
ಆರೋಗ್ಯ ವಿಮೆ
ತಿಂಗಳಿಗೆ ₹50 ಸಾವಿರ ಸಂಬಳ ಪಡೆಯುವ ವ್ಯಕ್ತಿ, ಐದು ವರ್ಷ ಕಷ್ಟಪಟ್ಟು ಉಳಿಸಿದ ₹6 ಲಕ್ಷ ಒಂದೇ ಒಂದು ಆಪರೇಷನ್ ಬಿಲ್‌ಗೂ ಸಾಕಾಗುವುದಿಲ್ಲ ಎಂದರೆ ನಂಬುತ್ತೀರಾ?. ಹೌದು, ಇದು ಇಂದಿನ ದುಬಾರಿ ವೈದ್ಯಕೀಯ ವೆಚ್ಚಗಳ ವಾಸ್ತವ. ‘ನಾನೇ ಹಣ ಉಳಿಸಿ ಚಿಕಿತ್ಸೆ ಕೊಡಿಸುತ್ತೇನೆ’ ಎಂಬ ಅತಿ ಆತ್ಮವಿಶ್ವಾಸ ಅಥವಾ ಕಂಪನಿಯ ವಿಮೆಯ ಅವಲಂಬನೆ ನಿಮ್ಮ ಕುಟುಂಬವನ್ನು ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿಸಬಹುದು. ಪೋಷಕರಿಗೆ ಪ್ರತ್ಯೇಕ ಆರೋಗ್ಯ ವಿಮೆ ಏಕೆ ಬೇಕು? ಪಾಲಿಸಿ ಆರಿಸುವಾಗ ಮಾಡುವ ತಪ್ಪುಗಳೇನು? ಈ ಬಗ್ಗೆ ಮಾಹಿತಿ ಅಗತ್ಯ.
1. ಆರೋಗ್ಯ ಸಮಸ್ಯೆಗಳ ನಿಜವಾದ ಖರ್ಚು ಎಷ್ಟು?:
ಒಂದೆರಡು ಲೆಕ್ಕಾಚಾರ ನೋಡುವು ದಾದರೆ, ನಿಮ್ಮ ಸಂಬಳ ₹50 ಸಾವಿರ ಅಂದುಕೊಳ್ಳಿ. ಎಲ್ಲ ಖರ್ಚು ಕಳೆದು ತಿಂಗಳಿಗೆ ₹10 ಸಾವಿರ ಉಳಿಸಿದರೆ, ವರ್ಷಕ್ಕೆ ₹1.2 ಲಕ್ಷ ಆಗುತ್ತದೆ. ಹೀಗೆ 5 ವರ್ಷ ಕಷ್ಟಪಟ್ಟು ಉಳಿಸಿದರೆ ನಿಮ್ಮ ಹತ್ತಿರ ₹6 ಲಕ್ಷ ಇರುತ್ತದೆ.
ಆದರೆ ಆಸ್ಪತ್ರೆಯ ಬಿಲ್‌ಗಳು ಸರಿಸುಮಾರು ಹೀಗಿರುತ್ತವೆ:
*ಮೊಣಕಾಲು ಚಿಪ್ಪಿನ ಸರ್ಜರಿ: ₹3ರಿಂದ
₹6 ಲಕ್ಷ
*ಹೃದಯ ಬೈಪಾಸ್ ಸರ್ಜರಿ: ₹4ರಿಂದ ₹7 ಲಕ್ಷ
*ಕ್ಯಾನ್ಸರ್ ಚಿಕಿತ್ಸೆ: ₹10ರಿಂದ ₹15 ಲಕ್ಷ ಮೀರಬಹುದು
*ಐಸಿಯು ವೆಚ್ಚ: ದಿನಕ್ಕೆ ₹20 ಸಾವಿರದಿಂದ ₹40 ಸಾವಿರದವರೆಗೂ ಆಗಬಹುದು
ನೆನಪಿಡಿ: ನೀವು 5 ವರ್ಷದಲ್ಲಿ ಕೂಡಿಟ್ಟ ಹಣ ಒಂದು ವಾರದ ಆಸ್ಪತ್ರೆ ವಾಸದಲ್ಲಿ ಖಾಲಿಯಾಗ ಬಹುದು. ಆಸ್ಪತ್ರೆಯಿಂದ ಬಂದ ನಂತರದ ಮಾತ್ರೆ ಮತ್ತು ವೈದ್ಯಕೀಯ ಪರೀಕ್ಷೆಗಳ ಖರ್ಚು ಬೇರೆ.
2. ಹಣ ಉಳಿಸಿ ಚಿಕಿತ್ಸೆ ಕೊಡಿಸುತ್ತೇನೆ:
‘ಪೋಷಕರಿಗೆ ವಿಮಾ ಕಂತು ಹೆಚ್ಚು, ಅದಕ್ಕೆ ಬದಲಾಗಿ ನಾನೇ ಹಣ ಉಳಿಸುತ್ತೇನೆ’ ಎಂಬ ಹುಂಬತನದ ನಿರ್ಧಾರವೂ ಕುಟುಂಬಗಳನ್ನು ಸಾಲದ ಸುಳಿಗೆ ತಳ್ಳುತ್ತಿದೆ. ವರ್ಷಕ್ಕೆ ₹50 ಸಾವಿರ ಕಂತು ಉಳಿಸಲು ಹೋಗಿ, ಅಂತಿಮವಾಗಿ ₹10 ಲಕ್ಷದ ಆಸ್ತಿ ಮಾರುವ ಅಥವಾ ಸಾಲ ಮಾಡುವ ಪರಿಸ್ಥಿತಿ ತಂದುಕೊಳ್ಳುತ್ತಿದ್ದಾರೆ. ಅಲ್ಲದೆ, ಕೆಲಸ ಮಾಡುತ್ತಿರುವ ಕಂಪನಿ ಒದಗಿಸುವ ವಿಮೆ ಮೇಲಿನ ಅವಲಂಬನೆಯೂ ಅಪಾಯಕಾರಿ. ಕೆಲಸ ಬದಲಿಸಿದಾಗ ಅಥವಾ ನಿವೃತ್ತಿಯ ನಂತರ ಈ ರಕ್ಷಣೆ ಇರುವುದಿಲ್ಲ. ಅಷ್ಟೇ ಅಲ್ಲದೆ, ಹೆಚ್ಚಿನ ಕಂಪನಿ ಪಾಲಿಸಿಗಳಲ್ಲಿ ಪೋಷಕರಿಗೆ ಅತ್ಯಲ್ಪ ಕವರೇಜ್ ಇರುತ್ತದೆ. ವಿಮೆ ಎಂಬುದು ಲಾಭ ತರುವ ಹೂಡಿಕೆ ಅಲ್ಲ, ಅದು ನಿಮ್ಮ ಆರ್ಥಿಕ ಪರಿಸ್ಥಿತಿ ಕುಸಿಯದಂತೆ ತಡೆಯುವ ‘ರಕ್ಷಾ ಕವಚ’.
3. ಆರೋಗ್ಯ ವಿಮೆ ಆಯ್ಕೆ ಮಾಡುವಾಗ ಎಚ್ಚರ:
ಆರೋಗ್ಯ ವಿಮೆಯನ್ನು ಆಸ್ಪತ್ರೆ ಬಿಲ್ ಪಾವತಿಯ ಅನುಕೂಲವನ್ನಾಗಿ ಮಾತ್ರ ನೋಡಬಾರದು. ಒಂದು ಉತ್ತಮ ಪಾಲಿಸಿಯು ಆಸ್ಪತ್ರೆಗೆ ದಾಖಲಾಗುವ ಮೊದಲಿನ ತಪಾಸಣೆ, ಸರ್ಜರಿ ವೆಚ್ಚ, ಮತ್ತು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರದ ಚಿಕಿತ್ಸೆಯನ್ನೂ ಒಳಗೊಂಡಿರಬೇಕು. ಪೋಷಕರಿಗೆ ವಿಮೆ ಪಡೆಯುವಾಗ ಮುಖ್ಯವಾಗಿ ಗಮನಿಸಬೇಕಾದ ಅಂಶಗಳೆಂದರೆ:
*ಕವರೇಜ್ ಮೊತ್ತ: ಕನಿಷ್ಠ ₹10 ಲಕ್ಷದಿಂದ ₹25 ಲಕ್ಷ ಇರಲಿ
*ನಗದು ರಹಿತ ಚಿಕಿತ್ಸಾ ಸೌಲಭ್ಯ: ಕೈಯಿಂದ ಹಣ ಪಾವತಿಸದೆ ವಿಮಾ ಕಂಪನಿಯೇ ನೇರವಾಗಿ ಪಾವತಿಸುವ ನಗದು ರಹಿತ (ಕ್ಯಾಶ್‌ಲೆಸ್) ಚಿಕಿತ್ಸಾ ಸೌಲಭ್ಯವಿರಲಿ
*ಕಾಯುವಿಕೆ ಅವಧಿ (ವೇಟಿಂಗ್ ಪಿರಿಯಡ್): ಮಧುಮೇಹ, ರಕ್ತದೊತ್ತಡಕ್ಕೆ ಎಷ್ಟು ವರ್ಷಗಳ ನಂತರ ವಿಮಾ ರಕ್ಷೆ ಸಿಗುತ್ತದೆ ಎಂಬುದನ್ನು ಗಮನಿಸಿ. ಕಾಯುವಿಕೆ ಅವಧಿ ಕಡಿಮೆ ಇರುವ ಪಾಲಿಸಿ ಪರಿಗಣಿಸಿ.
