
ನಾನು ಬ್ಯಾಂಕ್ ಒಂದರಲ್ಲಿ ಐದು ವರ್ಷಗಳ ಅವಧಿಗೆ ಚಕ್ರ ಬಡ್ಡಿಯ ಲಾಭ ನೀಡುವ ನಿಶ್ಚಿತ ಠೇವಣಿ (ಕ್ಯೂಮ್ಯುಲೇಟಿವ್ ಫಿಕ್ಸೆಡ್ ಡೆಪಾಸಿಟ್) ಮಾಡಿದ್ದೇನೆ. ಇದರ ಬಡ್ಡಿ ಮೊತ್ತವನ್ನು ಐದು ವರ್ಷಗಳ ನಂತರ ಮಾತ್ರ ಪಾವತಿಸಲಾಗುತ್ತದೆ. ಆದರೆ ಪ್ರತಿ ವರ್ಷ ಇದರ ಮೊತ್ತ ಅಸಲಿಗೆ ಸೇರಿಸಲಾಗುತ್ತದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ, ನಾನು ಪ್ರತಿ ವರ್ಷ ಸಂಚಿತವಾದ ಬಡ್ಡಿಯನ್ನು ವರದಿ ಮಾಡಬೇಕೆ? ಅಥವಾ ಮೆಚ್ಯುರಿಟಿಯ ಸಮಯದಲ್ಲಿ ಸಂಪೂರ್ಣ ಬಡ್ಡಿಯನ್ನು ಒಟ್ಟಾಗಿ ವರದಿ ಮಾಡಬೇಕೆ? ತೆರಿಗೆ ಕಡಿತ ತಡೆಯಲು ಯಾವುದಾದರೂ ಅವಕಾಶ ಇದೆಯೇ?
ರಾಜೇಂದ್ರ ಕುಮಾರ್, ಬೆಂಗಳೂರು
ಉತ್ತರ: ನಿಮಗೆ ಸಿಗುವ ಬಡ್ಡಿ ಆದಾಯ ‘ಇತರ ಆದಾಯ’ ವರ್ಗದಲ್ಲಿ ತೆರಿಗೆಗೊಳಪಡುತ್ತದೆ. ತೆರಿಗೆ ಕಾಯ್ದೆಯ ಸೆಕ್ಷನ್ 145 ಪ್ರಕಾರ, ತೆರಿಗೆದಾರರು ನಗದು ಪದ್ಧತಿ ಅಥವಾ ಮರ್ಕಂಟೈಲ್ ಪದ್ಧತಿ ಎಂಬ ಎರಡು ವಿಧಾನಗಳಲ್ಲಿ ಯಾವುದನ್ನಾದರೂ ಅನುಸರಿಸಬಹುದು. ಆದರೆ ನೀವು ಮಾಡಿಕೊಂಡಿರುವಂತಹ ಚಕ್ರ ಬಡ್ಡಿಯ ಲಾಭ ನೀಡುವ ನಿಶ್ಚಿತ ಠೇವಣಿಯಲ್ಲಿ ಬಡ್ಡಿ ಮೊತ್ತವನ್ನು ಪ್ರತಿ ವರ್ಷ ಸಂಚಯಿಸಿ ಮೂಲಧನಕ್ಕೆ ಸೇರಿಸಲಾಗುತ್ತದೆ. ಅಂದರೆ, ಬಡ್ಡಿ ಪ್ರತಿ ವರ್ಷ ವಾಸ್ತವವಾಗಿ ನಿಮಗೆ ಪಾವತಿಸುತ್ತಿಲ್ಲವಾದರೂ ನಿಮ್ಮ ನಿಶ್ಚಿತ ಠೇವಣಿ (ಎಫ್.ಡಿ) ಖಾತೆಗೆ ಜಮಾ ಮಾಡಿ ಮುಂದಿನ ವರ್ಷಕ್ಕೆ ಅದನ್ನು ಅಸಲು ಎಂದು ಪರಿಗಣಿಸಲಾಗುತ್ತದೆ.
