ADVERTISEMENT

ಪ್ರಶ್ನೋತ್ತರ ಅಂಕಣ: ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

ಪ್ರಮೋದ ಶ್ರೀಕಾಂತ ದೈತೋಟ
Published 4 ಫೆಬ್ರುವರಿ 2026, 0:29 IST
Last Updated 4 ಫೆಬ್ರುವರಿ 2026, 0:29 IST
<div class="paragraphs"><p> ಹಣಕಾಸು</p></div>

ಹಣಕಾಸು

   

ನನ್ನ ಬಳಿ ಸುಮಾರು ₹40 ಲಕ್ಷ ಹಣವಿದೆ. ಈ ಹಣವು ಸಾಲ ವಸೂಲಾತಿ, ಚಿಟ್ ಫಂಡ್ ಸಂಗ್ರಹ ಮತ್ತು ಇತರ ಕೆಲವು ಮೂಲಗಳಿಂದ ಬಂದಿದೆ. ಹೆಚ್ಚಿನ ಆದಾಯ ನೀಡುವ ಷೇರು ಮಾರುಕಟ್ಟೆಯ ಕುರಿತು ನನಗೆ ಯಾವುದೇ ತಿಳಿವಳಿಕೆ ಇಲ್ಲ. ಈಗ ನಾನು ಬ್ಯಾಂಕ್, ಅಂಚೆ ಕಚೇರಿ ಮುಂತಾದ ಸುರಕ್ಷಿತ ಹಾಗೂ ತ್ರೈಮಾಸಿಕವಾಗಿ ಬಡ್ಡಿ ಆದಾಯ ನೀಡುವ ಹೂಡಿಕೆಗಳಲ್ಲಿ ಹಣ ಹೂಡಲು ಇಚ್ಛಿಸುತ್ತಿದ್ದೇನೆ. ದಯವಿಟ್ಟು ಇಂತಹ ಹೂಡಿಕೆಗಳ ಕುರಿತು ಮಾರ್ಗದರ್ಶನ ನೀಡಿ.

– ನಾರಾಯಣ ಗೌಡ, ಟಿ. ದಾಸರಹಳ್ಳಿ, ಬೆಂಗಳೂರು

ADVERTISEMENT

ಉತ್ತರ: ಆರ್ಥಿಕ ಅಪಾಯ ಬೇಡ ಎನ್ನುವ ಹೂಡಿಕೆದಾರರಿಗೆ ತಮ್ಮ ಮೂಲಧನದ ಭದ್ರತೆ ಮತ್ತು ನಿಯಮಿತ ಬಡ್ಡಿ ಆದಾಯ ಯಾವತ್ತೂ ಮುಖ್ಯವಾಗಿರುತ್ತದೆ. ತಮ್ಮ ಇತಿ–ಮಿತಿ ಅರಿತು ಹಾಗೂ ಸೂಕ್ತ ಮಾಹಿತಿ ಇರುವ ಹೂಡಿಕೆಗಳಲ್ಲಷ್ಟೇ ಹಣ ತೊಡಗಿಸುವುದು ಉತ್ತಮ. ಹೀಗಾಗಿ ಅಪಾಯ ಕಡಿಮೆ ಇರುವ, ಬಡ್ಡಿ ಆಧಾರಿತ ಹೂಡಿಕೆಗಳನ್ನು ಆಯ್ಕೆ ಮಾಡುವ ನಿರ್ಧಾರ ಸರಿ. ಷೇರು ಮಾರುಕಟ್ಟೆಯ ಅನುಭವ ಇಲ್ಲದವರು, ಮೊದಲು ಬ್ಯಾಂಕ್ ಮತ್ತು ಸರ್ಕಾರದ ಭದ್ರತೆ ಇರುವ ಯೋಜನೆಗಳತ್ತ ಗಮನ ಹರಿಸುವುದು ಒಳಿತು. ನೀವು 60 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ನಾಗರಿಕರೆಂದು ಊಹಿಸಿ ಉತ್ತರಿಸುತ್ತಿದ್ದೇನೆ. ನಿಮಗೆ ಈ ಕೆಳಗಿನ ಆಯ್ಕೆಗಳಿವೆ;

ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಸದೃಢ ಖಾಸಗಿ ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿ ಇರಿಸುವುದು ಉತ್ತಮ ಆಯ್ಕೆ. ಇವುಗಳಲ್ಲಿ ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯುವ ಠೇವಣಿ ಯೋಜನೆ ಇದ್ದು, ಅಗತ್ಯವಿದ್ದಲ್ಲಿ ಠೇವಣಿಯನ್ನು ಅವಧಿಗೆ ಮೊದಲು ಹಿಂಪಡೆಯುವ ಸೌಲಭ್ಯವೂ ಇರುತ್ತದೆ. ಅದೇ ರೀತಿ, ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ ಮತ್ತು ಅವಧಿ ಠೇವಣಿಗಳು ಸುರಕ್ಷಿತವಾಗಿದ್ದು, ಸರ್ಕಾರದ ಭದ್ರತೆ ಇರುವ ಕಾರಣ ಅಪಾಯ ಬಹಳ ಕಡಿಮೆ.

ಹೂಡಿಕೆ ಮಾಡುವ ಮೊದಲು ಹಣವನ್ನು ಒಂದೇ ಕಡೆಯಲ್ಲಿ ತೊಡಗಿಸದೆ ವಿವಿಧ ಸುರಕ್ಷಿತ ಆಯ್ಕೆಗಳಲ್ಲಿ ಹಂಚಿಕೆ ಮಾಡುವುದು ಉತ್ತಮ. ಅಗತ್ಯವಿದ್ದಲ್ಲಿ ಪ್ರಮಾಣಿತ ಹಣಕಾಸು ಸಲಹೆಗಾರರ ಸಲಹೆ ಪಡೆಯುವುದು ಲಾಭದಾಯಕ ಆಗಬಹುದು. ಹಾಗಿದ್ದಲ್ಲಿ, ಸ್ವಲ್ಪ ಮೊತ್ತವನ್ನು ಸಾಲಪತ್ರ ಆಧಾರಿತ ಮ್ಯೂಚುವಲ್ ಫಂಡ್‌ಗಳಾದ ಲಿಕ್ವಿಡ್ ಫಂಡ್, ಅಲ್ಟ್ರಾ ಶಾರ್ಟ್ ಟರ್ಮ್ ಫಂಡ್ ಅಥವಾ ಶಾರ್ಟ್ ಡ್ಯುರೇಷನ್ ಫಂಡ್‌ಗಳಲ್ಲಿ ತೊಡಗಿಸುವುದನ್ನೂ ಪರಿಗಣಿಸಬಹುದು. ಈಕ್ವಿಟಿ ಆಧಾರಿತ ಸೇವಿಂಗ್ಸ್ ಫಂಡ್ ಕೂಡ ಉತ್ತಮ ಆಯ್ಕೆ. ಇವು ಬ್ಯಾಂಕ್ ಠೇವಣಿಗಿಂತ ಸ್ವಲ್ಪ ಹೆಚ್ಚಿನ ಲಾಭ ನೀಡುವ ಸಾಧ್ಯತೆ ಇದ್ದರೂ, ಅಲ್ಪ ಪ್ರಮಾಣದಲ್ಲಿ ಮಾರುಕಟ್ಟೆ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತವೆ.

***

ನಾನು ಒಂದು ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದು, ಕಳೆದ ಹಲವು ವರ್ಷಗಳಿಂದ ವಿವಿಧ ಕಂಪನಿಗಳ ಷೇರುಗಳಲ್ಲಿ ನಿಯಮಿತವಾಗಿ ದೀರ್ಘಾವಧಿಗೆ ಹೂಡಿಕೆ ಮಾಡುತ್ತಿದ್ದೇನೆ. ಈ ಹೂಡಿಕೆಗಳು ನನಗೆ ಉತ್ತಮ ಲಾಭ ನೀಡಿದ್ದು, ಅವುಗಳನ್ನು ನಾನು ಮಾರಾಟದ ಸಂದರ್ಭದಲ್ಲಿ ಸಂಪೂರ್ಣವಾಗಿ ದೀರ್ಘಾವಧಿ ಹೂಡಿಕೆಗಳಾಗಿರುವಂತೆ ನೋಡಿಕೊಂಡಿದ್ದೇನೆ. ಇತ್ತೀಚೆಗೆ ನಾನು ಹೂಡಿಕೆ ಮಾಡಿದ್ದ ಎಫ್‌ಎಂಸಿಜಿ ವಲಯದ ಒಂದು ಕಂಪನಿ ಎರಡಾಗಿ ವಿಭಾಗ ಆಗಿದೆ. ಅದರ ಹೋಟೆಲ್ ವ್ಯವಹಾರವನ್ನು ಪ್ರತ್ಯೇಕ ಕಂಪನಿಯಾಗಿ ಬೇರ್ಪಡಿಸಲಾಗಿದೆ, ಅದರ ಪರಿಣಾಮವಾಗಿ ನನ್ನ ಬಳಿ ಇದ್ದ ಮೂಲ ಕಂಪನಿಯ ಷೇರುಗಳ ಜೊತೆಗೆ ಬೇರೆಯಾದ ಹೊಸ ಕಂಪನಿಯ ಷೇರುಗಳನ್ನೂ ನನಗೆ ಹಂಚಿಕೆ ಮಾಡಲಾಗಿದೆ.

