ADVERTISEMENT

ಆರ್‌ಬಿಐನ ಚಿನ್ನದ ಖರೀದಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2018, 20:15 IST
Last Updated 4 ನವೆಂಬರ್ 2018, 20:15 IST
   

ನವದೆಹಲಿ: ಜಾಗತಿಕ ವಿದ್ಯಮಾನಗಳು ದೇಶಿ ಆರ್ಥಿಕತೆಗೆ ಪ್ರತಿಕೂಲವಾಗಿರುವ ಕಾರಣಕ್ಕೆ, ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಚಿನ್ನದ ಸಂಗ್ರಹವನ್ನು ಹೆಚ್ಚಿಸಲು ಗಮನ ಕೇಂದ್ರೀಕರಿಸಿದೆ.

ಜುಲೈನಿಂದ ಸೆಪ್ಟೆಂಬರ್‌ವರೆಗಿನ ಮೂರು ತಿಂಗಳ ಅವಧಿಯಲ್ಲಿ ಆರ್‌ಬಿಐ 13.7 ಟನ್‌ಗಳಷ್ಟು ಚಿನ್ನ ಖರೀದಿಸಿರುವುದು ವಿಶ್ವ ಚಿನ್ನದ ಮಂಡಳಿಯ (ಡಬ್ಲ್ಯುಜಿಸಿ) ಅಂಕಿಅಂಶಗಳಿಂದ ತಿಳಿದು ಬಂದಿದೆ. ಜನವರಿಯಿಂದ ಇದುವರೆಗೆ 21.8 ಟನ್ ಚಿನ್ನ ಖರೀದಿಸಿದೆ. ಆದರೆ, ಜುಲೈನಿಂದೀಚೆಗೆ ಖರೀದಿ ಪ್ರಮಾಣ ಹೆಚ್ಚಿದೆ. ಸದ್ಯಕ್ಕೆ ಆರ್‌ಬಿಐ ಬಳಿ 566 ಟನ್‌ ಚಿನ್ನ ಇದೆ.

ವಿಶ್ವದಾದ್ಯಂತ ಇತರ ಕೇಂದ್ರೀಯ ಬ್ಯಾಂಕ್‌ಗಳೂ ತಮ್ಮ ಚಿನ್ನದ ಸಂಗ್ರಹ ಹೆಚ್ಚಿಸಲು ಗಮನ ನೀಡಿವೆ. 2015ರ ನಂತರ ಇದೇ ಮೊದಲ ಬಾರಿಗೆ ಕೇಂದ್ರೀಯ ಬ್ಯಾಂಕ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿಗೆ ಆಸಕ್ತಿ ತೋರಿಸುತ್ತಿವೆ.

ADVERTISEMENT

ಆರ್ಥಿಕವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಅನೇಕ ದೇಶಗಳ ಷೇರುಪೇಟೆಗಳಲ್ಲಿನ ನಷ್ಟದ ಕಾರಣಕ್ಕೆ ಹೂಡಿಕೆದಾರರೂ ಈಗ ಚಿನ್ನದಲ್ಲಿ ಹಣ ತೊಡಗಿಸಲು ಆಸಕ್ತಿ ತೋರಿಸುತ್ತಿದ್ದಾರೆ.

ನಾಣ್ಯ ಖರೀದಿಗೆ ಒಲವು: ಕರೆನ್ಸಿ ವಿನಿಮಯ ದರ ಕುಸಿಯುತ್ತಿರುವ ಕಾರಣಕ್ಕೆ ನಗರ ಪ್ರದೇಶಗಳಲ್ಲಿನ ಹೂಡಿಕೆದಾರರು ಚಿನ್ನದ ಗಟ್ಟಿ ಮತ್ತು ನಾಣ್ಯಗಳ ಖರೀದಿಗೆ ಒಲವು ತೋರುತ್ತಿದ್ದಾರೆ. ಜುಲೈನಿಂದ ಸೆಪ್ಟೆಂಬರ್‌ ಅವಧಿಯಲ್ಲಿ ದೇಶದಲ್ಲಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳ ಬೇಡಿಕೆ 34.4 ಟನ್‌ಗಳಷ್ಟಿತ್ತು ಎಂದು ‘ಡಬ್ಲ್ಯುಜಿಸಿ’ ಮಾಹಿತಿ ನೀಡಿದೆ. ಈ ತ್ರೈಮಾಸಿಕದಲ್ಲಿ ಚಿನ್ನಾಭರಣಗಳ ಬೇಡಿಕೆಯೂ ಶೇ 10ರಷ್ಟು ಹೆಚ್ಚಳಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.