ದೇಶದ ಮಧ್ಯಮ ವರ್ಗದ ಬಹುತೇಕ ಕುಟುಂಬಗಳಿಗೆ ಹಣಕಾಸಿನ ನಿರ್ವಹಣೆ ಅಂದರೆ ನಿತ್ಯದ ವೆಚ್ಚಗಳು, ಮುಂದಿನ ದಿನಗಳಿಗಾಗಿನ ಉಳಿತಾಯ ಹಾಗೂ ಅನಿರೀಕ್ಷಿತ ವೆಚ್ಚಗಳ ನಡುವೆ ಸಮತೋಲನ ಸಾಧಿಸುವುದು. ಆದರೆ, ಹೂಡಿಕೆಯ ವಿಚಾರ ಬಂದಾಗಲೆಲ್ಲ ಹಲವರು ಕಡಿಮೆ ಲಾಭ ತಂದುಕೊಡುವ ನಿಶ್ಚಿತ ಠೇವಣಿಗಳು ಹಾಗೂ ಹೆಚ್ಚಿನ ಲಾಭ ನೀಡಬಹುದಾದ ಮಾರುಕಟ್ಟೆ ಆಧಾರಿತ ಹೂಡಿಕೆಗಳ ನಡುವೆ ಯಾವುದು ಸೂಕ್ತ ಎಂಬ ಗೊಂದಲಕ್ಕೆ ಬೀಳುತ್ತಾರೆ.
ಬೆಲೆ ಏರಿಕೆಯು ಹೆಚ್ಚಾಗುತ್ತಲೇ ಇರುವ, ಮಾರುಕಟ್ಟೆಯ ಚಲನೆಯು ಅನಿಶ್ಚಿತವಾಗಿರುವ ಸಂದರ್ಭದಲ್ಲಿ ಕಡಿಮೆ ಲಾಭದ ಹೂಡಿಕೆಗಳಾಗಲಿ, ಹೆಚ್ಚು ಲಾಭ ನೀಡಬಹುದಾದರೂ ಹೆಚ್ಚಿನ ರಿಸ್ಕ್ ಇರುವ ಹೂಡಿಕೆಗಳಾಗಲಿ ಸೂಕ್ತವಾಗಲಿಕ್ಕಿಲ್ಲ. ಸ್ಥಿರವಾದ ಬೆಳವಣಿಗೆ, ನಿರಂತರ ವರಮಾನ ಹಾಗೂ ಮನಸ್ಸಿಗೆ ನೆಮ್ಮದಿಯನ್ನು ನೀಡುವ ಹೂಡಿಕೆಯ ಒಂದು ಮಾರ್ಗ ಇದ್ದರೆ ಹೇಗೆ?!
ಸಾಲಪತ್ರಗಳು (ಬಾಂಡ್‌ಗಳು) ಈ ಸ್ಥಾನವನ್ನು ತುಂಬಬಲ್ಲವು. ಸಾಲಪತ್ರಗಳನ್ನು ಬಹುತೇಕರು ಉಪೇಕ್ಷೆ ಮಾಡುವುದೇ ಹೆಚ್ಚು. ಹೀಗಿದ್ದರೂ, ಇವು ಕುಟುಂಬಗಳ ಹಣಕಾಸಿನ ಯೋಜನೆಗೆ ಸ್ಥಿರತೆ ತಂದುಕೊಡಬಲ್ಲವು, ನಿರಂತರ ಆದಾಯವನ್ನೂ ಕೊಡಬಲ್ಲವು.
ಸಾಲಪತ್ರಗಳು ಏಕೆ ಮುಖ್ಯ?
