ADVERTISEMENT

ಮತ್ತೆ ಪುಟಿದೆದ್ದ ಷೇರುಪೇಟೆ: ಸೆನ್ಸೆಕ್ಸ್‌ 2,303 ಅಂಶ ಏರಿಕೆ

ಪಿಟಿಐ
Published 5 ಜೂನ್ 2024, 12:37 IST
Last Updated 5 ಜೂನ್ 2024, 12:37 IST
........
........   

ಮುಂಬೈ: ಲೋಕಸಭಾ ಚುನಾವಣಾ ಫಲಿತಾಂಶದ ದಿನದಂದು ಮಹಾಪತನ ಕಂಡಿದ್ದ ದೇಶದ ಮಾರುಕಟ್ಟೆಗಳಲ್ಲಿ ಬುಧವಾರ ಗೂಳಿಯ ನಾಗಾಲೋಟದಿಂದಾಗಿ ಷೇರು ಸೂಚ್ಯಂಕಗಳು ಶೇ 3ರಷ್ಟು ಏರಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 2,303 ಅಂಶ ಏರಿಕೆ (ಶೇ 3.20ರಷ್ಟು) ಕಂಡು, 74,382 ಅಂಶಗಳಿಗೆ ತಲುಪಿದೆ. ಬ್ಯಾಂಕಿಂಗ್‌, ಆಟೊ ಮತ್ತು ತೈಲ ವಲಯದ ಷೇರುಗಳ ಖರೀದಿಯು ಸೆನ್ಸೆಕ್ಸ್‌ ಏರಿಕೆ ಪಥದಲ್ಲಿ ಸಾಗಲು ನೆರವಾಯಿತು. ವಹಿವಾಟಿನ ಒಂದು ಸಂದರ್ಭದಲ್ಲಿ 2,455 ಅಂಶ ಏರಿಕೆ ಕಂಡಿತ್ತು. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 735 ಅಂಶ ಏರಿಕೆ (ಶೇ 3.36ರಷ್ಟು) ಕಂಡು 22,620 ಅಂಶಗಳಲ್ಲಿ ಸ್ಥಿರಗೊಂಡಿತು. ವಹಿವಾಟಿನ ಒಂದು ಹಂತದಲ್ಲಿ 785 ಅಂಶ ಏರಿಕೆ ಕಂಡಿತ್ತು.

ADVERTISEMENT

ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ ಷೇರುಗಳ ಖರೀದಿ ಹೆಚ್ಚಳವು ಸೂಚ್ಯಂಕಗಳ ಏರಿಕೆಗೆ ಕಾಣಿಕೆ ನೀಡಿದೆ. 

‘ದೇಶದಲ್ಲಿ ಎನ್‌ಡಿಎ ಮೈತ್ರಿಕೂಟವು ಕೇಂದ್ರದಲ್ಲಿ ಸರ್ಕಾರ ರಚಿಸುವ ಭರವಸೆ ಸಿಕ್ಕಿದೆ. ಹಾಗಾಗಿ, ಮಹಾಪತನ ಕಂಡಿದ್ದ ಷೇರುಪೇಟೆಯು ಮತ್ತೆ ಪುಟಿದೆದ್ದಿದೆ. ಆದರೂ, ಹೊಸ ಸರ್ಕಾರದ ರಚನೆಯ ಕಸರತ್ತು ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಕೈಗೊಳ್ಳುವ ನಿರ್ಣಯವು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ (ಸಂಶೋಧನಾ ವಿಭಾಗ) ಮುಖ್ಯಸ್ಥ ವಿನೋದ್‌ ನಾಯರ್‌ ತಿಳಿಸಿದ್ದಾರೆ.

ಸೆನ್ಸೆಕ್ಸ್ ಗುಚ್ಛದಲ್ಲಿನ ಇಂಡಸ್‌ಇಂಡ್‌ ಬ್ಯಾಂಕ್‌ ಷೇರಿನ ಮೌಲ್ಯದಲ್ಲಿ ಶೇ 7ರಷ್ಟು ಏರಿಕೆಯಾಗಿದೆ. ಟಾಟಾ ಸ್ಟೀಲ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ಬಜಾಜ್‌ ಫಿನ್‌ಸರ್ವ್‌, ಕೋಟಕ್‌ ಮಹೀಂದ್ರ ಬ್ಯಾಂಕ್‌, ಹಿಂದುಸ್ತಾನ್‌ ಯೂನಿಲಿವರ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌ ಮತ್ತು ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ. 

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಎರಡನೇ ಅವಧಿಯಲ್ಲಿ ಹೂಡಿಕೆ, ಸಾರ್ವಜನಿಕ ವೆಚ್ಚ, ಮೂಲ ಸೌಕರ್ಯ ಅಭಿವೃದ್ಧಿ ಮತ್ತು ತಯಾರಿಕಾ ಚಟುವಟಿಕೆಗೆ ಒತ್ತು ನೀಡುವ ಬಗ್ಗೆ ಅನುಷ್ಠಾನಗೊಳಿಸಿದ್ದ ನೀತಿಗಳನ್ನು ಮೂರನೇ ಅವಧಿಯಲ್ಲೂ ಮುಂದುವರಿಯುವ ನಿರೀಕ್ಷೆಯಿದೆ’ ಎಂದು ಮೋತಿಲಾಲ್‌ ಓಸ್ವಾಲ್‌ ರಿಸರ್ಚ್‌ ಹೇಳಿದೆ.

ಸೋಲ್‌ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದರೆ ಟೋಕಿಯೊ, ಶಾಂಘೈ ಮತ್ತು ಹಾಂಗ್‌ಕಾಂಗ್‌ ಮಾರುಕಟ್ಟೆಗಳು ಇಳಿಕೆ ಕಂಡಿವೆ. ಯುರೋಪಿಯನ್‌ ಮಾರುಕಟ್ಟೆಯೂ ಏರಿಕೆಯಾಗಿದೆ.

ಮಂಗಳವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹12,436 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.