ADVERTISEMENT

ಭಾರತದ ಚಿಪ್ಸ್‌ಗೆ ಆಗ್ನೇಯ ಏಷ್ಯಾದಲ್ಲಿ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 15:51 IST
Last Updated 23 ಅಕ್ಟೋಬರ್ 2025, 15:51 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಸಂಸ್ಕರಿಸಿದ ಆಲೂಗೆಡ್ಡೆ ಉತ್ಪನ್ನಗಳು, ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಹೆಚ್ಚು ಬೇಡಿಕೆ ಪಡೆದಿವೆ ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್‌ ಇನಿಷಿಯೇಟಿವ್ (ಜಿಟಿಆರ್‌ಐ) ವರದಿ ಗುರುವಾರ ಹೇಳಿದೆ.

ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿ ಭಾರತದ ಕುರುಕಲು ತಿಂಡಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಆಹಾರ ಸಂಸ್ಕರಣಾ ವಲಯದಲ್ಲಿ ಮೂಲಸೌಕರ್ಯ ಅಭಿವೃದ್ಧಿಯಿಂದಾಗಿ ಈ ಉತ್ಪನ್ನಗಳು ಆಗ್ನೇಯ ಏಷ್ಯಾದ ಮಾರುಕಟ್ಟೆಗಳಿಗೆ ಹೆಚ್ಚಾಗಿ ಪ್ರವೇಶಿಸುತ್ತಿವೆ ಎಂದು ತಿಳಿಸಿದೆ.

ಸಂಸ್ಕರಿಸಿದ ಆಲೂಗೆಡ್ಡೆ ರಫ್ತು ಮೌಲ್ಯ 2021–22ರಲ್ಲಿ ₹100 ಕೋಟಿಯಷ್ಟಿತ್ತು. 2024–25ರಲ್ಲಿ ₹556 ಕೋಟಿಯಾಗಿದೆ. ಆಲೂಗೆಡ್ಡೆಯ ಇತರೆ ಉತ್ಪನ್ನಗಳಾದ ಹಿಟ್ಟು, ಚಿಪ್ಸ್‌, ತಿನ್ನಲು ಸಿದ್ಧವಾಗಿರುವ ಉತ್ಪನ್ನಗಳು ಸಹ ರವಾನೆ ಆಗುತ್ತಿವೆ. 2021–22ರಲ್ಲಿ ಈ ಉತ್ಪನ್ನಗಳ ರಫ್ತು ಮೌಲ್ಯ ₹54.47 ಕೋಟಿಯಷ್ಟಾಗಿತ್ತು. ಇದು ಕಳೆದ ಆರ್ಥಿಕ ವರ್ಷದಲ್ಲಿ ₹165 ಕೋಟಿಗೆ ಏರಿಕೆಯಾಗಿದೆ. 

ADVERTISEMENT

ಮಲೇಷ್ಯಾ, ಫಿಲಿಪ್ಪೀನ್ಸ್‌, ಇಂಡೊನೇಷ್ಯಾ, ಜಪಾನ್‌ ಮತ್ತು ಥಾಯ್ಲೆಂಡ್‌ ಒಟ್ಟು ರಫ್ತು ಪೈಕಿ ಶೇ 80ರಷ್ಟು ಪಾಲು ಹೊಂದಿವೆ ಎಂದು ಜಿಟಿಆರ್‌ಐ ಸಂಸ್ಥಾಪಕ ಅಜಯ್‌ ಶ್ರೀವಾಸ್ತವ್ ಹೇಳಿದ್ದಾರೆ.

ಇಂಧನ ವೆಚ್ಚ ಮತ್ತು ಅನಿಯಮಿತ ಕೊಯ್ಲುನಂತಹ ಸಮಸ್ಯೆಯನ್ನು ಯುರೋಪ್‌ ಎದುರಿಸುತ್ತಿದೆ. ಚೀನಾವು ದೇಶಿ ಬೇಡಿಕೆಗೆ ಆದ್ಯತೆ ನೀಡಿದೆ. ಭಾರತವು ಏಷ್ಯಾದ ಕುರಕಲು ತಿಂಡಿ ಮತ್ತು ತ್ವರಿತ ಸೇವಾ ರೆಸ್ಟೋರೆಂಟ್ (ಕ್ಯುಎಸ್‌ಆರ್‌) ಕೈಗಾರಿಕೆಗಳಿಗೆ ವಿಶ್ವಾಸಾರ್ಹ, ಕಡಿಮೆ ವೆಚ್ಚದ ಪೂರೈಕೆದಾರನಾಗಿದೆ ಎಂದು ಹೇಳಿದ್ದಾರೆ. ಗುಜರಾತ್‌ ಮತ್ತು ಉತ್ತರ ಪ‍್ರದೇಶವು ದೇಶದ ಆಹಾರ ಸಂಸ್ಕರಣೆಯ ಶಕ್ತಿ ಕೇಂದ್ರಗಳಾಗಿವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.