ಸ್ಥಿರತೆ ಹಾಗೂ ಹಣದುಬ್ಬರದ ಪ್ರಮಾಣ ಮೀರಿದ ಲಾಭದ ನಡುವೆ ಸಮತೋಲನವನ್ನು ಸಾಧಿಸಲು ಸಾಲಪತ್ರಗಳು ಅಗತ್ಯ. ಇವು ನಿಶ್ಚಿತ ವರಮಾನ ನೀಡುತ್ತವೆ, ಸಾಮಾನ್ಯವಾಗಿ ಇವು ನಿಶ್ಚಿತ ಠೇವಣಿಗಳಿಗಿಂತ ಹೆಚ್ಚಿನ ಲಾಭ ನೀಡುತ್ತವೆ. ವಾರ್ಷಿಕವಾಗಿ ಇವು ಶೇ 8ರಿಂದ ಶೇ 15ರವರೆಗೆ ಲಾಭ ತಂದುಕೊಡಬಲ್ಲವು. ಇದು ಸಾಲಪತ್ರದ ರೇಟಿಂಗ್‌ಅನ್ನೂ ಅವಲಂಬಿಸಿದೆ.
ಸಾಲಪತ್ರ ಖರೀದಿಸುವುದು ಅಂದರೆ ಸರ್ಕಾರಕ್ಕೆ ಅಥವಾ ಕಂಪನಿಗೆ ಸಾಲ ಕೊಡುವುದು ಎಂದು ಅರ್ಥ. ಹೀಗೆ ಸಾಲ ನೀಡಿದ್ದಕ್ಕೆ ಪ್ರತಿಯಾಗಿ ನಿಶ್ಚಿತ ಬಡ್ಡಿ ಸಿಗುತ್ತದೆ. ನಿಗದಿತ ಅವಧಿಯ ನಂತರದಲ್ಲಿ ಆರಂಭಿಕ ಹೂಡಿಕೆಯ ಮೊತ್ತ ಕೂಡ ಸಿಗುತ್ತದೆ. ಸಾಲಪತ್ರಗಳು ದಶಕಗಳಿಂದಲೂ ವಿಶ್ವಸನೀಯ ಹೂಡಿಕೆಯ ಉತ್ಪನ್ನವಾಗಿ ಇವೆ. ಆದರೆ ತೀರಾ ಈಚಿನವರೆಗೆ ಸಾಲಪತ್ರಗಳಲ್ಲಿ ಅತಿ ಶ್ರೀಮಂತರು ಮಾತ್ರ ಹೂಡಿಕೆ ಮಾಡುತ್ತಿದ್ದರು. ಏಕೆಂದರೆ, ಅವುಗಳಲ್ಲಿ ಹೂಡಿಕೆ ಮಾಡುವವರು ತೊಡಗಿಸಬೇಕಿದ್ದ ಕನಿಷ್ಠ ಮೊತ್ತವೇ ದೊಡ್ಡದಿತ್ತು, ಸಾಲಪತ್ರಗಳನ್ನು ಖರೀದಿಸುವ ಪ್ರಕ್ರಿಯೆಯೂ ಸಂಕೀರ್ಣವಾಗಿತ್ತು.
ಆದರೆ ಸೆಬಿ ನೋಂದಾಯಿತ ಆನ್‌ಲೈನ್ ಸಾಲಪತ್ರ ವೇದಿಕೆಗಳು ಈ ಪ್ರಕ್ರಿಯೆಯನ್ನು ಸುಲಭಗೊಳಿಸಿವೆ. ಈಗ ದೇಶದ ಯಾವುದೇ ಕುಟುಂಬವು ಸರ್ಕಾರದ ಅಥವಾ ಕಾರ್ಪೊರೇಟ್ ಕಂಪನಿಯ ಸಾಲಪತ್ರದಲ್ಲಿ ₹1,000ದಷ್ಟು ಸಣ್ಣ ಮೊತ್ತ ಬಳಸಿ ಹೂಡಿಕೆ ಮಾಡಬಹುದು.
