ADVERTISEMENT

ಪ್ರಶ್ನೋತ್ತರ: ಮನೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹೇಗೆ ಹಣ ಹೊಂದಿಸಬೇಕು?

ಪ್ರಮೋದ ಶ್ರೀಕಾಂತ ದೈತೋಟ
Published 5 ಆಗಸ್ಟ್ 2025, 21:48 IST
Last Updated 5 ಆಗಸ್ಟ್ 2025, 21:48 IST
   

ನಾನು ಜೀವನಕ್ಕಾಗಿ ಕೇಟರಿಂಗ್ ಉದ್ಯೋಗ ಮಾಡುತ್ತಿದ್ದೇನೆ. ಆದಾಯ ಹಾಗೂ ವೆಚ್ಚವು ಬಹುತೇಕ ನಗದು ರೂಪದಲ್ಲೇ ಇರುತ್ತದೆ. ದೊಡ್ಡ ಸಂಸ್ಥೆಗಳಿಂದ ಬರುವ ಹಣ ಮಾತ್ರ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಆಗ ಅವರು ಶೇ 1ರಷ್ಟು ತೆರಿಗೆ ಕಡಿತ ಮಾಡುತ್ತಾರೆ. ಇಂತಹ ಮೊತ್ತ ಒಂದು ವರ್ಷದಲ್ಲಿ ಸುಮಾರು ಹತ್ತು ಸಾವಿರ ಅಂದಾಜು ಆಗಿದೆ. ಕಳೆದ ವರ್ಷ ಈ ರೀತಿ ತೆರಿಗೆ ಕಡಿತ ಆದ ಮೊತ್ತ ಕೇವಲ ಒಂದೆರಡು ಸಾವಿರ ಮಾತ್ರ ಇತ್ತು.

ನನ್ನ ಪ್ರಶ್ನೆ ಏನೆಂದರೆ, ನಾನು ನಗದು ರೂಪದಲ್ಲೇ ವ್ಯವಹಾರ ಮಾಡುತ್ತಿರುವ ಕಾರಣ, ಈ ತನಕ ಐ.ಟಿ ವಿವರ ಸಲ್ಲಿಸಿಲ್ಲ. ಕಳೆದ ವರ್ಷ ಸಣ್ಣ ಮೊತ್ತದ ಟಿಡಿಎಸ್ ಎಂಬ ಕಾರಣಕ್ಕಾಗಿ ಅದನ್ನು ಮರಳಿ ಪಡೆಯುವ ಅಥವಾ ವಿವರ ಸಲ್ಲಿಸುವ ಬಗ್ಗೆ ಯೋಚಿಸಲಿಲ್ಲ. ನನಗೆ ಈಗ ಮನೆ ನಿರ್ಮಾಣಕ್ಕೆ ಬ್ಯಾಂಕ್ ಸಾಲ ಬೇಕಾಗಿದೆ. ಯಾವ ಬ್ಯಾಂಕ್ ಸಂಪರ್ಕಿಸಿದರೂ, ಹಳೆಯ ಒಂದೆರಡು ವರ್ಷದ ಐ.ಟಿ ವಿವರ ಸಲ್ಲಿಕೆಯ ದಾಖಲೆ ಕೇಳುತ್ತಿದ್ದಾರೆ. ನನ್ನ ಪತ್ನಿ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಆಕೆಯ ಹೆಸರಲ್ಲಿ ತೆರಿಗೆ ಹಾಗೂ ಐ.ಟಿ ವಿವರ ಸಲ್ಲಿಸಲಾಗಿದೆ. ಆದರೆ ನಿವೇಶನ ನನ್ನ ಹೆಸರಲ್ಲಿದೆ. ಈ ಸಂದರ್ಭದಲ್ಲಿ ನಾವು ಹಳೆಯ ವಿವರ ಸಲ್ಲಿಸಲು ಅವಕಾಶ ಇದೆಯೇ? ಇಲ್ಲದಿದ್ದಲ್ಲಿ, ಮುಂದೆ ಈ ವರ್ಷಕ್ಕೆ ಸಂಬಂಧಿಸಿ ಏನು ಮಾಡಬಹುದು?

