ADVERTISEMENT

ಹಣಕಾಸು ಸಾಕ್ಷರತೆ: ಷೇರು ಕೊಳ್ಳುವಾಗ ಕಂಪನಿ ವಿಶ್ಲೇಷಣೆ ಹೇಗೆ?

ರಾಜೇಶ್ ಕುಮಾರ್ ಟಿ. ಆರ್.
Published 31 ಆಗಸ್ಟ್ 2025, 23:30 IST
Last Updated 31 ಆಗಸ್ಟ್ 2025, 23:30 IST
<div class="paragraphs"><p>ಷೇರುಪೇಟೆ (ಸಾಂದರ್ಭಿಕ ಚಿತ್ರ)</p></div>

ಷೇರುಪೇಟೆ (ಸಾಂದರ್ಭಿಕ ಚಿತ್ರ)

   

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ ಕಂಪನಿಗಳನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಯಾವುದೇ ಕಂಪನಿಯ ಹಣಕಾಸಿನ ಸ್ಥಿತಿಗತಿ ಹೇಗಿದೆ ಎಂಬುದು ಅದರ ಲಾಭ ಮತ್ತು ನಷ್ಟದ ವರದಿ (ಪಿ ಆ್ಯಂಡ್ ಎಲ್ ಸ್ಟೇಟ್‌ಮೆಂಟ್) ನೋಡಿದರೆ ತಿಳಿಯುತ್ತದೆ. ಪಿ ಆ್ಯಂಡ್ ಎಲ್ ಸ್ಟೇಟ್‌ಮೆಂಟ್ ಅನ್ನು ಇನ್‌ಕಮ್ ಸ್ಟೇಟ್‌ಮೆಂಟ್ ಎಂದೂ ಕರೆಯಲಾಗುತ್ತದೆ. ಈ ಲೇಖನದಲ್ಲಿ ಈ ಸ್ಟೇಟ್‌ಮೆಂಟ್ ಅನ್ನು ಹೇಗೆ ವಿಶ್ಲೇಷಣೆಗೆ ಒಳಪಡಿಸಬೇಕು ಎಂಬುದನ್ನು ತಿಳಿಸಲು ಯತ್ನಿಸಲಾಗಿದೆ.

ಲಾಭ ಮತ್ತು ನಷ್ಟದ ವರದಿ: ಲಾಭ ಮತ್ತು ನಷ್ಟದ ವರದಿ ಒಂದು ಪ್ರಮುಖ ಹಣಕಾಸು ದಾಖಲೆ. ನಿರ್ದಿಷ್ಟ ಅವಧಿಯಲ್ಲಿ ಕಂಪನಿಯೊಂದರ ಆದಾಯ, ಖರ್ಚುಗಳು ಮತ್ತು ಲಾಭದ ಪ್ರಮಾಣವನ್ನು ತಿಳಿಸಿಕೊಡುತ್ತದೆ. ಹೇಗೆ ಬ್ಯಾಂಕ್ ಸ್ಟೇಟ್‌ಮೆಂಟ್‌ ವ್ಯಕ್ತಿಗತ ಹಣಕಾಸಿನ ವಿವರಗಳನ್ನು ಒದಗಿಸುವುದೋ ಅದೇ ಮಾದರಿಯಲ್ಲಿ ಪಿ ಆ್ಯಂಡ್‌ ಎಲ್‌ ಸ್ಟೇಟ್‌ಮೆಂಟ್‌ ಕಂಪನಿಯ ಹಣಕಾಸಿನ ಸ್ಥಿತಿಗತಿಯನ್ನು ಬಿಂಬಿಸುತ್ತದೆ. ಈ ಸ್ಟೇಟ್‌ಮೆಂಟ್‌ ಅನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಮತ್ತು ವರ್ಷಕ್ಕೊಮ್ಮೆ ಪ್ರಕಟಿಸಲಾಗುತ್ತದೆ. ಬ್ಯಾಲೆನ್ಸ್‌ಶೀಟ್, ಕ್ಯಾಶ್ ಫ್ಲೋ ಸ್ಟೇಟ್‌ಮೆಂಟ್ ನಂತೆಯೇ ಇದು ದು ಪ್ರಮುಖ ವರದಿ.