ಹಣದುಬ್ಬರ ಮೀರುವುದು, ರಿಸ್ಕ್ ಕಡಿಮೆ ಮಾಡುವುದು:
ನಿಶ್ಚಿತ ಠೇವಣಿಗಳಿಂದ ಸಿಗುವ ಲಾಭವು ಹಣದುಬ್ಬರ ಪ್ರಮಾಣಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇರುವ ಸಂದರ್ಭಗಳು ಕಡಿಮೆ. ಆದರೆ ಸಾಲಪತ್ರಗಳು, ಅದರಲ್ಲೂ ಮುಖ್ಯವಾಗಿ ಹೂಡಿಕೆಗೆ ಯೋಗ್ಯವಾದ ಉತ್ತಮ ದರ್ಜೆಯ ಕಾರ್ಪೊರೇಟ್ ಸಾಲಪತ್ರಗಳು, ಹೆಚ್ಚಿನ ಲಾಭವನ್ನು ತಂದುಕೊಡುತ್ತವೆ. ಈ ಮೂಲಕ ಅವು ಹೂಡಿಕೆದಾರರಿಗೆ ಹಣದುಬ್ಬರ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಾಭ ಗಳಿಸಲು ನೆರವಾಗುತ್ತವೆ. ಅಲ್ಲದೆ, ಈ ಸಾಲಪತ್ರಗಳು ಈಕ್ವಿಟಿಗಳಲ್ಲಿ ಕಂಡುಬರುವಂತಹ ಚಂಚಲತೆಗೆ ಒಳಗಾಗುವುದಿಲ್ಲ. ಹೀಗಾಗಿ, ಈ ಬಗೆಯ ಸಾಲಪತ್ರಗಳಲ್ಲಿ ಹೂಡಿಕೆಯು ರಿಸ್ಕ್ ಹೆಚ್ಚು ಬೇಡ ಎನ್ನುವವರಿಗೆ ಬಹಳ ಸೂಕ್ತವಾಗುತ್ತದೆ.
ಸಾಲಪತ್ರಗಳ ಮೌಲ್ಯವು ಸ್ಥಿರವಾಗಿ ಇರುತ್ತದೆ, ಸಾಲಪತ್ರದ ಅವಧಿಯ ಉದ್ದಕ್ಕೂ ಲಾಭ ಅಥವಾ ಅದು ನೀಡುವ ಆದಾಯದ ಪ್ರಮಾಣವು ನಿಶ್ಚಿತವಾಗಿರುತ್ತದೆ. ಇದರಿಂದಾಗಿ ಹೂಡಿಕೆಯ ಮೊತ್ತಕ್ಕೆ ಸ್ಥಿರತೆ ಸಿಗುತ್ತದೆ. ಬಂಡವಾಳ ಮಾರುಕಟ್ಟೆಗಳಲ್ಲಿ ಎಷ್ಟೇ ಕುಸಿತ ಕಂಡುಬಂದರೂ, ಸಾಲಪತ್ರಗಳಲ್ಲಿ ಹಣ ತೊಡಗಿಸಿದವರು ಭೀತಿಗೆ ಒಳಗಾಗಿ ಅವುಗಳನ್ನು ಮಾರಾಟ ಮಾಡುವ ಅಗತ್ಯ ಇರುವುದಿಲ್ಲ.
ದೀರ್ಘಾವಧಿ ಗುರಿಗಳಿಗೆ ಆಸರೆ:
ಭಾರತದಲ್ಲಿ ಕುಟುಂಬ ಮಟ್ಟದಲ್ಲಿ ಉಳಿತಾಯ ಮಾಡುವುದು ಸಾಮಾನ್ಯವಾಗಿ ಮಕ್ಕಳ ಶಿಕ್ಷಣಕ್ಕಾಗಿ, ಸ್ವಂತ ಮನೆಯೊಂದನ್ನು ಹೊಂದುವುದಕ್ಕಾಗಿ, ನಿವೃತ್ತಿಯ ನಂತರದ ಬದುಕಿಗಾಗಿ. ದೀರ್ಘಾವಧಿಯ ಹಣಕಾಸಿನ ಗುರಿಗಳನ್ನು ಸಾಧಿಸಲು ಈಕ್ವಿಟಿ ಹೂಡಿಕೆಗಳು ಹೆಚ್ಚು ಸೂಕ್ತವಾಗುತ್ತವೆ. ಆದರೆ, ಜವಾಬ್ದಾರಿಗಳು ಹೆಚ್ಚುತ್ತ ಸಾಗಿ, ಜೀವನದ ಮಹತ್ವದ ಹಣಕಾಸಿನ ಗುರಿಗಳು ಹತ್ತಿರವಾದಂತೆಲ್ಲ, ಅಂದರೆ ಶಿಕ್ಷಣಕ್ಕೆ ಮಾಡಬೇಕಿರುವ ವೆಚ್ಚಗಳು ಸನಿಹಕ್ಕೆ ಬಂದಂತೆಲ್ಲ, ಸ್ಥಿರವಾದ ಗಳಿಕೆ ಹಾಗೂ ಊಹೆಗೆ ಸಿಗಬಹುದಾದ ವರಮಾನವು ಹೆಚ್ಚು ಮುಖ್ಯವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಾಲಪತ್ರಗಳು ಮಹತ್ವದ್ದಾಗುತ್ತವೆ.
