ADVERTISEMENT

ಬ್ಯಾಂಕಿಂಗ್‌ ಮಸೂದೆಗೆ ಒಪ್ಪಿಗೆ: ನಾಲ್ವರು ನಾಮಿನಿಗೆ ಅವಕಾಶ

ಪಿಟಿಐ
Published 27 ಮಾರ್ಚ್ 2025, 0:30 IST
Last Updated 27 ಮಾರ್ಚ್ 2025, 0:30 IST
ನಿರ್ಮಲಾ ಸೀತಾರಾಮನ್ –ಪಿಟಿಐ ಚಿತ್ರ
ನಿರ್ಮಲಾ ಸೀತಾರಾಮನ್ –ಪಿಟಿಐ ಚಿತ್ರ   

ನವದೆಹಲಿ: ಬ್ಯಾಂಕ್‌ಗಳ ಆಡಳಿತ ಸುಧಾರಣೆ ಹಾಗೂ ಠೇವಣಿದಾರರ ಹಿತರಕ್ಷಣೆಗೆ ಸಂಬಂಧಿಸಿದಂತೆ ಮಂಡಿಸಿದ್ದ ಬ್ಯಾಂಕಿಂಗ್‌ ಕಾನೂನು (ತಿದ್ದುಪಡಿ) ಮಸೂದೆ 2024ಕ್ಕೆ ರಾಜ್ಯಸಭೆಯು, ಬುಧವಾರ ಧ್ವನಿಮತದ ಮೂಲಕ ಒಪ್ಪಿಗೆ ನೀಡಿದೆ.

ಹಳೆಯ ಕಾಯ್ದೆಯಡಿ ಬ್ಯಾಂಕ್‌ ಖಾತೆಗೆ ಒಬ್ಬರ ನಾಮಿನಿಗೆ ಅವಕಾಶವಿದೆ. ಇನ್ನು ಮುಂದೆ ಏಕಕಾಲದಲ್ಲಿ ಠೇವಣಿದಾರರು ನಾಲ್ವರನ್ನು ನಾಮಿನಿಯಾಗಿ ಸೇರ್ಪಡೆಗೊಳಿಸಲು ಈ ಮಸೂದೆಯು ಅವಕಾಶ ಕಲ್ಪಿಸಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಲೋಕಸಭೆಯು ಈ ಮಸೂದೆಗೆ ಅನುಮೋದನೆ ನೀಡಿತ್ತು.

ಹಳೆಯ ಕಾಯ್ದೆಯಡಿ ಕಂಪನಿಗಳ ನಿರ್ದೇಶಕರ ಆಸ್ತಿ ಮೌಲ್ಯದ ಮಿತಿ ನಿಗದಿಪಡಿಸಲಾಗಿದೆ. ಮಸೂದೆಯಲ್ಲಿ ಈ ಮಿತಿ ಹೆಚ್ಚಳದ ಜೊತೆಗೆ ‘ಸಬ್​ಸ್ಟಾನ್ಷಿಯಲ್ ಇಂಟರೆಸ್ಟ್’ ಬಗ್ಗೆ ಮರುವ್ಯಾಖ್ಯಾನ ಮಾಡಲಾಗಿದೆ.

ADVERTISEMENT

ಕಂಪನಿಯ ನಿರ್ದೇಶಕರು ₹5 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಆಸ್ತಿ ಹೊಂದಿದ್ದರೆ ಅದನ್ನು ‘ಸಬ್​ಸ್ಟಾನ್ಷಿಯಲ್ ಇಂಟರೆಸ್ಟ್’ ಎಂದು ನಿರ್ಧರಿಸಲಾಗುತ್ತದೆ. ಅಂತಹವರಿಗೆ ಸಾಲ ನೀಡಲು ಆಡಳಿತ ಮಂಡಳಿಯ ಅನುಮೋದನೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿತ್ತು. ಮಸೂದೆಯಲ್ಲಿ ನಿರ್ದೇಶಕರ ಆಸ್ತಿಯ ಮಿತಿಯನ್ನು ₹2 ಕೋಟಿಗೆ ಹೆಚ್ಚಿಸಲಾಗಿದೆ. ಇಷ್ಟು ಮೊತ್ತದ ಷೇರುಗಳ ಒಡೆತನ ಅಥವಾ ಮಾಲೀಕತ್ವವನ್ನು ಹೊಂದಬಹುದಾಗಿದೆ. 

ಜಾರಿ ನಿರ್ದೇಶನಾಲಯವು ಬ್ಯಾಂಕ್‌ ವಂಚನೆಗೆ ಸಂಬಂಧಿಸಿದ 112 ಪ್ರಕರಣಗಳ ತನಿಖೆ ನಡೆಸುತ್ತಿದೆ. ಉದ್ದೇಶಪೂರ್ವಕ ಸುಸ್ತಿದಾರರ ವಿರುದ್ಧ ಕ್ರಮಕೈಗೊಳ್ಳಲು  ಸರ್ಕಾರ ಬದ್ಧವಿದೆ
ನಿರ್ಮಲಾ ಸೀತಾರಾಮನ್‌ ಕೇಂದ್ರ ಹಣಕಾಸು ಸಚಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.