
ಹೂಡಿಕೆ
(ಐಸ್ಟೋಕ್ ಪ್ರಾತಿನಿಧಿಕ ಚಿತ್ರ)
ತಿಂಗಳ ಉಳಿತಾಯಕ್ಕೆ ತಮ್ಮ ಬಳಿ ಇರುವುದು ಕೇವಲ ₹5 ಸಾವಿರದಷ್ಟು ಸಣ್ಣ ಮೊತ್ತ ಎಂದು ಅನೇಕರು ಬೇಸರಿಸಿಕೊಳ್ಳುತ್ತಾರೆ. ಆದರೆ ನಿಮಗೆ ಗೊತ್ತಿರಲಿ, ಭಾರತದಲ್ಲಿ ಬಹುಪಾಲು ಜನ ಮಾಸಿಕ ₹5 ಸಾವಿರದೊಂದಿಗೆ ತಮ್ಮ ಹೂಡಿಕೆ ಪ್ರಯಾಣ ಆರಂಭಿಸುತ್ತಾರೆ. ಈ ಮೊದಲು ಅಂಚೆ ಕಚೇರಿ ಹೂಡಿಕೆ, ನಿಶ್ಚಿತ ಠೇವಣಿಗಳನ್ನು ಹೆಚ್ಚು ಅವಲಂಬಿಸುತ್ತಿದ್ದ ಹೂಡಿಕೆದಾರರು ಈಗ ನಿಧಾನವಾಗಿ ಮ್ಯೂಚುವಲ್ ಫಂಡ್ ಹೂಡಿಕೆಗಳ ಕಡೆಗೂ ವಾಲುತ್ತಿದ್ದಾರೆ. ಮ್ಯೂಚುವಲ್ ಫಂಡ್ ಹೂಡಿಕೆಗಳು ಜನಪ್ರಿಯವಾಗುತ್ತಿದ್ದರೂ ಹಲವು ಹೂಡಿಕೆದಾರರಿಗೆ ಸರಿಯಾದ ಫಂಡ್ ಆಯ್ಕೆ ಹೇಗೆ, ಯಾವ ಮ್ಯೂಚುವಲ್ ಫಂಡ್‌ಗಳಿಗೆ ಎಷ್ಟು ಹಣ ಹಂಚಿಕೆ ಮಾಡಬೇಕು, ಮ್ಯೂಚುವಲ್ ಫಂಡ್ ಎಸ್ಐಪಿ ಮಾರ್ಗದಲ್ಲಿ ₹1 ಕೋಟಿ ಗಳಿಸಲು ಎಷ್ಟು ಸಮಯ ಬೇಕು, ₹5 ಸಾವಿರ ಹೂಡಿಕೆಯಿಂದ ದೊಡ್ಡ ಮೊತ್ತ ಗಳಿಕೆ ಸಾಧ್ಯವೇ ಎಂಬ ಹಲವು ಪ್ರಶ್ನೆಗಳಿವೆ.
ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಜೊತೆಗೆ ಮ್ಯೂಚುವಲ್ ಫಂಡ್ ಹೂಡಿಕೆ ಪ್ರವೇಶಿಸುವುದು ಹೇಗೆ ಎನ್ನುವ ಬಗ್ಗೆ ಒಂದಿಷ್ಟು ವಿವರ ಇಲ್ಲಿದೆ.
