ADVERTISEMENT

ನಿಯಮ ಪಾಲಿಸಿದ ಬಳಿಕ ಉಪಗ್ರಹ ಸಂವಹನ: ಜ್ಯೋತಿರಾದಿತ್ಯ ಸಿಂಧಿಯಾ

ಉಪಗ್ರಹ ಆಧಾರಿತ ಸಂವಹನದ ಬಗ್ಗೆ ಕೇಂದ್ರ ದೂರಸಂಪರ್ಕ ಸಚಿವರ ವಿವರಣೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 15:30 IST
Last Updated 28 ಡಿಸೆಂಬರ್ 2025, 15:30 IST
<div class="paragraphs"><p>ಉಪಗ್ರಹ ಸಂವಹನ</p></div>

ಉಪಗ್ರಹ ಸಂವಹನ

   

ಸಾಂಕೇತಿಕ ಚಿತ್ರ

ನವದೆಹಲಿ: ‘ಸ್ಟಾರ್‌ಲಿಂಕ್‌ ಸೇರಿದಂತೆ ಉಪ‍ಗ್ರಹ ಆಧಾರಿತ ಸಂವಹನ ಸೇವೆ ಒದಗಿಸುವ ಕಂಪನಿಗಳು ಭದ್ರತಾ ನಿಯಮ ಪಾಲಿಸಿದ ಬಳಿಕ ದೇಶದಲ್ಲಿ ಉಪ್ರಗಹ ಆಧಾರಿತ ಸಂವಹನ ಸೇವೆ ಆರಂಭವಾಗಲಿದೆ’ ಎಂದು ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. 

ADVERTISEMENT

ದೂರಸಂಪರ್ಕ ಇಲಾಖೆಯು ತರಾಂಗತರ ಬೆಲೆಯನ್ನು ಅಂತಿಮಗೊಳಿಸಿದ ನಂತರ ಉಪಗ್ರಹ ಆಧಾರಿತ ಸಂವಹನ ಸೇವೆ ಒದಗಿಸುವ ಸ್ಟಾರ್‌ಲಿಂಕ್‌, ಯುಟೆಲ್‌ಸ್ಯಾಟ್ ಒನ್‌ ಮತ್ತು ಜಿಯೊ ಎಸ್‌ಜಿಎಸ್‌ಗೆ ತರಂಗಾಂತರವನ್ನು ಹಂಚಿಕೆ ಮಾಡಲಾಗುವುದು ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಒನ್‌ವೆಬ್‌, ರಿಲಯನ್ಸ್ ಜಿಯೊ ಮತ್ತು ಸ್ಟಾರ್‌ಲಿಂಕ್‌ ಭದ್ರತಾ ಸಂಸ್ಥೆಗಳು ನಿಗದಿಪಡಿಸಿದ ನಿಯಮಗಳನ್ನು ಪಾಲಿಸಿ ಸೇವೆ ಆರಂಭಿಸಲು ಅನುಮತಿ ಪಡೆದುಕೊಳ್ಳಬೇಕು ಮತ್ತು ಭಾರತದಲ್ಲಿಯೇ ದತ್ತಾಂಶ ಉಳಿಯುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಈಗಾಗಲೇ ಈ ಕಂಪನಿಗಳಿಗೆ ತಾತ್ಕಾಲಿಕ ತರಂಗಾಂತರ ಹಂಚಿಕೆ ಮಾಡಲಾಗಿದೆ.

ದೂರಸಂಪರ್ಕ ಇಲಾಖೆ ಮತ್ತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್) ತರಂಗಾಂತರ ಬೆಲೆಯನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆದಿದೆ. ಇದು ಶೀಘ್ರದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಸಚಿವರು ಹೇಳಿದ್ದಾರೆ.

ಟ್ರಾಯ್‌ ಮತ್ತು ದೂರಸಂಪರ್ಕ ಇಲಾಖೆಯು ಉಪಗ್ರಹ ಆಧಾರಿತ ಸಂವಹನದ ತರಂಗಾಂತರಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿವೆ. ಉಪಗ್ರಹ ಆಧಾರಿತ ಸೇವೆ ಒದಗಿಸುವ ಕಂಪನಿಗಳಿಗೆ ವಾರ್ಷಿಕ ತರಂಗಾಂತರ ಶುಲ್ಕವನ್ನು ಶೇ 4ರ ಬದಲು ಶೇ 5ರಷ್ಟು ವಿಧಿಸುವುದು ಸೇರಿ ಹಲವು ಸಲಹೆಗಳನ್ನು ದೂರಸಂಪರ್ಕ ಇಲಾಖೆ ನೀಡಿತ್ತು. ಈ ಸಲಹೆಗಳನ್ನು ಈ ತಿಂಗಳ ಆರಂಭದಲ್ಲಿ ಟ್ರಾಯ್‌ ತಿರಸ್ಕರಿಸಿದೆ.

ದೂರಸಂಪರ್ಕ ವಲಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅತ್ಯುನ್ನತ ಸಂಸ್ಥೆಯಾದ ಡಿಜಿಟಲ್‌ ಸಂವಹನ ಆಯೋಗವು (ಡಿಸಿಸಿ) ತರಂಗಾಂತರದ ಬೆಲೆ ನಿರ್ಧರಿಸಿದ ಬಳಿಕ, ಅದಕ್ಕೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಸಿಗಬೇಕಿದೆ ಎಂದಿದ್ದಾರೆ.

‘ವೊಡಾಫೋನ್ ಐಡಿಯಾಗೆ ಪರಿಹಾರ ನೀಡಿಲ್ಲ’: ವೊಡಾಫೋನ್ ಐಡಿಯಾ (ವಿಐಎಲ್‌) ಕೋರಿರುವ ಪರಿಹಾರ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ‘ಈ ವರ್ಷದ ಆರಂಭದಲ್ಲಿ ವೊಡಾಫೋನ್ ಐಡಿಯಾ ಕಂಪನಿಯು ದೂರಸಂಪರ್ಕ ಇಲಾಖೆಗೆ ಬರೆದ ಪತ್ರದಲ್ಲಿ ತಾನು ಸರ್ಕಾರಕ್ಕೆ ₹2 ಲಕ್ಷ ಕೋಟಿ ಸಾಲ ಮರುಪಾವತಿಸಬೇಕಿದೆ ಎಂದು ತಿಳಿಸಿದೆ’ ಎಂದಿದ್ದಾರೆ.

ಇದುವರೆಗೆ ಕಂಪನಿಗೆ ಯಾವುದೇ ಪರಿಹಾರ ನೀಡಿಲ್ಲ. ಕಂಪನಿಯಿಂದ ಬರಬೇಕಿರುವ ಬಾಕಿಯನ್ನು ಷೇರುಗಳಾಗಿ ಪರಿವರ್ತನೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಕಂಪನಿಯಲ್ಲಿ ಶೇ 49ರಷ್ಟು ಪಾಲನ್ನು ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಕಂಪನಿಗೆ ಪರಿಹಾರ ನೀಡದಿದ್ದರೆ, 2026ರ ಮಾರ್ಚ್ ವೇಳೆಗೆ ಕಂಪನಿಯು ₹18 ಸಾವಿರ ಕೋಟಿ ಪಾವತಿಸಬೇಕಿದೆ. ಇಷ್ಟೇ ಮೊತ್ತವನ್ನು ಮುಂದಿನ 6 ವರ್ಷಗಳ ಕಾಲ ಪ್ರತಿ ವರ್ಷವೂ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಜ್ಯೋತಿರಾದಿತ್ಯ ಸಿಂಧಿಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.