ADVERTISEMENT

ಪಿ ಆ್ಯಂಡ್‌ ಎಲ್‌ ಸ್ಟೇಟ್‌ಮೆಂಟ್‌ ಪ್ರಮುಖ ಅಂಶಗಳು: ಸರಕು ಮತ್ತು ಸೇವೆಗಳಿಂದ ಬರುವ ಆದಾಯ: ಸರಕು ಮತ್ತು ಸೇವೆಗಳ ಮಾರಾಟದಿಂದ ಸಿಗುವ ಗಳಿಕೆಯನ್ನು ಆದಾಯ ಎಂದು ಪರಿಗಣಿಸಲಾಗುತ್ತದೆ. ಯಾವುದೇ ಕಂಪನಿಯ ಇತ್ತೀಚಿನ ಆದಾಯವನ್ನು ಹಿಂದಿನ ವರ್ಷಗಳ ಆದಾಯದ ಜೊತೆ ಮತ್ತು ಕ್ಷೇತ್ರದಲ್ಲಿನ ಇತರೆ ಕಂಪನಿಗಳ ಆದಾಯದ ಜೊತೆ ಹೋಲಿಸಿದರೆ, ಅದರ ಬೆಳವಣಿಗೆ ದಿಕ್ಕು ಮತ್ತು ಗತಿ ಗೊತ್ತಾಗುತ್ತದೆ.

ಇತರೆ ಆದಾಯ: ಇತರೆ ಆದಾಯ ಎಂದರೆ ಕಂಪನಿಯ ಮುಖ್ಯ ವ್ಯವಹಾರ ಚಟುವಟಿಕೆಗಳಿಗೆ ಸಂಬಂಧಿಸದ ಆದಾಯ. ಉದಾಹರಣೆಗೆ ಬಂಡವಾಳ ಹೂಡಿಕೆಗಳಿಂದ ಅಥವಾ ಠೇವಣಿಗಳಿಂದ ಲಭ್ಯವಾಗುವ ಬಡ್ಡಿ ಆದಾಯ. ಸರಕು ಮತ್ತು ಸೇವೆಗಳಿಂದ ಬರುವ ಆದಾಯದ ಬದಲು ನಿರ್ದಿಷ್ಟ ಕಂಪನಿ ಇತರೆ ಆದಾಯಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದರೆ ಆ ಕಂಪನಿಯನ್ನು ಹೆಚ್ಚಿನ ವಿಶ್ಲೇಷಣೆಗೆ ಒಳಪಡಿಸಬೇಕಾಗುತ್ತದೆ. ಇತರೆ ಆದಾಯಗಳನ್ನೇ ಕಂಪನಿ ನೆಚ್ಚಿಕೊಂಡಿದ್ದರೆ ಅದು ಹೂಡಿಕೆದಾರನಿಗೆ ಎಚ್ಚರಿಕೆಯ ಸೂಚನೆ.

ಒಟ್ಟು ಆದಾಯ: ಕಂಪನಿ ತನ್ನ ಸರಕು ಮತ್ತು ಸೇವೆಗಳಿಂದ ಬರುವ ಆದಾಯ ಹಾಗೂ ಇತರೆ ಆದಾಯಗಳನ್ನು ಸೇರಿಸಿದಾಗ ಒಟ್ಟು ಆದಾಯ ಸಿಗುತ್ತದೆ. ಈ ಆದಾಯದ ಪ್ರಮಾಣ ಹೆಚ್ಚಿದ್ದರೆ, ಅದು ಸಾಮಾನ್ಯವಾಗಿ ಕಂಪನಿಯ ಬಲಿಷ್ಠ ಆರ್ಥಿಕ ಸ್ಥಿತಿಯ ಸೂಚಕವಾಗಿರುತ್ತದೆ. ಒಟ್ಟು ಆದಾಯದಲ್ಲಿ ಸರಕು ಮತ್ತು ಸೇವೆಗಳಿಂದ ಬರುವ ಆದಾಯದ ಪ್ರಮಾಣ ಹೆಚ್ಚಿದ್ದರೆ ಅದು ಸಕಾರಾತ್ಮಕ.

