ADVERTISEMENT

ಪಿಪಿಎಫ್: ಗೊತ್ತಿರಲಿ 5 ವಿಚಾರಗಳು

ಪ್ರಮೋದ್
Published 19 ಸೆಪ್ಟೆಂಬರ್ 2021, 19:31 IST
Last Updated 19 ಸೆಪ್ಟೆಂಬರ್ 2021, 19:31 IST
ಪ್ರಮೋದ್ ಬಿ.ಪಿ.
ಪ್ರಮೋದ್ ಬಿ.ಪಿ.   

ಷೇರು, ಮ್ಯೂಚುವಲ್ ಫಂಡ್, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಹೀಗೆ ಹತ್ತಾರು ಹೊಸ ಮಾದರಿ ಹೂಡಿಕೆಗಳ ನಡುವೆಯೂಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ) ಹೆಚ್ಚು ಪ್ರಸ್ತುತ ಅನ್ನಿಸುವಂತಹ ಹೂಡಿಕೆಯಾಗಿ ಗಮನ ಸೆಳೆಯುತ್ತಿದೆ. ಪಿಪಿಎಫ್ಹೂಡಿಕೆ ಮೊತ್ತಕ್ಕೆ ಕೇಂದ್ರ ಸರ್ಕಾರ ಕೊಡುವ ಖಾತರಿ, ತೆರಿಗೆ ವಿನಾಯಿತಿ, ಬಡ್ಡಿ ಗಳಿಕೆ ಮೇಲೆ ತೆರಿಗೆ ಇಲ್ಲದಿರುವುದು,ಅಲ್ಪ ಮೊತ್ತದ ಹೂಡಿಕೆಗೂ ಅವಕಾಶವಿರುವುದು ಸೇರಿ ಹಲವು ವಿಚಾರಗಳು ಪಿಪಿಎಫ್‌ಅನ್ನು ಆಕರ್ಷಕಹೂಡಿಕೆಯಾಗಿಸಿವೆ.

ಅತ್ಯಂತ ಜನಪ್ರಿಯ ಉಳಿತಾಯ ಯೋಜನೆಗಳಲ್ಲಿ ಒಂದು ಎಂದು ಕರೆಸಿಕೊಂಡಿರುವ ಪಿಪಿಎಫ್ ಬಗ್ಗೆ ಎಲ್ಲರೂತಿಳಿದಿರಬೇಕಾದ ಕೆಲವು ಅಂಶಗಳತ್ತ ಗಮನಹರಿಸೋಣ.

1. ಕೆಲವು ಸಂದರ್ಭಗಳಲ್ಲಿ ಟಿಡಿಎಸ್ ಅನ್ವಯ: ಪಿಪಿಎಫ್ ಹೂಡಿಕೆಗೆಯಾವುದೇ ಹಂತದಲ್ಲೂ ತೆರಿಗೆ ಇಲ್ಲ. ಹೂಡಿಕೆ ಮಾಡುವಾಗ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ. ಪಿಪಿಎಫ್ ಹೂಡಿಕೆಯಿಂದ ಬರುವ ಬಡ್ಡಿ ಲಾಭಕ್ಕೆ ಯಾವುದೇ ತೆರಿಗೆ ಇಲ್ಲ. ಅವಧಿ ಮುಗಿದ ಬಳಿಕ ಪಡೆಯುವ ಒಟ್ಟು ಮೊತ್ತಕ್ಕೂ ಬಂಡವಾಳ ವೃದ್ಧಿ ತೆರಿಗೆ ಅನ್ವಯಿಸುವುದಿಲ್ಲ. ಹಾಗಾಗಿಪಿಪಿಎಫ್‌ಅನ್ನು ‘ವಿನಾಯಿತಿ, ವಿನಾಯಿತಿ ಮತ್ತು ವಿನಾಯಿತಿ’ (Exempt, Exempt, Exempt) ಇರುವ ಹೂಡಿಕೆ ಯೋಜನೆ ಎಂದು ಗುರುತಿಸಲಾಗುತ್ತದೆ. ಈ ವಿನಾಯಿತಿಗಳು ಮೆಚ್ಯೂರಿಟಿವರೆಗೆ ಖಾತೆಯನ್ನು ಚಾಲ್ತಿಯಲ್ಲಿಟ್ಟುಕೊಂಡವರಿಗೆ ಮಾತ್ರವೇ ಅಲ್ಲ, ಹೂಡಿಕೆ ಹಣವನ್ನು ಭಾಗಶಃ ಹಿಂಪಡೆಯುವವರಿಗೆ ಮತ್ತು ವಿವಿಧ ಕಾರಣಗಳಿಂದಾಗಿ ಅವಧಿಗೆ ಮುನ್ನ ಖಾತೆ ಸ್ಥಗಿತಗೊಳಿಸುವವರಿಗೂ ಅನ್ವಯಿಸುತ್ತದೆ.

