ADVERTISEMENT

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಪ್ರಮೋದ ಶ್ರೀಕಾಂತ ದೈತೋಟ
Published 15 ಜನವರಿ 2025, 0:30 IST
Last Updated 15 ಜನವರಿ 2025, 0:30 IST
<div class="paragraphs"><p>ಹೂಡಿಕೆ–ಪ್ರಾತಿನಿಧಿಕ ಚಿತ್ರ</p></div>

ಹೂಡಿಕೆ–ಪ್ರಾತಿನಿಧಿಕ ಚಿತ್ರ

   

ಪ್ರಶ್ನೋತ್ತರ | ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

-ಶೇಖರ್ ಎಸ್.ಆರ್., ದೊಡ್ಡಬಳ್ಳಾಪುರ.

ADVERTISEMENT

ನಾನು ಇತ್ತೀಚಿನ ಕೆಲವು ತಿಂಗಳಿನಿಂದ ಈಕ್ವಿಟಿ ವಿಭಾಗದ ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದೇನೆ. ಬಹುತೇಕ ಮಾಹಿತಿ ಪ್ರಕಾರ ಕಂಪನಿಯ ಮೂಲ ಮಾಹಿತಿ ಆಧರಿಸಿ ಹೂಡಿಕೆ ಮಾಡಬೇಕೆಂದು ಹೇಳುತ್ತಾರೆ. ಅದೇ ರೀತಿ ಇನ್ನೊಂದು ಅಭಿಪ್ರಾಯದ ಪ್ರಕಾರ ಟೆಕ್ನಿಕಲ್ ಎನಾಲಿಸಿಸ್ ಆಧರಿಸಿ ಹೂಡಿಕೆ ಮಾಡಬೇಕು ಎಂದು ಸಲಹೆ ನೀಡುತ್ತಾರೆ. ನಮ್ಮ ಹೂಡಿಕೆಗೆ ಯಾವುದು ಸೂಕ್ತ ಮತ್ತು ಇವನ್ನು ಹೇಗೆ ಉಪಯೋಗಿಸಿಕೊಳ್ಳಬಹುದು. ಈ ಬಗ್ಗೆ ಮಾಹಿತಿ ನೀಡಿ.

ಯಾವುದೇ ಕಂಪನಿಯ ಫಂಡಮೆಂಟಲ್ ಮಾಹಿತಿ ಹಾಗೂ ಟೆಕ್ನಿಕಲ್ ಎನಾಲಿಸಿಸ್- ಈ ಎರಡೂ ವಿಚಾರಗಳು ಭಿನ್ನವಾಗಿರುತ್ತವೆ. ಇವುಗಳನ್ನು ಪ್ರತ್ಯೇಕವಾಗಿ ಅಥವಾ ಎರಡನ್ನೂ ಸೇರಿಸಿ ನಮ್ಮ ಹೂಡಿಕೆಗೆ ಬಳಸಿಕೊಳ್ಳಬಹುದು. ಆದರೆ, ಇವುಗಳ ಸರಿಯಾದ ಮಾಹಿತಿ ಹಾಗೂ ಬಳಸಿಕೊಳ್ಳಬೇಕಾದ ಅರಿವು ನಮಗಿರಬೇಕು. ಫಂಡಮೆಂಟಲ್ ಮಾಹಿತಿ ಕಂಪನಿಯ ಬಗೆಗಿನ ಚಾರಿತ್ರಿಕ ಆರ್ಥಿಕ ಮಾಹಿತಿ ಹಾಗೂ ಆಡಳಿತ ಮಂಡಳಿಯ ಮುಂದಿನ ದಿಕ್ಸೂಚಿ ನಿರ್ಧಾರಗಳನ್ನು ಗ್ರಹಿಸಿ ಉದ್ದೇಶಿತ ಕಂಪನಿಯಲ್ಲಿ ಹೂಡಿಕೆ ಮಾಡಬಹುದೇ, ಬೇಡವೇ ಎಂಬ ಬಗ್ಗೆ ನಮಗೆ ಮಾಹಿತಿ ನೀಡುತ್ತದೆ. ನಮ್ಮ ಯಾವುದೇ ನಿರ್ಧಾರಕ್ಕೆ ಪುಷ್ಟಿ ನೀಡುವ, ಕಂಪನಿಯ ಬಗೆಗಿನ ಒಟ್ಟು ಆರ್ಥಿಕ ಸ್ಥಿತಿಗತಿಗಳ ಅಧ್ಯಯನವಾಗಿದೆ. ಇದು ದೂರಗಾಮಿ ಉದ್ದೇಶ ಹೊಂದಿದ್ದು, ದೀರ್ಘಾವಧಿ ಹೂಡಿಕೆದಾರರಿಗೆ ಹೆಚ್ಚು ನೆರವಾಗುತ್ತದೆ.

