ADVERTISEMENT

ಟಾಟಾದಲ್ಲಿ ತಿಕ್ಕಾಟ: ಅಧ್ಯಕ್ಷರಾಗಿ ಚಂದ್ರಶೇಖರನ್ ಮುಂದುವರಿಯಲು ನಿಯೋಲ್ ಅಪಸ್ವರ

ಪಿಟಿಐ
Published 27 ಫೆಬ್ರುವರಿ 2026, 11:48 IST
Last Updated 27 ಫೆಬ್ರುವರಿ 2026, 11:48 IST
<div class="paragraphs"><p>ನಟರಾಜನ್‌ ಚಂದ್ರಶೇಖರನ್,&nbsp;ನಿಯೋಲ್ ಟಾಟಾ</p></div>

ನಟರಾಜನ್‌ ಚಂದ್ರಶೇಖರನ್, ನಿಯೋಲ್ ಟಾಟಾ

   

ನವದೆಹಲಿ: ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ನಟರಾಜನ್‌ ಚಂದ್ರಶೇಖರನ್ ಅವರನ್ನು ಮುಂದುವರಿಸುವ ಕುರಿತು ಟಾಟಾ ಟ್ರಸ್ಟ್‌ನ ಅಧ್ಯಕ್ಷ ನಿಯೋಲ್ ಟಾಟಾ ಕೆಲವೊಂದು ಷರತ್ತುಗಳನ್ನು ಮುಂದೂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಉಪ್ಪಿನಿಂದ ಸಾಫ್ಟ್‌ವೇರ್‌ ಅಭಿವೃದ್ಧಿ ಉದ್ಯಮ ಹೊಂದಿರುವ ಟಾಟಾ ಕಂಪನಿಗೆ ಚಂದ್ರಶೇಖರನ್ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಒಮ್ಮತದ ನಿರ್ಧಾರ ತೆಗೆದುಕೊಂಡ ಟಾಟಾ ಟ್ರಸ್ಟ್‌ನ ಶಿಫಾರಸುಗಳ ಕುರಿತೂ ಒಳಗಿನಿಂದಲೇ ಅಪಸ್ವರಗಳು ಕೇಳಿಬರುತ್ತಿರುವ ಚರ್ಚೆಗಳು ನಡೆದಿವೆ.

ADVERTISEMENT

ಟಾಟಾ ಸಮೂಹದಲ್ಲಿರುವ ವಿವಿಧ ಉದ್ಯಮಗಳ ಸ್ಥಿತಿಗತಿ ಕುರಿತು ಟಾಟಾ ಟ್ರಸ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಏರ್‌ ಇಂಡಿಯಾ ನಷ್ಟ ಮತ್ತು ಸೆಮಿಕಂಡಕ್ಟರ್ ಹಾಗೂ ಬ್ಯಾಟರಿ ಉದ್ಯಮದಲ್ಲಿ ಭಾರಿ ಹೂಡಿಕೆಯಿಂದ ಸಂಸ್ಥೆಗಾಗಿರುವ ನಷ್ಟದ ಕುರಿತು ನಿಯೋಲ್ ಟಾಟಾ ಪ್ರಶ್ನೆ ಮಾಡಿದ್ದಾರೆ. ಷೇರು ಮಾರುಕಟ್ಟೆ ಲಿಸ್ಟಿಂಗ್‌ನಲ್ಲಿ ಟಾಟಾ ಸನ್ಸ್‌ ಮುಂದುವರಿಯದಿರುವ ಕುರಿತು ಖಾತರಿಯನ್ನು ಅವರು ಬಯಸಿದ್ದಾರೆ ಎಂದೇ ವರದಿಯಾಗಿದೆ.

‘ಟಾಟಾ ಸನ್ಸ್‌ನ ಅಧ್ಯಕ್ಷ ಹುದ್ದೆಗೆ ಮೂರನೇ ಬಾರಿ ಚಂದ್ರಶೇಖರನ್ ಅವರನ್ನು ಒಮ್ಮತದಿಂದ ಶಿಫಾರಸು ಮಾಡಿರುವ ಬಗ್ಗೆಯೇ ಪ್ರಶ್ನೆಗಳು ಮೂಡಿವೆ. ಈ ವಿಷಯದಲ್ಲಿ ಟ್ರಸ್ಟಿಗಳ ನಿರ್ಧಾರದ ಕುರಿತು ನಾಮನಿರ್ದೇಶಿತ ನಿರ್ದೇಶಕರು ನಿರ್ಣಯ ತೆಗೆದುಕೊಳ್ಳಬಹುದೇ ಎಂಬ ಪ್ರಶ್ನೆಯೂ ಮೂಡಿದೆ’ ಎಂದು ಬಲ್ಲಮೂಲಗಳು ಹೇಳಿವೆ.

‘ಟಾಟಾ ಸನ್ಸ್‌ನ ನಿರ್ಣಯವನ್ನು ಹಿಂಪಡೆಯಲಾಗುತ್ತದೆಯೇ ಅಥವಾ ಟಾಟಾ ಸನ್ಸ್‌ನಲ್ಲಿರುವ ನಾಮನಿರ್ದೇಶಿತ ನಿರ್ದೇಶಕರು ಏಕಪಕ್ಷೀಯವಾಗಿ ಟ್ರಸ್ಟ್‌ನ ನಿರ್ಣಯಗಳಿಗೆ ಅಪಸ್ವರ ಎತ್ತಬಹುದೇ’ ಎಂಬ ಪ್ರಶ್ನೆಗಳಿಗೆ ಟಾಟಾ ಟ್ರಸ್ಟ್‌ ಪ್ರತಿಕ್ರಿಯಿಸಿಲ್ಲ.

