ಪ್ರಾತಿನಿಧಿಕ ಚಿತ್ರ
ಹಣಕಾಸು, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ
-ವೀರೇಶ್, ಯಲಹಂಕ, ಬೆಂಗಳೂರು
ನಾನು ಬೆಂಗಳೂರಿನಲ್ಲಿ ಉದ್ಯೋಗಿ, ನನ್ನ ಪತ್ನಿ ಗೃಹಿಣಿ. ನನ್ನ ಸಂಪಾದನೆಯಿಂದ ಮನೆಯೊಂದನ್ನು ನಿರ್ಮಿಸಿದ್ದು, ಅದನ್ನು ಆಕೆಯ ಹೆಸರಲ್ಲಿ ನೋಂದಾಯಿಸಿದ್ದೇನೆ. ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಖರ್ಚು ಆಕೆಯ ಬ್ಯಾಂಕ್ ಖಾತೆಯಿಂದ ಆಗಿದೆ. ನನ್ನ ಉಳಿತಾಯದ ಬಹುಪಾಲು ಮೊತ್ತವನ್ನು ಆಕೆಯ ಖಾತೆಗೆ ವರ್ಗಾಯಿಸಿ ಈ ಪಾವತಿ ಮಾಡಿದ್ದೇವೆ. ಈ ಮನೆಯನ್ನು ನಾವು ನಿವೃತ್ತಿಯ ಸಮಯದಲ್ಲಿ ಬಳಸಿಕೊಳ್ಳುವ ಯೋಜನೆ ಇದೆ. ಈಗ ನಾವು ಉದ್ಯೋಗಕ್ಕೆ ಅನುಕೂಲ ಆಗಲಿ ಎಂದು ನಗರ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ಇದ್ದೇವೆ. ಹೀಗಾಗಿ ಹೊಸ ಮನೆಯನ್ನು ಬಾಡಿಗೆಗೆ ಕೊಡುವ ಸಾಧ್ಯತೆ ಇದೆ. ಈ ಮನೆ ನಿರ್ಮಾಣಕ್ಕೆ ಬ್ಯಾಂಕಿನಿಂದ ಒಂದಿಷ್ಟು ಸಾಲ ಪಡೆದಿದ್ದೇವೆ. ನನ್ನ ಪ್ರಶ್ನೆ ಏನೆಂದರೆ, ಈ ಬಾಡಿಗೆ ಮೊತ್ತವನ್ನು ಆಕೆ ತೆರಿಗೆಗಾಗಿ ತೋರಿಸಿಕೊಳ್ಳಬೇಕೆ? ಆಕೆಗೆ ಬೇರೆ ಯಾವ ಆದಾಯ ಇಲ್ಲ.
ಉತ್ತರ: ನೀವು ಈಗ ಬಾಡಿಗೆ ಮನೆಯಲ್ಲಿದ್ದು, ಭವಿಷ್ಯದ ಉದ್ದೇಶಕ್ಕೆ ಮನೆ ಕಟ್ಟಿಸಿರುತ್ತೀರಿ. ಈ ಹಂತದಲ್ಲಿ ಸಹಜವಾಗಿ ನಿಮ್ಮ ಪತ್ನಿಯ ಬ್ಯಾ೦ಕ್ ಖಾತೆ ಮೂಲಕ ಮನೆಯ ನಿರ್ಮಾಣಕ್ಕೆ ಸಂಬಂಧಿಸಿ ಹಣ ಸಂದಾಯ ಮಾಡಿರುತ್ತೀರಿ. ಈ ಹಣದ ಮೂಲ ನಿಮ್ಮ ವೇತನದ ಭಾಗವಾಗಿದೆ ಹಾಗೂ ಸಂಬಂಧಿತ ತೆರಿಗೆಯನ್ನು ಕಟ್ಟಿರುತ್ತೀರಿ. ಈ ಮನೆಯನ್ನು ಅವರ ಹೆಸರಲ್ಲಿ ದಾಖಲಿಸಿದ್ದೀರಿ. ಇದು ಆದಾಯ ತೆರಿಗೆಯ ದೃಷ್ಟಿಯಲ್ಲಿ ನಿಮ್ಮ ಪತ್ನಿಗೆ ನೀವು ನೀಡಿರುವ ಉಡುಗೊರೆ ಎಂದೂ ಊಹಿಸಬಹುದು. ಆದರೆ, ಅವರು ಸ್ವತಂತ್ರ ಆದಾಯ ಇಲ್ಲದ ವ್ಯಕ್ತಿಯಾಗಿರುವುದರಿಂದ ಆದಾಯ ತೆರಿಗೆ ಕಾನೂನಿನ ದೃಷ್ಟಿಯಲ್ಲಿ ಈ ವರ್ಗಾವಣೆಯನ್ನು ಪ್ರತ್ಯೇಕ ರೀತಿಯಲ್ಲಿ ಪರಿಗಣಿಸಬೇಕಾಗುತ್ತದೆ.
