
ನಿರ್ಮಲಾ ಸೀತಾರಾಮನ್ –ಪಿಟಿಐ ಚಿತ್ರ
ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಖಾಸಗೀಕರಣದಿಂದ ಹಣಕಾಸಿನ ಒಳಗೊಳ್ಳುವಿಕೆಯ ಉದ್ದೇಶಕ್ಕೆ ಮತ್ತು ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆ ಆಗುತ್ತದೆ ಎಂಬ ಆತಂಕದಲ್ಲಿ ಹುರುಳಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದರು.
1969ರಲ್ಲಿ ನಡೆದ ಬ್ಯಾಂಕ್‌ಗಳ ರಾಷ್ಟ್ರೀಕರಣ ಪ್ರಕ್ರಿಯೆಯು ಹಣಕಾಸಿನ ಒಳಗೊಳ್ಳುವಿಕೆಯ ವಿಚಾರದಲ್ಲಿ ಅಪೇಕ್ಷಿತ ಫಲಿತಾಂಶವನ್ನು ನೀಡಿಲ್ಲ ಎಂದು ಅವರು ಹೇಳಿದರು.
ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ರಾಷ್ಟ್ರೀಕರಣದಿಂದಾಗಿ ಆದ್ಯತಾ ವಲಯಗಳಿಗೆ ಸಾಲ ನೀಡುವ ವಿಚಾರದಲ್ಲಿ, ಸರ್ಕಾರದ ಯೋಜನೆಗಳ ವಿಚಾರದಲ್ಲಿ ಅನುಕೂಲ ಆಗಿದ್ದು ನಿಜ. ಆದರೆ ಸರ್ಕಾರದ ನಿಯಂತ್ರಣದ ಕಾರಣದಿಂದಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ವೃತ್ತಿಪರತೆಯನ್ನು ಕಳೆದುಕೊಂಡವು’ ಎಂದು ಹೇಳಿದರು.
‘ನಾವು ಬ್ಯಾಂಕ್‌ಗಳನ್ನು ವೃತ್ತಿಪರವಾಗಿಸಿದ ನಂತರದಲ್ಲಿ’ ರಾಷ್ಟ್ರೀಕರಣದ ಉದ್ದೇಶಗಳು ‘ಬಹಳ ಚೆಂದವಾಗಿ ಅನುಷ್ಠಾನಗೊಳ್ಳುತ್ತಿವೆ’ ಎಂದು ನಿರ್ಮಲಾ ವಿವರಿಸಿದರು. ‘ಬ್ಯಾಂಕ್‌ಗಳನ್ನು ವೃತ್ತಿಪರವಾಗಿಸಲು ಯತ್ನಿಸಿದಾಗ, ಅಥವಾ ಅವುಗಳ ಖಾಸಗೀಕರಣದ ಉದ್ದೇಶ ಹೊಂದಿದಾಗ, ಬ್ಯಾಂಕ್‌ಗಳನ್ನು ಎಲ್ಲರಿಗೂ ತೆರೆದುಕೊಳ್ಳುವಂತೆ ಮಾಡುವ ಉದ್ದೇಶವು ಸೋಲುತ್ತದೆ ಎಂಬ ಗ್ರಹಿಕೆ ತಪ್ಪು’ ಎಂದು ವಿವರಿಸಿದರು.
ಬ್ಯಾಂಕ್‌ಗಳು ವೃತ್ತಿಪರವಾಗಿ ನಡೆಯಲು ಅವಕಾಶ ಕಲ್ಪಿಸಿದಾಗ, ಬ್ಯಾಂಕ್‌ಗಳಿಗೆ ಸಂಬಂಧಿಸಿದ ತೀರ್ಮಾನಗಳನ್ನು ಅಲ್ಲಿನ ಆಡಳಿತ ಮಂಡಳಿಗಳೇ ತೆಗೆದುಕೊಂಡಾಗ, ರಾಷ್ಟ್ರೀಯ ಹಿತಾಸಕ್ತಿ ಹಾಗೂ ಬ್ಯಾಂಕಿನ ಹಿತಾಸಕ್ತಿಗಳು ಈಡೇರುತ್ತವೆ ಎಂದರು.
ಬ್ಯಾಂಕ್ ಖಾಸಗೀಕರಣದ ಭಾಗವಾಗಿ ಕೇಂದ್ರ ಸರ್ಕಾರವು ಐಡಿಬಿಐ ಬ್ಯಾಂಕ್‌ನ ಶೇ 51ರಷ್ಟು ಷೇರುಗಳನ್ನು ಭಾರತೀಯ ಜೀವ ವಿಮಾ ನಿಗಮಕ್ಕೆ (ಎಲ್‌ಐಸಿ) 2019ರಲ್ಲಿ ಮಾರಾಟ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.