ಮುಂಬೈ: ‘ದಿ ಕಾರವಾರ ಅರ್ಬನ್ ಕೋ–ಆಪರೇಟಿವ್ ಬ್ಯಾಂಕ್’ಗೆ ನೀಡಿದ್ದ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರದ್ದುಪಡಿಸಿದೆ. ಈ ಬ್ಯಾಂಕ್‌ನ ಬಳಿ ಅಗತ್ಯ ಬಂಡವಾಳ ಇಲ್ಲ, ಬ್ಯಾಂಕ್‌ನ ಗಳಿಕೆಯ ಸಾಧ್ಯತೆಯೂ ಚೆನ್ನಾಗಿಲ್ಲ ಎಂದು ಆರ್‌ಬಿಐ ಬುಧವಾರ ಹೇಳಿದೆ.
ಪರವಾನಗಿ ರದ್ದಾಗಿರುವುದರ ಪರಿಣಾಮ ಈ ಬ್ಯಾಂಕ್‌ನ ಕಾರ್ಯಗಳು ಬುಧವಾರದ ಅಂತ್ಯದ ನಂತರ ಸ್ಥಗಿತಗೊಳ್ಳಲಿವೆ.
ಈ ಬ್ಯಾಂಕ್‌ನ್ನು ಮುಚ್ಚುವ ಆದೇಶ ಹೊರಡಿಸುವಂತೆ ಕರ್ನಾಟಕದ ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ಆರ್‌ಬಿಐ ಮನವಿ ಮಾಡಿದೆ. ಬ್ಯಾಂಕನ್ನು ಮುಚ್ಚುವ ಪ್ರಕ್ರಿಯೆಗಳನ್ನು ನೋಡಿಕೊಳ್ಳಲು ಅಧಿಕಾರಿಯನ್ನು (ಲಿಕ್ವಿಡೇಟರ್) ನೇಮಕ ಮಾಡುವಂತೆ ಹೇಳಿದೆ.
ಬ್ಯಾಂಕ್‌ನ್ನು ಮುಚ್ಚುವ ಪ್ರಕ್ರಿಯೆ ಪೂರ್ಣಗೊಂಡ ನಂತರದಲ್ಲಿ, ಠೇವಣಿದಾರರಿಗೆ ₹5 ಲಕ್ಷದವರೆಗೆ ಠೇವಣಿ ವಿಮೆ ಸಿಗಲಿದೆ. ಬ್ಯಾಂಕ್‌ನ ಠೇವಣಿದಾರರ ಪೈಕಿ ಶೇ 92.9ರಷ್ಟು ಮಂದಿ ತಮ್ಮ ಠೇವಣಿಯ ಪೂರ್ಣ ಮೊತ್ತವನ್ನು ವಿಮಾ ಪರಿಹಾರದ ರೂಪದಲ್ಲಿ ಪಡೆಯಲು ಅರ್ಹರಿದ್ದಾರೆ ಎಂದು ಆರ್‌ಬಿಐ ಹೇಳಿದೆ.
ಜೂನ್ 30ರವರೆಗಿನ ಮಾಹಿತಿ ಪ್ರಕಾರ, ವಿಮಾ ವ್ಯಾಪ್ತಿಯಲ್ಲಿ ಇರುವ ಠೇವಣಿಗಳ ಪೈಕಿ ₹37.79 ಕೋಟಿಯಷ್ಟನ್ನು ಪಾವತಿ ಮಾಡಿ ಆಗಿದೆ.
ಈ ಬ್ಯಾಂಕ್‌ನ ಕಾರ್ಯಾಚರಣೆಗಳು ಮುಂದುವರಿಯಲು ಅವಕಾಶ ಮಾಡಿಕೊಡುವುದು ಠೇವಣಿದಾರರ ಹಿತಾಸಕ್ತಿಗೆ ವಿರುದ್ಧವಾದುದು ಎಂದು ಆರ್‌ಬಿಐ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.