ನವದೆಹಲಿ: ಭಾರತದಿಂದ ತಾನು ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಮೆರಿಕ ವಿಧಿಸಿರುವ ಅಧಿಕ ಸುಂಕದಿಂದ ಸಂಕಷ್ಟ ಎದುರಿಸುವ ಉದ್ಯಮಗಳು ಹಾಗೂ ರಫ್ತುದಾರರಿಗೆ ಕೇಂದ್ರ ಸರ್ಕಾರವು ಶೀಘ್ರವೇ ಪರಿಹಾರ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ.
ಉದ್ಯಮಗಳ ದುಡಿಯುವ ಬಂಡವಾಳದ ಮೇಲಿನ ಒತ್ತಡ ತಗ್ಗಿಸಲು ಹಾಗೂ ರಫ್ತುದಾರರು ಪರ್ಯಾಯ ಮಾರುಕಟ್ಟೆಗಳನ್ನು ಹುಡುಕಿಕೊಳ್ಳಲು ನೆರವು ದೊರಕಿಸಿಕೊಡಲು ಕೆಲ ಕ್ರಮಗಳನ್ನು ಈ ಉದ್ದೇಶಿತ ಪ್ಯಾಕೇಜ್ ಒಳಗೊಂಡಿರಲಿದೆ ಎಂದು ಮೂಲಗಳು ಹೇಳಿವೆ.
ಜವಳಿ, ಸಿದ್ಧ ಉಡುಪುಗಳು, ಜುವೆಲರಿ, ಚರ್ಮ ಮತ್ತು ಪಾದರಕ್ಷೆ, ಕೃಷಿ ಮತ್ತು ಮೀನುಗಾರಿಕೆಯಂತಹ ಉದ್ಯಮಗಳು ಅಮೆರಿಕ ವಿಧಿಸಿರುವ ಶೇ 50ರಷ್ಟು ಸುಂಕದಿಂದ ಸಂಕಷ್ಟ ಎದುರಿಸುತ್ತಿದ್ದು, ಇವುಗಳನ್ನು ಕೇಂದ್ರೀಕರಿಸಿದ ಕ್ರಮಗಳನ್ನು ಸರ್ಕಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಿವೆ.
ಭಾರತದ ರಫ್ತು ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ‘ರಫ್ತು ಉತ್ತೇಜನ ಕಾರ್ಯಕ್ರಮ’ ಆರಂಭಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿಯಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಘೋಷಿಸಿದ್ದರು. ಹೀಗಾಗಿ, ಉದ್ದೇಶಿತ ಪ್ರೋತ್ಸಾಹದಾಯಕ ಕ್ರಮಗಳು ಈ ರಫ್ತು ಉತ್ತೇಜನ ಕಾರ್ಯಕ್ರಮವನ್ನು ಕೂಡ ಒಳಗೊಂಡರಲಿದೆ ಎಂದು ಇವೇ ಮೂಲಗಳು ಹೇಳಿವೆ.
ಅಮೆರಿಕ ವಿಧಿಸಿರುವ ಅಧಿಕ ಸುಂಕದಿಂದಾಗುವ ಪರಿಣಾಮಗಳ ಕುರಿತು ಉದ್ಯಮ ಕ್ಷೇತ್ರದಿಂದ ಆತಂಕ ವ್ಯಕ್ತವಾಗಿದೆ. ಉದ್ಯಮಗಳ ನೆರವು ನೀಡಲಾಗುವುದು. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು.-ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.