
ಮುಂಬೈ: ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಸಮ್ಮತಿ ಸೂಚಿಸಿವೆ ಎಂಬ ಸುದ್ದಿಯು ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ಭರ್ಜರಿ ವಹಿವಾಟು ನಡೆಯುವಂತೆ ಮಾಡಿತು.
ವ್ಯಾಪಾರ ಒಪ್ಪಂದದ ಸುದ್ದಿಯು ಜವಳಿ, ಚರ್ಮೋದ್ಯಮ, ಹವಳ ಮತ್ತು ಆಭರಣ, ವಿಶೇಷ ಬಳಕೆಯ ರಾಸಾಯನಿಕಗಳು, ಸಮುದ್ರ ಉತ್ಪನ್ನಗಳ ರಫ್ತಿನಲ್ಲಿ ತೊಡಗಿರುವ ಕಂಪನಿಗಳ ಷೇರುಗಳ ಮೌಲ್ಯ ಹೆಚ್ಚಳಕ್ಕೆ ಕಾರಣವಾಯಿತು.
ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 2,072 ಅಂಶ ಜಿಗಿಯಿತು. ಕಳೆದ ಎಂಟು ತಿಂಗಳಲ್ಲಿ ಸೆನ್ಸೆಕ್ಸ್ ಒಂದು ದಿನದಲ್ಲಿ ದಾಖಲಿಸಿದ ಅತ್ಯುತ್ತಮ ಏರಿಕೆ ಇದು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 639 ಅಂಶ ಏರಿಕೆ ದಾಖಲಿಸಿತು.
ಸೆನ್ಸೆಕ್ಸ್ ಸೂಚ್ಯಂಕದ ಭಾಗವಾಗಿರುವ ಅದಾನಿ ಪೋರ್ಟ್ಸ್, ಬಜಾಜ್ ಫೈನಾನ್ಸ್, ಇಂಟರ್‌ಗ್ಲೋಬ್ ಏವಿಯೇಷನ್, ಪವರ್ ಗ್ರಿಡ್, ಸನ್ ಫಾರ್ಮಾ, ಬಜಾಜ್ ಫಿನ್‌ಸರ್ವ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡವು. ಟೆಕ್ ಮಹೀಂದ್ರ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಇಳಿಕೆ ದಾಖಲಿಸಿದವು.
‘ಬಹು ನಿರೀಕ್ಷಿತ ವ್ಯಾಪಾರ ಒಪ್ಪಂದದ ಸುದ್ದಿಯಿಂದಾಗಿ, ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ವರ್ಧನೆಯ ಕಾರಣದಿಂದಾಗಿ, ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಹಣವು ಭಾರತದ ಬಂಡವಾಳ ಮಾರುಕಟ್ಟೆಗಳ ಕಡೆ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಹರಿಯಬಹುದು ಎಂಬ ನಿರೀಕ್ಷೆಯೊಂದಿಗೆ ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ಒಳ್ಳೆಯ ವಹಿವಾಟು ನಡೆಯಿತು’ ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
‘ಒಪ್ಪಂದದ ಬಗ್ಗೆ ಮಾಹಿತಿ ದೊರೆತ ನಂತರದಲ್ಲಿ ಭಾರತದ ಷೇರುಪೇಟೆಗಳಲ್ಲಿ ತೇಜಿ ವಹಿವಾಟು ನಡೆದಿದೆ. ಇದು ಈಚಿನ ದಿನಗಳಲ್ಲಿ ಆಗಿರುವ ಅತ್ಯುತ್ತಮ ವಹಿವಾಟುಗಳಲ್ಲಿ ಒಂದು’ ಎಂದು ಎನ್ರಿಚ್ ಮನಿ ಸಂಸ್ಥೆಯ ಸಿಇಒ ಪೊನ್ಮುಡಿ ಆರ್. ಹೇಳಿದ್ದಾರೆ.
