ADVERTISEMENT

ಪ್ರಶ್ನೋತ್ತರ ಅಂಕಣ: ಹೂಡಿಕೆ ನಿರ್ಧಾರ ಕೈಗೊಳ್ಳುವುದು ಹೇಗೆ?

ಪ್ರಮೋದ ಶ್ರೀಕಾಂತ್ ದೈತೋಟ ಅವರ ಪ್ರಶ್ನೋತ್ತರ ಅಂಕಣ

ಪ್ರಮೋದ ಶ್ರೀಕಾಂತ ದೈತೋಟ
Published 12 ಮಾರ್ಚ್ 2024, 23:57 IST
Last Updated 12 ಮಾರ್ಚ್ 2024, 23:57 IST
<div class="paragraphs"><p> ಹೂಡಿಕೆ </p></div>

ಹೂಡಿಕೆ

   

ಸಾಹಿತ್ಯಾ, ಕೆಂಗೇರಿ.

ಪ್ರಶ್ನೆ: ನಾನು ಮನಃಶಾಸ್ತ್ರದ ಪರಿಣತೆಯಾಗಿದ್ದು, ಕಾರ್ಪೊರೇಟ್ ಕ್ಲಿನಿಕ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ವಾರ್ಷಿಕವಾಗಿ ₹8.11 ಲಕ್ಷ ವೇತನ ಸಂಪಾದಿಸುತ್ತಿದ್ದೇನೆ. ಬ್ಯಾಂಕ್ ಬಡ್ಡಿಯ ರೂಪದಲ್ಲಿ ₹30,000 ಆದಾಯ ಪಡೆಯುತ್ತಿದ್ದೇನೆ. ಒಟ್ಟು ವೇತನದಿಂದ ಮಾಸಿಕವಾಗಿ ₹2,400 ಪಿಟಿ, ₹21,600 ಪಿಎಫ್, ₹45,000 ಪಿಪಿಎಫ್, ₹9,000 ಎಲ್‌ಐಸಿ ಪಾವತಿ ಹಾಗೂ ವೈದ್ಯಕೀಯ ವಿಮಾ ರೂಪದಲ್ಲಿ ₹6,000 ಕಡಿತಗೊಂಡು ಸಂಬಂಧಿತ ಇಲಾಖೆಗೆ ಪಾವತಿಯಾಗುತ್ತದೆ. ಪ್ರಸ್ತುತ ನನ್ನ ವಯಸ್ಸು 29 ಹಾಗೂ ಅವಿವಾಹಿತೆಯಾಗಿದ್ದೇನೆ. ನನ್ನ ಹಣದ ಉಳಿತಾಯಕ್ಕಾಗಿ ಹಾಗೂ ತೆರಿಗೆ ಉಳಿಸಲು ಏನೇನು ಮಾಡಬಹುದು. ಯಾವ ತೆರಿಗೆ ಪದ್ಧತಿ ನನಗೆ ಸೂಕ್ತ ಎಂಬ ಬಗ್ಗೆ ತಿಳಿಸಿ.

ADVERTISEMENT

ಉತ್ತರ: ನೀವು ನಿಮ್ಮ ಆದಾಯದ ಬಗ್ಗೆ ವಿವರವಾದ ಮಾಹಿತಿ ನೀಡಿರುತ್ತೀರಿ. ಈ ಆದಾಯಕ್ಕೆ ಪ್ರತಿಯಾಗಿ ನಿಮ್ಮ ಆರ್ಥಿಕ ಜವಾಬ್ದಾರಿ ಯಾವುವು ಎಂಬ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಪ್ರಶ್ನೆಯಲ್ಲಿ ತಿಳಿಸಿಲ್ಲ. ಹೀಗಾಗಿ, ಶೇ 50ರಷ್ಟು ಆದಾಯ ನಿಮ್ಮ ವೆಚ್ಚಕ್ಕೆ ಬೇಕಾಗಬಹುದೆಂದು ಊಹಿಸಿ, ಉಳಿದ ಶೇ 50ರಷ್ಟು ಮೊತ್ತವನ್ನು ನಿಮ್ಮ ಹೂಡಿಕೆಗೆ ಬಳಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಪ್ರಶ್ನೆಯಲ್ಲಿ ತಿಳಿಸಿರುವ ವಿವಿಧ ರೀತಿಯ ಕಡಿತಗಳನ್ನು ಬಿಟ್ಟು ನಿಮ್ಮ ಬಳಿ ಉಳಿಯುವ ಮೊತ್ತ ಹೆಚ್ಚು ಕಡಿಮೆ ₹7.50 ಲಕ್ಷ. ಈ ಮೊತ್ತದಲ್ಲಿ ನೀವು ತಿಂಗಳಿಗೆ ₹25,000ದಿಂದ ₹30,000 ಉಳಿತಾಯ ಮಾಡಿದರೂ, ವಾರ್ಷಿಕವಾಗಿ ₹3 ಲಕ್ಷಕ್ಕೂ ಹೆಚ್ಚು ಉಳಿತಾಯ ಮಾಡಲಿದ್ದೀರಿ. ಇತ್ತೀಚಿನ ಬದಲಾದ ಆದಾಯ ತೆರಿಗೆ ನಿಯಮದಡಿ ತೆರಿಗೆ ಉಳಿತಾಯಕ್ಕಿಂತ ಹೆಚ್ಚಾಗಿ, ಭವಿಷ್ಯಕ್ಕಾಗಿ ಹೂಡಿಕೆ ಮಾಡಿಡುವ ನೈಜ ಸನ್ನಿವೇಶಗಳೇ ಹೆಚ್ಚಿನ ಪ್ರಾಶಸ್ತ್ಯ ಪಡೆಯುತ್ತಿವೆ. ಈ ಹಂತದಲ್ಲಿ ನೀವು ತೆರಿಗೆ ಲಾಭ ನೀಡದ ಆದರೆ ಮುಕ್ತ ಮಾರುಕಟ್ಟೆಗೆ ಸಂಬಂಧಿಸಿದ ಯಾವುದೇ ಹೂಡಿಕೆಯನ್ನು ಮಾಡಬಹುದು.

