ADVERTISEMENT

ಎಲ್ಲ ಬಗೆಯ ಹಣಕಾಸು ಆಸ್ತಿಗಳ ಕ್ಲೇಮ್‌ಗೆ ಏಕೀಕೃತ ಪೋರ್ಟಲ್‌

ಪಿಟಿಐ
Published 27 ನವೆಂಬರ್ 2025, 23:30 IST
Last Updated 27 ನವೆಂಬರ್ 2025, 23:30 IST
   

ನವದೆಹಲಿ: ಬ್ಯಾಂಕ್‌ ಠೇವಣಿಗಳು, ಪಿಂಚಣಿ ನಿಧಿಗಳು, ಷೇರುಗಳು, ಕಂಪನಿಗಳು ನೀಡುವ ಲಾಭಾಂಶ (ಡಿವಿಡೆಂಡ್) ಸೇರಿದಂತೆ ವಿವಿಧೆಡೆ ಇರುವ, ಕ್ಲೇಮ್‌ ಮಾಡಿರದ ಹಣಕಾಸಿನ ಆಸ್ತಿಗಳನ್ನು ಕ್ಲೇಮ್‌ ಮಾಡುವ ಪ್ರಕ್ರಿಯೆಯನ್ನು ಸುಲಭವಾಗಿಸುವ ಏಕೀಕೃತ ಪೋರ್ಟಲ್‌ ಒಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಕೇಂದ್ರ ಹಣಕಾಸು ಸಚಿವಾಲಯವು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಜೊತೆಗೂಡಿ ಈ ಪೋರ್ಟಲ್‌ ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ ಎಂದು ಕೇಂದ್ರ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಎಂ. ನಾಗರಾಜು ತಿಳಿಸಿದ್ದಾರೆ.

ಈ ಪೋರ್ಟಲ್‌ಅನ್ನು ಶೀಘ್ರವೇ ಆರಂಭಿಸಲಾಗುತ್ತದೆ ಎಂದು ಅವರು ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ ಆಯೋಜಿಸಿದ್ದ ‘ನಿಮ್ಮ ಹಣ ನಿಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ADVERTISEMENT

‘ಹಣಕಾಸು ಸೇವೆಗಳ ಇಲಾಖೆಯು ಈ ಪೋರ್ಟಲ್ ವಿಚಾರವಾಗಿ ಆರ್‌ಬಿಐ ಜೊತೆ ಕೆಲಸ ಮಾಡುತ್ತಿದೆ. ಈ ಪೋರ್ಟಲ್‌ನ ಸಮನ್ವಯದ ಕೆಲಸವನ್ನು ಆರ್‌ಬಿಐ ನಿರ್ವಹಿಸಲಿದೆ’ ಎಂದು ಅವರು ತಿಳಿಸಿದ್ದಾರೆ.

ಕ್ಲೇಮ್‌ ಮಾಡಿರದ ಠೇವಣಿಗಳ ಕ್ಲೇಮ್‌ಗಾಗಿ ಆರ್‌ಬಿಐ ‘ಉದ್ಗಮ್‌’ ಪೋರ್ಟಲ್ ಆರಂಭಿಸಿದೆ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ‘ಮಿತ್ರ’ ಹೆಸರಿನ ಪೋರ್ಟಲ್ ಹೊಂದಿದೆ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ)  ‘ಬಿಮಾ ಭರೋಸಾ’ ಎಂಬ ಪೋರ್ಟಲ್‌ ಹೊಂದಿದೆ.

ಹೊಸದಾಗಿ ಆರಂಭವಾಗಲಿರುವ ಏಕೀಕೃತ ಪೋರ್ಟಲ್‌ ಜನರಿಗೆ ತಮ್ಮ ಹಣವನ್ನು, ಹಣಕಾಸಿನ ಆಸ್ತಿಯನ್ನು ಕ್ಲೇಮ್‌ ಮಾಡುವ ಪ್ರಕ್ರಿಯೆಯನ್ನು ಸುಲಭವಾಗಿಸಲಿದೆ. ಕ್ಲೇಮ್‌ ವಿಚಾರವಾಗಿ ಇರುವ ಅರಿವಿನ ಕೊರತೆಯ ಕಾರಣದಿಂದಾಗಿ ದೊಡ್ಡ ಮೊತ್ತವು ಹಾಗೇ ಉಳಿದಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಹಣಕಾಸಿನ ಒಳಗೊಳ್ಳುವಿಕೆಗೆ ಹಾಗೂ ಹಣಕಾಸಿನ ಶಿಕ್ಷಣಕ್ಕೆ ನಿರಂತರವಾಗಿ ಒತ್ತು ನೀಡುತ್ತಿದೆ. ಇದರ ಭಾಗವಾಗಿ ಜನರಿಗೆ ಅವರ ಉಳಿತಾಯದ ಹಣವನ್ನು ಪಡೆದುಕೊಳ್ಳಲು ನೆರವು ನೀಡಲು ಯತ್ನಿಸುತ್ತಿದೆ ಎಂದಿದ್ದಾರೆ.

ಹಣಕಾಸಿನ ವಲಯದಲ್ಲಿ ಕ್ಲೇಮ್‌ ಆಗದೆ ಹಾಗೇ ಉಳಿದಿರುವ ಹಣವನ್ನು ಜನ ಕ್ಲೇಮ್‌ ಮಾಡುವಂತೆ ಉತ್ತೇಜನ ನೀಡುವ ಅಭಿಯಾನವೊಂದಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಕ್ಟೋಬರ್ 4ರಂದು ಚಾಲನೆ ನೀಡಿದ್ದಾರೆ.

ಕ್ಲೇಮ್‌ ಮಾಡಿಕೊಳ್ಳದಿದ್ದ ಒಟ್ಟು ₹1,887 ಕೋಟಿಯನ್ನು ಅಭಿಯಾನ ಆರಂಭವಾದ ನಂತರದಲ್ಲಿ ಸಂಬಂಧಪಟ್ಟವರಿಗೆ ಮರಳಿಸಲಾಗಿದೆ ಎಂದು ನಾಗರಾಜು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.