ಯುಪಿಐ
ಬೆಂಗಳೂರು: ಒಂದೇ ಅಂಗಡಿಯಲ್ಲಿ ಹಲವು ಯುಪಿಐ ಐಡಿಗಳನ್ನು ಬಳಸಿಕೊಂಡು ಹಣ ಪಡೆಯುತ್ತಿರುವವರ ಮಾಹಿತಿಯನ್ನು ವಾಣಿಜ್ಯ ತೆರಿಗೆ ಇಲಾಖೆ ಕಲೆ ಹಾಕಿದೆ. ಜಿಎಸ್‌ಟಿ ಸಲ್ಲಿಸುವಂತೆ ಅವರಿಗೆ ನೋಟಿಸ್ ನೀಡುವ ಸಂಬಂಧ ಕಾನೂನು ಸಲಹೆ ಕೇಳಿದೆ.
ಯುಪಿಐ ಮೂಲಕ ವರ್ಷವೊಂದರಲ್ಲಿ ₹40 ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸಿದ ಬೇಕರಿ, ಹೋಟೆಲ್, ಬೀಡಾ ಅಂಗಡಿ, ಟೀ–ಅಂಗಡಿ ಮಾಲೀಕರಿಗೆ ವಾಣಿಜ್ಯ ತೆರಿಗೆ ಇಲಾಖೆಯು ಈಚೆಗೆ ನೋಟಿಸ್ ನೀಡಿದ್ದು, ಜಿಎಸ್‌ಟಿಗೆ ನೋಂದಾಯಿಸಿ ಎಂದು ಸೂಚಿಸಿದೆ. ಜಿಎಸ್‌ಟಿ ಕಟ್ಟಿ ಎಂದೂ ಹಲವರಿಗೆ ಸೂಚಿಸಿದೆ.
ರಾಜ್ಯದಲ್ಲಿ ಯುಪಿಐ ಮೂಲಕ ಹಣ ಪಡೆಯುತ್ತಿರುವ ಸುಮಾರು 65,000 ವರ್ತಕರ ಮಾಹಿತಿಯನ್ನು ಯುಪಿಐ ಪ್ಲಾಟ್‌ಫಾರಂಗಳಿಂದ ವಾಣಿಜ್ಯ ತೆರಿಗೆ ಇಲಾಖೆ ಪಡೆದುಕೊಂಡಿದೆ. ‘ಒಂದೇ ವಿಳಾಸದಲ್ಲಿ ನೋಂದಣಿಯಾಗಿರುವ ಹಲವು ಪ್ಯಾನ್ ಸಂಖ್ಯೆಗಳು ದೊರೆತಿದ್ದು, ಆ ಪ್ಯಾನ್ ಇರುವ ಬ್ಯಾಂಕ್ ಖಾತೆಗಳಿಗೆ ಯುಪಿಐ ಮೂಲಕ ನಿರಂತರವಾಗಿ ಹಣ ವರ್ಗಾವಣೆಯಾಗಿವೆ’ ಎಂದು ಇಲಾಖೆಯ ಜಂಟಿ ಆಯುಕ್ತರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ತೆರಿಗೆ ಅಧಿಕಾರಿಗಳ ಕಣ್ಣುತಪ್ಪಿಸುವ ಉದ್ದೇಶದಿಂದ ಹಲವರು ತಮ್ಮ ಕುಟುಂಬದವರ ಹೆಸರಿನಲ್ಲಿರುವ ಹಲವು ಯುಪಿಐ ಐಡಿಗಳನ್ನು ಬಳಸಿಕೊಂಡು, ಹಣ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಬಳೇಪೇಟೆಯ ವಿಳಾಸದಲ್ಲಿರುವ ಒಂದು ಅಂಗಡಿಯಲ್ಲಿ 9 ಯುಪಿಐ ಐಡಿಗಳನ್ನು ಬಳಸಿಕೊಂಡಿದ್ದು, ಪ್ರತಿಯೊಂದರಲ್ಲೂ ₹20 ಲಕ್ಷಕ್ಕಿಂತ ಹೆಚ್ಚು ಹಣ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು.
‘ಈ ರೀತಿ ಭಿನ್ನ ಯುಪಿಐ ಐಡಿಗಳಲ್ಲಿ ಹಣ ಪಡೆದವರಿಗೆ ಈವರೆಗೆ ನೋಟಿಸ್ ನೀಡಿಲ್ಲ. ಆದರೆ ಅವರನ್ನೂ ಜಿಎಸ್‌ಟಿ ವ್ಯಾಪ್ತಿಗೆ ತಂದು, ತೆರಿಗೆ ವಿಧಿಸುವ ವಿಧಾನ ಹೇಗೆ ಎಂಬುದರ ಬಗ್ಗೆ ಕಾನೂನು ಸಲಹೆ ಪಡೆಯಲಾಗುತ್ತಿದೆ. ಆನಂತರ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.
