ADVERTISEMENT

ಟೀಕಿಸಿದ, ಪ್ರಶ್ನಿಸಿದ ನೌಕರರನ್ನೆಲ್ಲ ಕೆಲಸದಿಂದ ತೆಗೆಯುತ್ತಿರುವ ಮಸ್ಕ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ನವೆಂಬರ್ 2022, 9:12 IST
Last Updated 15 ನವೆಂಬರ್ 2022, 9:12 IST
   

ನವದೆಹಲಿ: ಸಾಮಾಜಿಕ ಜಾಲತಾಣದದಲ್ಲಿ ತಮ್ಮ ವಿರುದ್ಧ ಟೀಕೆ ಮಾಡುವ ನೌಕರರನ್ನು ಟ್ವಿಟ್ಟರ್‌ನ ನೂತನ ಮಾಲೀಕ ಇಲಾನ್‌ ಮಸ್ಕ್‌ ಕೆಲಸದಿಂದ ವಜಾ ಮಾಡಿದ್ದಾರೆ.

‘ನಾನು ಮುಕ್ತ ವಾಕ್ ಸ್ವಾತಂತ್ರ್ಯದ ಪರ‍‘ ಎಂದು ಹೇಳಿದ್ದ ಮಸ್ಕ್‌, ಇದೀಗ ತಮ್ಮ ಬಗ್ಗೆ ಟೀಕೆ ಮಾಡುವವರನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ.

ತಮ್ಮ ವಿರುದ್ಧ ಟ್ವೀಟ್‌ ಮಾಡಿದ ಇಬ್ಬರು ಎಂಜಿನಿಯರ್‌ಗಳನ್ನು ಮಸ್ಕ್‌ ಮನೆಗೆ ಕಳಿಸಿದ್ದಾರೆ.

ADVERTISEMENT

ಟ್ವಿಟ್ಟರ್‌ನ ಆಂಡ್ರಾಯ್ಡ್‌ ಮೊಬೈಲ್‌ ಆಪರೇಟಿಂಗ್‌ ಸಿಸ್ಟಂ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎರಿಕ್‌ ಫ್ರೋನ್‌ಹೋಪರ್‌ ಎಂಬ ಎಂಜಿನಿಯರ್, ಮಸ್ಕ್‌ ಅವರ ಹಳೇಯ ಟ್ವೀಟ್‌ ಅನ್ನು ಮೆನ್ಷನ್‌ ಮಾಡಿ, ‘ಟ್ವಿಟ್ಟರ್‌ನ ತಾಂತ್ರಿಕತೆ ಬಗ್ಗೆ ಮಸ್ಕ್‌ ಅವರಿಗೆ ಇರುವ ತಿಳಿವಳಿಕೆ ತಪ್ಪು‘ ಎಂದು ಹೇಳಿದ್ದರು.

ಇದಕ್ಕೆ ಉತ್ತರಿಸಿದ್ದ ಮಸ್ಕ್, ‘ಆಂಡ್ರಾಯ್ಡ್‌ನಲ್ಲಿ ಟ್ವಿಟ್ಟರ್‌ ನಿಧಾನವಾಗಿ ಕೆಲಸ ಮಾಡುತ್ತಿದೆ. ಇದನ್ನು ಸರಿಪಡಿಸಲು ನೀನು ಏನು ಮಾಡಿರುವೆ?‘ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಸರಣಿ ಟ್ವೀಟ್‌ಗಳ ಮೂಲಕ ಎರಿಕ್‌ ಫ್ರೋನ್‌ಹೋಪರ್‌ ಉತ್ತರ ನೀಡಿದ್ದಾರೆ. ಈ ನಡುವೆ ಮತ್ತೊಬ್ಬ ಬಳಕೆದಾರ ‘ಈ ವಿಷಯವನ್ನೇಕೆ ನಿಮ್ಮ ಹೊಸ ಬಾಸ್‌ಗೆ ವೈಯಕ್ತಿಕವಾಗಿ ತಿಳಿಸಬಾರದು?‘ ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿರುವ ಎರಿಕ್‌ ಫ್ರೋನ್‌ಹೋಪರ್‌, ‘ಅವರೂ ಕೂಡ ವೈಯಕ್ತಿಕವಾಗಿ ಪ್ರಶ್ನೆ ಕೇಳಬಹುದಿತ್ತು‘ ಎಂದು ಉತ್ತರಿಸಿದ್ದಾರೆ.

ಇದರ ಬೆನ್ನಲ್ಲೇ ಎರಿಕ್‌ ಫ್ರೋನ್‌ಹೋಪರ್‌ ಅವರನ್ನು ಕೆಲಸದಿಂದ ಕಿತ್ತು ಹಾಕಲಾಗಿದೆ ಎಂದು ಮಸ್ಕ್‌ ಬರೆದುಕೊಂಡಿದ್ದಾರೆ.

ಎರಿಕ್‌ ಫ್ರೋನ್‌ಹೋಪರ್‌ 8 ವರ್ಷದಿಂದ ಟ್ವಿಟ್ಟರ್‌ನಲ್ಲಿ ಉದ್ಯೋಗಿಯಾಗಿದ್ದರು.

ಇದಾದ ಬಳಿಕ ‘ಇಲಾನ್‌ ಮಸ್ಕ್‌ಗೆ ಏನೂ ಗೊತ್ತೇ ಇಲ್ಲ‘ ಎಂದು ಬರೆದುಕೊಂಡಿದ್ದ ಬೆನ್‌ ಲೀಬ್‌ ಎನ್ನುವ ಎಂಜಿನಿಯರ್‌ ಕೂಡ ಕೆಲಸ ಕಳೆದುಕೊಂಡಿದ್ದಾರೆ.

ಟ್ವಿಟ್ಟರ್ ಖರೀದಿ ಮಾಡಿದ ಬಳಿಕ ಸಿಇಒ ಪರಾಗ್‌ ಅಗರ್ವಾಲ್‌ ಅವರನ್ನು ಮಸ್ಕ್‌ ವಜಾ ಮಾಡಿದ್ದರು. ಇದಾದ ಬಳಿಕ ಶೇ 50 ರಷ್ಟು ನೌಕರರನ್ನು ಮನೆಗೆ ಕಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.