ಬೇರೆಯಾದ ಈ ಹೊಸ ಕಂಪನಿಯ ಷೇರುಗಳ ಮಾರುಕಟ್ಟೆ ಮೌಲ್ಯವು ನನ್ನ ಮೂಲ ಹೂಡಿಕೆಯ ಹೋಲಿಕೆಯಲ್ಲಿ ಈಗಾಗಲೇ ಉತ್ತಮ ಲಾಭದಲ್ಲಿದೆ. ಇಂತಹ ಸಂದರ್ಭದಲ್ಲಿ, ನಾನು ಬೇರೆಯಾದ ಕಂಪನಿಯ ಷೇರುಗಳನ್ನು ಮಾರಾಟ ಮಾಡಿದರೆ, ದೀರ್ಘಾವಧಿ ಅಥವಾ ಅಲ್ಪಾವಧಿ ಬಂಡವಾಳ ವೃದ್ಧಿ ತೆರಿಗೆ ಹೇಗೆ ಅನ್ವಯವಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಬೇಕಾಗಿದೆ. ಕಂಪನಿ ಎರಡಾಗಿದ್ದರ ಮೂಲಕ ನನಗೆ ದೊರೆತ ಷೇರುಗಳ ಖರೀದಿ ವೆಚ್ಚವನ್ನು ಯಾವ ರೀತಿಯಲ್ಲಿ ಲೆಕ್ಕ ಹಾಕಬೇಕು? ಹೂಡಿಕೆಯ ಅವಧಿಯನ್ನು ಮೂಲ ಕಂಪನಿಯ ಷೇರುಗಳನ್ನು ಖರೀದಿಸಿದ ದಿನಾಂಕದಿಂದಲೇ ಪರಿಗಣಿಸಲಾಗುತ್ತದೆಯೇ?

– ದೇವರಾಜ್, ನೆಲಮಂಗಲ

ಉತ್ತರ: ಕಂಪನಿ ಪ್ರತ್ಯೇಕಗೊಳ್ಳುವ ಸಂದರ್ಭದಲ್ಲಿ ನೀಡಲಾದ ಷೇರುಗಳ ಮಾರಾಟದ ವೇಳೆ ಅನ್ವಯಿಸುವ ತೆರಿಗೆಯನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 2(19ಎಎ) ಪ್ರಕಾರ ನಿರ್ಧರಿಸಲಾಗುತ್ತದೆ. ಇದರ ಪ್ರಕಾರ ಕೆಲವು ಷರತ್ತುಗಳನ್ನು ಪೂರೈಸಿದಲ್ಲಿ, ಪ್ರತ್ಯೇಕ ಆಗುವ ಸಂದರ್ಭದಲ್ಲೇ ಷೇರುಗಳನ್ನು ಹಂಚಿಕೆ ಮಾಡುವುದು ತೆರಿಗೆ ಪಾವತಿಯ ಉದ್ದೇಶದಿಂದ ವರ್ಗಾವಣೆ ಎಂದು ಪರಿಗಣಿಸಲಾಗುವುದಿಲ್ಲ. ಅಂದರೆ, ಮೂಲ ಕಂಪನಿಯ ಷೇರುಗಳನ್ನು ಹೊಂದಿರುವ ಷೇರುದಾರರಿಗೆ ಪ್ರತ್ಯೇಕಗೊಂಡ ಕಂಪನಿಯ ಷೇರುಗಳನ್ನು ನೀಡಿದಾಗ, ಆ ಹಂಚಿಕೆಯ ಸಮಯದಲ್ಲಿ ಯಾವುದೇ ಬಂಡವಾಳ ವೃದ್ಧಿ ತೆರಿಗೆ ಇರುವುದಿಲ್ಲ.

