ಹೊಸ ತಳಿ ಈರುಳ್ಳಿ ಅಭಿವೃದ್ಧಿ: ಅಧಿಕ ಇಳುವರಿ; ಬೆಳೆಗಾರರಿಗೆ ವರದಾನ

ಶ್ರೀಕಾಂತ ಕಲ್ಲಮ್ಮನವರ
Published 2 ಜನವರಿ 2025, 0:30 IST
Last Updated 2 ಜನವರಿ 2025, 0:30 IST
ಈರುಳ್ಳಿಯ ಹೊಸ ತಳಿ ‘ಲೈನ್‌–883’
ಈರುಳ್ಳಿಯ ಹೊಸ ತಳಿ ‘ಲೈನ್‌–883’   

ಹುಬ್ಬಳ್ಳಿ: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ರಾಷ್ಟ್ರೀಯ ತೋಟಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು, ಹೊಸ ಈರುಳ್ಳಿ ತಳಿಯಾದ ‘ಲೈನ್‌–883’ ಅನ್ನು ಅಭಿವೃದ್ಧಿಪಡಿಸಿದೆ. ಈ ತಳಿಯು ಅತಿ ಕಡಿಮೆ ಅವಧಿಯಲ್ಲಿ ಕಟಾವಿಗೆ ಬರಲಿದ್ದು, ಹೆಚ್ಚು ಇಳುವರಿ ನೀಡಲಿದೆ.

‘ಕಪ್ಪು ಒಣಭೂಮಿಯಲ್ಲಿ ಈ ತಳಿಯ ಈರುಳ್ಳಿ ಬೆಳೆಯಬಹುದು. ಜೂನ್‌ನಿಂದ  ಆಗಸ್ಟ್‌ವರೆಗೆ ಬಿತ್ತನೆ ಮಾಡಬಹುದು. 85 ರಿಂದ 90 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಜೂನ್‌ ಮೊದಲ ವಾರದಲ್ಲಿ ಬಿತ್ತನೆ ಮಾಡಿದರೆ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಕಟಾವು ಆಗಿ ಮಾರುಕಟ್ಟೆಗೆ ಪೂರೈಸಬಹುದು’ ಎಂದು ಹುಬ್ಬಳ್ಳಿಯ ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಕೇಂದ್ರದ ತಾಂತ್ರಿಕ ಅಧಿಕಾರಿ ಧನಂಜಯ ದೇಸಾಯಿ ತಿಳಿಸಿದರು.

ಸಾಮಾನ್ಯ ತಳಿಗಳ ಈರುಳ್ಳಿ ಪ್ರತಿ ಹೆಕ್ಟೇರ್‌ಗೆ 200ರಿಂದ 250 ಕ್ವಿಂಟಲ್‌ ಇಳುವರಿ ನೀಡಿದರೆ, ಲೈನ್‌–883 ತಳಿಯು 300ರಿಂದ 325 ಕ್ವಿಂಟಲ್‌ ನೀಡುತ್ತದೆ. ಈ ತಳಿಯ ಈರುಳ್ಳಿ ಗೆಡ್ಡೆ ದೊಡ್ಡಾಗಿರುತ್ತವೆ. 5ರಿಂದ 5.5 ಸೆಂ.ಮೀ ಸುತ್ತಳತೆ ಹೊಂದಿರುತ್ತವೆ.

ADVERTISEMENT

ಆಕರ್ಷಕ ದಟ್ಟ ಕೆಂಪು ಬಣ್ಣ ಹೊಂದಿರುತ್ತವೆ. ಗೆಡ್ಡೆಯ ಒಳಪದರ ಬಿಗಿಯಾಗಿದ್ದು, ಗೆಡ್ಡೆ ಗಟ್ಟಿ ಇರುತ್ತದೆ. ಪ್ರತಿ ಗಡ್ಡೆ 110ರಿಂದ 120 ಗ್ರಾಂವರೆಗೆ ತೂಕ ಹೊಂದಿರುತ್ತದೆ. ಅಡುಗೆ ಸಂದರ್ಭದಲ್ಲಿ ಇದನ್ನು ಕತ್ತರಿಸುವಾಗ ಕಣ್ಣು ಊರಿ ಕಡಿಮೆ ಇರುತ್ತದೆ. ಸಿಹಿ ಅಂಶ ಶೇ 14ರಷ್ಟಿದೆ.

ನಾಸಿಕ್‌ನಲ್ಲಿ ತಳಿ ಅಭಿವೃದ್ಧಿ: ನಾಫೆಡ್‌ ಅಡಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಯ ತೋಟಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಈ ತಳಿಯನ್ನು ಹಲವು ವರ್ಷಗಳ ಸಂಶೋಧನೆಯಿಂದ ಅಭಿವೃದ್ಧಿಪಡಿಸಿದೆ.

ರಾಜ್ಯದ ಹಲವು ಕಡೆ ಪ್ರಾಯೋಗಿಕವಾಗಿ ಬೆಳೆಯಲಾಗಿದ್ದು, ಉತ್ತಮ ಫಲಿತಾಂಶ ಬಂದಿದೆ. ಈಗ ಮುಕ್ತವಾಗಿ ಬೆಳೆಯಲು ಬಿತ್ತನೆ ಬೀಜಗಳನ್ನು ಮಾರಲಾಗುತ್ತಿದೆ. ಬಿತ್ತನೆ ಬೀಜದ ದರ ಅಂದಾಜು ಪ್ರತಿ ಕೆ.ಜಿಗೆ ₹2,000 ಇದೆ.

ಆಸಕ್ತರು ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಯಲ್ಲಿರುವ ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಕೇಂದ್ರವನ್ನು ಸಂಪರ್ಕಿಸಬಹುದು (ಮೊಬೈಲ್‌ 82966 97152 ಅಥವಾ ದೂರವಾಣಿ ಸಂಖ್ಯೆ 0836–2225813)

ಈರುಳ್ಳಿ ಹೊಸ ತಳಿ ‘ಲೈನ್‌–883’
ಈ ಹೊಸ ತಳಿ ಈರುಳ್ಳಿ ಬೆಳೆಯಲು ಯಾವುದೇ ವಿಶೇಷ ಕ್ರಮಗಳಿಲ್ಲ. ಉತ್ತಮ ಇಳುವರಿ ಬರುವುದರಿಂದ ರೈತರಿಗೆ ಹೆಚ್ಚು ಲಾಭ ಸಿಗಲಿದೆ
-ಡಾ. ತಿಲಕ್‌ ಜೆ.ಸಿ ಮುಖ್ಯಸ್ಥ ರಾಷ್ಟ್ರೀಯ ತೋಟಗಾರಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.