ADVERTISEMENT

ಆದರೆ ಕಳೆದ ವರ್ಷ ಹೊಸ ನಿಯಮವೊಂದನ್ನು ಜಾರಿಗೆ ತರಲಾಗಿದೆ. ₹ 20 ಲಕ್ಷ ಮೇಲ್ಪಟ್ಟು ಹೂಡಿಕೆ ಹಣವನ್ನು ಭಾಗಶಃ ಹಿಂಪಡೆಯುವವರು ಹಿಂದಿನ ಮೂರು ವರ್ಷಗಳಲ್ಲಿ ತೆರಿಗೆ ವಿವರ ಸಲ್ಲಿಸದೇ ಇದ್ದಲ್ಲಿ ಶೇ 2ರಿಂದ ಶೇ 5ರಷ್ಟು ಟಿಡಿಎಸ್‌ ಪಾವತಿಸಬೇಕಾಗುತ್ತದೆ.

2. ಅವಧಿ ವಿಸ್ತರಣೆ ಹೇಗೆ?: ಪಿಪಿಎಫ್ ಹೂಡಿಕೆ ಮಾಡಿ 15 ವರ್ಷಗಳನ್ನು ಪೂರೈಸಿದ ನಂತರ ಒಟ್ಟು ಹಣ ಹಿಂಪಡೆದು ಖಾತೆ ಮುಚ್ಚಬಹುದು. ಒಂದೊಮ್ಮೆ, ಹೂಡಿಕೆ ಅವಧಿ ವಿಸ್ತರಿಸುತ್ತೇವೆ ಎಂದರೆ ಐದು ವರ್ಷಗಳಿಗೆ ವಿಸ್ತರಿಸಬಹುದು. ಒಮ್ಮೆ ವಿಸ್ತರಿಸಿದ ಬಳಿಕ ಎಷ್ಟು ಬಾರಿಯಾದರೂ ಈ ರೀತಿ ಐದುವರ್ಷಗಳ ಅವಧಿಗೆ ಮರುವಿಸ್ತರಣೆ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಪಿಪಿಎಫ್ ಖಾತೆ ವಿಸ್ತರಿಸಲು ಮೆಚ್ಯೂರಿಟಿ ಆದ ದಿನದಿಂದ ಒಂದು ವರ್ಷದ ಒಳಗಾಗಿ ಅರ್ಜಿ ಸಲ್ಲಿಸಬೇಕು. ವಿಸ್ತರಣೆ ಅವಧಿಯಲ್ಲಿ ನೀವು ಪಿಪಿಎಫ್ ಖಾತೆಗೆ ಹೂಡಿಕೆ ಮಾಡಬೇಕೋ ಬೇಡವೋ ಎನ್ನುವ ಆಯ್ಕೆಯನ್ನು ಮಾಡಬಹುದು. ಹೂಡಿಕೆ ಮಾಡಬೇಕು ಎಂದಾದರೆ ಫಾರಂ ಎಚ್ ಸಲ್ಲಿಸಬೇಕು.

3. ಅಪ್ರಾಪ್ತ ಮಗುವಿನ ಹೆಸರಲ್ಲಿ ಖಾತೆ: ಅಪ್ರಾಪ್ತ ಮಗುವಿನ ಹೆಸರಿನಲ್ಲಿಪಿಪಿಎಫ್ ಖಾತೆಯನ್ನು ತಂದೆ ಅಥವಾ ತಾಯಿ ಆರಂಭಿಸಬಹುದು. ಆದರೆ ತಂದೆ- ತಾಯಿ ಇಬ್ಬರೂ ಅಪ್ರಾಪ್ತ ಮಗುವಿನ ಹೆಸರಲ್ಲಿ ಒಂದೊಂದು ಪ್ರತ್ಯೇಕ ಖಾತೆ ತೆರೆಯುವಂತಿಲ್ಲ. ನೀವು ಒಂದು ಪಿಪಿಎಫ್ ಖಾತೆ ಹೊಂದಿದ್ದು ಅಪ್ರಾಪ್ತ ಮಗುವಿನ ಹೆಸರಿನಲ್ಲಿ ಒಂದು ಪಿಪಿಎಫ್ ಖಾತೆ ಆರಂಭಿಸಿದರೆ ಅದರ ಒಟ್ಟು ವಾರ್ಷಿಕ ಹೂಡಿಕೆ ಮಿತಿ ₹ 1.5 ಲಕ್ಷ ಮಾತ್ರ. ಅಜ್ಜ–ಅಜ್ಜಿ ತಮ್ಮ ಮೊಮ್ಮಕ್ಕಳ ಹೆಸರಿನಲ್ಲಿ ಪಿಪಿಎಫ್ ಖಾತೆ ತೆರೆಯುವಂತಿಲ್ಲ. ಒಂದೊಮ್ಮೆ ಮಗುವಿನ ತಂದೆ-ತಾಯಿ ಮೃತಪಟ್ಟಿದ್ದು, ಅಜ್ಜ-ಅಜ್ಜಿ ಕಾನೂನಾತ್ಮಕ ಪೋಷಕರಾಗಿದ್ದರೆ ಮಗುವಿನ ಹೆಸರಿನಲ್ಲಿ ಪಿಪಿಎಫ್ ಖಾತೆ ಆರಂಭಿಸಬಹುದು.