ಎಸ್ಐಪಿ ಖಾತೆಗಳಲ್ಲಿ ಜಿಗಿತ: ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಎಸ್ಐಪಿ ಹೂಡಿಕೆಯು ದಾಖಲೆ ಮಟ್ಟ ತಲುಪಿದೆ. ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟದ (ಎಎಂಎಫ್‌ಐ) ದತ್ತಾಂಶಗಳ ಪ್ರಕಾರ 2022ರಲ್ಲಿ 5.2 ಕೋಟಿ ಎಸ್ಐಪಿ ಖಾತೆಗಳಿದ್ದವು, 2023ರಲ್ಲಿ ಈ ಸಂಖ್ಯೆ 6.3 ಕೋಟಿಗೆ ತಲುಪಿತು. 2024ರಲ್ಲಿ ಮ್ಯೂಚುವಲ್ ಫಂಡ್ ಖಾತೆಗಳ ಸಂಖ್ಯೆಯಲ್ಲಿ ಭಾರಿ ಜಿಗಿತವಾಗಿ 8.4 ಕೋಟಿಗೆ ಏರಿಕೆಯಾಯಿತು. ಈಗ, 2025ರ ಅಕ್ಟೋಬರ್‌ನಲ್ಲಿ 9.45 ಕೋಟಿ ಸಕ್ರಿಯ ಎಸ್ಐಪಿ ಖಾತೆಗಳಿವೆ.
ಎಸ್ಐಪಿ ಮೊತ್ತದಲ್ಲೂ ಹೆಚ್ಚಳ: 2022ರಲ್ಲಿ ಮ್ಯೂಚುವಲ್ ಫಂಡ್ ಎಸ್ಐಪಿಗಳಲ್ಲಿ ₹1.24 ಲಕ್ಷ ಕೋಟಿ ಹೂಡಿಕೆಯಾಗಿತ್ತು. 2023ರಲ್ಲಿ ಅದು ₹1.56 ಲಕ್ಷ ಕೋಟಿಗೆ ಜಿಗಿಯಿತು. 2024ರಲ್ಲಿ ₹1.99 ಲಕ್ಷ ಕೋಟಿಗೆ ಏರಿಕೆಯಾಯಿತು. 2025ರಲ್ಲಿ ಎಸ್ಐಪಿಗಳಲ್ಲಿ ಇರುವ ಒಟ್ಟು ಮೊತ್ತ ₹2.89 ಲಕ್ಷ ಕೋಟಿ ಮೀರಿದೆ. ಎಸ್ಐಪಿ ಕೊಡುಗೆಗಳು ಮೂರು ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಾಗಿವೆ. ಈ ಬೆಳವಣಿಗೆ ಹೆಚ್ಚು ಭಾರತೀಯ ಕುಟುಂಬಗಳು ಮ್ಯೂಚುವಲ್ ಫಂಡ್ ವ್ಯವಸ್ಥಿತ ಹೂಡಿಕೆಯನ್ನು ನಂಬುತ್ತಿವೆ ಎಂಬುದನ್ನು ತೋರಿಸುತ್ತದೆ. ₹5 ಸಾವಿರ ಇದ್ದರೂ ಮ್ಯೂಚುವಲ್ ಫಂಡ್ ಹೂಡಿಕೆ ಪ್ರವೇಶ ಸಾಧ್ಯ ಎಂಬ ಮಾತಿನ ಮೇಲೆ ಜನ ವಿಶ್ವಾಸ ಇಡುತ್ತಿದ್ದಾರೆ ಎನ್ನುವುದನ್ನು ಅಂಕಿ-ಅಂಶಗಳು ಹೇಳುತ್ತಿವೆ.
ವಿಂಗಡಣೆ ಹೇಗೆ?: ಉದಾಹರಣೆಗೆ ನಿಮ್ಮ ಬಳಿ ಪ್ರತಿ ತಿಂಗಳು ಹೂಡಿಕೆ ಮಾಡಲು ₹5 ಸಾವಿರ ಇದೆ ಎಂದುಕೊಳ್ಳಿ. ಈ ₹5 ಸಾವಿರದಲ್ಲಿ ₹3 ಸಾವಿರ ಇಂಡೆಕ್ಸ್ ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸಬಹುದು. ಇನ್ನುಳಿದ ₹2 ಸಾವಿರವನ್ನು ಫ್ಲೆಕ್ಸಿ ಕ್ಯಾಪ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಈ ರೀತಿ ಮಾಡಿದಾಗ ಬಹಳ ಸರಳ ಆಯ್ಕೆಗಳೊಂದಿಗೆ ಹೂಡಿಕೆ ವೈವಿಧ್ಯತೆಯನ್ನೂ ಕಾಯ್ದುಕೊಳ್ಳಬಹುದು. ಮೇಲಿನ ಎರಡು ಮಾದರಿಯ ಮ್ಯೂಚುವಲ್ ಫಂಡ್‌ಗಳನ್ನು ಕೇಂದ್ರೀಕರಿಸಿಕೊಂಡು ಹೂಡಿಕೆ ಮಾಡಿದಾಗ ಅತಿಯಾದ ಹೂಡಿಕೆ ವೈವಿಧ್ಯತೆ ತಪ್ಪುವ ಜೊತೆಗೆ ಬಂಡವಾಳ ಸ್ಥಿರತೆ ಮತ್ತು ಬೆಳವಣಿಗೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.