ರಫ್ತು ಆಧಾರಿತ ಹಾಗೂ ಸರಕುಗಳಿಗೆ ಸಂಬಂಧಿಸಿದ ವಲಯಗಳ ಷೇರುಗಳನ್ನು ಹೂಡಿಕೆದಾರರು ಹೆಚ್ಚು ಖರೀದಿಸಿದರು. ಜವಳಿ, ರಾಸಾಯನಿಕ, ವಾಹನಗಳ ಬಿಡಿಭಾಗ, ಹಣಕಾಸು, ರಿಯಾಲ್ಟಿ, ಔಷಧ, ಐ.ಟಿ. ವಲಯದ ಷೇರುಗಳ ಖರೀದಿ ಹೆಚ್ಚಿತ್ತು ಎಂದು ಅವರು ತಿಳಿಸಿದ್ದಾರೆ.
ಮುಂಬೈ ಷೇರುಪೇಟೆಯಲ್ಲಿ ಒಟ್ಟು 3,304 ಕಂಪನಿಗಳ ಷೇರುಮೌಲ್ಯ ಏರಿಕೆ ಕಂಡಿದೆ, 981 ಕಂಪನಿಗಳ ಷೇರುಮೌಲ್ಯ ಇಳಿಕೆಯಾಗಿದೆ.
ಸಂಪತ್ತು ₹12.10 ಲಕ್ಷ ಕೋಟಿ ಏರಿಕೆ
ನವದೆಹಲಿ: ಷೇರುಪೇಟೆ ಸೂಚ್ಯಂಕಗಳ ಜಿಗಿತದ ಪರಿಣಾಮವಾಗಿ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ ₹12.10 ಲಕ್ಷ ಕೋಟಿಯಷ್ಟು ಹೆಚ್ಚಳ ಆಗಿದೆ. ಬಿಎಸ್‌ಇ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ₹467 ಲಕ್ಷ ಕೋಟಿಗೆ ಹೆಚ್ಚಳ ಕಂಡಿದೆ. ಅಮೆರಿಕ–ಭಾರತ ನಡುವಿನ ವ್ಯಾಪಾರ ಒಪ್ಪಂದವು ಬಂಡವಾಳ ಮಾರುಕಟ್ಟೆಗಳ ಮೇಲಿದ್ದ ತೂಗುಕತ್ತಿಯೊಂದನ್ನು ಇನ್ನಿಲ್ಲವಾಗಿಸಿದೆ. ಒಳ್ಳೆಯ ಬಜೆಟ್ ನಂತರದಲ್ಲಿ ಇದು ಘೋಷಣೆ ಆಗಿದೆ. ಇದು ಬಂಡವಾಳದ ಹರಿಯುವಿಕೆಯ ಬಗ್ಗೆ ಸ್ಪಷ್ಟತೆ ನೀಡುತ್ತಿದೆ. – ಎ. ಬಾಲಸುಬ್ರಮಣಿಯನ್ ಆದಿತ್ಯ ಬಿರ್ಲಾ ಸನ್‌ಲೈಫ್ ಎಎಂಸಿ ಲಿ. ಕಂಪನಿಯ ಸಿಇಒ
ಒಪ್ಪಂದದಿಂದಾಗಿ ವಾಹನ ಬಿಡಿಭಾಗ ರಕ್ಷಣೆ ಜವಳಿ ಗ್ರಾಹಕ ಬಳಕೆ ಉಪಕರಣಗಳು ಇಎಂಎಸ್ ಐ.ಟಿ ಸೇವೆಗಳ ವಲಯಕ್ಕೆ ಅನುಕೂಲ ಆಗಲಿದೆ. ಹಣಕಾಸು ವಲಯ ಕೂಡ ಪ್ರಯೋಜನ ಪಡೆಯಬಹುದು. – ಸಿದ್ಧಾರ್ಥ ಖೇಮ್ಕ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಲಿ. ಕಂಪನಿಯ ಸಂಪತ್ತು ನಿರ್ವಹಣಾ ವಿಭಾಗದ ಸಂಶೋಧನಾ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.