ಅದರಲ್ಲಿ ಮ್ಯೂಚುವಲ್ ಫಂಡ್‌ಗಳು ಪ್ರಮುಖವಾಗಿವೆ. ದೀರ್ಘಾವಧಿಯಲ್ಲಿ ಈಕ್ವಿಟಿ ಫಂಡ್‌ಗಳ ಎಸ್‌ಐಪಿಗಳು ಉತ್ತಮ ಲಾಭ ನೀಡಬಲ್ಲವು. ನಿವೃತ್ತಿಯ ಉದ್ದೇಶಕ್ಕೋಸ್ಕರ ಎನ್‌ಪಿಎಸ್‌ನಲ್ಲೂ ಹೂಡಿಕೆ ಮಾಡಬಹುದು.

ಹಳೆಯ ತೆರಿಗೆ ಪದ್ಧತಿ ಅನುಸರಿಸಿ ಪ್ರಸ್ತುತ ಆದಾಯಕ್ಕೆ, ನೀವು ಮಾಡುವ ವಿವಿಧ ಹೂಡಿಕೆಗಳನ್ನು ಪರಿಗಣಿಸಿದರೂ ತೆರಿಗೆಗೆ ಅದು ಲಾಭದಾಯಕ ಆಗಲಾರದು. ಇನ್ನೂ ಒಂದಷ್ಟು ಮುಂದುವರಿದು ಹೇಳುವುದಾದರೆ, ಸೆಕ್ಷನ್ 80ಸಿ ಅಡಿ ಸಿಗುವ ಸಂಪೂರ್ಣ ಮೊತ್ತ ಪರಿಗಣಿಸಿ, ಒಟ್ಟಾರೆ ಹೂಡಿಕೆಯನ್ನು ₹1.50 ಲಕ್ಷಕ್ಕೆ ವರ್ಧಿಸಿದರೂ, ಹಳೆಯ ತೆರಿಗೆ ಪದ್ಧತಿ ಯಾವುದೇ ಪ್ರಯೋಜನವಾಗದು. ಕಾರಣ ಇದರಡಿ ನಿಗದಿಯಾದ ತೆರಿಗೆ ದರ ಹೊಸ ಪದ್ಧತಿಗಿಂತ ಅಧಿಕ. ಹೀಗಾಗಿ, ಪ್ರಸ್ತುತ ಆದಾಯಕ್ಕೆ ಹೊಸ ತೆರಿಗೆ ಪದ್ಧತಿ ಒಳಿತು.

ನಾಗಭೂಷಣ್ ಎನ್‌.ಎಲ್., ಹುಬ್ಬಳ್ಳಿ.