ಆದರೆ, ಟೆಕ್ನಿಕಲ್ ಎನಾಲಿಸಿಸ್ ಅನೇಕ ಕಾಲಘಟ್ಟದ ಅಂತರದಲ್ಲಿ ಮೂಡಿಬಂದ ಚಾರ್ಟ್‌ಗಳ ನೆರವಿನಿಂದ ಯಾವ ಮಟ್ಟದ ಬೆಲೆ ಖರೀದಿಗೆ ಯೋಗ್ಯ ಹಾಗೂ ಯಾವ ಹಂತದಲ್ಲಿ ಷೇರುಗಳ ಬೇಡಿಕೆ, ಪೂರೈಕೆ ಹೆಚ್ಚಾಗಿದೆ ಎಂದು ತಿಳಿದು ನಡೆಸುವ ವ್ಯವಹಾರಕ್ಕೆ ಹೆಚ್ಚು ನೆರವಾಗುತ್ತದೆ. ಇದು ಅಧಿಕವಾಗಿ ದಿನವಹಿ, ಅಲ್ಪಾವಧಿ ಕಾಲಕ್ಕೆ ವಹಿವಾಟು ಮಾಡುವ ಮಂದಿಗೆ ನೆರವಾಗುತ್ತದೆ. ಈ ರೀತಿಯ ಟೆಕ್ನಿಕಲ್ ಎನಾಲಿಸಿಸ್ ಆಧಾರದಲ್ಲಿ ವ್ಯವಹರಿಸಲು ಆ ಬಗ್ಗೆ ಸಾಕಷ್ಟು ತರಬೇತಿ ಅಗತ್ಯ. ಆ ಬಳಿಕವೇ ಯಾವುದೇ ವಹಿವಾಟು ಸೂಕ್ತ.

ಅಲ್ಲದೆ, ಫಂಡಮೆಂಟಲ್ ಆಧಾರದಲ್ಲಿ ಆಯ್ಕೆ ಮಾಡಲಾದ ಕಂಪನಿಗಳಲ್ಲಿ ದೀರ್ಘಾವಧಿ ಸಮಯಕ್ಕೆ ಯಾವ ಹಂತದಲ್ಲಿ ಖರೀದಿ ಮಾಡಬಹುದು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಇದು ಹೆಚ್ಚುವರಿ ನೆರವಾಗುತ್ತದೆ. ಹೀಗಾಗಿ, ದೀರ್ಘಾವಧಿ ಹೂಡಿಕೆದಾರರು ಎರಡೂ ವಿಧದ ಮಾಹಿತಿಯ ಆಧಾರದಲ್ಲಿ ಹೂಡಿಕೆ ನಿರ್ಧಾರ ಕೈಗೊಳ್ಳಲು ನೆರವಾಗುತ್ತದೆ. ಅಲ್ಲದೆ, ಅನೇಕ ಬಾರಿ ದಿನವಹಿ ಬರುವ ವಾಣಿಜ್ಯ ವರ್ತಮಾನಗಳು, ಕಂಪನಿಯ ಫಂಡಮೆಂಟಲ್ ಮಾಹಿತಿ ಹಾಗೂ ಟೆಕ್ನಿಕಲ್ ಎನಾಲಿಸಿಸ್ ಅಲ್ಲದೆ ಪ್ರತ್ಯೇಕ  ಪರಿಣಾಮವನ್ನೂ ಬೀರಬಲ್ಲದು.

-ನಯನಾ ರಾವ್, ವೈಟ್‌ಫೀಲ್ಡ್, ಬೆಂಗಳೂರು.