ಹೊಸ ಹೂಡಿಕೆದಾರರಿಗೆ ಯಾವ ಫಂಡ್ ಸೂಕ್ತ?: ಈಗಷ್ಟೇ ಮ್ಯೂಚುವಲ್ ಫಂಡ್ ಲೋಕ ಪ್ರವೇಶ ಮಾಡುವ ಬಹುಪಾಲು ಹೂಡಿಕೆದಾರರಿಗೆ ಇಂಡೆಕ್ಸ್ ಮತ್ತು ಫ್ಲೆಕ್ಸಿಕ್ಯಾಪ್ ಫಂಡ್‌ಗಳ ಮಿಶ್ರಣ ಸೂಕ್ತ. ಇವು ಹೆಚ್ಚಿನ ಸ್ಥಿರತೆ ಒದಗಿಸುವ ಜೊತೆಗೆ ಕಡಿಮೆ ವೆಚ್ಚ ಹೊಂದಿವೆ. ಈಕ್ವಿಟಿ ಮತ್ತು ಡೆಟ್ ಹೂಡಿಕೆಗಳ ಮಿಶ್ರಣ ಬೇಕಾದವರಿಗೆ ಹೈಬ್ರಿಡ್ ಫಂಡ್‌ಗಳು ಸೂಕ್ತ ಆಯ್ಕೆ ಎನಿಸಿಕೊಳ್ಳುತ್ತವೆ.
₹5 ಸಾವಿರ ಎಸ್ಐಪಿ ನಿಮ್ಮನ್ನು ಕೋಟ್ಯಧಿಪತಿ ಮಾಡಬಲ್ಲದೇ?: ಹೆಚ್ಚಿನ ಯುವ ಹೂಡಿಕೆದಾರರು ಎಸ್ಐಪಿ ಮೂಲಕ ₹1 ಕೋಟಿ ಒಗ್ಗೂಡಿಸುವ ಕನಸು ಕಾಣುತ್ತಾರೆ. ₹5 ಸಾವಿರ ಎಸ್ಐಪಿಯೊಂದಿಗೆ ಆರಂಭಿಸಿ ವಾರ್ಷಿಕ ಶೇ 10ರಷ್ಟು ಹೂಡಿಕೆಯನ್ನು ಹೆಚ್ಚಿಸುತ್ತಾ ಹೋದರೆ ಹಣ ವೇಗವಾಗಿ ಬೆಳೆಯುತ್ತದೆ. 20 ವರ್ಷ ಈ ಮಾದರಿಯಲ್ಲಿ ಹೂಡಿಕೆ ಮಾಡುತ್ತಾ ಸಾಗಿದರೆ ವಾರ್ಷಿಕ ಶೇ 12ರಷ್ಟು ಗಳಿಕೆ ಲೆಕ್ಕಾಚಾರದಲ್ಲಿ ₹1 ಕೋಟಿ ಒಗ್ಗೂಡಿಸುವ ಸಾಧ್ಯತೆ ಹೆಚ್ಚು.
