
ನವದೆಹಲಿ: ದೇಶದಲ್ಲಿ ಮಾನ್ಯತೆ ಪಡೆದ ಎರಡು ಲಕ್ಷಕ್ಕೂ ಅಧಿಕ ನವೋದ್ಯಮಗಳು ಇವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬುಧವಾರ ತಿಳಿಸಿದೆ.
ಸ್ಟಾರ್ಟ್‌ಅಪ್ ಇಂಡಿಯಾ ಕ್ರಿಯಾ ಯೋಜನೆ ಅಡಿಯಲ್ಲಿ ಈ ನವೋದ್ಯಮಗಳು ತೆರಿಗೆ ಪ್ರೋತ್ಸಾಹಕ್ಕೆ ಅರ್ಹತೆ ಹೊಂದಿರುತ್ತವೆ ಎಂದು ತಿಳಿಸಿದೆ.
ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯು (ಡಿಪಿಐಐಟಿ) ಇದುವರೆಗೆ 2,01,335 ನವೋದ್ಯಮಗಳನ್ನು ಗುರುತಿಸಿದೆ. ಈ ನವೋದ್ಯಮಗಳು ದೇಶದಲ್ಲಿ 21 ಲಕ್ಷಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ತಿಳಿಸಿದೆ.
14 ವಲಯಗಳಲ್ಲಿ ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯ ಅಡಿ ಪ್ರಸಕ್ತ ಜೂನ್‌ವರೆಗೆ ₹1.88 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಆಗಿದೆ.
ಇದರ ಪರಿಣಾಮವಾಗಿ ₹17 ಲಕ್ಷ ಕೋಟಿ ಮೌಲ್ಯದಷ್ಟು ಹೆಚ್ಚುವರಿ ಉತ್ಪಾದನೆ ಅಥವಾ ಮಾರಾಟ ಆಗಿದೆ. 12.3 ಲಕ್ಷದಷ್ಟು ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯಾಗಿದೆ. ಎಲೆಕ್ಟ್ರಾನಿಕ್ಸ್, ಔಷಧ, ದೂರಸಂಪರ್ಕ ಮತ್ತು ಆಹಾರ ಸಂಸ್ಕರಣೆ ವಲಯದ ರಫ್ತು ₹7.5 ಲಕ್ಷ ಕೋಟಿ ದಾಟಿದೆ ಎಂದು ತಿಳಿಸಿದೆ.
₹67 ಲಕ್ಷ ಕೋಟಿ ಎಫ್‌ಡಿಐ: ಕಳೆದ 11 ಆರ್ಥಿಕ ವರ್ಷದಲ್ಲಿ ಭಾರತವು, ₹67.28 ಲಕ್ಷ ಕೋಟಿಯಷ್ಟು ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಆಕರ್ಷಿಸಿದೆ. 2002–03ರಿಂದ 2013–14ರವರೆಗೆ ₹27.72 ಲಕ್ಷ ಕೋಟಿ ಹೂಡಿಕೆ ಆಗಿತ್ತು. ಇದಕ್ಕೆ ಹೋಲಿಸಿದರೆ ವಿದೇಶಿ ನೇರ ಹೂಡಿಕೆ ಪ್ರಮಾಣವು ಶೇ 143ರಷ್ಟು ಏರಿಕೆ ಆಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.