ಪ್ರಶ್ನೆ: ನಾವು ಅನೇಕ ರೀತಿಯ ಹೂಡಿಕೆ ವಿಧಾನಗಳನ್ನು ಕಂಡಿದ್ದೇವೆ. ಪ್ರತಿದಿನ ಟಿ.ವಿ ಮಾಧ್ಯಮದಲ್ಲಿ ಅಥವಾ ದಿನಪತ್ರಿಕೆಗಳಲ್ಲಿ ಹೂಡಿಕೆಯ ಅನೇಕ ರೀತಿಯ ವಿಧಾನಗಳನ್ನು ಕೇಳುತ್ತಾ ಓದುತ್ತಾ ಇರುತ್ತೇವೆ. ಹೀಗಿರುವಾಗ ಕೆಲವೊಮ್ಮೆ ಬಹಳಷ್ಟು ಗೊಂದಲ ಉಂಟಾಗುತ್ತದೆ. ಯಾವುದು ಯಾವ ಸಂದರ್ಭದಲ್ಲಿ ಸೂಕ್ತ ಎಂಬುದು ತಿಳಿಯುವುದಿಲ್ಲ. ಉದಾಹರಣೆಗೆ 10 ವರ್ಷದ ಹಿಂದೆ ಸ್ನೇಹಿತರು ಖರೀದಿಸಿದ ಭೂಮಿಯನ್ನು ಇಂದಿನ ಮಾರುಕಟ್ಟೆ ದರದಲ್ಲಿ ನೋಡಿದಾಗ ದುಪ್ಪಟ್ಟು ಅಥವಾ ಅದಕ್ಕಿಂತ ಅಧಿಕವೇ ಆಗಿರುತ್ತದೆ. ಒಂದೆರಡು ವರ್ಷ ಹಿಂದೆಯಷ್ಟೇ ಖರೀದಿಸಿದ ಕೆಲವು ಷೇರುಗಳು ನಾಗಾಲೋಟದಿಂದ ಎರಡೋ, ಮೂರೋ ಪಾಲು ಹೂಡಿಕೆದಾರನಿಗೆ ಲಾಭ ಕೊಡುತ್ತವೆ. ನಮ್ಮ ಅದೃಷ್ಟ ಕೆಟ್ಟದಾಗಿದ್ದರೆ, ಅದೇ ಷೇರುಗಳು ನೆಲಕಚ್ಚುತ್ತವೆ. ಹೀಗಿರುವಾಗ ನಿರ್ಧಾರ ಹೇಗೆ ಸಾಧ್ಯ. ಅನೇಕ ವ್ಯವಹಾರಗಳಲ್ಲಿ ಕೈಹಾಕಿ ಯಾವುದೇ ನಿರೀಕ್ಷಿತ ಲಾಭ ಸಿಗದೆ ಬೆಲೆ ಕುಸಿತವಾಗುತ್ತದೆ ಎಂದು ನಿರೀಕ್ಷಿಸಿ ತಟಸ್ಥವಿದ್ದಾಗ ನಾವು ನೋಡುತ್ತಿದ್ದಂತೆ ಹೂಡಿಕೆ ಮೌಲ್ಯ ಮತ್ತೆ ಗಗನಕ್ಕೇರುತ್ತದೆ. ಇಂತಹ ಸಂದರ್ಭದಲ್ಲಿ ಹೂಡಿಕೆ ನಿರ್ಧಾರ ಕೈಗೊಳ್ಳುವುದು ಹೇಗೆ. 

ಉತ್ತರ: ಹೂಡಿಕೆ ಎನ್ನುವುದು ಲಾಭಗಳಿಸುವ ಒಂದು ಸಾಧನ ಮಾತ್ರವಲ್ಲ ಅದೊಂದು ಕಲೆಯೂ ಹೌದು. ಈ ನಿರ್ಧಾರಗಳಲ್ಲಿ ಎಲ್ಲ ರೀತಿಯ ವಿಚಾರಗಳೂ ಪರೋಕ್ಷವಾಗಿ ಗಣನೆಗೆ ಬರುತ್ತವೆ. ಒಬ್ಬ ಮುಂದಿನ ದಿನಗಳಲ್ಲಿ ಏರುಗತಿ ನಿರೀಕ್ಷಿಸಿ ಹೂಡಿಕೆಯ ನಿರ್ಧಾರ ತೆಗೆದುಕೊಂಡರೆ, ಆತನಿಗೆ ಮಾರಾಟ ಮಾಡುವವ ಸಹಜವಾಗಿ ಅದಕ್ಕೆ ತದ್ವಿರುದ್ಧವಾಗಿ ಯೋಚಿಸಿರಬೇಕು. ಇಂತಹ ಯೋಚನೆಯ ಧೋರಣೆಯಿಂದಲೇ ಮಾರುಕಟ್ಟೆ ವಿಸ್ತಾರವಾಗುವುದು. ಇದು ಸ್ಥಿರ-ಚರ ಆಸ್ತಿಗಳಿಗೂ ಅನ್ವಯ. ಇದೆಲ್ಲದರ ಹಿಂದೆ ನಮ್ಮದೇ ಆದ ಗಟ್ಟಿ ನಿರ್ಧಾರಗಳು ಅಥವಾ ಕೆಲವೊಮ್ಮೆ ಮೃದು ಧೋರಣೆಗಳು ವೈಯಕ್ತಿಕವಾಗಿ ಪರಿಗಣನೆಗೆ ಬರುತ್ತವೆ. ಆದರೆ, ಯಾವುದೇ ಗಟ್ಟಿ ನಿರ್ಧಾರ ಕೈಗೊಳ್ಳುವ ಮುನ್ನ ಅದು ಸಕಾರಣ ಹೊಂದಿದ್ದಾಗಿದ್ದರೆ, ನಮ್ಮ ನಿರ್ಧಾರದ ಗುಣಮಟ್ಟದ ತುಲನೆ ಸಾಧ್ಯ. ಇದರಿಂದ ನಮ್ಮ ಸರಿ, ತಪ್ಪುಗಳ ವಿಶ್ಲೇಷಣೆಗೆ ಹೆಚ್ಚು ಅನುಕೂಲ.

