ನವದೆಹಲಿ: ಮ್ಯೂಚುವಲ್ ಫಂಡ್ ಮತ್ತು ಡಿಮ್ಯಾಟ್ ಖಾತೆಗಳಿಗೆ ನಾಮನಿರ್ದೇಶನ ಮಾಡುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಇದರನ್ವಯ ಹೂಡಿಕೆದಾರರು ತಮ್ಮ ಖಾತೆಗೆ 10 ಮಂದಿಯನ್ನು ನಾಮನಿರ್ದೇಶನ ಮಾಡಬಹುದಾಗಿದೆ. ಪ್ರತಿ ನಾಮಿನಿಗೆ ನಿರ್ದಿಷ್ಟ ಪ್ರಮಾಣದ ಶೇಕಡಾವಾರು ಮೊತ್ತ ಹಂಚಿಕೆ ಮಾಡುವ ಆಯ್ಕೆ ನೀಡಿದೆ.
ಮಾರ್ಚ್ 1ರಿಂದ ಈ ಹೊಸ ನಿಯಮಾವಳಿಗಳು ಜಾರಿಗೆ ಬರಲಿವೆ. ಆಸ್ತಿ ನಿರ್ವಹಣಾ ಕಂಪನಿಗಳು (ಎಎಂಸಿ) ಸೇರಿ ಹೂಡಿಕೆದಾರರು, ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಗಳಿಗೆ ಇವು ಅನ್ವಯವಾಗಲಿವೆ.
ಈಕ್ವಿಟಿ ಮಾರುಕಟ್ಟೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವಿಕೆ ಹಾಗೂ ವಾರಸುದಾರರಿಲ್ಲದ ಸ್ವತ್ತುಗಳ ಸಂಖ್ಯೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೆಬಿ ತಿಳಿಸಿದೆ.
ಎಎಂಸಿಗಳು, ಠೇವಣಿದಾರರು ಹಾಗೂ ಷೇರುಪೇಟೆ ವಹಿವಾಟಿನಲ್ಲಿ ಭಾಗವಹಿಸುವವರು ಈ ಮಾರ್ಗಸೂಚಿ ಪಾಲಿಸಬೇಕಿದೆ. ಹೂಡಿಕೆದಾರರು ನಾಮನಿರ್ದೇಶನ ಮಾಡುವುದು ಕಡ್ಡಾಯ ಎಂದು ಹೇಳಿದೆ.
ಆಸ್ತಿಗೆ ಸಂಬಂಧಿಸಿದಂತೆ ಜಂಟಿ ಖಾತೆ ಹೊಂದಿರುವವರ ಪೈಕಿ ಒಬ್ಬರು ವಾರಸುದಾರ ಮೃತಪಟ್ಟರೆ ಜೀವಂತವಿರುವ ವ್ಯಕ್ತಿಗೆ ಸ್ವತ್ತು ವರ್ಗಾವಣೆಯಾಗುತ್ತದೆ. ಹೂಡಿಕೆದಾರರ ನಾಮನಿರ್ದೇಶನವು ನ್ಯಾಯಸಮ್ಮತವಾಗಿದೆಯೇ ಎಂದು ಸೆಬಿ ಪರಾಮರ್ಶೆ ನಡೆಸಲಿದೆ.
ಸಮಾನ ಹಂಚಿಕೆ: ಹೂಡಿಕೆದಾರರು ಶೇಕಡಾವಾರು ಹಂಚಿಕೆ ಮಾಡಿಲ್ಲದಿದ್ದರೆ ಎಲ್ಲಾ ನಾಮಿನಿಗಳಿಗೆ ಸಮನಾಗಿ ಹಣ ಹಂಚಿಕೆ ಮಾಡಲು ಅವಕಾಶ ಕಲ್ಪಿಸಿದೆ. ಹೂಡಿಕೆದಾರರು ನಾಮನಿರ್ದೇಶನ ಮಾಡಿದವರ ಪೈಕಿ ಒಬ್ಬ ನಾಮಿನಿ ಮೃತಪಟ್ಟಿದ್ದರೆ ಉಳಿದ ನಾಮಿನಿಗಳಿಗೆ ನಿಗದಿಪಡಿಸಿದ ಅನುಪಾತದ ಆಧಾರದ ಮೇಲೆ ಹಣ ಹಂಚಿಕೆಯಾಗಲಿದೆ ಎಂದು ಹೊಸ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಹೂಡಿಕೆದಾರರು ಆನ್‌ಲೈನ್ ಹಾಗೂ ಆಪ್‌ಲೈನ್ ಮೂಲಕವೂ ನಾಮನಿರ್ದೇಶನ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.