ಸಾಮಾನ್ಯವಾಗಿ ಬ್ಯಾಂಕ್‌ಗಳು ಮರ್ಕಂಟೈಲ್ ಪದ್ಧತಿ ಅನುಸರಿಸಿ ಅವರ ಲೆಕ್ಕ ಪತ್ರಗಳನ್ನು ನಿರ್ವಹಿಸಬೇಕಾಗುತ್ತದೆ. ಹೀಗಾಗಿ ಬಡ್ಡಿಯನ್ನು ಪ್ರತಿ ವರ್ಷಕ್ಕೆ ಲೆಕ್ಕ ಹಾಕಿ, ಅಗತ್ಯವಿದ್ದಲ್ಲಿ ತೆರಿಗೆ ಕಟಾಯಿಸುತ್ತವೆ. ಇದರ ಮಾಹಿತಿ ನಿಮ್ಮ ವಾರ್ಷಿಕ ಮಾಹಿತಿಪತ್ರ (ಎಐಎಸ್) ಮತ್ತು ಫಾರ್ಮ್ 26ಎ ಎಸ್‌ನಲ್ಲಿ ಪ್ರತಿ ವರ್ಷ ದಾಖಲಾಗುತ್ತದೆ. ನೀವು ಬಡ್ಡಿಯನ್ನು ಐದನೆಯ ವರ್ಷ ಒಟ್ಟಾರೆ ವರದಿ ಮಾಡಿದರೆ, ಈ ದಾಖಲೆಗಳೊಂದಿಗೆ ತಾಳೆ ಆಗಲಾರದು ಮತ್ತು ತೆರಿಗೆ ಕಡಿತ ಮಾಡಿದ ಮೊತ್ತ ತಡವಾಗಿ ಉಪಯೋಗಿಸಲು ಸಾಧ್ಯವಾಗಲಾರದು.
ಹೀಗಾಗಿ, ಎರಡೂ ವಿಧಾನಗಳು (ನಗದು ಅಥವಾ ಮರ್ಕಂಟೈಲ್) ಕಾನೂನಾತ್ಮಕವಾಗಿ ಮಾನ್ಯವಾದರೂ, ಪ್ರತಿ ವರ್ಷ ಸಂಚಿತ ಬಡ್ಡಿಯನ್ನು ವರದಿ ಮಾಡುವುದು ಸೂಕ್ತವಾಗಿದೆ. ಇದರಿಂದ ಬ್ಯಾಂಕ್ ದಾಖಲೆಗಳೊಂದಿಗೆ ಹೊಂದಾಣಿಕೆ ಆಗುತ್ತದೆ ಮತ್ತು ತೆರಿಗೆ ಪರಿಶೀಲನೆ ವೇಳೆ ತೊಂದರೆ ತಪ್ಪುತ್ತದೆ. ಕೊನೆಯ ವರ್ಷದಲ್ಲಿ ಕೇವಲ ನಿವ್ವಳ ಬಡ್ಡಿ ಮೊತ್ತದ ವಾಸ್ತವ ಸ್ವೀಕೃತಿ ಮಾತ್ರ ಸಂಭವಿಸುತ್ತದೆ. ಆದರೆ ತೆರಿಗೆ ದೃಷ್ಟಿಯಿಂದ ಬಡ್ಡಿ ಪ್ರತಿ ವರ್ಷವೇ ಘೋಷಿಸುವುದು ಒಳಿತು. ಇನ್ನು ತೆರಿಗೆ ಕಡಿತ ನಿವಾರಿಸಲು, ನಿಮ್ಮ ಒಟ್ಟಾರೆ ಆದಾಯ ತೆರಿಗೆಗೊಳಪಡದಿದ್ದರೆ ಹಾಗೂ ನೀವು ಫಾರಂ 15 ಜಿ/ಎಚ್ ಅನ್ನು ಸಮರ್ಪಕವಾಗಿ ಭರಿಸಿ ಬ್ಯಾಂಕಿಗೆ ಕೊಟ್ಟರೆ, ತೆರಿಗೆ ಕಡಿತವಾಗುವುದನ್ನು ನಿವಾರಿಸಬಹುದು.
