ADVERTISEMENT

ಸುಂಕ ಜಾರಿಗೆ 90 ದಿನಗಳ ಗಡುವು: ದ್ವಿಪಕ್ಷೀಯ ಮಾತುಕತೆಗೆ ತೆರೆದ ಬಾಗಿಲು– ತಜ್ಞರು

ಪಿಟಿಐ
Published 10 ಏಪ್ರಿಲ್ 2025, 15:20 IST
Last Updated 10 ಏಪ್ರಿಲ್ 2025, 15:20 IST
ಭಾರತ ಮತ್ತು ಅಮೆರಿಕ ರಾಷ್ಟ್ರಧ್ವಜ 
ಭಾರತ ಮತ್ತು ಅಮೆರಿಕ ರಾಷ್ಟ್ರಧ್ವಜ     

ನವದೆಹಲಿ: ಟ್ರಂಪ್‌ ಆಡಳಿತವು ಪ್ರತಿ ಸುಂಕ ಜಾರಿಗೆ ನೀಡಿರುವ 90 ದಿನಗಳ ವಿರಾಮವು, ಅಮೆರಿಕದ ಜೊತೆಗೆ ಭಾರತವು ದ್ವಿಪಕ್ಷೀಯ ವ್ಯಾಪಾರ ಕುರಿತು ಮಾತುಕತೆ ನಡೆಸಲು ಅವಕಾಶದ ಬಾಗಿಲನ್ನು ತೆರೆದಿಟ್ಟಿದೆ ಎಂದು ತಜ್ಞರು ಹೇಳಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರವು ಅಮೆರಿಕದೊಟ್ಟಿಗೆ ದ್ವಿಪಕ್ಷೀಯ ವ್ಯಾಪಾರಕ್ಕೆ ಹೆಜ್ಜೆ ಇಟ್ಟಿದೆ. ರಾಜತಾಂತ್ರಿಕ ಮಾತುಕತೆ ಹಾಗೂ ತ್ವರಿತಗತಿಯಲ್ಲಿ ನಡೆಯುವ ಸಂಧಾನ ಪ್ರಕ್ರಿಯೆಗಳು ಭಾರತಕ್ಕೆ ವರದಾನವಾಗಲಿವೆ ಎಂದು ಹೇಳಿದ್ದಾರೆ.

‘ಟ್ರಂಪ್‌ ಆಡಳಿತದ ನಿರ್ಧಾರವು ಉತ್ತಮವಾಗಿದೆ. ಈ ನಿಟ್ಟಿನಲ್ಲಿ ವಾಣಿಜ್ಯ ಸಚಿವಾಲಯವು ಉಭಯ ದೇಶಗಳ ನಡುವಿನ ವ್ಯಾಪಾರಕ್ಕೆ ಸಂಬಂಧಿಸಿದಂತೆ ತ್ವರಿತವಾಗಿ ಒಪ್ಪಂದಕ್ಕೆ ಸಹಿ ಹಾಕಬೇಕಿದೆ’ ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ಅಧ್ಯಕ್ಷ ಎಸ್.ಸಿ. ರಾಲ್ಹಾನ್ ಹೇಳಿದ್ದಾರೆ.

ADVERTISEMENT

ಶ್ವೇತಭವನ ನೀಡಿರುವ ಅವಕಾಶವು ರಫ್ತುದಾರರಿಗೆ ದೊಡ್ಡ ಪರಿಹಾರ ನೀಡಿದೆ. ಇದನ್ನು ಬಳಸಿಕೊಂಡರೆ ಪ್ರತಿ ಸುಂಕದಿಂದ ಭಾರತದ ಮೇಲಾಗುವ ಪರಿಣಾಮಗಳನ್ನು ತಗ್ಗಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

‘ಚೀನಾದ ಮೇಲೆ ಅಮೆರಿಕ ವಿಧಿಸಿರುವ ಅತಿಹೆಚ್ಚು ಸುಂಕದ ಪ್ರಯೋಜನ ಪಡೆಯಲು ದೇಶದ ಕೈಗಾರಿಕಾ ವಲಯವು ಮುಂದಾಗಬೇಕಿದೆ. ಇದು ದೇಶೀಯ ತಯಾರಿಕಾ ವಲಯದ ಬಲವರ್ಧನೆಗೆ ನೆರವಾಗಲಿದೆ’ ಎಂದು ಮುಂಬೈನ ರಫ್ತುದಾರ ಎಸ್.ಕೆ. ಸರಾಫ್‌ ಹೇಳಿದ್ದಾರೆ.

ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದವು ಅಕ್ಟೋಬರ್‌ ಅಥವಾ ನವೆಂಬರ್‌ ವೇಳೆಗೆ ಅಂತಿಮಗೊಳ್ಳುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.