ಹಣಕಾಸು
ಮೊನ್ನೆ ಸ್ನೇಹಿತರೊಬ್ಬರು ಕರೆ ಮಾಡಿ ‘ನನಗೆ ₹5 ಲಕ್ಷ ಬೋನಸ್ ಬಂದಿದೆ. ಈ ಹಣವನ್ನು ಸಾಲದ ಬಾಬ್ತಿಗೆ ಕಟ್ಟುವುದೋ, ಇಲ್ಲ ಮ್ಯೂಚುವಲ್ ಫಂಡ್‌ನಲ್ಲಿ ತೊಡಗಿಸುವುದೋ’ ಎಂಬ ಪ್ರಶ್ನೆ ಕೇಳಿದರು. ಕೈಗೆ ದೊಡ್ಡ ಮೊತ್ತ ಬಂದಾಗ ಸಾಲ ಮಾಡಿರುವ ಪ್ರತಿಯೊಬ್ಬ ವ್ಯಕ್ತಿಯನ್ನೂ ಕಾಡುವ ಪ್ರಶ್ನೆ ಇದು. ಸಾಲ ಕಟ್ಟಿದರೆ ಬಡ್ಡಿ ಹೊರೆ ಇಳಿಯು ತ್ತದೆ ಎಂಬುದು ಒಂದಷ್ಟು ಮಂದಿಯ ಲೆಕ್ಕಾಚಾರವಾದರೆ, ಸಾಲ ಕಟ್ಟುವ ಬದಲು ಅದೇ ದುಡ್ಡನ್ನು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿ ದರೆ ಹೆಚ್ಚು ಗಳಿಸಬಹುದು ಎನ್ನುವುದು ಇನ್ನೊಂದಷ್ಟು ಜನರ ಅಂದಾಜು. ಹಾಗಾದರೆ ಕೈಗೆ ಸಿಗುವ ದೊಡ್ಡ ಮೊತ್ತದಿಂದ ಸಾಲದ ಹೊರೆ ಇಳಿಸಿಕೊಳ್ಳಬೇಕೋ, ಹೂಡಿಕೆಯತ್ತ ಗಮನಹರಿಸಬೇಕೋ?
ಸಾಲದ ಹೊರೆ ಇಳಿಸಿಕೊಳ್ಳುವುದು ಹೇಗೆ?: ₹40 ಲಕ್ಷದ ಗೃಹಸಾಲವನ್ನು ಶೇ 8.5ರ ಬಡ್ಡಿ ದರದಲ್ಲಿ 20 ವರ್ಷದ ಅವಧಿಗೆ (240 ತಿಂಗಳು) ಪಡೆದರೆ ₹40 ಲಕ್ಷ ಅಸಲಿನ ಮೊತ್ತದ ಜೊತೆಗೆ ಸುಮಾರು ₹43 ಲಕ್ಷ ಬಡ್ಡಿ ಕಟ್ಟಬೇಕಾಗುತ್ತದೆ. ಅಂದರೆ ಸಾಲದ ಮೊತ್ತಕ್ಕಿಂತ ಇಲ್ಲಿ ಬಡ್ಡಿ ಮೊತ್ತವೇ ಜಾಸ್ತಿ. ನಿಮ್ಮ ಬಳಿ ₹5 ಲಕ್ಷ ಹಣವಿದ್ದು ಅದನ್ನು ನೀವು ಗೃಹಸಾಲದ ಒಂದಿಷ್ಟು ಮೊತ್ತ ವನ್ನು ಮುಂಚಿತವಾಗಿ ಪಾವತಿಸಲು (ಪಾರ್ಟ್ ಪೇಮೆಂಟ್) ಬಳಸಿದರೆ ಬ್ಯಾಂಕ್ ನಿಮಗೆ ಎರಡು ಆಯ್ಕೆಗಳನ್ನು ನೀಡುತ್ತದೆ. ಒಂದನೆಯದ್ದು ನಿಮ್ಮ ಸಾಲದ ಮಾಸಿಕ ಕಂತಿನ (ಇಎಂಐ) ಮೊತ್ತ ಕಡಿಮೆ ಮಾಡಿಕೊಳ್ಳುವುದು. ಎರಡನೆಯದ್ದು ನಿಮ್ಮ ಮಾಸಿಕ ಕಂತಿನ ಮೊತ್ತವನ್ನು ಹಾಗೇ ಇಟ್ಟುಕೊಂಡು ಸಾಲ ಮರುಪಾವತಿಯ ಒಟ್ಟು ಅವಧಿಯನ್ನು ಕಡಿಮೆ ಮಾಡಿಕೊಳ್ಳುವುದು.