ಖರ್ಚುಗಳು: ಖರ್ಚುಗಳು ಅಂದರೆ ಉದ್ಯಮ ನಡೆಸುವಾಗ ಆಗುವ ಎಲ್ಲಾ ವೆಚ್ಚಗಳ ಒಟ್ಟು ಚಿತ್ರಣ. ಉದಾಹರಣೆಗೆ ತಯಾರಿಕಾ ವೆಚ್ಚ, ವೇತನ, ಬಾಡಿಗೆ, ಮಾರುಕಟ್ಟೆ ವೆಚ್ಚ, ಆಡಳಿತದ ಖರ್ಚುಗಳು, ಬಡ್ಡಿ ಮತ್ತು ಸವಕಳಿ (ಡಿಪ್ರಿಶಿಯೇಷನ್) ಅಥವಾ ಮೌಲ್ಯ ಇಳಿಕೆ (ಅಂದರೆ ನಿರ್ದಿಷ್ಟ ವಸ್ತು ಅಥವಾ ಆಸ್ತಿ ಬಳಕೆಯಿಂದಾಗಿ ಅಥವಾ ಕಾಲಾನುಕ್ರಮದಲ್ಲಿ ಮೌಲ್ಯವನ್ನು ನಿಧಾನವಾಗಿ ಕಳೆದುಕೊಳ್ಳುವ ಪ್ರಕ್ರಿಯೆ). ಖರ್ಚುಗಳನ್ನು ಆದಾಯ ಹಾಗೂ ಹಿಂದಿನ ವರ್ಷಗಳ ದಾಖಲೆಗಳೊಂದಿಗೆ ಹೋಲಿಸಿ ವಿಶ್ಲೇಷಿಸುವುದರಿಂದ, ಸಂಸ್ಥೆಯ ನಿರ್ವಹಣಾ ದಕ್ಷತೆಯ ಬಗ್ಗೆ ಸ್ಪಷ್ಟ ನೋಟ ಸಿಗುತ್ತದೆ.

ತೆರಿಗೆಗಳು ಮತ್ತು ಲಾಭ ವಿಶ್ಲೇಷಣೆ: ಸರಕು ಮತ್ತು ಸೇವೆಗಳ ಪೂರೈಕೆಯಿಂದ ನೇರವಾಗಿ ಬರುವ ಲಾಭವನ್ನು ಹಣಕಾಸು ನಿರ್ವಹಣೆಯ ಪರಿಭಾಷೆಯಲ್ಲಿ ತೆರಿಗೆ ಪೂರ್ವದ ಲಾಭ (ಪಿಬಿಟಿ) ಎಂದು ಕರೆಯಲಾಗುತ್ತದೆ. ಬಂದ ಲಾಭಕ್ಕೆ ತೆರಿಗೆ ಕಟ್ಟಿದ ನಂತರ ಉಳಿಯುವ ಲಾಭವನ್ನು ತೆರಿಗೆ ನಂತರದ ಲಾಭ (ಪಿಎಟಿ) ಎಂದು ಕರೆಯಲಾಗುತ್ತದೆ. ಎಲ್ಲ ಖರ್ಚುಗಳ ನಂತರ ಕಂಪನಿಗೆ ಎಷ್ಟು ಹೆಚ್ಚುವರಿ ಆದಾಯ ಸೃಷ್ಟಿಸುವ ಸಾಮರ್ಥ್ಯವಿದೆ ಎಂಬುದನ್ನು ಇದು ಹೇಳುತ್ತದೆ.

