ADVERTISEMENT

ಟ್ರಂಪ್ ಸುಂಕ: ಭಾರತಕ್ಕೆ ಶೇ 26 ಅಲ್ಲ; ಶೇ 27; ಯಾವ ಕ್ಷೇತ್ರದ ಮೇಲೆ ಪರಿಣಾಮ?

ಏಜೆನ್ಸೀಸ್
Published 3 ಏಪ್ರಿಲ್ 2025, 12:33 IST
Last Updated 3 ಏಪ್ರಿಲ್ 2025, 12:33 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

ರಾಯಿಟರ್ಸ್ ಚಿತ್ರ

ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಜಗತ್ತಿನ 180 ರಾಷ್ಟ್ರಗಳಿಗೆ ವಿಧಿಸಿರುವ ಪ್ರತಿ ಸುಂಕದಲ್ಲಿ ಭಾರತಕ್ಕೆ ಈ ಹಿಂದೆ ಸುದ್ದಿಯಾದಂತೆ ಶೇ 26 ಅಲ್ಲ, ಶೇ 27ರಷ್ಟು ಎಂದು ತಜ್ಞರು ಹೇಳಿದ್ದಾರೆ.

ADVERTISEMENT

ಅಮೆರಿಕದ ಈ ಪ್ರತಿ ಸುಂಕವು ಚೀನಾ, ವಿಯೆಟ್ನಾಂ, ತೈವಾನ್, ಥಾಯ್ಲೆಂಡ್‌ ಹಾಗೂ ಬಾಂಗ್ಲಾದೇಶ ಒಳಗೊಂಡಂತೆ ಏಷ್ಯಾ ಹಾಗೂ ಯುರೋಪ್‌ನ ರಾಷ್ಟ್ರಗಳ ಮೇಲೆ ಹೇರಿದೆ. ಆದರೆ ಇದು ಹೊರೆ ಎಂದು ಭಾವಿಸದ ಬದಲು, ಜಾಗತಿಕ ವ್ಯಾಪಾರ ಮತ್ತು ತಯಾರಿಕಾ ಕ್ಷೇತ್ರದಲ್ಲಿ ಭಾರತವು ತನ್ನ ಸಾಮರ್ಥ್ಯ ಪ್ರದರ್ಶನಕ್ಕೆ ಇದು ಸಕಾಲ ಎಂದು ವ್ಯಾಪಾರ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಉಕ್ಕು, ಅಲ್ಯುಮಿನಿಯಂ ಮತ್ತು ವಾಹನ ಕ್ಷೇತ್ರದ ವಸ್ತುಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸಿದೆ. ಮತ್ತೊಂದೆಡೆ ಔಷಧಗಳು, ಸೆಮಿಕಂಡಕ್ಟರ್‌, ತಾಮ್ರ ಮತ್ತು ಇಂಧನಕ್ಕೆ ಸಂಬಂಧಿಸಿದ ವಸ್ತುಗಳ ಮೇಲೆ ಶೂನ್ಯ ತೆರಿಗೆ ವಿಧಿಸಿದೆ. ಉಳಿದ ಉತ್ಪನ್ನಗಳಿಗೆ ಶೇ 27ರಷ್ಟು ತೆರಿಗೆಯನ್ನು ಅಮೆರಿಕ ವಿಧಿಸಿದೆಯೇ ಹೊರತು, ಶೇ 26ರಷ್ಟಲ್ಲ ಎಂದು ತಜ್ಞ ಶ್ರೀವಾತ್ಸವ ತಿಳಿಸಿದ್ದಾರೆ.

ಭಾರತಕ್ಕೆ ಶೇ 27ರಷ್ಟು ಪ್ರತಿ ಸುಂಕ ವಿಧಿಸಲಾಗಿದ್ದರೆ, ಚೀನಾಗೆ ಶೇ 54ರಷ್ಟು, ವಿಯೆಟ್ನಾಂಗೆ ಶೇ 46ರಷ್ಟು, ಬಾಂಗ್ಲಾದೇಶಕ್ಕೆ ಶೇ 37ರಷ್ಟು, ಥಾಯ್ಲೆಂಡ್‌ಗೆ ಶೇ 36ರಷ್ಟು ಪ್ರತಿ ಸುಂಕವನ್ನು ಅಮೆರಿಕ ವಿಧಿಸಿದೆ.

ಭಾರತದ ಜಗಳಿ ಉದ್ಯಮವು ಈ ಸವಾಲನ್ನು ಅವಕಾಶವನ್ನಾಗಿ ಪರಿವರ್ತಿಸುವ ಅವಕಾಶ ಹೊಂದಿದೆ. ಈ ಕ್ಷೇತ್ರದಲ್ಲಿ ಈಗಾಗಲೇ ಮುಂಚೂಣಿಯಲ್ಲಿರುವ ಚೀನಾ ಹಾಗೂ ಬಾಂಗ್ಲಾದೇಶದ ಮೇಲೆ ಹೆಚ್ಚಿನ ಸುಂಕ ವಿಧಿಸಿರುವುದರಿಂದ, ಭಾರತಕ್ಕೆ ಇದು ವರವಾಗಬಲ್ಲದು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಭಾರತವು ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳಬೇಕು. ಹೊಸ ಘಟಕಗಳನ್ನು ಸ್ಥಾಪಿಸಿ, ರಫ್ತು ಪ್ರಮಾಣ ಹೆಚ್ಚಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಟೆಲಿಕಾಂ ಮತ್ತು ಸ್ಮಾರ್ಟ್‌ಫೋನ್‌ ತಯಾರಿಕೆಯ ಎಲೆಕ್ಟ್ರಾನಿಕ್ಸ್‌ ಕ್ಷೇತ್ರವು ಈ ಲಾಭ ಪಡೆಯಬಹುದಾದ ಮತ್ತೊಂದು ಕ್ಷೇತ್ರ. ಈ ಕ್ಷೇತ್ರದಲ್ಲಿ ಈಗಾಗಲೇ ಮುಂಚೂಣಿಯಲ್ಲಿರುವ ವಿಯೆಟ್ನಾಮ್ ಮತ್ತು ಥಾಯ್ಲೆಂಡ್‌ ಮೇಲೆ ಅಮೆರಿಕವು ಹೆಚ್ಚಿನ ಸುಂಕ ವಿಧಿಸಿರುವುದರಿಂದ ದರ ಸಮರದ ಲಾಭವನ್ನು ಭಾರತ ಪಡೆಯಬಹುದು. 

ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ತೈವಾನ್‌ಗೆ ಶೇ 32ರಷ್ಟು ಪ್ರತಿ ಸುಂಕವನ್ನು ಅಮೆರಿಕ ಹೇರಿದೆ. ಈ ಉದ್ಯಮವನ್ನು ಭಾರತದತ್ತ ಸೆಳೆಯುವ ತಂತ್ರವನ್ನು ಹೂಡಲು ಇದು ಸಕಾಲ. ಹೀಗಾಗಿ ಅಮೆರಿಕದ ವ್ಯಾಪಾರ ನೀತಿಯಿಂದ ಭಾರತದಲ್ಲಿ ಹೂಡಿಕೆ ಹೆಚ್ಚಿಸುವ ಅವಕಾಶವನ್ನಾಗಿ ಬದಲಿಸಲು ಅವಕಾಶ ಒದಗಿಸಿದೆ ಎಂದು ತಜ್ಞರು ಹೇಳಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.