ಆದಾಯ ತೆರಿಗೆಯ ವಿಚಾರ ಬಂದಾಗ ಕೆಲವರು ಯೋಜನೆ ಹಾಗೂ ಯೋಚನೆ ಮಾಡದೆ ತೆರಿಗೆ ಕೊಡಬೇಕಾಗಬಹುದು ಎಂಬ ಭಾವನೆಯಿಂದ ಅಥವಾ ಅನಗತ್ಯ ಸಮಾಲೋಚನಾ ವೆಚ್ಚ ಮಾಡುವುದು ನಿಷ್ಪ್ರಯೋಜಕ ಎನ್ನುವ ಭಾವನೆಯಿಂದ ತೆರಿಗೆಗೊಳಪಡುವ ಆದಾಯ ಮೀರಿದಾಗಲೂ ವಿವರ ಸಲ್ಲಿಸುವುದಿಲ್ಲ. ನಗದು ವ್ಯವಹಾರ ಇದ್ದಾಗ ಈ ರೀತಿಯ ಅವಗಣನೆ ಇನ್ನೂ ಹೆಚ್ಚು. ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ವಿಚಾರ ಗಮನಕ್ಕೆ ಬರುವುದು, ಆದಾಯ ತೆರಿಗೆ ನೋಟಿಸ್ ಬಂದಾಗ ಅಥವಾ ಬ್ಯಾಂಕ್ ಸಾಲಕ್ಕಾಗಿ ಮೊರೆಹೊಕ್ಕಾಗ ಮಾತ್ರ. ನಿಮ್ಮ ವಿಚಾರದಲ್ಲಿ ಈ ಕೆಳಗಿನ ವಿಚಾರವನ್ನು ಗಮನಿಸಿ ಮುಂದಿನ ನಿರ್ಣಯ ಕೈಗೊಳ್ಳಬಹುದು.
 1. ಕಳೆದ ಆರ್ಥಿಕ ವರ್ಷಕ್ಕೆ (2023-24) ಸಂಬಂಧಿಸಿ ತಡವಾಗಿಯಾದರೂ ತೆರಿಗೆ ವಿವರ ಸಲ್ಲಿಸಲು ಇದ್ದ ಅವಕಾಶ 2024ರ ಡಿಸೆಂಬರ್‌ 31ಕ್ಕೆ ಮುಗಿದಿದೆ. ಹೀಗಾಗಿ, ಆ ಸಂಬಂಧಿತ ವಿಚಾರ ಪ್ರಸ್ತುತವಲ್ಲ. ಒಂದುವೇಳೆ ತೆರಿಗೆ ಅನ್ವಯಿಸುವ ಹಾಗೂ ಪಾವತಿಗೆ ಬರುವ ಆದಾಯವಿದ್ದು, ನಿಜವಾಗಿ ಆದಾಯ ಘೋಷಣೆ ಆಗದಿದ್ದರೆ, ಪ್ರತ್ಯೇಕವಾಗಿ ಐಟಿಆರ್-ಯು ನಮೂನೆ ಬಳಸಿ ಹೆಚ್ಚುವರಿ ದಂಡದೊಡನೆ ಈಗಲೂ ವಿವರ ಸಲ್ಲಿಸಬಹುದು. ನೀವು ಈಗಾಗಲೇ ನಗದು ಆಧಾರಿತ ವ್ಯವಹಾರ ನಡೆಸುತ್ತಿರುವುದರಿಂದ ಈವರೆಗೆ ಆದಾಯ ತೆರಿಗೆ ವಿವರ ಸಲ್ಲಿಸದಿರುವುದು ಉದ್ದೇಶಪೂರ್ವಕ ಅಲ್ಲದಿದ್ದರೂ, ₹2.50 ಲಕ್ಷಕ್ಕಿಂತ ಅಧಿಕ ಆದಾಯ ಇದ್ದಾಗ, ವಿವರ ಸಲ್ಲಿಸಬೇಕಾದುದು ಅನಿವಾರ್ಯ. ನೀವು ವ್ಯವಹಾರ ನಡೆಸುತ್ತಿರುವ ಕಾರಣ ಬರುವ ಆದಾಯ, ನಗದು ಅಥವಾ ಎಲೆಕ್ಟ್ರಾನಿಕ್ ಪಾವತಿಯ ಮೂಲಕ ಎನ್ನುವುದು ಮೊದಲ ಹಂತದಲ್ಲಿ ಪ್ರಸ್ತುತವಲ್ಲ. ಆದರೆ, ನಿಮ್ಮಂತಹ ಸಣ್ಣ ಉದ್ಯಮದವರು ವಾರ್ಷಿಕವಾಗಿ ₹2 ಕೋಟಿಗೂ ಮೀರದ ವ್ಯವಹಾರ ಮಾಡುತ್ತಿದ್ದಾಗ ಹಾಗೂ ಅದರಲ್ಲಿ ಹೆಚ್ಚಿನ ಮೊತ್ತದ ವಹಿವಾಟು ನಗದು ರೂಪದಲ್ಲೇ ಇದ್ದಾಗ, ನಗದು ವಹಿವಾಟಿನ ಮೇಲೆ ಶೇ 8ರಷ್ಟನ್ನು ಹಾಗೂ ಎಲೆಕ್ಟ್ರಾನಿಕ್ ಪಾವತಿಯ ಮೂಲಕ ನಡೆಯುವ ವಹಿವಾಟಿನ ಶೇ 6ರಷ್ಟನ್ನು ಆದಾಯ ಎಂದು ಪರಿಗಣಿಸುವ ಅವಕಾಶ ಸೆಕ್ಷನ್ 44ಎಡಿ ಅಡಿ ಇದೆ. ಇಲ್ಲಿ ಪೂರ್ಣಪ್ರಮಾಣದ ಲೆಕ್ಕಪತ್ರ ನಿರ್ವಹಣೆಯಿಂದ ಸಂಪೂರ್ಣ ವಿನಾಯಿತಿ ಇದೆ. ಈ ಬಗೆಗಿನ ಇನ್ನಷ್ಟು ವಿಚಾರವನ್ನು ನಿಮ್ಮ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ ತಿಳಿದುಕೊಳ್ಳಿ.