ಉದಾಹರಣೆಗೆ ನೀವು ಎರಡನೇ ಆಯ್ಕೆ, ಅಂದರೆ ಸಾಲ ಮರುಪಾವತಿಯ ಅವಧಿ ಕಡಿಮೆ ಮಾಡಿಕೊಳ್ಳುವುದನ್ನು ಪರಿಗಣಿಸಿದ್ದೀರಿ ಎಂದುಕೊಳ್ಳೋಣ. ಈಗ ಸಾಲ ಪಡೆದು 60 ತಿಂಗಳಾಗಿದ್ದು 61ನೇ ತಿಂಗಳಿಗೆ ನೀವು ₹5 ಲಕ್ಷವನ್ನು ಮುಂಚಿತವಾಗಿ ಪಾವತಿ (ಪಾರ್ಟ್ ಪೇಮೆಂಟ್) ಮಾಡಿದಾಗ ಸಾಲ ಮರುಪಾವತಿಯ ಮಾಸಿಕ ಕಂತಿನ ಮೊತ್ತ ಹಾಗೆಯೇ ಉಳಿಯುತ್ತದೆ. ಆದರೆ ನಿಮ್ಮ ಸಾಲ ಮರುಪಾವತಿಯ ಅವಧಿ 240 ತಿಂಗಳಿಂದ 197 ತಿಂಗಳಿಗೆ ಬರುತ್ತದೆ. ಅಂದರೆ ನಿಮ್ಮ ಸಾಲ 43 ತಿಂಗಳು ಮುಂಚಿತವಾಗಿ ತೀರುತ್ತದೆ. ಮೊದಲಿನ ಲೆಕ್ಕಾಚಾರದ ಪ್ರಕಾರ ನೀವು ₹43 ಲಕ್ಷ ಬಡ್ಡಿ ಕಟ್ಟಬೇಕಾಗುತ್ತಿತ್ತು. ಆದರೆ ಈಗ ಅವಧಿ ತಗ್ಗಿದ ಕಾರಣ ಬಡ್ಡಿ ₹33 ಲಕ್ಷಕ್ಕೆ ಕುಸಿದು ಬಿಡುತ್ತದೆ. ಅಂದರೆ ₹5 ಲಕ್ಷ ಪಾವತಿಸುವ ಮೂಲಕ ನೀವು ಬರೋಬ್ಬರಿ ₹10 ಲಕ್ಷ ಬಡ್ಡಿ ಹಣ ಉಳಿತಾಯ ಮಾಡುತ್ತೀರಿ.
ಸಾಲವನ್ನು ಬೇಗ ತೀರಿಸಿ ಗಳಿಕೆಯನ್ನೂ ಪಡೆಯುವುದು: ₹5 ಲಕ್ಷವನ್ನು ಮುಂಚಿತವಾಗಿ ಸಾಲದ ಬಾಬ್ತಿಗೆ ಕಟ್ಟಿದಾಗ ನಿಮ್ಮ ಸಾಲ 43 ತಿಂಗಳು ಮೊದಲು ಮುಗಿಯುತ್ತದೆ. ಆಗ ಪ್ರತಿ ತಿಂಗಳು ಸಾಲದ ಬಾಬ್ತಿಗೆ ಕಟ್ಟುತ್ತಿದ್ದ ₹34,712 ಮಾಸಿಕ ಕಂತನ್ನು 43 ತಿಂಗಳು ಇಂಡೆಕ್ಸ್ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿ ಶೇ 10ರಷ್ಟು ಗಳಿಕೆ ಸಿಕ್ಕರೂ ಸುಮಾರು ₹18.71 ಲಕ್ಷ ನಿಮ್ಮ ಬಳಿ ಇರುತ್ತದೆ. ಅಂದರೆ 20 ವರ್ಷಗಳ ಕೊನೆಯಲ್ಲಿ ನಿಮ್ಮ ಬಳಿ ಸ್ವಂತ ಮನೆಯ ಜೊತೆಗೆ ₹18.71 ಲಕ್ಷ ಇರುತ್ತದೆ.
ಸಾಲ ತೀರಿಸುವುದಕ್ಕಿಂತ ಹೆಚ್ಚಿನ ಲಾಭ ಹೂಡಿಕೆಯಲ್ಲಿದೆಯಾ?: ನೀವು ನಿಮ್ಮ ಬಳಿ ಇರುವ ₹5 ಲಕ್ಷವನ್ನು ಸಾಲ ತೀರಿಸಲು ಬಳಸುವುದಿಲ್ಲ. ಅದನ್ನು ಶೇ 12ರಷ್ಟು ಗಳಿಕೆ ನಿರೀಕ್ಷೆಯಲ್ಲಿ ಇಂಡೆಕ್ಸ್ ಮ್ಯೂಚುವಲ್ ಫಂಡ್‌ನಲ್ಲಿ 15 ವರ್ಷ ಹೂಡಿಕೆ ಮಾಡುತ್ತೀರಿ ಎಂದುಕೊಳ್ಳಿ. ಹಾಗೆ ಮಾಡಿದಾಗ ನಿಮಗೆ ₹27.3 ಲಕ್ಷ ಗಳಿಕೆ ಸಿಗುತ್ತದೆ. ಸಾಲ ಕಟ್ಟುವುದಕ್ಕಿಂತ ಹೆಚ್ಚಿನ ಲಾಭ ಹೂಡಿಕೆಯಲ್ಲಿದೆ ಎಂದು ಮೇಲ್ನೋಟಕ್ಕೆ ನಿಮಗೆ ಅನಿಸಬಹುದು. ಆದರೆ ಹೂಡಿಕೆಯನ್ನು ಯಾವ ಹಂತದಲ್ಲಿ ನೀವು ಆರಂಭಿಸುತ್ತೀರಿ ಮತ್ತು ಯಾವ ಹಂತದಲ್ಲಿ ನಿಲ್ಲಿಸುತ್ತೀರಿ ಎನ್ನುವುದು ನಿಮ್ಮ ಗಳಿಕೆಯನ್ನು ನಿರ್ಧರಿಸುತ್ತದೆ.