ನಿವೃತ್ತಿಯ ಸನಿಹಕ್ಕೆ ಬಂದಾಗ, ಸಾಲಪತ್ರಗಳಿಂದ ಕಾಲಕಾಲಕ್ಕೆ ಆದಾಯ ಪಡೆದುಕೊಳ್ಳುವುದು ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ. ಇದು ನಿವೃತ್ತರಾದವರಿಗೆ ತಮ್ಮ ಜೀವನಶೈಲಿಯನ್ನು ಹಾಗೆಯೇ ಉಳಿಸಿಕೊಳ್ಳಲು, ಕೆಟ್ಟ ಸಂದರ್ಭಗಳಲ್ಲಿ ತಮ್ಮ ಇತರ ಹೂಡಿಕೆಗಳನ್ನು ನಗದೀಕರಿಸಿಕೊಳ್ಳುವ ಅಗತ್ಯ ಎದುರಾಗದಂತೆ ನೋಡಿಕೊಳ್ಳುತ್ತದೆ.
ಹೂಡಿಕೆ ಸುಲಭ: ಒಬಿಪಿಪಿ ವೇದಿಕೆಗಳ ಕಾರಣದಿಂದಾಗಿ ಈಗ ಸಾಲಪತ್ರಗಳಲ್ಲಿ ಹೂಡಿಕೆ ಮಾಡುವುದು ಷೇರುಗಳಲ್ಲಿ ಹೂಡಿಕೆ ಮಾಡಿದಷ್ಟೇ ಸುಲಭ. ಆನ್‌ಲೈನ್ ವೇದಿಕೆಗಳ ಮೂಲಕ ತಮಗೆ ಬೇಕಾದ ಸರ್ಕಾರಿ ಸಾಲಪತ್ರ ಅಥವಾ ಕಾರ್ಪೊರೇಟ್ ಸಾಲಪತ್ರವನ್ನು ಆಯ್ಕೆ ಮಾಡಿಕೊಂಡರೆ ಆಯಿತು. ಹೂಡಿಕೆ ಸಂದರ್ಭದಲ್ಲಿ ಅನುಸರಿಸಬೇಕಿರುವ ಪ್ರಕ್ರಿಯೆಗಳೂ ಬಹಳ ಕಡಿಮೆ. ಪ್ರಕ್ರಿಯೆಗಳು ಸಂಪೂರ್ಣವಾಗಿ ಪಾರದರ್ಶಕವಾಗಿ ಇರುವ ಕಾರಣದಿಂದಾಗಿ ಎಲ್ಲರಿಗೂ ಈ ಹೂಡಿಕೆ ಉತ್ಪನ್ನಗಳನ್ನು ಅರ್ಥ ಮಾಡಿಕೊಳ್ಳುವುದೂ ಸುಲಭ.