ಹೂಡಿಕೆದಾರರು ಗಮನಿಸಬೇಕಿರುವ ಅನುಪಾತಗಳು: ಕಂಪನಿಯ ಆರ್ಥಿಕ ಸ್ಥಿತಿ ಮತ್ತು ಷೇರುಗಳ ಭವಿಷ್ಯದ ಪರಿಗಣನೆಗಾಗಿ, ಹೂಡಿಕೆದಾರರು ಎರಡು ಪ್ರಮುಖ ಅನುಪಾತಗಳ ಮೇಲೆ ಗಮನಹರಿಸಬೇಕು:

* ತೆರಿಗೆ ನಂತರದ ಲಾಭ ಮಿತಿ (ಪಿಎಟಿ ಮಾರ್ಜಿನ್‌): ಇದು ಕಂಪನಿ ಒಂದೊಂದು ರೂಪಾಯಿ ಆದಾಯದ ಮೇಲೆ ಎಷ್ಟು ಲಾಭ ಗಳಿಸುತ್ತಿದೆ ಎಂಬುದನ್ನು ತೋರಿಸುವ ಅನುಪಾತ. ಈ ಮಿತಿ ಕಾಲಕಾಲಕ್ಕೆ ಹೆಚ್ಚಾಗುತ್ತಾ ಹೋದರೆ ಮತ್ತು ಸಮಾನ ವಲಯದ ಇತರ ಕಂಪನಿಗಳಿಗಿಂತ ಉತ್ತಮ ಪ್ರಗತಿಯ ಹಾದಿಯಲ್ಲಿದ್ದರೆ ಅದು ಉತ್ತಮ ಲಾಭದಾಯಕತೆಯ ಸೂಚಕ. ಮಿತಿ ಇಳಿಯುತ್ತಿದ್ದರೆ ಕಂಪನಿಯಲ್ಲಿ ಏನೋ ತಾತ್ಕಾಲಿಕ ಸಮಸ್ಯೆ ಇರಬಹುದು ಅಥವಾ ಕಂಪನಿ ಸಂಕಷ್ಟದ ಹಾದಿಯಲ್ಲಿರಬಹುದು ಎಂದು ಅಂದಾಜು ಮಾಡಬೇಕಾಗುತ್ತದೆ. ಒಂದೇ ಮಾತಲ್ಲಿ ಹೇಳುವುದಾದರೆ ಪಿಎಟಿ ಮಾರ್ಜಿನ್ ನಕಾರಾತ್ಮಕವಾಗಿದ್ದರೆ ಆ ಕಂಪನಿಯನ್ನು ಹೆಚ್ಚಿನ ವಿಶ್ಲೇಷಣೆಗೆ ಒಳಪಡಿಸುವ ಅಗತ್ಯವಿರುತ್ತದೆ.

* ಹೂಡಿಕೆ ಮೇಲಿನ ಲಾಭ (ಆರ್‌ಒಇ): ಷೇರುದಾರರ ಹೂಡಿಕೆಯ ಮೊತ್ತವನ್ನು ಕಂಪನಿ ಎಷ್ಟು ಪರಿಣಾಮಕಾರಿಯಾಗಿ ಲಾಭಕ್ಕೆ ಪರಿವರ್ತಿಸುತ್ತಿದೆಯೆಂಬುದನ್ನು ಅಳೆಯುವ ಪ್ರಮಾಣ. ಆರ್‌ಒಇ ಹೆಚ್ಚುತ್ತ ಸಾಗುವುದು ಬಂಡವಾಳದ ಪರಿಣಾಮಕಾರಿ ಬಳಕೆ ಮತ್ತು ಷೇರುದಾರರ ಹೂಡಿಕೆಯ ಮೌಲ್ಯವೃದ್ಧಿಯ ಸ್ಪಷ್ಟ ಸೂಚಕವಾಗಿದೆ.

