ADVERTISEMENT

ನಿವ್ವಳ ಸಾಲ ಮುಕ್ತ ರಿಲಯನ್ಸ್‌: 58 ದಿನಗಳಲ್ಲಿ ₹1.69 ಲಕ್ಷ ಕೋಟಿ ಸಂಗ್ರಹ

ಪಿಟಿಐ
Published 19 ಜೂನ್ 2020, 16:36 IST
Last Updated 19 ಜೂನ್ 2020, 16:36 IST
ರಿಲಯನ್ಸ್‌ ಇಂಡಸ್ಟ್ರೀಸ್‌
ರಿಲಯನ್ಸ್‌ ಇಂಡಸ್ಟ್ರೀಸ್‌   

ನವದೆಹಲಿ: ತಮ್ಮ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌) ಈಗ ನಿವ್ವಳ ಸಾಲದಿಂದ ಮುಕ್ತವಾಗಿದೆ ಎಂದು ಉದ್ಯಮಿ ಮುಕೇಶ್‌ ಅಂಬಾನಿ ಪ್ರಕಟಿಸಿದ್ದಾರೆ.

ಜಾಗತಿಕ ಹೂಡಿಕೆದಾರರು ಮತ್ತು ಹಕ್ಕಿನ ಷೇರುಗಳ ರೂಪದಲ್ಲಿ 58 ದಿನಗಳಲ್ಲಿ ₹1.69 ಲಕ್ಷ ಕೋಟಿ ಸಂಗ್ರಹಿಸಿರುವುದರಿಂದ ಇದು ಸಾಧ್ಯವಾಗಿದೆ.

ಕಂಪನಿಯ ಡಿಜಿಟಲ್‌ ಘಟಕ ಜಿಯೊ ಪ್ಲಾಟ್‌ಫಾರ್ಮ್ಸ್‌ನಲ್ಲಿನ ಪಾಲು ಬಂಡವಾಳವನ್ನು ಜಾಗತಿಕ ಹೂಡಿಕೆದಾರರಿಗೆ ಮಾರಾಟ ಮಾಡಿ ₹1.15 ಲಕ್ಷ ಕೋಟಿ ಮತ್ತು ಹಕ್ಕಿನ ಷೇರುಗಳ ಮೂಲಕ ₹ 53,124 ಕೋಟಿ ಮೊತ್ತದ ಬಂಡವಾಳ ಸಂಗ್ರಹಿಸಲಾಗಿದೆ.

ADVERTISEMENT

ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಆರ್‌ಐಎಲ್‌ನ ನಿವ್ವಳ ಸಾಲದ ಮೊತ್ತವು ₹1,61,035 ಕೋಟಿಗಳಷ್ಟಿತ್ತು. ಇತ್ತೀಚಿನ ಬಂಡವಾಳ ಸಂಗ್ರಹದಿಂದ ಕಂಪನಿಯು ನಿವ್ವಳ ಸಾಲದಿಂದ ಮುಕ್ತವಾಗಿದೆ.

ಇಂಧನ ರಿಟೇಲ್‌ ವಹಿವಾಟಿನಲ್ಲಿನ ಶೇ 49ರಷ್ಟು ಪಾಲು ಬಂಡವಾಳವನ್ನು ಕಳೆದ ವರ್ಷ ಇಂಗ್ಲೆಂಡ್‌ನ ಬಿಪಿ ಪಿಎಲ್‌ಸಿಗೆ ಮಾರಾಟ ಮಾಡಿ ₹ 7,000 ಕೋಟಿ ಸಂಗ್ರಹಿಸಿತ್ತು. ಇದೂ ಸೇರಿದಂತೆ ಇದುವರೆಗಿನ ಒಟ್ಟಾರೆ ಬಂಡವಾಳ ಸಂಗ್ರಹವು ₹ 1.75 ಲಕ್ಷ ಕೋಟಿಗಳಷ್ಟಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

‘ಗಡುವಿನ ಮುಂಚೆಯೇ ಕಂಪನಿಯನ್ನು ನಿವ್ವಳ ಸಾಲದಿಂದ ಮುಕ್ತಗೊಳಿಸುವುದಾಗಿ ಷೇರುದಾರರಿಗೆ ನೀಡಿದ್ದ ನನ್ನ ಭರವಸೆ ಈಡೇರಿಸಿರುವೆ’ ಎಂದು ಮುಕೇಶ್‌ ಅಂಬಾನಿ ತಿಳಿಸಿದ್ದಾರೆ.