ಪ್ರಶ್ನೆ:ನನ್ನ ಮಗ ವಿದೇಶದಲ್ಲಿದ್ದಾನೆ. ಕೆಲವು ವರ್ಷಗಳ ಹಿಂದೆ ಆತ ಬೆಂಗಳೂರಿನಲ್ಲಿ ಒಂದು ಫ್ಲ್ಯಾಟ್ ಕೊಂಡುಕೊಂಡಿದ್ದ. ಆತನೊಂದಿಗೆ ನಾವೂ ಅದರಲ್ಲಿ ವಾಸಿಸುತ್ತಿದ್ದೆವು. ಆದರೆ, ಆತನ ಉದ್ಯೋಗದ ನಿಮಿತ್ತ ವಿದೇಶಕ್ಕೆ ತೆರಳಿದ ಕಾರಣ ಕೆಲಕಾಲ ಮನೆ ಖಾಲಿ ಇದೆ. ನಾವು ಯಾರ ನೆರವಿಲ್ಲದೆ ಅಲ್ಲಿ ವಾಸಿಸುವುದು ಕಷ್ಟವಾದ ಕಾರಣ ಬೇರೆಡೆಗೆ ನಾವು ನಮ್ಮ ವಾಸ ಬದಲಿಸಿದ್ದೇವೆ. ಈ ನಡುವೆ ಮನೆ ಬಾಡಿಗೆಗೆ ನೀಡುವ ಯೋಚನೆ ಮಾಡಿದ್ದೇವೆ.

ನನ್ನ ಪ್ರಶ್ನೆ ಏನೆಂದರೆ ನನ್ನ ಮಗನ ಹೆಸರಲ್ಲಿರುವ ಮನೆಯನ್ನು ಬಾಡಿಗೆಗೆ ಕೊಟ್ಟರೆ  ಅದರ ಬಾಡಿಗೆಯನ್ನು ನಾವು ಪಡೆಯಬಹುದೇ ಹಾಗೂ ಆ ಮೊತ್ತದಿಂದ ನಮ್ಮ ಖರ್ಚು ಹೊಂದಿಸುವ ಯೋಜನೆ ಇದೆ. ಮನೆಯ ಒಡೆತನ ಮಗನ ಹೆಸರಲ್ಲಿ ಇರುವ ಕಾರಣ ಬಾಡಿಗೆದಾರರು ಅವನ ಹೆಸರಲ್ಲೇ ಬಾಡಿಗೆ ಕೊಡಬೇಕೇ? ಹಾಗಿದ್ದರೆ, ಅದಕ್ಕೆ ಆತನ ವಿದೇಶಿ ಬ್ಯಾಂಕ್ ಖಾತೆ ನೀಡಬೇಕೇ ಅಥವಾ ಅದಕ್ಕೆ ಪರ್ಯಾಯ ವ್ಯವಸ್ಥೆ ಇದೆಯೇ? ಈ ಆದಾಯಕ್ಕೆ ತೆರಿಗೆ ಬರುವುದೇ? ತಿಳಿಸಿ ಕೊಡಿ.

ನಿಮ್ಮ ವಿಚಾರದಲ್ಲಿ ಎರಡು ವಿಷಯಗಳ ನಿರ್ಣಯ ಅಗತ್ಯ. ಮೊದಲನೆಯದು ನಿಮ್ಮ ಮಗನ ಹೆಸರಲ್ಲಿರುವ ಮನೆಯನ್ನು ಬಾಡಿಗೆಗೆ ನೀಡಿದಾಗ ಅದರಿಂದ ಬರುವ ಬಾಡಿಗೆ ನಿಮ್ಮ ಹೆಸರಿಗೆ ಪಾವತಿಸುವಂತೆ ಬಾಡಿಗೆದಾರರಿಗೆ ಆದೇಶ ನೀಡಿದಾಗ ಆಗುವ ತೆರಿಗೆ ಪರಿಣಾಮಗಳಾಗಿವೆ. ಎರಡನೆಯದು ನಿಮ್ಮ ಮಗನ ಹೆಸರಲ್ಲೇ ಬಾಡಿಗೆ ಆದಾಯ ಜಮಾ ಆಗುವಂತೆ ಮಾಡಿದಾಗ ಆಗುವ ತೆರಿಗೆ ಪರಿಣಾಮಗಳೇನು ಎಂಬುದಾಗಿದೆ.