ಷೇರು ವಿಶ್ಲೇಷಣೆಗೆ ಪ್ರಾಯೋಗಿಕ ಸಲಹೆಗಳು: ಕಂಪನಿಯೊಂದರ ಹಲವು ವರ್ಷಗಳ ದತ್ತಾಂಶವನ್ನು ವಿಶ್ಲೇಷಿಸಿ ಮತ್ತು ಆ ಕ್ಷೇತ್ರದ ಇತರ ಕಂಪನಿಗಳೊಂದಿಗೆ ಹೋಲಿಸಿ ನೋಡಿ. ಕಂಪನಿಗಳ ವರದಿಗಳನ್ನು ಮೇಲ್ನೋಟಕ್ಕೆ ನೋಡಿ ಸುಮ್ಮನಾಗಬೇಡಿ, ಸಾಧ್ಯವಾದಷ್ಟು ಮೌಲ್ಯಮಾಪನ ಮಾಡಿ. ಅನುಪಾತಗಳು ಮತ್ತು ಅಂಕಿ-ಅಂಶಗಳು ಏಕೆ ಬದಲಾಗುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಿ. ನಿರ್ದಿಷ್ಟ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳ ಬಗ್ಗೆ ಗಮನವಿರಲಿ. ಲಾಭ–ನಷ್ಟದ ವರದಿ ಜೊತೆಗೆ ಬ್ಯಾಲೆನ್ಸ್‌ಶೀಟ್ ಮತ್ತು ಕ್ಯಾಶ್ ಫ್ಲೋ ಸ್ಟೇಟ್‌ಮೆಂಟ್‌ಗಳನ್ನು ಕೂಡ ನಿಮ್ಮ ವಿಶ್ಲೇಷಣೆಗೆ ಬಳಸಿಕೊಳ್ಳಿ.

ಕಿವಿಮಾತು: ಲಾಭ ಮತ್ತು ನಷ್ಟದ ವರದಿಯು ಷೇರುಗಳ ವಿಶ್ಲೇಷಣೆಯಲ್ಲಿ ಅವಿಭಾಜ್ಯ ಸಾಧನ, ಕಂಪನಿಯ ವರಮಾನ, ಖರ್ಚು, ನಿರ್ವಹಣೆ ಮತ್ತು ಒಟ್ಟಾರೆ ಲಾಭದಾಯಕತೆಯ ಕುರಿತಾಗಿ ಪ್ರಮುಖ ಒಳನೋಟ ನೀಡುತ್ತದೆ. ಯಾರು ಕಂಪನಿಯ ಲಾಭ ಮತ್ತು ನಷ್ಟದ ವರದಿಯನ್ನು ತೆರಿಗೆ ನಂತರದ ಲಾಭ ಅನುಪಾತ ಮತ್ತು ಹೂಡಿಕೆ ಮೇಲಿನ ಲಾಭದೊಂದಿಗೆ ತುಲನೆ ಮಾಡಿ ನೋಡಲು ಕಲಿಯುತ್ತಾರೋ ಅವರು ಉತ್ತಮ ಹೂಡಿಕೆ ನಿರ್ಧಾರಗಳನ್ನು ಮಾಡುತ್ತಾರೆ.

ಷೇರು ವಿಶ್ಲೇಷಣೆಗೆ ಪ್ರಾಯೋಗಿಕ ಸಲಹೆಗಳು

ಕಂಪನಿಯೊಂದರ ಹಲವು ವರ್ಷಗಳ ದತ್ತಾಂಶವನ್ನು ವಿಶ್ಲೇಷಿಸಿ ಮತ್ತು ಆ ಕ್ಷೇತ್ರದ ಇತರ ಕಂಪನಿಗಳೊಂದಿಗೆ ಹೋಲಿಸಿ ನೋಡಿ. ಕಂಪನಿಗಳ ವರದಿಗಳನ್ನು ಮೇಲ್ನೋಟಕ್ಕೆ ನೋಡಿ ಸುಮ್ಮನಾಗಬೇಡಿ, ಸಾಧ್ಯವಾದಷ್ಟು ಮೌಲ್ಯಮಾಪನ ಮಾಡಿ. ಅನುಪಾತಗಳು ಮತ್ತು ಅಂಕಿ-ಅಂಶಗಳು ಏಕೆ ಬದಲಾಗುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಿ. ನಿರ್ದಿಷ್ಟ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳ ಬಗ್ಗೆ ಗಮನವಿರಲಿ. ಲಾಭ–ನಷ್ಟದ ವರದಿ ಜೊತೆಗೆ ಬ್ಯಾಲೆನ್ಸ್‌ಶೀಟ್ ಮತ್ತು ಕ್ಯಾಶ್ ಫ್ಲೋ ಸ್ಟೇಟ್‌ಮೆಂಟ್‌ಗಳನ್ನು ಕೂಡ ನಿಮ್ಮ ವಿಶ್ಲೇಷಣೆಗೆ ಬಳಸಿಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.