ADVERTISEMENT

ಬೆಂಗಳೂರು| ಕೆ.ಜಿ ಬೆಳ್ಳಿ ದರ ₹1.93 ಲಕ್ಷ: ಧನ್‌ತೇರಸ್ ವೇಳೆಗೆ ₹2 ಲಕ್ಷ ಸಾಧ್ಯತೆ

ಧನ್‌ತೇರಸ್‌ದಂದು 7 ಟನ್‌ ಚಿನ್ನ ಮಾರಾಟ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 0:39 IST
Last Updated 14 ಅಕ್ಟೋಬರ್ 2025, 0:39 IST
<div class="paragraphs"><p>ಚಿನ್ನ, ಬೆಳ್ಳಿ </p></div>

ಚಿನ್ನ, ಬೆಳ್ಳಿ

   

ಬೆಂಗಳೂರು: ‘ಧನ್‌ತೇರಸ್‌ ವೇಳೆಗೆ ಕೆ.ಜಿ ಬೆಳ್ಳಿ ದರ ₹2 ಲಕ್ಷಕ್ಕೆ ತಲುಪುವ ನಿರೀಕ್ಷೆ ಇದೆ’ ಎಂದು ಬೆಂಗಳೂರು ಜ್ಯುವೆಲರ್ಸ್‌ ಅಸೋಸಿಯೇಷನ್‌ ಹೇಳಿದೆ.

ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಕೆ.ಜಿ ಬೆಳ್ಳಿ ದರ ₹1.83 ಲಕ್ಷ (ಜಿಎಸ್‌ಟಿ ಹೊರತುಪಡಿಸಿ) ಇತ್ತು. ಇದೇ ವೇಳೆ 10 ಗ್ರಾಂ ಚಿನ್ನದ ದರ (24 ಕ್ಯಾರೆಟ್‌) ₹1.31 ಲಕ್ಷ ಆಗಿದೆ ಎಂದು ಅಸೋಸಿಯೇಷನ್‌ನ ಕಾರ್ಯದರ್ಶಿ ಆರ್. ಶ್ರೀನಿವಾಸ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ADVERTISEMENT

ಬೆಂಗಳೂರಿನ ರಿಟೇಲ್‌ ಮಾರುಕಟ್ಟೆಯಲ್ಲಿ ಕೆ.ಜಿ ಬೆಳ್ಳಿ ಧಾರಣೆ ₹1,93,600 ಆಗಿದೆ. 

ಚಿನ್ನಾಭರಣಗಳ ಖರೀದಿಗೆ ಶುಭ ದಿನ ಎಂದು ಧನ್‌ತೇರಸ್ ಪರಿಗಣಿತವಾಗಿದೆ. ಕಳೆದ ಬಾರಿ ನಡೆದ ಧನ್‌ತೇರಸ್‌ನಲ್ಲಿ ರಾಜ್ಯದಲ್ಲಿ ಗರಿಷ್ಠ 10 ಟನ್‌ವರೆಗೆ ಚಿನ್ನ ಮಾರಾಟವಾಗಿತ್ತು. ಈ ಬಾರಿ ಧನ್‌ತೇರಸ್‌ ಅಕ್ಟೋಬರ್ 19ರಂದು ನಡೆಯಲಿದೆ. ಈ ವೇಳೆ 5 ಟನ್‌ನಿಂದ 7 ಟನ್‌ವರೆಗೆ ಮಾರಾಟವಾಗುವ ನಿರೀಕ್ಷೆ ಇದೆ. ದರ ಏರಿಕೆಯಿಂದ ಈ ಬಾರಿ ಮಾರಾಟ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಆಗಲಿದೆ ಎಂದರು. 

