ADVERTISEMENT

ಈರುಳ್ಳಿಗೆ ಬಂತು ಸಿರಿ: ಬೆಲೆ ದುಬಾರಿ!

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 9:29 IST
Last Updated 29 ನವೆಂಬರ್ 2019, 9:29 IST
   

ಬೆಂಗಳೂರು: ನಗರದಲ್ಲಿ ಒಂದು ವಾರದಿಂದ ಈರುಳ್ಳಿ ದರ ಗಣನೀಯ ಏರಿಕೆ ಕಂಡಿದ್ದು, ಪ್ರತಿ ಕೆ.ಜಿ.ಗೆ ₹100ರಿಂದ ₹110ರಂತೆ ಮಾರಾಟವಾಗುತ್ತಿದೆ.

ದರ ಇಳಿಕೆಯಿಂದ ನಿಟ್ಟುಸಿರುಬಿಟ್ಟಿದ್ದ ಗ್ರಾಹಕರಿಗೆ ಈರುಳ್ಳಿ ಮತ್ತೆ ಜೇಬಿಗೆ ಕತ್ತರಿ ಹಾಕಿದೆ. ದೇಶದೆಲ್ಲೆಡೆ ಈರುಳ್ಳಿ ಉತ್ಪಾದನೆ ಕಡಿಮೆಯಾಗಿದೆ. ಈಗ ಬೆಳೆದಿರುವ ಈರುಳ್ಳಿ ಮಾರುಕಟ್ಟೆಗೆ ಬರಲು ಕನಿಷ್ಠ ಎರಡು ತಿಂಗಳಾಗಬಹುದು. ಅಲ್ಲಿಯವರೆಗೆ ಈರುಳ್ಳಿ ದರ ₹100ರ ಆಸುಪಾಸಿನಲ್ಲೇ ಇರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ADVERTISEMENT

‘ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದ ಈರುಳ್ಳಿ ಬೆಳೆ ಹಾನಿಯಾಗಿ, ಬೆಲೆ ಏರಿಕೆಯಾಗಿದೆ. ದೇಶದ ಈರುಳ್ಳಿಗೆ ವಿದೇಶಗಳಲ್ಲೂ ಬೇಡಿಕೆ ಇದೆ. ಹೀಗಾಗಿ ಈರುಳ್ಳಿ ಹೆಚ್ಚು ರಫ್ತಾಗುತ್ತಿದೆ. ಇದರಿಂದ ಮಾರುಕಟ್ಟೆಗೆ ಅಗತ್ಯ ಪ್ರಮಾಣದ ಈರುಳ್ಳಿ ಪೂರೈಕೆಯಾಗುತ್ತಿಲ್ಲ’ ಎನ್ನುತ್ತಾರೆ ಕೆ.ಆರ್‌.ಮಾರುಕಟ್ಟೆಯ ತರಕಾರಿ ವ್ಯಾಪಾರಿ ಸತೀಶ್‌.

ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಈ ವರ್ಷ ನೆರೆ ಪರಿಸ್ಥಿತಿಯಿಂದಾಗಿ ಈರುಳ್ಳಿ ಉತ್ಪಾದನೆ ಕುಸಿದಿದ್ದು, ಇದು ಗ್ರಾಹಕರ ಮೇಲೆ ಪರಿಣಾಮ ಬೀರುತ್ತಿದೆ. ಸದ್ಯ ಸ್ಥಳೀಯ ಮಾರುಕಟ್ಟೆಗೆ ಈರುಳ್ಳಿಯ ಆವಕವೇ ಕಡಿಮೆ ಆಗಿದೆ. ಇದರಿಂದಾಗಿ ಬೆಲೆ ದುಪ್ಪಟ್ಟಾಗಿದೆ. ಸಣ್ಣ ಗಾತ್ರದ ಈರುಳ್ಳಿಯ ಬೆಲೆಯೇ ₨70ರಿಂದ ಇದೆ. ದೊಡ್ಡ ಗಾತ್ರದ ಈರುಳ್ಳಿ ಮಾರುಕಟ್ಟೆಯಲ್ಲಿ ಅಪರೂಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.