*ನಿರ್ಬಂಧಗಳು ಕಡಿಮೆಯಿರಲಿ: ಆಸ್ಪತ್ರೆಯ ಕೊಠಡಿ ದರ ಮಿತಿ ಮತ್ತು ಕೋ-ಪೇಮೆಂಟ್ (ವಿಮೆ ಕ್ಲೇಮ್ ಮಾಡುವಾಗ ನೀವೇ ಚಿಕಿತ್ಸಾ ವೆಚ್ಚದ ಒಂದಷ್ಟು ಪಾಲು ಪಾವತಿಸುವುದು) ಮಿತಿಗಳಿಲ್ಲದ ಪಾಲಿಸಿ ಉತ್ತಮ
*ನಿರ್ದಿಷ್ಟ ಚಿಕಿತ್ಸೆಗಳಿಗೆ ವೆಚ್ಚ ಮಿತಿ:
ಕೆಲ ಆರೋಗ್ಯ ವಿಮೆಗಳು ನಿರ್ದಿಷ್ಟ ಚಿಕಿತ್ಸೆಗಳಿಗೆ ಹೆಚ್ಚಿನ ಕವರೇಜ್ ನೀಡುವುದಿಲ್ಲ. ಉದಾಹರಣೆಗೆ ನೀವು ₹10 ಲಕ್ಷ ಮೌಲ್ಯದ ಆರೋಗ್ಯ ವಿಮೆ ಪಡೆದಿರುತ್ತೀರಿ. ಆದರೆ ವಿಮಾ ಕಂಪನಿ ಹೃದ್ರೋಗ ಸಂಬಂಧಿತ ಚಿಕಿತ್ಸೆಗೆ ಕೇವಲ ₹4 ಲಕ್ಷದವರೆಗೆ ಕವರೇಜ್ ನೀಡುವುದಾಗಿ ನಿಬಂಧನೆ ಹಾಕಿರುತ್ತದೆ. ನಿರ್ದಿಷ್ಟ ಚಿಕಿತ್ಸೆಗಳಿಗೆ ಇಂತಹ ವೆಚ್ಚ ಮಿತಿ ಹೇರುವ ವಿಮಾ ಪಾಲಿಸಿಗಳಿಂದ ದೂರವಿರಿ
*ಕ್ಲೇಮ್ ಸೆಟಲ್ಮೆಂಟ್ ರೇಷಿಯೋ:
ಪೋಷಕರಿಗೆ ಆರೋಗ್ಯ ವಿಮೆ ಖರೀದಿಸುವಾಗ ಕ್ಲೇಮ್ ಸೆಟಲ್ಮೆಂಟ್ ರೇಷಿಯೋ ಬಹಳ ಮುಖ್ಯ. ಸಾಧ್ಯವಾದಷ್ಟು ಶೇ 90-95ಕ್ಕಿಂತ ಹೆಚ್ಚಿನ ಕ್ಲೇಮ್ ಸೆಟಲ್ ಮಾಡಿರುವ ವಿಮಾ ಕಂಪನಿಗಳಿಂದ ವಿಮೆ ಪಡೆದುಕೊಳ್ಳಿ
ಕಿವಿಮಾತು:
ಪೋಷಕರು ನಮಗೆ ನೆಮ್ಮದಿಯ ಬದುಕು ನೀಡಲು ತಮ್ಮ ಜೀವನವನ್ನೇ ಸವೆಸಿದ್ದಾರೆ. ಇಂದು ಅವರಿಗೆ ಅನಾರೋಗ್ಯ ಕಾಡಿದಾಗ ನಿಮ್ಮ ಗಮನ ಅವರ ಗುಣಮುಖದ ಕಡೆ ಇರಬೇಕೇ ಹೊರತು, ಹಣ ಹೊಂದಿಸುವ ಆತಂಕದ ಕಡೆ ಅಲ್ಲ. ‘ಆರೋಗ್ಯ ವಿಮೆ’ ಕೇವಲ ಹಣಕಾಸಿನ ವಿಚಾರವಲ್ಲ, ಅದು ನಿಮ್ಮ ಪೋಷಕರಿಗೆ ನೀವು ನೀಡುವ ನೆಮ್ಮದಿಯ ಗ್ಯಾರಂಟಿ. ಅನಾರೋಗ್ಯವಾದಾಗ ದುಡಿದ ದುಡ್ಡನ್ನೆಲ್ಲಾ ಆಸ್ಪತ್ರೆಗೆ ಕಟ್ಟುವ ಬದಲು, ದುಡಿಮೆಯ ಸ್ವಲ್ಪ ಹಣವನ್ನು ಆರೋಗ್ಯ ವಿಮೆಗೆ ಮೀಸಲಿಡುವುದು ಜಾಣತನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.