ADVERTISEMENT

ಸಮಗ್ರ ಚೇತರಿಕೆಯ ಹಾದಿಯಲ್ಲಿ ಷೇರುಪೇಟೆ: ಸೆಬಿ

ಪಿಟಿಐ
Published 21 ಅಕ್ಟೋಬರ್ 2020, 13:57 IST
Last Updated 21 ಅಕ್ಟೋಬರ್ 2020, 13:57 IST
ಅಜಯ್ ತ್ಯಾಗಿ
ಅಜಯ್ ತ್ಯಾಗಿ   

ಮುಂಬೈ: ‘ಕೋವಿಡ್‌–19 ಸಾಂಕ್ರಾಮಿಕದ ಆಘಾತದಿಂದ ಹೊರಬಂದಿರುವ ಷೇರುಪೇಟೆಯು ಸಮಗ್ರ ಚೇತರಿಕೆಯ ಹಾದಿಯಲ್ಲಿದೆ’ ಎಂದು ಭಾರತಿಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷ ಅಜಯ್‌ ತ್ಯಾಗಿ ಹೇಳಿದ್ದಾರೆ. ಲಾರ್ಜ್‌ ಕ್ಯಾಪ್‌ ಮಾತ್ರವೇ ಅಲ್ಲದೆ, ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಷೇರುಗಳೂ ಚೇತರಿಸಿಕೊಳ್ಳುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೋವಿಡ್‌–19 ಪಿಡುಗನ್ನು ಮಹಾಮಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಘೋಷಿಸಿ ಬಳಿಕ ಮಾರುಕಟ್ಟೆಯಲ್ಲಿ ಕುಸಿತ ಕಂಡುಬಂತು. ನಂತರ, ಚೇತರಿಕೆಯ ಹಾದಿಗೆ ಬಂದ ಮಾರುಕಟ್ಟೆಯು 2020ರ ಜನವರಿಯಲ್ಲಿದ್ದ ಗರಿಷ್ಠ ಮಟ್ಟದ ಸಮೀಪಕ್ಕೆ ಬಂದಿದೆ. ದೊಡ್ಡ ಕಂಪನಿಗಳ ಷೇರುಗಳಷ್ಟೇ ಅಲ್ಲದೆ, ಎಲ್ಲಾ ಕಂಪನಿಗಳ ಷೇರುಗಳ ಬೆಲೆಯೂ ಚೇತರಿಕೆ ಕಂಡಿದೆ. ಎನ್‌ಎಸ್‌ಇನಲ್ಲಿ ಶೇಕಡ 90ರಷ್ಟು ಷೇರುಗಳು ಸಕಾರಾತ್ಮಕ ಗಳಿಕೆ ಕಂಡಿವೆ’ ಎಂದಿದ್ದಾರೆ.

ದೇಶದ ಆರ್ಥಿಕತೆ ಮತ್ತು ಷೇರುಪೇಟೆಯ ಮಧ್ಯೆ ಯಾವುದೇ ಸಂಬಂಧ ಇಲ್ಲದಂತಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ.

ADVERTISEMENT

ಏಪ್ರಿಲ್–ಸೆಪ್ಟೆಂಬರ್‌ ಅವಧಿಯಲ್ಲಿ 63 ಲಕ್ಷ ಹೊಸ ಡಿಮ್ಯಾಟ್‌ ಖಾತೆಗಳನ್ನು ತೆರೆಯಲಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ತೆರೆದಿದ್ದ 27.4 ಲಕ್ಷ ಖಾತೆಗಳಿಗೆ ಹೋಲಿಸಿದರೆ ಶೇ 130ರಷ್ಟು ಏರಿಕೆ ಆಗಿದೆ. ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳು ನಕಾರಾತ್ಮಕ ಬೆಳವಣಿಗೆಯ ಹಾದಿಯಲ್ಲಿ ಇದ್ದರೂ ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ವಿದೇಶಿ ಬಂಡವಾಳ ಹೂಡಿಕೆ (ಎಫ್‌ಪಿಐ) ₹ 80,300 ಕೋಟಿಗಳಷ್ಟಾಗಿದೆ. ಸಾಲಪತ್ರ ಯೋಜನೆಗಳಿಂದ ಮಾರ್ಚ್‌ನಲ್ಲಿ ಬಂಡವಾಳ ಹೊರಹರಿವು ಕಂಡುಬಂದಿತ್ತು. ಆದರೆ, ಹಣಕಾಸು ವರ್ಷದ ಮೊದಲಾರ್ಧದಲ್ಲಿ ಒಟ್ಟಾರೆ ₹ 1.47 ಲಕ್ಷ ಕೋಟಿ ಹೂಡಿಕೆ ಆಗಿದೆ.

‘ಹಕ್ಕಿನ ಷೇರು ವಿತರಣೆ, ಸಾರ್ವಜನಿಕರಿಗೆ ಷೇರು ಮಾರಾಟ (ಐಪಿಒ) ಮೂಲಕ ಕಾರ್ಪೊರೇಟ್‌ ವಲಯವು ಒಟ್ಟಾರೆ ₹ 1.54 ಲಕ್ಷ ಕೋಟಿ ಸಂಗ್ರಹಿಸಿದೆ. ಇದು ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಸಂಗ್ರಹಿಸಿದ್ದ ₹ 1.58 ಲಕ್ಷ ಕೋಟಿಗಿಂತಲೂ ಕಡಿಮೆ. ಸಾಲಪತ್ರ ಮಾರುಕಟ್ಟೆಯಿಂದ ₹ 3.8 ಲಕ್ಷ ಕೋಟಿಗೂ ಅಧಿಕ ಮೊತ್ತ ಸಂಗ್ರಹಿಸಲಾಗಿದೆ. ಇದು ಹಿಂದಿನ ಹಣಕಾಸು ವರ್ಷದ ಇದೇ ಅವಧಿಗಿಂತಲೂ ಶೇ 25ರಷ್ಟು ಹೆಚ್ಚು ಎಂದು ಅವರು ವಿವರಿಸಿದ್ದಾರೆ.

ಸ್ವತಂತ್ರ ನಿರ್ದೇಶಕರ ರಾಜೀನಾಮೆ ಹೆಚ್ಚಳ: ಕಳೆದ ಎರಡರಿಂದ ಮೂರು ವರ್ಷಗಳ ಅವಧಿಯಲ್ಲಿ ಸ್ವತಂತ್ರ ನಿರ್ದೇಶಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದು ಹೆಚ್ಚಾಗುತ್ತಿದೆ. ‘ಕಾರ್ಪೊರೇಟ್‌ ಆಡಳಿತ ಸರಿ ಇಲ್ಲ ಎನ್ನುವ ಕಾರಣಕ್ಕೆ ರಾಜೀನಾಮೆ ನೀಡಿದ್ದರೆ ಆ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು’ ಎಂದು ತ್ಯಾಗಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.