ADVERTISEMENT

2. ನೀವು ಸಾಲ ಪಡೆಯಲು ಇರುವ ಸಾಧ್ಯತೆಯ ಕುರಿತು ಹೇಳುವುದಾದರೆ, ಇಂದು ಬಹುತೇಕ ಬ್ಯಾಂಕ್‌ಗಳು ಗೃಹ ನಿರ್ಮಾಣ ಸಾಲವನ್ನು ಜಂಟಿ ಹೆಸರಲ್ಲಿ ನೀಡುತ್ತವೆ. ನಿಮ್ಮ ಪತ್ನಿ ಈಗಾಗಲೇ ವಿವರ ಸಲ್ಲಿಸುತ್ತಿರುವ ಕಾರಣ ಅವರ ಹೆಸರನ್ನೂ ಸೇರಿಸಿ ಸಾಲ ಪಡೆಯುವ ಅವಕಾಶ ಇದೆ. ಈ ಬಗ್ಗೆ ಬ್ಯಾಂಕುಗಳಲ್ಲಿ ವಿಚಾರಿಸಿ. ಮಾತ್ರವಲ್ಲ, ಆರ್ಥಿಕ ವರ್ಷ 2024-25ಕ್ಕೆ ಸಂಬಂಧಿಸಿ, ಸೆಪ್ಟೆಂಬರ್ ತಿಂಗಳ 15ರೊಳಗೆ ನಿಮ್ಮ ಐ.ಟಿ. ವಿವರ ಸಲ್ಲಿಸಿ ಬ್ಯಾಂಕಿಗೆ ಅಗತ್ಯವಿರುವ ಇತ್ತೀಚಿನ ವಿವರ ಒದಗಿಸಿ ಸಾಲ ಪಡೆಯುವ ಅವಕಾಶ ಇನ್ನೂ ಇದೆ.

ನಾಗೇಶ್ ಆಚಾರ್, ಬೆಂಗಳೂರು

ಪ್ರ

ನಾನು ಪ್ರೌಢಶಾಲಾ ಶಿಕ್ಷಕಿ, ವಯಸ್ಸು 45 ವರ್ಷ. ನನ್ನ ಪತಿ ಖಾಸಗಿ ವಕೀಲರಾಗಿದ್ದಾರೆ. ನನಗೆ ಪ್ರಥಮ ಪಿಯುಸಿ ಓದುವ ಮಗಳು ಹಾಗೂ 9ನೇ ತರಗತಿ ಓದುವ ಮಗನಿದ್ದಾನೆ. ನನ್ನ ಮೂಲವೇತನ ₹ 85,600, ತುಟ್ಟಿಭತ್ಯೆ ₹10,486, ಎಚ್‌ಆರ್‌ಎ ₹6,420, ವೈದ್ಯಕೀಯ ಭತ್ಯೆ ₹500. ನನ್ನ ವೇತನದಿಂದ ಕಡಿತವಾಗುವ ಮೊತ್ತ: ಕೆಜಿಐಡಿ ₹17,000 ಎನ್‌ಪಿಎಸ್ ₹9,606 ಹಾಗೂ ಸುಕನ್ಯಾ ಸಮೃದ್ಧಿ ಖಾತೆಗೆ ₹2,000. ಮನೆ ನಿರ್ಮಾಣಕ್ಕಾಗಿ ಒಂದು ನಿವೇಶನ ಕೊಂಡಿದ್ದೇವೆ. ಮನೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹೇಗೆ ಹಣ ಹೊಂದಿಸಬೇಕು? ಯಾವ ರೀತಿ ಆರ್ಥಿಕ ಶಿಸ್ತು ಪಾಲಿಸಬೇಕು? ಕಡಿಮೆ ಪ್ರಮಾಣದಲ್ಲಿ ಗೃಹ ಸಾಲವನ್ನು ತೆಗೆದುಕೊಂಡು ಸ್ವಂತ ಹಣದಿಂದ ಮನೆ ನಿರ್ಮಾಣಕ್ಕಾಗಿ ಹೇಗೆ ಹಣ ಹೊಂದಿಸಬೇಕೆಂದು ತಿಳಿಸಿ.