ನಾನು ನಿವೃತ್ತ ಬ್ಯಾಂಕ್ ಉದ್ಯೋಗಿ. ನನಗೆ ಸಿಗುವ ಪೆನ್ಶನ್ ಹಾಗೂ ನನ್ನ ನಿವೃತ್ತಿಯ ಸಮಯದಲ್ಲಿ ಸಿಕ್ಕ ಮೊತ್ತವನ್ನು ಕಳೆದ ಕೆಲವು ವರ್ಷಗಳಿಂದ ನಾನು ಹೂಡಿಕೆ ಮಾಡಿದ್ದೇನೆ. ಕಳೆದ ಕೆಲವು ವರ್ಷಗಳ ಹಿಂದೆ ಬ್ಯಾಂಕ್‌ಗಳು ವಿಲೀನವಾದ ಕಾರಣ ನನ್ನ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಇತ್ಯಾದಿ ಕಂಪನಿಯ ದಾಖಲೆಯಲ್ಲಿ ಸರಿಯಾಗಿ ನೋಂದಣಿ ಆಗದೆ, ಕೆಲವು ಬಾರಿ ಡಿವಿಡೆಂಡ್ ನನಗೆ ಬಂದಿಲ್ಲ. ಈ ಅವಧಿಯಲ್ಲಿ ಷೇರು ಹೊಂದಿದ ದಾಖಲೆ ನನ್ನಲ್ಲಿ ಇದೆ. ನಾನು ಇದನ್ನು ತಿಳಿದುಕೊಳ್ಳಲು ಏನು ಮಾಡಬೇಕು. ಹಾಗೂ ಯಾವುದಾದರೂ ಡಿವಿಡೆಂಡ್ ಮೊತ್ತ ನನಗೆ ಬರುವುದಿದ್ದರೆ ಯಾವ ರೀತಿ ನಗದೀಕರಿಸಬಹುದು.
ಶಂಕರ್ ಎಸ್, ತುಮಕೂರು
ಉತ್ತರ: ನೀವು ಪ್ರಶ್ನೆಯಲ್ಲಿ ತಿಳಿಸಿರುವಂತೆ ನಿಮ್ಮ ಬ್ಯಾಂಕಿನ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಸರಿಯಾಗಿ ನೋಂದಣಿ ಆಗದೆ ಇರುವ ಕಾರಣ ನಿಮ್ಮ ಖಾತೆಗೆ ಡಿವಿಡೆಂಡ್ ಜಮಾ ಆಗಿಲ್ಲ ಎನ್ನುವ ಕಾರಣ ಹೇಳಿದ್ದೀರಿ. ಪ್ರಸ್ತುತ ನಿಮ್ಮ ಬಳಿ ಇರುವ ಮಾಹಿತಿಯಂತೆ, ಆಯಾ ವರ್ಷಗಳಲ್ಲಿ ಡಿವಿಡೆಂಡ್ ಘೋಷಿಸಿದ ಸಂದರ್ಭದಲ್ಲಿ ನೀವು ಷೇರು ಹೊಂದಿರುವ ಮಾಹಿತಿಯನ್ನು ನಿಮ್ಮ ಡಿಮ್ಯಾಟ್ ದಾಖಲೆಗಳಿಂದ ನಿಗದಿಪಡಿಸಿಕೊಳ್ಳಿ.