ಗೃಹ ಪ‍್ರವೇಶ, ಮದುವೆ ಸೇರಿ ವಿವಿಧ ಶುಭ ಕಾರ್ಯಗಳಿಗೆ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರು ತಮ್ಮ ಬಜೆಟ್‌ ನೋಡಿಕೊಂಡು ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ಕಳೆದ ಕೆಲ ತಿಂಗಳಿನಿಂದ ಆಭರಣ ಮಾರಾಟವು ಶೇ 50ರಷ್ಟು ಕಡಿಮೆ ಆಗಿದೆ ಎಂದು ಹೇಳಿದರು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನೀತಿಗಳಿಂದ ಜಾಗತಿಕ ಆರ್ಥಿಕತೆಯಲ್ಲಿ ಏರಿಳಿತವಾಗುತ್ತಿದೆ. ಇದರಿಂದ ಹೂಡಿಕೆದಾರರು ಡಾಲರ್‌ ಬದಲು ಚಿನ್ನದ ಖರೀದಿಗೆ ಮುಂದಾಗಿದ್ದಾರೆ. ಜೊತೆಗೆ ಕೇಂದ್ರೀಯ ಬ್ಯಾಂಕ್‌ಗಳಿಂದ ಹಳದಿ ಲೋಹದ ಖರೀದಿ ಹೆಚ್ಚಳವಾಗಿದೆ. ಇದೇ ಚಿನ್ನದ ದರ ಏರಿಕೆಗೆ ಕಾರಣವಾಗಿದೆ ಎಂದು ಹೇಳಿದರು.

ಸೌರಫಲಕಗಳು ಮತ್ತು ವಿದ್ಯುತ್‌ ಚಾಲಿತ ವಾಹನಗಳಲ್ಲಿ ಬೆಳ್ಳಿ ಬಳಸಲಾಗುತ್ತಿದೆ. ಇದು ಬೆಳ್ಳಿ ದರ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ. ಜೊತೆಗೆ ಜಾಗತಿಕ ರಾಜಕೀಯ ವಿದ್ಯಮಾನಗಳು, ಇಸ್ರೇಲ್‌, ಉಕ್ರೇನ್‌ ಯುದ್ಧಗಳು ದರ ಏರಿಕೆ ಮೇಲೆ ಪರಿಣಾಮ ಬೀರಿವೆ ಎಂದರು.

ಬೆಳ್ಳಿ ಕೆ.ಜಿಗೆ ₹7500 ಹೆಚ್ಚಳ

ನವದೆಹಲಿ: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬೆಳ್ಳಿ ಧಾರಣೆ ಕೆ.ಜಿಗೆ ₹7500 ಹೆಚ್ಚಳವಾಗಿ ₹1.79 ಲಕ್ಷದಂತೆ ಮಾರಾಟವಾಗಿದೆ. 10 ಗ್ರಾಂ ಚಿನ್ನದ ದರವು (ಶೇ 99.9ರಷ್ಟು ಪರಿಶುದ್ಧತೆ) ₹1950 ಹೆಚ್ಚಳವಾಗಿ ₹127950 ಆಗಿದೆ. ಆಭರಣ ಚಿನ್ನದ ಬೆಲೆಯು (ಶೇ 99.5ರಷ್ಟು ಪರಿಶುದ್ಧತೆ) ಇಷ್ಟೇ ಪ್ರಮಾಣದಲ್ಲಿ ಹೆಚ್ಚಳವಾಗಿ ₹127350ಕ್ಕೆ ತಲುಪಿದೆ ಎಂದು ಅಖಿಲ ಭಾರತ ಸರಾಫ್‌ ಅಸೋಸಿಯೇಷನ್‌ ತಿಳಿಸಿದೆ.  ‘ಅಮೆರಿಕ ಮತ್ತು ಚೀನಾ ನಡುವೆ ವ್ಯಾಪಾರ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದರಿಂದ ಹೂಡಿಕೆದಾರರು ಚಿನ್ನದಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದರಿಂದ ಹಳದಿ ಲೋಹದ ದರ ಏರಿಕೆಯಾಗಿದೆ’ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ವಿಶ್ಲೇಷಕ ಜತೀನ್‌ ತ್ರಿವೇದಿ ಹೇಳಿದ್ದಾರೆ.   ಮುಂಬರಲಿರುವ ಹಬ್ಬಗಳ ಅಂಗವಾಗಿ ಹೆಚ್ಚಿದ ಬೇಡಿಕೆ ಮತ್ತು ಪೂರೈಕೆಯಲ್ಲಿನ ಕೊರತೆಯು ಸಹ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.