ಇನ್ನು ಆರ್ಥಿಕ ವಿಚಾರದ ಏಳುಬೀಳುಗಳು ಒಂದು ಚಕ್ರದ ವಿವಿಧ ಬಿಂದುಗಳಿದ್ದಂತೆ. ಇಲ್ಲಿ ಶಾಶ್ವತವಾದ ಏರುಗತಿಯೂ ಇಲ್ಲ. ಅದೇ ರೀತಿ ಕಾಯಂ ಆದ ಇಳಿಮುಖವೂ ಇಲ್ಲ. ಈ ಆವರ್ತಗಳನ್ನು ಸಮರ್ಪಕವಾಗಿ ಊಹಿಸಬಲ್ಲ ಶಕ್ತಿ ನಮ್ಮದಾಗಬೇಕು. ಇಲ್ಲಿ ನಮ್ಮ ನಿರ್ಧಾರದಂತೆ ಎಲ್ಲವೂ ನಡೆಯುತ್ತದೆ ಎನ್ನುವ ಸ್ವಭಾವಕ್ಕಿಂತ, ನಾವು ಸಮಯೋಚಿತ ನಿರ್ಧಾರ ಹೇಗೆ ಕೈಗೊಳ್ಳಬೇಕು ಎನ್ನುವುದೇ ಮುಖ್ಯ. ಉದಾಹರಣೆಗೆ, ಒಂದು ಕಾಲದಲ್ಲಿ ಎಲ್ಲ ವರ್ಗದ ಜನರಿಗೂ ಪ್ರಿಯವಾಗಿದ್ದ ಕ್ಯಾಮೆರಾ ಇಂದು ಮೂಲೆಗುಂಪಾಗಿದೆ. ಕಾರಣ ತಂತ್ರಜ್ಞಾನದ ನೆರವಿನಿಂದ ಅಂಗೈಯ ಮೊಬೈಲ್ ಮೂಲಕ ‘ಟು ಇನ್ ಒನ್’ ಕೆಲಸ ಸಾಧ್ಯ ಎನ್ನುವುದು ಸಾಬೀತಾಗಿದೆ. ಇದರ ಪರಿಣಾಮ ಮೊಬೈಲ್ ಉದ್ಯಮವು ಕ್ಯಾಮೆರಾ ಉದ್ಯಮಕ್ಕಿಂತ ಮುಂಚೂಣಿ ಪಡೆದಿದೆ. ಹೀಗಾಗಿ ಇಂತಹ ಬದಲಾಬಣೆಯ ಸಾಧ್ಯತೆಗಳನ್ನು ಮೊದಲೇ ಯೋಚಿಸಿ, ಸಹನೆಯಿಂದ ಹೂಡಿಕೆ ಮಾಡಿದಾಗಲಷ್ಟೇ ಎಲ್ಲವೂ ಸಾಧ್ಯ.

ಹೂಡಿಕೆ ಪ್ರಪಂಚದ ಬಹಳ ಚಾಲ್ತಿಯಲ್ಲಿರುವ ಮಾತಿನಂತೆ, ಏರುಗತಿಯ ಮಾರುಕಟ್ಟೆಯ ಸಮಯದಲ್ಲಿ ಹೂಡಿಕೆ ಮಾಡುವಾತ ಉತ್ತಮ ಲಾಭ ಗಳಿಸಬಲ್ಲ. ಆದರೆ ಯಾವಾಗ ಎಲ್ಲರೂ ಆಸೆ ಬಿಟ್ಟು ಮಾರುಕಟ್ಟೆ ದೊಡ್ಡ ಕುಸಿತ ಕಾಣುತ್ತಿರುವಾಗ ಹೂಡಿಕೆ ಮಾಡುತ್ತಾರೋ ಅವರಿಗೆ ನಿಜವಾಗಿ ಅದೃಷ್ಟ ಕಾದಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.