‘ಟಾಟಾ ಸನ್ಸ್‌ನ ನಿರ್ದೇಶಕರಾಗಿ ನಿಯೋಲ್ ಟಾಟಾ ಅವರು ತಮ್ಮ ಅನಿಸಿಕೆಯನ್ನು ಹೇಳಿದ್ದಾರೆಯೇ ಹೊರತು, ಟ್ರಸ್ಟಿಗಳ ನಿರ್ಣಯದ ವಿರುದ್ಧ ಅವರು ನಿರ್ಧಾರ ಹೊಂದಿರಲಿಲ್ಲ. ಕಾಲಕ್ಕೆ ಅನುಗುಣವಾಗಿ ನಿರ್ಣಯಗಳು ಅನುಷ್ಠಾನಗೊಳ್ಳುತ್ತವೆ’ ಎಂದು ಮೂಲಗಳು ತಿಳಿಸಿವೆ.

ಟಾಟಾ ಸನ್ಸ್‌ನಲ್ಲಿ ಶೇ 66ರಷ್ಟು ಪಾಲನ್ನು ಟಾಟಾ ಟ್ರಸ್ಟ್ ಹೊಂದಿದೆ. ಆ ಮೂಲಕ ಆಟೊಮೊಬೈಲ್, ಉಕ್ಕು, ತಂತ್ರಾಂಶ, ವಿಮಾನಯಾನ ವ್ಯವಹಾರ ಹೊಂದಿರುವ ಟಾಟಾ ಸಮೂಹದಲ್ಲಿ 180 ಶತಕೋಟಿ ಅಮೆರಿಕನ್ ಡಾಲರ್‌ ಮೊತ್ತದ ಕಂಪನಿ ಮೇಲೆ ಬಿಗಿ ಹಿಡಿತವನ್ನು ಹೊಂದಿದೆ.

ಟಾಟಾ ಟ್ರಸ್ಟ್‌ನ ಆಂತರಿಕ ಜಗಳವು ಕಳೆದ ವರ್ಷ ಬಹಿರಂಗಗೊಳ್ಳುವ ಹಂತಕ್ಕೆ ತಲುಪಿತ್ತು. ನಿಯೋಲ್ ಟಾಟಾ ಮತ್ತು ಟಾಟಾ ಸನ್ಸ್‌ನ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿದ್ದರು. ‘ಇಂಥ ವಿಷಯಗಳು ಬಹಿರಂಗವಾಗಲು ಬಿಡುವ ಬದಲು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೊಗಬೇಕು’ ಎಂದು ಸರ್ಕಾರ ಸಲಹೆ ನೀಡಿದ್ದು ಸುದ್ದಿಯಾಗಿತ್ತು.

ಕಳೆದ ಜನವರಿಯಲ್ಲಿ ನಡೆದ ‘ಶ್ರೀ ರತನ್‌ ಟಾಟಾ ಟ್ರಸ್ಟ್‌’ ಸಭೆಯಲ್ಲಿ ನಿಯೋಲ್ ಟಾಟಾ ಅವರ ಪುತ್ರ ನೆವಿಲ್ಲೆ ಟಾಟಾ ಅವರ ನೇಮಕ ಕುರಿತ ಚರ್ಚೆ ನಡೆಯಬೇಕಿತ್ತು. ಆದರೆ ಕೋರಂ ಕೊರತೆಯಿಂದ ಆ ಸಭೆ ರದ್ದಾಯಿತು. ಟಾಟಾ ಸನ್ಸ್‌ನಲ್ಲಿ ಶೇ 23.6 ರಷ್ಟು ಪಾಲನ್ನು ಶ್ರೀ ರತನ್‌ ಟಾಟಾ ಟ್ರಸ್ಟ್‌ ಹೊಂದಿದೆ. ಇದರಲ್ಲಿ ಪುತ್ರನ ಪ್ರವೇಶಕ್ಕೆ ನಿಯೋಲ್ ಪ್ರಯತ್ನ ನಡೆಸಿದ್ದರು.

2025ರ ನವೆಂಬರ್‌ನಲ್ಲಿ ನೆವಿಲ್ಲೆ ಟಾಟಾ ಮತ್ತು ಕಂಪನಿಯ ಮಾಜಿ ಮುಖ್ಯಸ್ಥ ಭಾಸ್ಕರ್ ಭಟ್‌ ಅವರು ‘ಶ್ರೀ ದರೋಬ್ಜಿ ಟಾಟಾ ಟ್ರಸ್ಟ್‌’ನ ಟ್ರಸ್ಟಿಗಳಾಗಿ ನೇಮಕಗೊಂಡಿದ್ದರು. ಟಾಟಾ ಸನ್ಸ್‌ನಲ್ಲಿ ಈ ಟ್ರಸ್ಟ್ ಶೇ 28ರಷ್ಟು ಪಾಲನ್ನು ಹೊಂದಿದೆ. ಟಾಟಾದ ಇತರ ಟ್ರಸ್ಟ್‌ಗಳು ಟಾಟಾ ಸನ್ಸ್‌ನಲ್ಲಿ ಶೇ 13.8ರಷ್ಟು ಪಾಲನ್ನು ಹೊಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.