ಎಸ್ಐಪಿ ಯಾವಾಗ ಹೆಚ್ಚಳ ಮಾಡಬೇಕು?: ಬಹುತೇಕರು ₹5 ಸಾವಿರ ಎಸ್ಐಪಿಯೊಂದಿಗೆ ಹೂಡಿಕೆ ಆರಂಭಿಸಿದರೆ ಹಲವು ವರ್ಷ ಅದನ್ನೇ ಮುಂದುವರಿಸುತ್ತಾರೆ. ಆದರೆ ತಪ್ಪಾಗುವುದು ಇಲ್ಲೇ. ಪ್ರತಿ ವರ್ಷ ಆದಾಯ ಹೆಚ್ಚಳವಾದಂತೆಲ್ಲ ಎಸ್ಐಪಿ ಮೊತ್ತ ಹೆಚ್ಚಿಸಬೇಕು. ಬೋನಸ್ ಮೊತ್ತ ಸಿಕ್ಕಿದರೆ ಅದನ್ನು ಎಸ್ಐಪಿಗೆ ತೊಡಗಿಸಬೇಕು. ಹೂಡಿಕೆ ಮಾಡುವಾಗ ಸ್ಥಿರತೆ ಬಹಳ ಮುಖ್ಯ. ನಿಯಮಿತವಾಗಿ ಪ್ರತಿ ಸಲವೂ ಶಿಸ್ತುಬದ್ಧವಾಗಿ ಹೂಡಿಕೆ ಮಾಡಿದಾಗ ದೊಡ್ಡ ಮಟ್ಟದ ಸಂಪತ್ತು ಸೃಷ್ಟಿಸಿಕೊಳ್ಳಬಹುದು.
ಯಾಕೆ ಮ್ಯೂಚುವಲ್ ಫಂಡ್ ಹೂಡಿಕೆ ಅಗತ್ಯ: ನಿಶ್ಚಿತ ಠೇವಣಿ ಅಥವಾ ಸರ್ಕಾರದ ಬೆಂಬಲವಿರುವ ಸಣ್ಣ ಉಳಿತಾಯ ಯೋಜನೆಗಳಲ್ಲಿ ಬಂಡವಾಳ ಸುರಕ್ಷತೆಯ ಜೊತೆಗೆ ಒಂದಷ್ಟು ಗಳಿಕೆ ಸಿಗುತ್ತದೆ ನಿಜ. ಆದರೆ ಆ ಹೂಡಿಕೆಗಳು ಬೆಲೆ ಏರಿಕೆಯ ಪ್ರಮಾಣವನ್ನು ಮೀರಿ ಗಳಿಕೆ ತಂದುಕೊಡುವುದಿಲ್ಲ. ನಮ್ಮ ಅರ್ಥ ವ್ಯವಸ್ಥೆಯಲ್ಲಿ ವಾರ್ಷಿಕ ಶೇ 6ರಿಂದ ಶೇ 7ರಷ್ಟು ಹಣದುಬ್ಬರ ಇರುತ್ತದೆ. ಹೂಡಿಕೆ ಮೇಲಿನ ಗಳಿಕೆಗಳೂ ಶೇಕಡ ಆರು–ಏಳರ ಮಟ್ಟದಲ್ಲಿದ್ದರೆ ವಾಸ್ತವದಲ್ಲಿ ಹೂಡಿಕೆಗಳು ಬೆಳವಣಿಗೆ ಸಾಧಿಸುವುದಿಲ್ಲ. ಈ ಕಾರಣದಿಂದಾಗಿ ಮ್ಯೂಚುವಲ್ ಫಂಡ್‌ನಂತಹ ಮಾರುಕಟ್ಟೆ ಆಧಾರಿತ ಹೂಡಿಕೆಗಳು ಬಹಳ ಮುಖ್ಯ.
(ಸೂಚನೆ: ಯಾವುದೇ ಹೂಡಿಕೆ ತೀರ್ಮಾನ ಮಾಡುವ ಮುನ್ನ ಸೆಬಿ ನೋಂದಾಯಿತ ಹಣಕಾಸು ಸಲಹೆಗಾರರ ನೆರವು ಪಡೆಯಿರಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.