‘ಗುಜರಾತ್‌ನಿಂದ ಆರಂಭ’
‘ಯುಪಿಐ ಮೂಲಕ ಹಣ ಪಡೆಯುತ್ತಿರುವ ಸಣ್ಣ ವರ್ತಕರ ಮಾಹಿತಿಯನ್ನು ಕಲೆಹಾಕಿ, ಅವರಿಗೆ ನೋಟಿಸ್ ನೀಡುವ ಕಾರ್ಯಾಚರಣೆಯನ್ನು 2024ರ ಆಗಸ್ಟ್‌ನಲ್ಲಿ ಗುಜರಾತ್‌ನಲ್ಲಿ ಆರಂಭಿಸಲಾಗಿತ್ತು. ಆನಂತರ ಆ ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ಪ್ರಮಾಣ ಏರಿಕೆಯಾಯಿತು. ಅದರ ಬೆನ್ನಲ್ಲೇ ಬೇರೆ ರಾಜ್ಯಗಳಲ್ಲೂ ಇದೇ ಮಾದರಿ ಅನುಸರಿಸಲಾಗುತ್ತಿದೆ’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ.
‘ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಲ್ಲಿ ಈಗಾಗಲೇ ಸಾವಿರಾರು ಮಂದಿಗೆ ಈ ರೀತಿಯ ನೋಟಿಸ್ ನೀಡಲಾಗಿದೆ. ರಾಜ್ಯದಲ್ಲೂ ಹೆಚ್ಚಿನ ಜನರನ್ನು ತೆರಿಗೆ ವ್ಯಾಪ್ತಿಗೆ ತರಲು ಈ ಮಾದರಿ
ಅನುಸರಿಸಲಾಗುತ್ತಿದೆ. ಅತಿಹೆಚ್ಚು ವಹಿವಾಟು ನಡೆಸಿಯೂ ತೆರಿಗೆ ಪಾವತಿಸದವರನ್ನು ಪತ್ತೆ ಮಾಡಿ, ತೆರಿಗೆ ವಂಚನೆಯನ್ನು ತಪ್ಪಿಸುವುದು ಈ ಕಾರ್ಯಾಚರಣೆಯ ಉದ್ದೇಶ’ ಎಂದು ವಿವರಿಸಿವೆ.
5,684 ಮಂದಿಗೆ ನೋಟಿಸ್
‘ಆರ್ಥಿಕ ವರ್ಷವೊಂದರಲ್ಲಿ ಯುಪಿಐ ಮೂಲಕ ₹40 ಲಕ್ಷಕ್ಕಿಂತ ಹೆಚ್ಚು ಹಣ ಪಡೆದ ಸುಮಾರು 15,000 ಮಂದಿಯ ವಿವರ ದೊರೆತಿದೆ. ಮಂಗಳವಾರ ದವರೆಗೆ ಅವರಲ್ಲಿ 5,864 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ. ಹಲವರಿಗೆ ಜಿಎಸ್‌ಟಿ ಕಟ್ಟಿ ಎಂದು ಸೂಚಿಸಿದ್ದರೆ, ಕೆಲವರಿಗೆ ವಿವರಣೆ ನೀಡಿ ಎಂದು ಸೂಚಿಸಲಾಗಿದೆ’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಮೂಲಗಳು ಖಚಿತಪಡಿಸಿವೆ.
‘ಈ ಮಾಹಿತಿಯನ್ನು ಯುಪಿಐ ಪ್ಲಾಟ್‌ಫಾರಂಗಳ ಮೂಲಕ ಪಡೆದುಕೊಂಡಿದ್ದು, ಕೆಲವರ ಹಣ ವರ್ಗಾವಣೆ ವಿವರ ನೀಡುವಂತೆ ಬ್ಯಾಂಕ್‌ಗಳನ್ನು ಕೋರಲಾಗಿದೆ. ಆ ಮಾಹಿತಿ ದೊರೆತ ನಂತರ, ಎರಡನೇ ಹಂತದಲ್ಲಿ ಉಳಿದವರಿಗೂ ನೋಟಿಸ್ ಜಾರಿ ಮಾಡಲಾಗುತ್ತದೆ’ ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.