ADVERTISEMENT

ರೆಪೊ ದರ ಇಳಿಕೆ ಆರ್‌ಬಿಐನಿಂದ ಕಾದುನೋಡುವ ಮಾರ್ಗ: ಗವರ್ನರ್‌

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 14:21 IST
Last Updated 16 ಜುಲೈ 2025, 14:21 IST
<div class="paragraphs"><p>ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ</p></div>

ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ

   

–ಪಿಟಿಐ ಚಿತ್ರ

ನವದೆಹಲಿ: ರೆಪೊ ದರ ಇಳಿಸಬೇಕೇ ಬೇಡವೇ ಎಂಬ ತೀರ್ಮಾನ ತೆಗೆದುಕೊಳ್ಳುವುದಕ್ಕೂ ಮೊದಲು ಕಾದುನೋಡುವ, ಬದಲಾಗುತ್ತಿರುವ ಪರಿಸ್ಥಿತಿಯನ್ನು ಗಮನಿಸುವ ಕೆಲಸವನ್ನು ಆರ್‌ಬಿಐ ಮಾಡಲಿದೆ. ಆರ್ಥಿಕ ಬೆಳವಣಿಗೆ ಹಾಗೂ ಬೆಲೆಗಳಲ್ಲಿ ಸ್ಥಿರತೆಗೆ ಆರ್‌ಬಿಐ ಸಮಾನ ಆದ್ಯತೆ ನೀಡಲಿದೆ.

ADVERTISEMENT

ಚಿಲ್ಲರೆ ಹಣದುಬ್ಬರ ಪ್ರಮಾಣವು ಇಳಿಮುಖವಾಗಿರುವ ಕಾರಣಕ್ಕೆ ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ತಗ್ಗಿಸುತ್ತಿದೆ. ಸಮಿತಿಯು ಈಗ ‘ತಟಸ್ಥ’ ಹಣಕಾಸಿನ ನೀತಿಯನ್ನು ಅನುಸರಿಸುತ್ತಿದೆ. ಈ ನೀತಿಯ ಕಾರಣದಿಂದಾಗಿ, ಮುಂದಿನ ದಿನಗಳಲ್ಲಿ ರೆಪೊ ದರವನ್ನು ಕಡಿಮೆ ಮಾಡುವ ಅಥವಾ ಹೆಚ್ಚು ಮಾಡುವ ಆಯ್ಕೆಗಳು ಆರ್‌ಬಿಐ ಮುಂದೆ ಇವೆ. ಫೆಬ್ರುವರಿಯ ನಂತರದಲ್ಲಿ ಆರ್‌ಬಿಐ ರೆಪೊ ದರವನ್ನು ಒಟ್ಟು ಶೇ 1ರಷ್ಟು ಕಡಿಮೆ ಮಾಡಿದೆ.

ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಟಿ.ವಿ. ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ‘ಹಣದುಬ್ಬರ ಕಡಿಮೆ ಇದ್ದರೆ, ಆರ್ಥಿಕ ಬೆಳವಣಿಗೆ ಕಡಿಮೆ ಆಗಿದ್ದರೆ ರೆಪೊ ದರವನ್ನು ಖಂಡಿತವಾಗಿಯೂ ಕಡಿಮೆ ಮಾಡಬಹುದು. ಆದರೆ ಅದನ್ನು ನಾವು ಕಾದುನೋಡಬೇಕಾಗುತ್ತದೆ’ ಎಂದು ಹೇಳಿದ್ದಾರೆ.

ಆರ್ಥಿಕ ಬೆಳವಣಿಗೆ ದರಕ್ಕಿಂತ ಹೆಚ್ಚಿನ ಆದ್ಯತೆಯನ್ನು ಹಣದುಬ್ಬರ ಪ್ರಮಾಣಕ್ಕೆ ನೀಡಬೇಕು ಎಂಬ ಮಾತು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ‘ಬೆಲೆಯಲ್ಲಿ ಸ್ಥಿರತೆ ಸಾಧಿಸುವುದು ನಮ್ಮ ಮೇಲೆ ಇರುವ ಮುಖ್ಯ ಹೊಣೆ. ನಾವು ಆರ್ಥಿಕ ಬೆಳವಣಿಗೆಯನ್ನೂ ಗಮನಿಸುತ್ತೇವೆ. ಇವೆರಡೂ ನಮಗೆ ಪ್ರಮುಖವಾಗುತ್ತವೆ. ಇವೆರಡರಲ್ಲಿ ಯಾವುದೋ ಒಂದಕ್ಕೆ ಮಾತ್ರ ನಾವು ಈಗ ಹೆಚ್ಚು ಒತ್ತು ನೀಡುತ್ತೇವೆ ಎಂದು ಹೇಳಲಾರೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.