ADVERTISEMENT

ಮಂದಗತಿ ಆರ್ಥಿಕತೆ: ನೇರ ತೆರಿಗೆ ಸಂಗ್ರಹ ಕುಸಿತ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 19:46 IST
Last Updated 1 ಜನವರಿ 2020, 19:46 IST
   

ಬೆಂಗಳೂರು: ಮಂದಗತಿಯ ಆರ್ಥಿಕತೆ ಮತ್ತು ಕಾರ್ಪೊರೇಟ್‌ ತೆರಿಗೆ ಕಡಿತದಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ನೇರ ತೆರಿಗೆ ಸಂಗ್ರಹವು ಶೇ 2.3ರಷ್ಟು ಮಾತ್ರ ಹೆಚ್ಚಳಗೊಂಡಿದೆ.

ಕಾರ್ಪೊರೇಟ್‌ ತೆರಿಗೆ ಸಂಗ್ರಹವು ಶೇ 1ರಷ್ಟು ಕುಸಿತ ದಾಖಲಿಸಿದೆ. 2018–19ನೇ ಸಾಲಿನಲ್ಲಿ ಕಾರ್ಪೊರೇಟ್‌ ತೆರಿಗೆ ಸಂಗ್ರಹವು ನಿರೀಕ್ಷಿತ ಮೊತ್ತಕ್ಕಿಂತ ಶೇ 15ರಷ್ಟು ಕಡಿಮೆಯಾಗಿರುವುದು ಬಜೆಟ್‌ ಮತ್ತು ಲೆಕ್ಕಪತ್ರಗಳ ಮಹಾ ನಿಯಂತ್ರಕರ (ಸಿಜಿಎ) ದಾಖಲೆಗಳ ವಿಶ್ಲೇಷಣೆಯಿಂದ ತಿಳಿದು ಬಂದಿದೆ.

ಆರ್ಥಿಕ ಬೆಳವಣಿಗೆಯು ನಿಧಾನಗೊಂಡಿರುವುದು ಈ ವರ್ಷ ದೇಶದಾದ್ಯಂತ ಆದಾಯ ತೆರಿಗೆ ಸಂಗ್ರಹದ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ನವೆಂಬರ್‌ ತಿಂಗಳವರೆಗೆ ಕೇವಲ ಶೇ 7ರಷ್ಟು ಹೆಚ್ಚಳಗೊಂಡಿದೆ. 2018–19ರಲ್ಲಿನ ಸಂಗ್ರಹವು ನಿರೀಕ್ಷಿತ ಪ್ರಮಾಣಕ್ಕಿಂತ ಶೇ 19ರಷ್ಟು ಕಡಿಮೆಯಾಗಿತ್ತು.

ADVERTISEMENT

ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಆದಾಯ ತೆರಿಗೆ ಸಂಗ್ರಹ ಪ್ರಮಾಣವು ಕನಿಷ್ಠ ₹ 50 ಸಾವಿರ ಕೋಟಿಗಳಷ್ಟು ಕಡಿಮೆ ಬೀಳಲಿದೆ ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿಯ (ಸಿಬಿಡಿಟಿ) ಉನ್ನತ ಮೂಲಗಳು ತಿಳಿಸಿವೆ.

‘ಕಾರ್ಪೊರೇಟ್‌ ತೆರಿಗೆ ಕಡಿತದಿಂದ ₹ 1ಲಕ್ಷದಷ್ಟು ಸಂಗ್ರಹ ಕಡಿಮೆಯಾಗಲಿದೆ ಎನ್ನುವುದು ನಮ್ಮ ನಿರೀಕ್ಷೆಯಾಗಿದೆ. ತೆರಿಗೆ ಸಂಗ್ರಹದ ಗುರಿ ತಲುಪಲು ಸಾಧ್ಯವಿರುವ ಪ್ರಯತ್ನಗಳನ್ನೆಲ್ಲ ಮಾಡಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ವಿತ್ತೀಯ ಕೊರತೆಯ ಶೇ 70ರಷ್ಟನ್ನು ಮಾರುಕಟ್ಟೆ ಸಾಲಗಳಿಂದ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಈ ವರ್ಷದ ಏಪ್ರಿಲ್‌ನಿಂದ ನವೆಂಬರ್‌ವರೆಗಿನ ಅವಧಿಯಲ್ಲಿನ ಮಾರುಕಟ್ಟೆ ಸಾಲವು ಬಜೆಟ್‌ ಅಂದಾಜಿನ ಶೇ 123ರಷ್ಟಾಗಿದೆ. ವರ್ಷದ ಹಿಂದೆ ಇದು ಶೇ 100ರಷ್ಟಿತ್ತು ಎಂಬುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ತೆರಿಗೆ ಸಂಗ್ರಹ

15 % - 2018–19ರಲ್ಲಿನ ಕಾರ್ಪೊರೇಟ್‌ ತೆರಿಗೆ ಸಂಗ್ರಹದಲ್ಲಿನ ಇಳಿಕೆ

₹ 50 ಸಾವಿರ ಕೋಟಿ -ಪ್ರಸಕ್ತ ವರ್ಷದಲ್ಲಿ ಆದಾಯ ತೆರಿಗೆ ಸಂಗ್ರಹ ಕುಸಿತದ ಅಂದಾಜು

123 % -ಬಜೆಟ್‌ ಅಂದಾಜಿಗಿಂತ ಹೆಚ್ಚಾಗಿರುವ ಮಾರುಕಟ್ಟೆ ಸಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.