ಏಪ್ರಿಲ್‌ 22 ರಿಂದೀಚೆಗೆ ಜಿಯೊ ಪ್ಲಾಟ್‌ಫಾರ್ಮ್ಸ್‌ 10 ಕಂಪನಿಗಳಿಂದ ಇದುವರೆಗೆ ₹1,15,693.95 ಕೋಟಿ ಮೊತ್ತದ ಬಂಡವಾಳ ಸಂಗ್ರಹಿಸಿದೆ. ಹಣಕಾಸು ಪಾಲುದಾರರ ಸೇರ್ಪಡೆಯ ಈ ಹಂತ ಸದ್ಯಕ್ಕೆ ಪೂರ್ಣಗೊಂಡಿದೆ.

ಏನಿದು ನಿವ್ವಳ ಸಾಲ?

ಕಂಪನಿಯು ತನ್ನೆಲ್ಲ ಸಾಲವನ್ನು ತಕ್ಷಣಕ್ಕೆ ಪಾವತಿಸುವ ಸಂದರ್ಭದ ಎದುರಾದರೆ ಯಾವ ಪ್ರಮಾಣದಲ್ಲಿ ಮರು ಪಾವತಿ ಮಾಡಲಿದೆ ಎನ್ನುವುದನ್ನು ನಿರ್ಧರಿಸುವ ನಗದು ಮಾನದಂಡವೇ ನಿವ್ವಳ ಸಾಲ ಆಗಿರುತ್ತದೆ. ಎಲ್ಲ ಸಾಲ ಮರು ಪಾವತಿಸಿದ ನಂತರವೂ ಕಂಪನಿಯ ಬಳಿ ಉಳಿಯುವ ನಗದನ್ನು ನಿವ್ವಳ ಸಾಲವು ತೋರಿಸುತ್ತದೆ.

₹ 11 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ

ಷೇರು ಮಾರುಕಟ್ಟೆಯ ಮೌಲ್ಯದ ಲೆಕ್ಕದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಮಾರುಕಟ್ಟೆ ಮೌಲ್ಯವು ಶುಕ್ರವಾರ ₹ 11 ಲಕ್ಷ ಕೋಟಿ ದಾಟಿದೆ. ಈ ಹೆಗ್ಗಳಿಕೆ ಸಾಧಿಸಿದ ದೇಶದ ಮೊದಲ ಕಂಪನಿಯೂ ಇದಾಗಿದೆ.

ಬಂಡವಾಳ ಸಂಗ್ರಹ ವಿವರ

₹ 1.15 ಲಕ್ಷ ಕೋಟಿ

ಜಾಗತಿಕ ಹೂಡಿಕೆದಾರರಿಗೆ ಪಾಲು ಬಂಡವಾಳ ಮಾರಾಟ

₹ 53,124 ಕೋಟಿ

ಹಕ್ಕಿನ ಷೇರು

₹ 1.69 ಲಕ್ಷ ಕೋಟಿ

58 ದಿನಗಳಲ್ಲಿನ ಬಂಡವಾಳ ಸಂಗ್ರಹ

₹ 1,61,035

ನಿವ್ವಳ ಸಾಲದ ಮೊತ್ತ

***

₹ 11 ಲಕ್ಷ ಕೋಟಿ

ಕಂಪನಿಯ ಮಾರುಕಟ್ಟೆ ಮೌಲ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.