ಇಂದಿನ ಅನಿಶ್ಚಿತ ಸನ್ನಿವೇಶದಲ್ಲಿ ಸಾಲಪತ್ರಗಳು ಶ್ರೀಮಂತರಿಗೆ ಮಾತ್ರವೇ ಅಲ್ಲ. ಅವು ದೇಶದ ಮಧ್ಯಮ ವರ್ಗದ ಕುಟುಂಬಗಳಿಗೆ ಸೂಕ್ತವಾದ ಆಯ್ಕೆಯಾಗುತ್ತವೆ. ಹೂಡಿಕೆ ಮಾಡಲು ಸಿಗುವ ಮೊತ್ತದಲ್ಲಿ ಶೇ 20ರಿಂದ ಶೇ 30ರವರೆಗಿನ ಪಾಲನ್ನು ಸಾಲಪತ್ರಗಳಲ್ಲಿ ತೊಡಗಿಸುವ ಮೂಲಕ ನಿಶ್ಚಿತ ವರಮಾನ ಪಡೆಯಬಹುದು, ಹಣದುಬ್ಬರದ ಪ್ರಮಾಣ ಮೀರಿದ ಲಾಭ ಪಡೆಯಬಹುದು, ಮುಖ್ಯ ಆದಾಯ ಮೂಲಕ್ಕೆ ಪೂರಕವಾಗಿ ಇನ್ನೊಂದು ಆದಾಯ ಮೂಲವನ್ನು ಸೃಷ್ಟಿಸಿಕೊಳ್ಳಬಹುದು.
ನಿಶ್ಚಿತ ಸಂದರ್ಭಗಳಲ್ಲಿ ಸಾಲಪತ್ರಗಳು ಪ್ರತಿ ಕುಟುಂಬದ ನೆರವಿಗೆ ಬರುವ ಮಿತ್ರರು...
ಮೂವತ್ತು ವರ್ಷ ಮೀರಿರುವ ನಲವತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ಪ–ಅಮ್ಮ ಹಾಗೂ ಒಂದು ಪುಟ್ಟ ಮಗು ಇರುವ ಕುಟುಂಬವೊಂದನ್ನು ಉದಾಹರಣೆಗೆ ಪರಿಗಣಿಸೋಣ. ಈ ಕುಟುಂಬಕ್ಕೆ ಸಣ್ಣ ಪ್ರಮಾಣದಲ್ಲಿ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಇದೆ. ಹೂಡಿಕೆಗೆ ₹10 ಲಕ್ಷ ಹಣ ಕುಟುಂಬದ ಬಳಿ ಇದೆ. ಈ ಕುಟುಂಬಕ್ಕೆ ಹೂಡಿಕೆಯ ಯೋಜನೆಯನ್ನು ಹೀಗೆ ರೂಪಿಸಬಹುದು:
* ₹3 ಲಕ್ಷ (ಒಟ್ಟು ಮೊತ್ತದಲ್ಲಿ ಶೇ 30ರಷ್ಟು) ಸಾಲಪತ್ರ ಹಾಗೂ ನಿಶ್ಚಿತ ಆದಾಯದ ಉತ್ಪನ್ನಗಳಲ್ಲಿ
* ₹2 ಲಕ್ಷ (ಶೇ 20ರಷ್ಟು) ಆಪದ್ಧನದ ರೂಪದಲ್ಲಿ
* ₹5 ಲಕ್ಷ (ಶೇ 50ರಷ್ಟು) ಈಕ್ವಿಟಿಗಳಲ್ಲಿ ಹಾಗೂ ಚಿನ್ನದಲ್ಲಿ ದೀರ್ಘಾವಧಿಯಲ್ಲಿ ಹೂಡಿಕೆಯ ಮೌಲ್ಯ ವೃದ್ಧಿಯು ಈಕ್ವಿಟಿಯ ಗುರಿಯಾಗಿದ್ದರೂ ಅವು ಚಂಚಲವಾಗಿರುತ್ತವೆ. ಆಪದ್ಧನದ ರೂಪದಲ್ಲಿ ಇರಿಸುವ ಹಣಕ್ಕೆ ಖಾತರಿ ಇರುತ್ತದೆಯಾದರೂ ಅಲ್ಲಿ ಹೆಚ್ಚಿನ ಲಾಭ ಗಳಿಕೆ ಇರುವುದಿಲ್ಲ. ಆದರೆ ಸಾಲಪತ್ರಗಳಲ್ಲಿ ಮಾಡಿದ ಹೂಡಿಕೆಯು ಸ್ಥಿರ ಲಾಭ ನೀಡುತ್ತದೆ ಮತ್ತು ಒಟ್ಟಾರೆ ಕಡಿಮೆ ರಿಸ್ಕ್ ಹೊಂದಿರುತ್ತದೆ. ಸಾಲಪತ್ರಗಳ ಒಳ್ಳೆಯ ಪೋರ್ಟ್‌ಫೊಲಿಯೊ ಒಂದು ಎಎಎ ಎಎ ಎ ಮತ್ತು ಬಿಬಿಬಿ ಶ್ರೇಯಾಂಕದ ಸಾಲಪತ್ರಗಳನ್ನು ಹೊಂದಿರುತ್ತದೆ. ಹೆಚ್ಚಿನ ಶ್ರೇಯಾಂಕದ (ಎಎಎ ಮತ್ತು ಎಎ) ಸಾಲಪತ್ರಗಳು ಹೆಚ್ಚು ಸುರಕ್ಷಿತ. ಎ ಮತ್ತು ಬಿಬಿಬಿ ಶ್ರೇಯಾಂಕದ ಸಾಲಪತ್ರಗಳು ತುಸು ಹೆಚ್ಚಿನ ಲಾಭವನ್ನು ನೀಡುತ್ತವೆ.
ಸರಾಸರಿ ಲೆಕ್ಕದಲ್ಲಿ ಹೇಳುವುದಾದರೆ ವೈವಿಧ್ಯಮಯವಾದ ಸಾಲಪತ್ರಗಳ ಪೋರ್ಟ್‌ಫೋಲಿಯೊ ವಾರ್ಷಿಕ ಅಂದಾಜು ಶೇ 12ರಷ್ಟು ಲಾಭ ತಂದುಕೊಡಬಲ್ಲದು. ಅಂದರೆ ₹3 ಲಕ್ಷದ ಸಾಲಪತ್ರಗಳ ಪೋರ್ಟ್‌ಫೋಲಿಯೊ ವಾರ್ಷಿಕವಾಗಿ ₹36 ಸಾವಿರ (ಅಥವಾ ತಿಂಗಳಿಗೆ ₹3 ಸಾವಿರ) ಆದಾಯ ತಂದುಕೊಡಬಲ್ಲದು. ಈ ನಿಶ್ಚಿತ ಆದಾಯವು ಕುಟುಂಬಗಳಿಗೆ ತಿಂಗಳ ಖರ್ಚು ನಿರ್ವಹಿಸಲು ನೆರವಿಗೆ ಬರುತ್ತದೆ.
ಅದರಲ್ಲೂ ಮುಖ್ಯವಾಗಿ ಉದ್ಯೋಗ ಕಳೆದುಕೊಂಡ ಸಂದರ್ಭದಲ್ಲಿ ಅಥವಾ ವೈದ್ಯಕೀಯ ತುರ್ತು ಸಂದರ್ಭಗಳು ಎದುರಾದಾಗ ಇಂತಹ ಆದಾಯಗಳು ಒಂದಿಷ್ಟು ಅನುಕೂಲ ಮಾಡಿಕೊಡುತ್ತವೆ. ಆದರೆ ವ್ಯಕ್ತಿಯ ವಯಸ್ಸು ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಆಧರಿಸಿ ಹೂಡಿಕೆ ಯೋಜನೆಗಳು ಬದಲಾಗುತ್ತವೆ ಎಂಬುದು ಗಮನದಲ್ಲಿ ಇರಲಿ.
ಲೇಖಕ ಜಿರಾಫ್ ಸಂಸ್ಥೆಯ ಸಹ ಸಂಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.