ಪ್ರತ್ಯೇಕಗೊಂಡ ಕಂಪನಿಯ ಷೇರುಗಳನ್ನು ನಂತರ ಮಾರಾಟ ಮಾಡುವಾಗ ಮಾತ್ರ ಬಂಡವಾಳ ವೃದ್ಧಿ ತೆರಿಗೆ ಅನ್ವಯವಾಗುತ್ತದೆ. ಈ ಸಂದರ್ಭದಲ್ಲಿ ಖರೀದಿ ವೆಚ್ಚವನ್ನು ಸೆಕ್ಷನ್ 49(2ಸಿ) ಮತ್ತು 49(2ಡಿ) ಪ್ರಕಾರ ಲೆಕ್ಕ ಹಾಕಬೇಕು. ಮೂಲ ಕಂಪನಿಯ ಷೇರುಗಳ ಖರೀದಿ ವೆಚ್ಚವನ್ನು ಕಂಪನಿ ಪ್ರತ್ಯೇಕವಾಗುವ ಮೊದಲು ಇರುವ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಮೂಲ ಕಂಪನಿ ಮತ್ತು ಪ್ರತ್ಯೇಕಗೊಂಡ ಕಂಪನಿಯ ನಡುವೆ ಅನುಪಾತದಲ್ಲಿ ಹಂಚಿಕೆ ಮಾಡಬೇಕು. ಪ್ರತ್ಯೇಕಗೊಂಡ ಕಂಪನಿಗೆ ಹಂಚಿಕೆ ಮಾಡಿದ ಮೌಲ್ಯವೇ ಆ ಷೇರುಗಳ ಖರೀದಿ ವೆಚ್ಚ. ಹೂಡಿಕೆಯ ಅವಧಿಯ ದೃಷ್ಟಿಯಿಂದ, ಸೆಕ್ಷನ್ 2(42ಎ) ಪ್ರಕಾರ ಪ್ರತ್ಯೇಕಗೊಂಡ ಕಂಪನಿಯ ಷೇರುಗಳ ಹೂಡಿಕೆಯ ಅವಧಿಯನ್ನು ಮೂಲ ಕಂಪನಿಯ ಷೇರುಗಳನ್ನು ಖರೀದಿಸಿದ ದಿನಾಂಕದಿಂದಲೇ ಲೆಕ್ಕ ಹಾಕಲಾಗುತ್ತದೆ.

ಆದ್ದರಿಂದ, ಮೂಲ ಷೇರುಗಳನ್ನು 12 ತಿಂಗಳಿಗಿಂತ ಹೆಚ್ಚು ಅವಧಿಗೆ ಹೊಂದಿದ್ದರೆ, ಮಾರಾಟದಿಂದ ಸಿಗುವ ಲಾಭವನ್ನು ದೀರ್ಘಾವಧಿ ಬಂಡವಾಳ ವೃದ್ಧಿ ಎಂದು ಪರಿಗಣಿಸಲಾಗುತ್ತದೆ ಮತ್ತು ಸೆಕ್ಷನ್ 112ಎ ಪ್ರಕಾರ ₹1.25 ಲಕ್ಷ ಮೀರಿದ ಲಾಭಕ್ಕೆ ಶೇ 12.5ರಷ್ಟು ತೆರಿಗೆ ವಿಧಿಸಲಾಗುತ್ತದೆ. ತೆರಿಗೆ ಅನ್ವಯಿಸುವ ಆದಾಯ ಲೆಕ್ಕ ಹಾಕುವಾಗ ಅಗತ್ಯ ವಿವರಗಳು, ದಾಖಲೆ ದಿನಾಂಕದ ಮೌಲ್ಯ, ಷೇರು ಹಂಚಿಕೆ ಅನುಪಾತ, ಖರೀದಿ ವೆಚ್ಚ ಹಂಚಿಕೆ ಮತ್ತು ಮಾರಾಟದ ಮೌಲ್ಯಗಳನ್ನು ಸರಿಯಾಗಿ ಉಲ್ಲೇಖಿಸುವುದು ಅಗತ್ಯ. ಇದಕ್ಕಾಗಿ ನಿಖರ ಮಾಹಿತಿಯೊಂದಿಗೆ ಪರಿಣತ ತೆರಿಗೆ ಸಲಹೆಗಾರರನ್ನು ಸಂಪರ್ಕಿಸುವುದು ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.