ADVERTISEMENT

ಆರ್ಥಿಕ ಉತ್ತೇಜನಕ್ಕೆ ಆರ್‌ಬಿಐ ಹಣ

ಮೂಲಸೌಕರ್ಯಗಳಲ್ಲಿ ಸರ್ಕಾರಿ ಹೂಡಿಕೆ ಹೆಚ್ಚಳ, ಬ್ಯಾಂಕ್‌ಗಳಿಗೆ ಪುನರ್ಧನ

ಪಿಟಿಐ
Published 27 ಆಗಸ್ಟ್ 2019, 20:00 IST
Last Updated 27 ಆಗಸ್ಟ್ 2019, 20:00 IST
ಆರ್‌ಬಿಐ ಲಾಂಛನ
ಆರ್‌ಬಿಐ ಲಾಂಛನ   

ನವದೆಹಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ₹ 1.76 ಲಕ್ಷ ಕೋಟಿ ಮೊತ್ತದ ಹೆಚ್ಚುವರಿ ಬಂಡವಾಳ ವರ್ಗಾವಣೆ ಆಗಲಿರುವುದರಿಂದ ಆರ್ಥಿಕತೆಯಲ್ಲಿ ವ್ಯಾಪಕವಾಗುತ್ತಿರುವ ಬೆಳವಣಿಗೆ ಹಿಂಜರಿತ ತಡೆಗಟ್ಟಲು, ಸರ್ಕಾರಿ ಹೂಡಿಕೆ ಹೆಚ್ಚಿಸಲು ಮತ್ತು ವಲಯವಾರು ಉತ್ತೇಜನಾ ಕೊಡುಗೆ ನೀಡಲು ಸಾಧ್ಯವಾಗಲಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಚೊಚ್ಚಲ ಬಜೆಟ್‌ನಲ್ಲಿ ನಿಗದಿಪಡಿಸಿದ ಗುರಿಗಳನ್ನು ಸಾಧಿಸಲು ಕುಂಠಿತ ಆರ್ಥಿಕತೆಯ ಕಾರಣಕ್ಕೆ ವರಮಾನ ಕೊರತೆ ಉಂಟಾಗುವ ನಿರೀಕ್ಷೆ ಇದೆ.

ಆರ್‌ಬಿಐ ಬಳಿ ಇರುವ ಹೆಚ್ಚುವರಿ ಮೀಸಲು ನಿಧಿಯಲ್ಲಿನ ದೊಡ್ಡ ಮೊತ್ತವು ಈಗ ಸರ್ಕಾರಕ್ಕೆ ವರ್ಗಾವಣೆಗೊಳ್ಳಲಿರುವುದರಿಂದ ಅದರ ಹಣಕಾಸು ಭಾರ ಕಡಿಮೆಯಾಗಲಿದೆ.

ADVERTISEMENT

ಸರ್ಕಾರದ ಸಾಲ ಸಂಗ್ರಹದ ಗುರಿ ಕಡಿಮೆ ಮಾಡಲು, ಬ್ಯಾಂಕ್‌ಗಳಿಗೆ ಪುನರ್ಧನ ಕಲ್ಪಿಸಲು, ನಷ್ಟದ ಸುಳಿಗೆ ಸಿಲುಕಿರುವ ಹಲವಾರು ವಲಯಗಳಿಗೆ ಹಣಕಾಸು ನೆರವು ಒದಗಿಸುವುದು ಸರ್ಕಾರಕ್ಕೆ ಇನ್ನು ಮುಂದೆ ಸುಲಭವಾಗಲಿದೆ. ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 3.3ಕ್ಕೆ ಇಳಿಸುವ ಗುರಿ ತಲುಪಲೂ ನೆರವಾಗಲಿದೆ.

ಆರ್‌ಬಿಐ ಬಳಿ ಇರುವ ಹೆಚ್ಚುವರಿ ಮೀಸಲು ನಿಧಿಯಲ್ಲಿನ ಕೆಲ ಭಾಗವನ್ನು ಸರ್ಕಾರಕ್ಕೆ ವರ್ಗಾಯಿಸಬೇಕು ಎನ್ನುವ ಹಣಕಾಸು ಸಚಿವಾಲಯದ ಬೇಡಿಕೆಯು ಕೇಂದ್ರೀಯ ಬ್ಯಾಂಕ್‌ ಜತೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು.

ಗವರ್ನರ್‌ ಉರ್ಜಿತ್ ಪಟೇಲ್‌ ಅವರು ಏಕಾಏಕಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಲು ಈ ವಿವಾದವೇ ಮುಖ್ಯ ಕಾರಣವಾಗಿತ್ತು.

ಶಕ್ತಿಕಾಂತ್‌ ದಾಸ್‌ ಅವರು ಗವರ್ನರ್‌ ಆಗಿ ನೇಮಕಗೊಳ್ಳುತ್ತಿದ್ದಂತೆ ಈ ಹಣ ವರ್ಗಾವಣೆ ಪ್ರಕ್ರಿಯೆ ಚುರುಕುಗೊಂಡಿತ್ತು. ಈ ಸಂಬಂಧ ವರದಿ ನೀಡಲು ಬಿಮಲ್‌ ಜಲನ್‌ ಸಮಿತಿ ರಚಿಸಲಾಗಿತ್ತು.

ಸಕಾರಾತ್ಮಕ ಪರಿಣಾಮದ ನಿರೀಕ್ಷೆ: ‘ಬ್ಯಾಂಕ್‌ಗಳ ಪುನರ್ಧನ ಉದ್ದೇಶಕ್ಕೆ ಬಳಸಿಕೊಂಡರೆ, ಅದರಿಂದ ಗೃಹ, ವಾಹನ ಖರೀದಿ ಮತ್ತಿತರ ಸಾಲಗಳ ಬಡ್ಡಿ ದರಗಳು ಅಗ್ಗವಾಗಲಿವೆ. ಸಾಲ ನೀಡಿಕೆ ಹೆಚ್ಚಳಗೊಂಡರೆ ಅದರಿಂದ ಆರ್ಥಿಕತೆಯ ಮೇಲೆ ಬಹುಬಗೆಯ ಸಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ಅಶ್ವಿನ್‌ ಪಾರೇಖ್‌ ಅಡ್ವೈಸರಿ ಸರ್ವಿಸಸ್‌ನ ಪಾಲುದಾರ ಅಶ್ವಿನ್‌ ಪಾರೇಖ್‌ ಹೇಳಿದ್ದಾರೆ.

*
ಆರ್‌ಬಿಐನಿಂದ ಹಣ ಕದಿಯುವುದರಿಂದ ಉಪಯೋಗವಿಲ್ಲ. ತಾವೇ ಸೃಷ್ಟಿಸಿ ಆರ್ಥಿಕ ಸಂಕಷ್ಟ ಪರಿಹರಿಸುವುದು ಹೇಗೆ ಎಂಬುದೂ ಗೊತ್ತಿಲ್ಲ.
-ರಾಹುಲ್ ಗಾಂಧಿ, ಕಾಂಗ್ರೆಸ್ ಸಂಸದ

*
ಆರ್‌ಬಿಐ ಹಣವನ್ನು ಹೇಗೆ ವಿನಿಯೋಗಿಸಬೇಕು ಎಂಬುದನ್ನು ಸರ್ಕಾರ ಶೀಘ್ರವೇ ನಿರ್ಧರಿಸಲಿದೆ. ವಿವರಗಳನನ್ನು ಜನರ ಮುಂದೆ ಇಡುತ್ತೇವೆ.
-ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.