4. ಪಿಪಿಎಫ್ ಹಣದಿಂದ ಸಾಲ ಕಟ್ಟಿ ಎನ್ನುವಂತಿಲ್ಲ!: ಒಂದೊಮ್ಮೆ ನೀವು ಸಾಲ ಪಡೆದಿದ್ದು ಸಾಲ ಮರುಪಾವತಿ ಸಾಧ್ಯವಾಗದಿದ್ದಲ್ಲಿ ನಿಮ್ಮ ಪಿಪಿಎಫ್ ಖಾತೆಯಲ್ಲಿ ಇರುವ ಹಣದಿಂದ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಕೇಳುವಂತಿಲ್ಲ. ಪಿಪಿಎಫ್ ಹಣದ ಮೇಲೆ ಖಾತೆದಾರನಿಗಷ್ಟೇ ಸಂಪೂರ್ಣ ಹಕ್ಕಿರುತ್ತದೆ. ಆದಾಯ ತೆರಿಗೆ ಪಾವತಿ ವಿಚಾರವಾಗಿ ತಕರಾರು ಬಂದಲ್ಲಿ ಮಾತ್ರ ಆದಾಯ ತೆರಿಗೆ ಅಧಿಕಾರಿಗಳು ಪಿಪಿಎಫ್ ಖಾತೆಯಲ್ಲಿರುವ ಹಣ ಜಪ್ತಿ ಮಾಡಬಹುದು.

5. ಮೆಚ್ಯೂರಿಟಿ ಅವಧಿ: ಪಿಪಿಎಫ್ ಖಾತೆಯ ಮೆಚ್ಯೂರಿಟಿ ಅವಧಿ 15 ವರ್ಷ ಎಂದು ಬಹುತೇಕರು ತಿಳಿದಿದ್ದಾರೆ. ಆದರೆ ಪಿಪಿಎಫ್‌ ಮೆಚ್ಯೂರಿಟಿಗೆ 16 ವರ್ಷಗಳು ಬೇಕಾಗುತ್ತವೆ. ಉದಾಹರಣೆಗೆ, 25 ಜುಲೈ 2017ರಲ್ಲಿ ನೀವು ಮೊದಲ ಕಂತಿನ ಪಿಪಿಎಫ್ ಹೂಡಿಕೆ ಮಾಡಿದಿರಿ ಎಂದಿಟ್ಟುಕೊಳ್ಳಿ. ಹೀಗಿದ್ದರೂ ಸಹ, ಅವಧಿ ಲೆಕ್ಕಹಾಕುವಾಗ ಆ ಹಣಕಾಸು ವರ್ಷದ ಕೊನೆಯಿಂದ 15 ವರ್ಷಗಳು ಎಂದುಲೆಕ್ಕಾಚಾರ ಮಾಡಲಾಗುತ್ತದೆ. ಆದ್ದರಿಂದ ಏಪ್ರಿಲ್ 1, 2033ಕ್ಕೆ ಇಲ್ಲಿ ಹೂಡಿಕೆ ಹಣ ಮೆಚ್ಯೂರಿಟಿ ಆಗುತ್ತದೆ. ಈ ಲೆಕ್ಕಾಚಾರದಂತೆ 16 ವರ್ಷಗಳ ವರೆಗೆ ನೀವು ಹೂಡಿಕೆ ಮಾಡಿರುತ್ತೀರಿ.

ಹೊಸ ದಾಖಲೆ ಬರೆದ ಸೂಚ್ಯಂಕಗಳು
ಷೇರುಪೇಟೆ ಸೂಚ್ಯಂಕಗಳು ಹೊಸ ದಾಖಲೆ ಬರೆದಿವೆ. ವಾರದ ಅವಧಿಯ ಲೆಕ್ಕಾಚಾರ ತೆಗೆದುಕೊಂಡರೆ 59,015 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ಶೇ 1.21ರಷ್ಟು ಹೆಚ್ಚಳ ಕಂಡಿದ್ದರೆ,17,585 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ನಿಫ್ಟಿ ಶೇ 1.24ರಷ್ಟು ಜಿಗಿದಿದೆ.

