ADVERTISEMENT

ಇ.ವಿ.ಗಳಿಗೆ ಉತ್ತೇಜನ ಕೋರಿದ ಟಾಟಾ

ಪಿಟಿಐ
Published 18 ಜನವರಿ 2026, 15:32 IST
Last Updated 18 ಜನವರಿ 2026, 15:32 IST
   

ನವದೆಹಲಿ: ಆರಂಭಿಕ ಹಂತದ ವಿದ್ಯುತ್ ಚಾಲಿತ ವಾಹನಗಳಿಗೆ ಉತ್ತೇಜನ ಕ್ರಮಗಳನ್ನು ಹಾಗೂ ಕ್ಯಾಬ್‌, ಟ್ಯಾಕ್ಸಿ ಸೇವೆಗಳಲ್ಲಿ ಬಳಕೆಯಾಗುವ ಇ.ವಿ.ಗಳಿಗೆ ಬೆಂಬಲವನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಟಾಟಾ ಮೋಟರ್ಸ್‌ ಪ್ಯಾಸೆಂಜರ್‌ ವೆಹಿಕಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಶೈಲೇಶ್‌ ಚಂದ್ರ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರವು ಜಿಎಸ್‌ಟಿ ದರ ಪರಿಷ್ಕರಿಸಿರುವುದು, ಆದಾಯ ತೆರಿಗೆ ವಿನಾಯಿತಿಯ ಮಿತಿಯನ್ನು ಹೆಚ್ಚು ಮಾಡಿರುವುದು, ರೆಪೊ ದರವನ್ನು ಆರ್‌ಬಿಐ ‍ಪರಿಷ್ಕರಿಸಿರುವುದು ದೇಶದಲ್ಲಿ ಪ್ರಯಾಣಿಕ ವಾಹನಗಳಿಗೆ ಬೇಡಿಕೆ ಹೆಚ್ಚಾಗುವಂತೆ ಮಾಡಿವೆ. ಆದರೆ ಆರಂಭಿಕ ಹಂತದ ಇ.ವಿ.ಗಳಿಗೆ ಬೇಡಿಕೆ ಅಷ್ಟೊಂದು ಜಾಸ್ತಿ ಆಗಿಲ್ಲ ಎಂದು ಶೈಲೇಶ್‌ ಚಂದ್ರ ಹೇಳಿದ್ದಾರೆ.

‘ಪ್ರಯಾಣಿಕ ವಾಹನ ಮಾರುಕಟ್ಟೆ ಹಾಗೂ ಇ.ವಿ. ಮಾರುಕಟ್ಟೆಗೆ ಉತ್ತೇಜನ ನೀಡಿದ ಸರ್ಕಾರದ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಬಜೆಟ್‌ನಲ್ಲಿ ಕೇಂದ್ರವು ಎರಡು ಅಂಶಗಳನ್ನು ಪರಿಗಣಿಸಬಹುದು. ಆರಂಭಿಕ ಹಂತದ ಇ.ವಿ.ಗಳ ವಿಚಾರವಾಗಿ ಸರ್ಕಾರವು ಒಂದಿಷ್ಟು ಉತ್ತೇಜನಾ ಕ್ರಮಗಳನ್ನು ಘೋಷಿಸುವ ಬಗ್ಗೆ ಪರಿಶೀಲಿಸಬಹುದು’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಕ್ಯಾಬ್‌, ಟ್ಯಾಕ್ಸಿಯಂತಹ ಕಾರುಗಳು ಇತರ ಪ್ರಯಾಣಿಕ ವಾಹನಗಳಿಗಿಂತ ಐದು ಪಟ್ಟು ಹೆಚ್ಚು ಬಳಕೆಯಾಗುತ್ತವೆ. ಹೀಗಾಗಿ ಈ ವರ್ಗದ ಇ.ವಿ.ಗಳಿಗೆ ಸಿಗುವ ನೆರವು ಪರಿಸರದ ಮೇಲೆಯೂ ಉತ್ತಮ ಪರಿಣಾಮವನ್ನು ಬೀರುತ್ತದೆ. ಈ ವರ್ಗದ ವಾಹನಗಳನ್ನು ಪಿಎಂ ಇ–ಡ್ರೈವ್‌ ಯೋಜನೆಯಲ್ಲಿ ಪರಿಗಣಿಸಬಹುದು’ ಎಂದು ಅವರು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.