ನೀವು ಮೇಲಿನ ಹಂತದ ನಂತರ, ಮೊದಲು ಆಯಾ ಕಂಪನಿ ಅಥವಾ ಅದರ ಷೇರು ರಿಜಿಸ್ಟ್ರಾರ್ ಅವರನ್ನು ಸಂಪರ್ಕಿಸಿ. ಯಾವ ಯಾವ ವರ್ಷಗಳ ಡಿವಿಡೆಂಡ್ ನಿಮಗೆ ಪಾವತಿ ಆಗದೆ ಉಳಿದಿವೆ ಹಾಗೂ ಇದು ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ ಪ್ರಾಧಿಕಾರಕ್ಕೆ (ಐಇಪಿಎಫ್) ವರ್ಗಾಯಿಸಲ್ಪಟ್ಟಿದೆ ಎಂಬ ವಿವರ ಪಡೆಯಬೇಕು. ಸಾಮಾನ್ಯವಾಗಿ ಡಿವಿಡೆಂಡ್ ಘೋಷಣೆ ಆಗಿ 7 ವರ್ಷದೊಳಗೆ ಷೇರುದಾರ ಡಿವಿಡೆಂಡ್ ಜಮಾ ಪಡೆಯದಿದ್ದರೆ, ಅಂತಹ ಮೊತ್ತವನ್ನು ಐಇಪಿಎಫ್‌ಗೆ ಕಾನೂನು ಪ್ರಕಾರ ವರ್ಗಾಯಿಸಬೇಕಾಗುತ್ತದೆ. ಈ ಮಾಹಿತಿ ಪಡೆದು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ (www.iepf.gov.in) ಲಭ್ಯವಿರುವ ಫಾರಂ –5 ನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿ ಅಪ್‌ಲೋಡ್ ಮಾಡಬೇಕು.
ನಂತರ ಅದರ ಮುದ್ರಿತ ಪ್ರತಿ ಸಹಿತ ಅಗತ್ಯ ದಾಖಲೆಗಳೊಂದಿಗೆ ಸಹಿ ಮಾಡಿ ಕಂಪನಿಯ ನೋಂದಾಯಿತ ಕಚೇರಿಯ ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸಬೇಕು. ಇದರಂತೆ, ಕಂಪನಿಯೂ ತನ್ನ ಪ್ರಕಾರ ಪಾವತಿಯಾಗದೆ ಇರುವ ಡಿವಿಡೆಂಡ್ ಅದಾಗಲೇ ಪ್ರಾಧಿಕಾರಕ್ಕೆ ವರ್ಗಾವಣೆ ಆಗಿದ್ದರೆ, ತಮ್ಮ ದೃಢೀಕರಣದೊಂದಿಗೆ, ಪ್ರಾಧಿಕಾರಕ್ಕೆ ಕಳುಹಿಸುತ್ತಾರೆ. ಅಂತಿಮವಾಗಿ, ಪರಿಶೀಲನೆ ಪೂರ್ಣಗೊಂಡ ಬಳಿಕ ಬಾಕಿ ಇರುವ ಡಿವಿಡೆಂಡ್ ಅಥವಾ ಷೇರುಗಳನ್ನು ಹಕ್ಕುದಾರರ ಹೆಸರಿಗೆ ವರ್ಗಾಯಿಸಲಾಗುತ್ತದೆ. ಒಂದು ವೇಳೆ, 7 ವರ್ಷ ಇನ್ನೂ ಆಗದೆ ಯಾವುದೇ ಮೊತ್ತ ಪ್ರಾಧಿಕಾರಕ್ಕೆ ವರ್ಗಾಯಿಸಲ್ಪಟ್ಟಿರದಿದ್ದರೆ, ಕಂಪನಿಯೇ ತನ್ನ ದಾಖಲೆಗಳನ್ನು ಪರಿಶೀಲಿಸಿ ಡಿವಿಡೆಂಡ್ ಪಾವತಿಸುತ್ತದೆ. ಈ ಬಗ್ಗೆ ಹೆಚ್ಚಿನ ನೆರವನ್ನು ನಿಮ್ಮ ಷೇರು ಬ್ರೋಕರ್ ಮೂಲಕವೂ ಪಡೆಯಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.