ADVERTISEMENT

ರೆಪೊ ಏರಿಕೆಯಿಂದ ತಕ್ಷಣಕ್ಕೆ ದುಷ್ಪರಿಣಾಮ ಇಲ್ಲ: ರಿಯಲ್ ಎಸ್ಟೇಟ್ ಉದ್ಯಮ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 16:19 IST
Last Updated 30 ಸೆಪ್ಟೆಂಬರ್ 2022, 16:19 IST

ಬೆಂಗಳೂರು: ರೆಪೊ ದರವನ್ನು ಹೆಚ್ಚಿಸಿರುವ ಆರ್‌ಬಿಐ ಕ್ರಮ ನಿರೀಕ್ಷಿತ ಆಗಿರುವ ಕಾರಣ, ಮನೆಗಳ ಮಾರಾಟದ ಮೇಲೆ ತಕ್ಷಣಕ್ಕೆ ದುಷ್ಪರಿಣಾಮ ಆಗುವುದಿಲ್ಲ ಎಂದು ರಿಯಲ್ ಎಸ್ಟೇಟ್ ಉದ್ಯಮದ ತಜ್ಞರು ಹೇಳಿದ್ದಾರೆ.

‘ರೆಪೊ ದರ ಹೆಚ್ಚಳದ ಪರಿಣಾಮವಾಗಿ ಗೃಹ ಸಾಲಗಳು ತುಟ್ಟಿಯಾಗಲಿವೆ. ಇದರಿಂದಾಗಿ ಹಬ್ಬಗಳ ಸಂದರ್ಭದಲ್ಲಿ ಮನೆಗಳ ಮಾರಾಟದ ಮೇಲೆ ಒಂದು ಹಂತದವರೆಗೆ ಪರಿಣಾಮ ಉಂಟಾಗಬಹುದು. ಅದರಲ್ಲೂ ಮುಖ್ಯವಾಗಿ, ಕಡಿಮೆ ವೆಚ್ಚದ ಹಾಗೂ ಮಧ್ಯಮ ವೆಚ್ಚದ ಮನೆಗಳ ಮಾರಾಟದ ಮೇಲೆ ಪರಿಣಾಮ ಉಂಟಾಗಬಹುದು’ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್‌ನ ಅಧ್ಯಕ್ಷ ಅನುಜ್ ಪುರಿ ಹೇಳಿದ್ದಾರೆ.

ಮನೆ ನಿರ್ಮಾಣದ ವೆಚ್ಚ ಹೆಚ್ಚಾಗಿರುವುದರ ಜೊತೆಯಲ್ಲಿ ಈಗ ಗೃಹ ಸಾಲ ಕೂಡ ತುಟ್ಟಿ ಆಗಲಿದೆ. ಹೀಗಾಗಿ, ಹಬ್ಬಗಳ ಸಂದರ್ಭದಲ್ಲಿ ಮನೆಗಳ ಮಾರಾಟವನ್ನು ಹೆಚ್ಚಿಸಲು ಡೆವಲಪರ್‌ಗಳು ಕೊಡುಗೆಗಳನ್ನು ಘೋಷಿಸುವ ಬಗ್ಗೆ, ರಿಯಾಯಿತಿಗಳನ್ನು ಪ್ರಕಟಿಸುವ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು ಎಂದು ಪುರಿ ಸಲಹೆ ಮಾಡಿದ್ದಾರೆ.

ADVERTISEMENT

ಗೃಹ ಸಾಲದ ಬಡ್ಡಿ ದರವು ಶೇಕಡ 9.5ಕ್ಕಿಂತ ಹೆಚ್ಚಾದಾಗ ಮಾತ್ರ ಮನೆಗಳ ಮಾರಾಟದ ಮೇಲೆ ‘ಗಂಭೀರ ಪರಿಣಾಮ’ ಉಂಟಾಗುತ್ತದೆ. ಬಡ್ಡಿ ದರವು ಶೇ 8.5ರಿಂದ ಶೇ 9ರ ನಡುವೆ ಇರುವವರೆಗೆ ಸಾಧಾರಣ ಮಟ್ಟದ ಪರಿಣಾಮ ಮಾತ್ರ ಇರುತ್ತದೆ ಎಂದು ಅವರು ಅಂದಾಜು ಮಾಡಿದ್ದಾರೆ.

ಬಡ್ಡಿ ಹೆಚ್ಚಳದಿಂದ ವಹಿವಾಟಿಗೆ ಧಕ್ಕೆ ಆಗಲಿಕ್ಕಿಲ್ಲ ಎಂದು ರಿಯಲ್ ಎಸ್ಟೇಟ್ ಕಂಪನಿ ಪುರವಂಕರ ಲಿಮಿಟೆಡ್ ಹೇಳಿದೆ. ‘ಹಬ್ಬಗಳ ಋತುವಿನಲ್ಲಿ ಬೇಡಿಕೆಯು ಹೆಚ್ಚಿನ ಮಟ್ಟದಲ್ಲಿ ಇದೆ’ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಭಿಷೇಕ್ ಕಪೂರ್ ಹೇಳಿದ್ದಾರೆ.

ಆದರೆ, ರೆಪೊ ದರವನ್ನು ನಿರಂತರವಾಗಿ ಹೆಚ್ಚಿಸುತ್ತ ಸಾಗುವುದು ಎಷ್ಟು ಸುಸ್ಥಿರ ಎಂಬ ಬಗ್ಗೆಯೂ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ‘ದರ ಏರಿಕೆ ಮುಂದುವರಿದರೆ, ಮುಂದಿನ ವರ್ಷದಿಂದ ಅದು ವಹಿವಾಟಿನ ಮೇಲೆ ಹಾಗೂ ಅರ್ಥ ವ್ಯವಸ್ಥೆಯ ಮೇಲೆ ಬೀರುವ ಪರಿಣಾಮವನ್ನು ಗಮನಿಸಬೇಕಾಗುತ್ತದೆ. ಹಣದುಬ್ಬರವನ್ನು ನಿಯಂತ್ರಿಸುವಾಗ ಆರ್ಥಿಕ ಬೆಳವಣಿಗೆ ಜೊತೆ ರಾಜಿಯಾಗದ ರೀತಿಯಲ್ಲಿ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.