ನೀವು ಪ್ರೌಢಶಾಲಾ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದು ನಿಮ್ಮ ಪತಿ ಕೂಡ ಆದಾಯ ಗಳಿಸುತ್ತಿದ್ದಾರೆ. ನಿಮ್ಮ ಜಂಟಿ ಆದಾಯದಲ್ಲಿ ನಿಮ್ಮ ಮಾಸಿಕ ಅಗತ್ಯಕ್ಕೆ ತಗಲುವ ವೆಚ್ಚ, ಮಕ್ಕಳ ಶಿಕ್ಷಣ, ವೈದ್ಯಕೀಯ, ಈಗಾಗಲೇ ಆರಂಭಿಸಿರುವ ಹೂಡಿಕೆ, ಮನರಂಜನೆ, ಪ್ರವಾಸ ಹಾಗೂ ಇತರ ಆರ್ಥಿಕ ಪಾವತಿಗಳನ್ನು ಅಂದಾಜಿಸಿ ತಿಂಗಳಲ್ಲಿ ಉಳಿಯುವ ಒಟ್ಟಾರೆ ಮೊತ್ತ ಏನೆಂಬುದನ್ನು ಗೊತ್ತು ಮಾಡಿ. ಇದು ನಿಮ್ಮ ಬಜೆಟ್ ಎಂದೇ ಭಾವಿಸಿ, ಯಾವುದೇ ಅಂಶವನ್ನು ಬಿಡದೆ ಪರಿಗಣಿಸಿ. ತಮ್ಮ ಬಜೆಟ್ ಅನ್ನು ತಮಗಿಂತ ಇತರರು ಸಮರ್ಥವಾಗಿ ಮಾಡಲು ಸಾಧ್ಯವಿಲ್ಲ. ಕಾರಣ ಪ್ರತಿಯೊಬ್ಬರ ಮಾಹಿತಿ-ಅಗತ್ಯ ವೈಯಕ್ತಿಕವಾದುದು. ಆದರೆ ಈ ಮೇಲಿನ ಅಂಶಗಳನ್ನು ಪರಿಗಣಿಸಿ ನಿಮ್ಮ ಉದ್ದೇಶ ಸಾಧನೆ ಆಗುವವರೆಗೆ ಬಜೆಟ್‌ಗೆ ಸೀಮಿತವಾಗಿ ಬದುಕು ಸಾಗಿಸುವ ಸಂಯಮ ಬೆಳೆಸಿಕೊಳ್ಳಿ. ಪ್ರತಿ ತಿಂಗಳೂ ಹೂಡಿಕೆ-ಖರ್ಚಿನ ಮೊತ್ತವನ್ನು ಮೊಬೈಲ್ ಆ್ಯಪ್‌ ಅಥವಾ ಕಂಪ್ಯೂಟರ್ ಮುಖಾಂತರವೂ ದಾಖಲಿಸಿ ಇಟ್ಟು, ಖರ್ಚುಗಳನ್ನು ನಿಯಂತ್ರಣದಲ್ಲಿ ಇಡಬಹುದು. ಉಳಿಕೆಯಾಗುವ ಮೊತ್ತವನ್ನು ನಿಮ್ಮ ಆದ್ಯತೆ ಹಾಗೂ ಆರ್ಥಿಕ ಅಪಾಯದ ಅರಿವಿನ ಆಧಾರದ ಮೇಲೆ ವಿವಿಧ ಹೂಡಿಕೆಗಳಲ್ಲಿ ತೊಡಗಿಸಬಹುದು. ಈ ಬಗ್ಗೆ ನಿಮ್ಮದೇ ಯೋಜನೆ ರೂಪಿಸಿ.

- ರೂಪಾ, ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.