ADVERTISEMENT

ರಿಟೇಲ್‌ ಸಾಲ ಹೆಚ್ಚಿಸಲು ಆರ್‌ಬಿಐ ನಿರ್ಧಾರ

ಆರ್ಥಿಕ ಹಿಂಜರಿತಕ್ಕೆ ತಡೆ ಹಾಕಲು ಕ್ರಮ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 20:08 IST
Last Updated 12 ಸೆಪ್ಟೆಂಬರ್ 2019, 20:08 IST
ಆರ್‌ಬಿಐ ಲಾಂಛನ
ಆರ್‌ಬಿಐ ಲಾಂಛನ   

ಬೆಂಗಳೂರು: ಆರ್ಥಿಕ ಹಿಂಜರಿತಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಿಟೇಲ್‌ ಸಾಲಕ್ಕೆ ಉತ್ತೇಜನ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಮುಂದಾಗಿದೆ.

ಮಂಜೂರು ಮಾಡಿದ ಸಾಲದ ಹಣಕಾಸು ನಷ್ಟದ ಸಾಧ್ಯತೆ ತಗ್ಗಿಸಲು ಬ್ಯಾಂಕ್‌ಗಳು ತೆಗೆದು ಇರಿಸಬೇಕಾದ ಮೊತ್ತದಲ್ಲಿ ಕಡಿಮೆ ಮಾಡಿದೆ. ಈ ಸಂಬಂಧ ಗುರುವಾರ ಸುತ್ತೋಲೆ ಹೊರಡಿಸಿದೆ. ಇದಕ್ಕೂ ಮೊದಲು ‍ಪ್ರತ್ಯೇಕವಾಗಿ ತೆಗೆದು ಇರಿಸಬೇಕಾದ ಮೊತ್ತವು ಸಾಲದ ಶೇ 125ರಷ್ಟಿತ್ತು. ಅದು ಈಗ ಶೇ 100ಕ್ಕೆ ಇಳಿದಿದೆ.

ವೈಯಕ್ತಿಕ ಸಾಲವೂ ಸೇರಿದಂತೆ ಗ್ರಾಹಕರು ಪಡೆಯುವ ವಿವಿಧ ಸಾಲಗಳ ನಷ್ಟ ಸಾಧ್ಯತೆಗೆ ಪ್ರತಿಯಾಗಿ ಬ್ಯಾಂಕ್‌ಗಳು ಪ್ರತ್ಯೇಕವಾಗಿ ತೆಗೆದು ಇರಿಸಬೇಕಾದ ಮೊತ್ತವನ್ನು ತಗ್ಗಿಸಿದೆ. ಇದರಿಂದ ಬ್ಯಾಂಕ್‌ಗಳ ಬಳಿ ಸಾಲ ವಿತರಿಸಲು ಹೆಚ್ಚುವರಿ ಹಣ ಉಳಿಯಲಿದೆ. ನಿರ್ದಿಷ್ಟ ವಲಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಮಂಜೂರು ಮಾಡಲೂ ಸಾಧ್ಯವಾಗಲಿದೆ.

ADVERTISEMENT

ಉದಾಹರಣೆಗೆ ₹ 75 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಗೃಹ ಸಾಲಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ವೊಂದು ₹ 1,000 ಕೋಟಿ ಮೊತ್ತದ ಸಾಲ ಖಾತೆಗಳನ್ನು ಹೊಂದಿದ್ದರೆ, ಶೇ 125ರ ದರದಲ್ಲಿ ₹ 1,250 ಕೋಟಿ ನಷ್ಟದ ಸಾಧ್ಯತೆ ಇರುತ್ತಿತ್ತು. ಅದು ಈಗ ಶೇ 0.25ರಷ್ಟು ಕಡಿಮೆ ಮಾಡಿರುವುದರಿಂದ ₹ 1,000 ಕೋಟಿಗೆ ಇಳಿಯಲಿದೆ. ಬ್ಯಾಂಕ್‌ ಹೊಂದಿರಬೇಕಾದ ಶಾಸನಬದ್ಧ ಕನಿಷ್ಠ ಬಂಡವಾಳ ಪ್ರಮಾಣವು ಶೇ 9ರಷ್ಟು ಇರುವುದರಿಂದ, ಈ ಲೆಕ್ಕದಲ್ಲಿ ₹ 112.50 ಕೋಟಿ ತೆಗೆದು ಇರಿಸಬೇಕಾಗಿತ್ತು. ಅದು ಈಗ ಶೇ 20ರಷ್ಟು ಕಡಿಮೆಯಾಗಿ ₹ 90 ಕೋಟಿಗೆ ಇಳಿಯಲಿದೆ.

ಇತ್ತೀಚಿನ ದಿನಗಳಲ್ಲಿ ಆರ್ಥಿಕತೆಗೆ ಸಾಲದ ಹರಿವು ಹೆಚ್ಚಿಸಲು ಆರ್‌ಬಿಐ ಕೈಗೊಂಡ ಎರಡನೆ ನಿರ್ಧಾರ ಇದಾಗಿದೆ. ರೆಪೊ, ಟ್ರೆಷರಿ ಬಿಲ್‌ ಆಧರಿಸಿದ ಬಡ್ಡಿ ದರ ನಿಗದಿಪಡಿಸಲು ಇದಕ್ಕೂ ಮೊದಲು ಸೂಚಿಸಿತ್ತು.

ಚಿನ್ನ ಅಡಮಾನ ಇಟ್ಟುಕೊಂಡು ಸಾಲ ನೀಡುವ ಸಂಸ್ಥೆಗಳನ್ನು ಹೊರತುಪಡಿಸಿ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಬ್ಯಾಂಕ್‌ಗಳು ನೀಡುವ ಸಾಲದ ಪ್ರಮಾಣ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.