ಉದಾಹರಣೆಗೆ 2008ರ ಜಾಗತಿಕ ಆರ್ಥಿಕ ಕುಸಿತದ ಸಂದರ್ಭದಲ್ಲಿ ನೀವು ಹೂಡಿಕೆ ಆರಂಭಿಸಿ ದ್ದರೆ ಅಥವಾ 2020ರ ಕೋವಿಡ್ ಸಂದರ್ಭದಲ್ಲಿ ಹೂಡಿಕೆ ಹಿಂಪಡೆಯಲು ಮುಂದಾಗಿದ್ದರೆ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಗಳಿಕೆಗಿಂತ ತಾತ್ಕಾಲಿಕ ನಷ್ಟವೇ ಹೆಚ್ಚಿರುತ್ತಿತ್ತು. ಹಾಗೆಂದ ಮಾತ್ರಕ್ಕೆ ಹೂಡಿಕೆಯಿಂದ ನಷ್ಟವೆಂದಲ್ಲ, ಸಾಲ ತೀರಿಸುವಾಗ ಇರುವ ಖಾತರಿ ಷೇರು ಮಾರುಕಟ್ಟೆ ಆಧಾರಿತ ಹೂಡಿಕೆಗಳಲ್ಲಿ ಇರುವುದಿಲ್ಲ ಎನ್ನುವುದು ಇದರ ತಾತ್ಪರ್ಯ.
ಹೂಡಿಕೆ ಮತ್ತು ಸಾಲ ಪಾವತಿಯ ಮಿಶ್ರಣವಿದ್ದರೆ ಹೇಗೆ?: ₹5 ಲಕ್ಷ ಬೋನಸ್ ಹಣ ನಿಮ್ಮ ಬಳಿ ಇದೆ ಎಂದುಕೊಳ್ಳಿ. ಹೀಗಿದ್ದಾಗ ₹2.5 ಲಕ್ಷ ಸಾಲದ ಬಾಬ್ತಿಗೆ ಮತ್ತು ₹2.5 ಲಕ್ಷವನ್ನು ಹೂಡಿಕೆಗೆ ಪರಿಗಣಿಸಬಹುದು. ಇಂತಹ ನಿರ್ಧಾರಗಳನ್ನು ಮಾಡುವಾಗ ಪ್ರಮುಖವಾಗಿ ನೀವು ಪಡೆದಿರುವ ಸಾಲದ ಮೇಲಿನ ಬಡ್ಡಿ ಎಷ್ಟಿದೆ ಎನ್ನುವುದನ್ನು ಪರಿಗಣಿಸಬೇಕಾಗುತ್ತದೆ. ಉದಾಹರಣೆಗೆ, ನೀವು ವೈಯಕ್ತಿಕ ಸಾಲ ಪಡೆದಿದ್ದು, ಅದರ ಬಡ್ಡಿ ಶೇ 14ರಷ್ಟಿದ್ದರೆ ನಿಮ್ಮ ಬಳಿ ಇರುವ ₹5 ಲಕ್ಷವನ್ನು ಹೂಡಿಕೆಗೆ ಮೀಸಲಿಡುವ ಬದಲು ಸಾಲ ತೀರಿಸಲು ಬಳಸುವುದು ಒಳಿತು. ನೀವು ಗೃಹ ಸಾಲ ಪಡೆದಿದ್ದು, ಅದರ ಬಡ್ಡಿ ದರ ಶೇ 8.5ರಷ್ಟಿದೆ ಎಂದು ಭಾವಿಸಿ. ಶೇ 12ರಷ್ಟು ಗಳಿಕೆ ನಿರೀಕ್ಷೆಯಲ್ಲಿ ನೀವು ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುತ್ತೀರಿ ಎಂದರೆ ನೀವು ಸಾಲ ತೀರಿಸಲು ಪೂರ್ತಿ ಹಣ ಬಳಸುವ ಬದಲು ಅರ್ಧದಷ್ಟು ಹಣವನ್ನು ಸಾಲ ತೀರಿಸಲು ಹಾಗೂ ಇನ್ನುಳಿದ ಮೊತ್ತವನ್ನು ಹೂಡಿಕೆಗೆ ಮೀಸಲಿಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.