ಯಾವುದೇ ವ್ಯಕ್ತಿಯ ಹೆಸರಲ್ಲಿರುವ ಆಸ್ತಿಯನ್ನು ವರ್ಗಾಯಿಸದೆ ಕೇವಲ ಬಾಡಿಗೆ ಪಡೆಯಲು ಅವಕಾಶ ಮಾಡಿಕೊಟ್ಟಾಗ, ಅಂತಹ ಆದಾಯದ ಮೇಲೆ ತೆರಿಗೆ ಯಾರು ಕೊಡಬೇಕೆನ್ನುವ ಪ್ರಶ್ನೆ ಬರುತ್ತದೆ. ಬಾಡಿಗೆ ಆದಾಯಕ್ಕೆ ಸಂಬಂಧಿಸಿ, ಆಸ್ತಿ ಯಾರ ಒಡೆತನದಲ್ಲಿದೆಯೊ ಅವರೇ ತೆರಿಗೆ ಪಾವತಿಗೆ ಬಾಧ್ಯಸ್ಥರು. ನಿಮ್ಮ ವಿಚಾರದಲ್ಲೂ ಇದು ಅನ್ವಯಿಸುತ್ತದೆ. ಒಂದು ವೇಳೆ ನೀವು ಆಂತರಿಕವಾಗಿ ನಿಮ್ಮ ಸೌಕರ್ಯಕ್ಕೆ ಸಂಬಂಧಿಸಿ ಬಾಡಿಕೆ ವರ್ಗಾಯಿಸಿಕೊಂಡರೂ ತೆರಿಗೆಯ ಉತ್ತರದಾಯಿತ್ವ ನಿಮ್ಮ ಮಗನ ಹೆಸರಲ್ಲೇ ಇರುತ್ತದೆ.

ಇನ್ನೂ ಕೆಲವು ವಿಚಾರ ಗಮನಿಸಬೇಕಾದದ್ದೇನೆಂದರೆ ಈ ಸಂಬಂಧಿತ ಯಾವುದೇ ಸಾಲದ ಮೇಲಿನ ಬಡ್ಡಿ ವಿನಾಯಿತಿ, ಆಸ್ತಿ ತೆರಿಗೆ ಸಂಬಂಧಿತ ರಿಯಾಯಿತಿ ಇತ್ಯಾದಿ ಮೂಲ ಮಾಲೀಕರಿಗೆ ಮಾತ್ರವೇ ಸಿಗುತ್ತದೆ. ನಿಮ್ಮ ವಿಚಾರದಲ್ಲಿ ಆದಾಯವನ್ನು ನಿಮ್ಮ ಮಗನ ಹೆಸರಿನಲ್ಲೇ ಘೋಷಿಸುವುದು ಆದಾಯ ತೆರಿಗೆ ನಿಯಮಗಳಂತೆ ಸರಿಯಾಗಿದೆ. ರಿಟರ್ನ್ಸ್ ಸಲ್ಲಿಸುವ ಮೊದಲು ನಿಮ್ಮ ಸಮೀಪದ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸಿ ಕೊಡಿ.

ಇನ್ನು ನಿಮ್ಮ ಪುತ್ರನ ಹೆಸರಲ್ಲಿ ನಾನ್ ರೆಸಿಡೆಂಟ್ ಆರ್ಡಿನರಿ ಅಕೌಂಟ್ (ಎನ್‌ಆರ್‌ಒ) ತೆರೆಯಲು ಅವಕಾಶವಿದೆ. ಯಾವುದೇ ವ್ಯಕ್ತಿ ವಿದೇಶದಲ್ಲಿದ್ದಾಗ ಹಾಗೂ ಆತ ಅನಿವಾಸಿ ಭಾರತೀಯನಾಗಿದ್ದರೆ (ಎನ್‌ಆರ್‌ಐ) ಹಾಗೂ ಆತನಿಗೆ ಭಾರತೀಯ ಮೂಲದಿಂದ ಆದಾಯ ಬರುವುದಿದ್ದರೆ ಭಾರತದ ಯಾವುದೇ ಬ್ಯಾಂಕ್ ಶಾಖೆಗಳಲ್ಲಿ ಎನ್‌ಆರ್‌ಒ ಖಾತೆ ತೆರೆಯುವ ಅವಕಾಶ ಇದೆ. ಅಲ್ಲದೆ, ನೀವು ಆ ಖಾತೆಗೆ ಜಂಟಿ ಖಾತೆದಾರರಾಗಬಹುದು ಹಾಗೂ ಖಾತೆಯನ್ನು ನಿರ್ವಹಿಸಬಹುದು.

ಆದರೆ, ಯಾವುದೇ ಹಣ ವರ್ಗಾವಣೆ ಸಂದರ್ಭ ಬಂದಾದ ಸಮರ್ಪಕವಾದ ತೆರಿಗೆ ಕಡಿತ ಇತ್ಯಾದಿ ಮಾಡಲಾಗಿದೆಯೇ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲು ಫಾರಂ 15ಸಿಎ/15ಸಿಬಿ ನೀಡಬೇಕಾಗುತ್ತದೆ. ಈ ವಿಚಾರವನ್ನು ಗಮನದಲ್ಲಿಟ್ಟು ನೀವು ಸಮೀಪದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದು.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ | ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.