ADVERTISEMENT

ಸೂಚ್ಯಂಕ 489 ಅಂಶ ಜಿಗಿತ

ಅಮೆರಿಕದ ಫೆಡರಲ್‌ ರಿಸರ್ವ್‌ನಿಂದ ಬಡ್ಡಿದರ ಕಡಿತದ ಸುಳಿವು

ಪಿಟಿಐ
Published 20 ಜೂನ್ 2019, 19:45 IST
Last Updated 20 ಜೂನ್ 2019, 19:45 IST
   

ಮುಂಬೈ: ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್‌ ಬಡ್ಡಿದರ ಕಡಿತದ ಸುಳಿವು ನೀಡಿದೆ. ಇದರಿಂದ ಭಾರತವನ್ನೂ ಒಳಗೊಂಡು ಜಾಗತಿಕ ಷೇರುಪೇಟೆಗಳಲ್ಲಿ ಹೂಡಿಕೆ ಚಟುವಟಿಕೆ ಹೆಚ್ಚಾಗಿ ಸೂಚ್ಯಂಕಗಳು ಹೆಚ್ಚಿನ ಏರಿಕೆ ದಾಖಲಿಸುವಂತಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 489 ಅಂಶಗಳಷ್ಟು ಜಿಗಿತ ಕಂಡು 39,601 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಕಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 141 ಅಂಶ ಹೆಚ್ಚಾಗಿ 11,832 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ಅಮೆರಿಕದ ಫೆಡರಲ್‌ ರಿಸರ್ವ್‌ ಬುಧವಾರ ಅಂತ್ಯವಾದ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರದಲ್ಲಿ ಬದಲಾವಣೆ ಮಾಡಿಲ್ಲ. ಆದರೆ, ಆರ್ಥಿಕ ಪ್ರಗತಿಗೆ ಬೆಂಬಲ ನೀಡಲು ಮುಂದಿನ ತಿಂಗಳಿನಿಂದ ಬಡ್ಡಿದರ ಕಡಿತದ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದೆ.

‘ಸರ್ಕಾರದ 100 ದಿನಗಳ ಕಾರ್ಯಸೂಚಿ ಮತ್ತು ಬಜೆಟ್‌ ಸಿದ್ಧತೆ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಅವರು ನಡೆಸುತ್ತಿರುವ ಸರಣಿ ಸಭೆಗಳಿಂದಾಗಿ ಮಾರುಕಟ್ಟೆಯ ಬಗ್ಗೆ ಹೂಡಿಕೆದಾರರಲ್ಲಿ ವಿಶ್ವಾಸ ಮೂಡುವಂತಾಗಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್‌ ಹೇಳಿದ್ದಾರೆ.‌

ರೂಪಾಯಿ ಮೌಲ್ಯ ವೃದ್ಧಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಗುರುವಾರ 24 ಪೈಸೆ ಹೆಚ್ಚಾಗಿ ಒಂದು ವಾರದ ಗರಿಷ್ಠ ಮಟ್ಟವಾದ ₹ 69.44ರಂತೆ ವಿನಿಮಯಗೊಂಡಿತು.

ಜೆಟ್‌ ಷೇರುಶೇ 122ರಷ್ಟು ಏರಿಕೆ
ಜೆಟ್‌ ಏರ್‌ವೇಸ್‌ನ ಷೇರುಗಳು ಗುರುವಾರ ಶೇ 122ಕ್ಕೂ ಅಧಿಕ ಪ್ರಮಾಣದಲ್ಲಿ ಅನಿರೀಕ್ಷಿತ ಜಿಗಿತ ಕಂಡವು.

ಎನ್‌ಎಸ್‌ಇನಲ್ಲಿ ಶೇ 122.20ರಷ್ಟು ಹೆಚ್ಚಾಗಿ ಪ್ರತಿ ಷೇರಿನ ಬೆಲೆ ₹ 75.55ಕ್ಕೆ ತಲುಪಿತು. ಮಧ್ಯಂತರ ವಹಿವಾಟಿನಲ್ಲಿ ₹ 82.76ರ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿತ್ತು.

13 ವಹಿವಾಟು ಅವಧಿಗಳಲ್ಲಿ ಕಂಪನಿ ಷೇರುಗಳು ಶೇ 78ರಷ್ಟು ಇಳಿಕೆ ಕಂಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.