ಗ್ರಾಹಕ ಹಣದುಬ್ಬರ ಪ್ರಮಾಣ ನಿಯಂತ್ರಣದಲ್ಲಿ ಇರುವುದು, ಸೊರಗಿರುವದೂರಸಂಪರ್ಕ ವಲಯಕ್ಕೆ ಪ್ಯಾಕೇಜ್ ಘೋಷಣೆ,ವಿದ್ಯುತ್ ಚಾಲಿತ ಮತ್ತು ಹೈಡ್ರೋಜನ್ ಇಂಧನದ ವಾಹನಗಳ ಉತ್ಪಾದನೆಗೆ ಸರ್ಕಾರ ಪ್ರೋತ್ಸಾಹಧನ ಘೋಷಿಸಿರುವುದು ಸೇರಿ ಹಲವು ಅಂಶಗಳು ಸೂಚ್ಯಂಕಗಳ ಜಿಗಿತಕ್ಕೆ ಕಾರಣ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 6,545.51 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹2,292.49 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಧ್ಯಮ ಸೂಚ್ಯಂಕ ಶೇ 13ರಷ್ಟು ಗಳಿಸಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಸೂಚ್ಯಂಕ ಶೇ 5ರಷ್ಟು ಹೆಚ್ಚಳವಾಗಿದೆ. ನಿಫ್ಟಿ ಲೋಹ, ರಿಯಲ್ ಎಸ್ಟೇಟ್ ಸೂಚ್ಯಂಕಗಳು ತಲಾ ಶೇ 1ರಷ್ಟು ಕುಸಿದಿವೆ.

ನಿಫ್ಟಿಯಲ್ಲಿ ಇಂಡಸ್ ಇಂಡ್ ಬ್ಯಾಂಕ್ ಶೇ 13.1ರಷ್ಟು, ಕೋಟಕ್ ಮಹೀಂದ್ರ ಬ್ಯಾಂಕ್ ಶೇ 10.5ರಷ್ಟು, ಐಟಿಸಿ ಶೇ 8.7ರಷ್ಟು, ಎನ್‌ಟಿಪಿಸಿ ಶೇ 8.0ರಷ್ಟು, ಏರ್‌ಟೆಲ್ ಶೇ 6.1ರಷ್ಟು, ಕೋಲ್ ಇಂಡಿಯಾ ಶೇ 5.4ರಷ್ಟು, ಎಚ್‌ಸಿಎಲ್ ಟೆಕ್ ಶೇ 5.4ರಷ್ಟು, ಎಸ್‌ಬಿಐ ಶೇ 5ರಷ್ಟು,ಹಿರೋ ಮೋಟೊಕಾರ್ಪ್ ಶೇ 4.8ರಷ್ಟು ಮತ್ತು ಇಂಡಿಯನ್ ಆಯಿಲ್ ಶೇ 4.8ರಷ್ಟು ಹೆಚ್ಚಳವಾಗಿವೆ. ಭಾರತ್ ಪೆಟ್ರೋಲಿಯಂ ಶೇ 2.9ರಷ್ಟು, ಹಿಂದೂಸ್ಥಾನ್ ಯುನಿಲಿವರ್ 3.2ರಷ್ಟು, ಟಾಟಾ ಸ್ಟೀಲ್ 4.2ರಷ್ಟು, ಅಲ್ಟ್ರಾಟೆಕ್ ಶೇ 2.9ರಷ್ಟುಕುಸಿದಿವೆ.

ಮುನ್ನೋಟ: ಈ ವಾರ ಜಾಗತಿಕವಾಗಿ ಸಾಕಷ್ಟು ಬೆಳವಣಿಗೆಗಳು ಪ್ರಭಾವ ಬೀರುವ ಸಾಧ್ಯತೆ ಇದೆ. ಫೆಡರಲ್ ಮುಕ್ತ ಮಾರುಕಟ್ಟೆ ಸಮಿತಿ (ಎಫ್‌ಒಎಂಸಿ) ಸಭೆ ಸೆಪ್ಟೆಂಬರ್ 21-22ರಂದು ನಡೆಯಲಿದ್ದು, ಅಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಸೂಚ್ಯಂಕಗಳ ಮೇಲೆಪರಿಣಾಮ ಬೀರುವ ಸಾಧ್ಯತೆಯಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಜಪಾನ್ ಸಹ ಹಣಕಾಸು ಸಮಿತಿಸಭೆ ನಡೆಸಲಿದ್ದು, ಇದಕ್ಕೂ ಮಾರುಕಟ್ಟೆ ಪ್ರತಿಕ್ರಿಯಿಸಲಿದೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ., ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.