ಆದಾಯ ತೆರಿಗೆಯ ಸೆಕ್ಷನ್ 64(1)(IV) ಪ್ರಕಾರ ಪತಿ-ಪತ್ನಿಯ ಆದಾಯ ಲೆಕ್ಕ ಹಾಕುವಾಗ, ಸಮರ್ಪಕ ಪರಿಹಾರ ಮೊತ್ತ ನೀಡದೆ ಪರಸ್ಪರ ವರ್ಗಾಯಿಸಿದ ಆಸ್ತಿಯ ಮೇಲೆ ಸಿಗುವ ಆದಾಯವು ಮೂಲತಃ ಅವರಿಬ್ಬರಲ್ಲಿ ಯಾರು ವರ್ಗಾಯಿಸಿರುತ್ತಾರೋ ಅವರದೇ ಹೆಸರಲ್ಲಿ ತೆರಿಗೆಗೆ ಒಳಪಡುತ್ತದೆ. ಮಾತ್ರವಲ್ಲ, ಆದಾಯ ತೆರಿಗೆಯ ಸೆಕ್ಷನ್ 27(1)ರ ಅನ್ವಯ, ಮನೆ ಬಾಡಿಗೆಗೆ ಸಂಬಂಧಿಸಿದಂತೆ, ತೆರಿಗೆ ಪಾವತಿಸಬೇಕಾದ ಮಾಲೀಕರ ಜವಾಬ್ದಾರಿಯ ವಿಚಾರ ಬಂದಾಗಲೂ, ಮಾಲೀಕತ್ವದ ವರ್ಗಾವಣೆಯು ಯಾವುದೇ ಸಮರ್ಪಕ ಪರಿಹಾರ ಮೊತ್ತ ನೀಡದೆ, ಕೇವಲ ಹೆಸರಿಗಾಗಿ ಮಾತ್ರ ವರ್ಗಾಯಿಸಿದಾಗಲೂ, ಅದರ ಒಡೆತನವು ಖರೀದಿಗೆ ಹಣ ನೀಡಿದ ಪತಿ ಅಥವಾ ಪತ್ನಿಯ ಹೆಸರಲ್ಲೇ ನಿರ್ಣಯವಾಗುತ್ತದೆ.
ಹೀಗಾಗಿ, ಮೇಲ್ನೋಟಕ್ಕೆ ನಿಮ್ಮ ಹೊಸ ಮನೆಯ ಒಡೆತನ ನಿಮ್ಮ ಪತ್ನಿಯ ಹೆಸರಲ್ಲಿ ಇದ್ದರೂ, ಕಾನೂನಿನ ದೃಷ್ಟಿಯಲ್ಲಿ ನೀವೇ ಅದರ ನಿಜವಾದ ಮಾಲೀಕರಾಗಿದ್ದೀರಿ. ಈ ಆಸ್ತಿ ಅವರದ್ದೇ ಸಂಪಾದನೆಯ ಭಾಗ ಎಂಬುದನ್ನು ಸಾಬೀತುಪಡಿಸಲು ಇರುವ, ನಿಮ್ಮ ಪತ್ನಿಯ ಹೆಸರಲ್ಲಿ ಸಲ್ಲಿಸಿರುವ ಹಳೆಯ ವರ್ಷಗಳ ತೆರಿಗೆ ವಿವರ ಇಲ್ಲದ ಹೊರತು ಅವರೇ ಅದರ ಮಾಲೀಕರೆನ್ನುವುದು ಸರಿಯಲ್ಲ. ಹೀಗಾಗಿ, ನಿಮ್ಮ ವೇತನ ಆದಾಯ ಅಲ್ಲದೆ, ಬರುವ ಬಾಡಿಗೆ ಆದಾಯವನ್ನು, ಮೇಲಿನ ನಿಯಮಗಳಂತೆ ನಿಮ್ಮ ಆದಾಯದಲ್ಲೇ ಸೇರಿಸಬೇಕಾಗುತ್ತದೆ.
****
-ರವಿಕುಮಾರ್ ಪಿ., ಬೆಂಗಳೂರು
ನಾನು ಪಿಎಸಿಎಲ್ ಎಂಬ ಕಂಪನಿಯಲ್ಲಿ ಕೆಲವು ವರ್ಷಗಳ ಹಿಂದೆ ವಿಮಾ ಪಾಲಿಸಿ ಮಾಡಿಸಿದ್ದು, ಆ ಕಂಪನಿಯನ್ನು ಸೆಬಿ ಮುಟ್ಟುಗೋಲು ಹಾಕಿಕೊಂಡಿದೆ. ಇದು ನಡೆದದ್ದು ಐದಾರು ವರ್ಷಗಳ ಹಿಂದೆ. ನನ್ನ ಪಾಲಿಸಿಯ ಮೆಚುರಿಟಿ ಏಳು ವರ್ಷಗಳ ಹಿಂದೆಯೇ ಆಗಿತ್ತು. ಆದರೆ ಹಣ ಮರಳಿ ಸಿಗಲಿಲ್ಲ. ನಾನು ನನ್ನ ಹಣವನ್ನು ಹಿಂಪಡೆಯಲು ಸೂಕ್ತ ಮಾಹಿತಿ ನೀಡಬೇಕಾಗಿ ವಿನಂತಿ. ನನ್ನಲ್ಲಿ ಎಲ್ಲಾ ಸೂಕ್ತ ದಾಖಲೆ ಇವೆ.
ಉತ್ತರ: ನೀವು ಪ್ರಶ್ನೆಯಲ್ಲಿ ಉಲ್ಲೇಖಿಸಿರುವ ಪಿಎಸಿಎಲ್ ಎಂಬ ಕಂಪನಿಯು ಅನೇಕ ಹೂಡಿಕೆದಾರರಿಗೆ ತಮ್ಮ ಹಣವನ್ನು ಕ್ರಮಬದ್ಧವಾಗಿ ಹಿಂದಿರುಗಿಸುವಲ್ಲಿ ಹಾಗೂ ಹೂಡಿಕೆದಾರರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ 2016ರಲ್ಲಿ ಮಹತ್ವದ ತೀರ್ಪೊಂದನ್ನು ನೀಡಿತು. ಅದರ ಪ್ರಕಾರ, ಹೂಡಿಕೆದಾರರ ಹಿತಾಸಕ್ತಿ ಕಾಯ್ದುಕೊಳ್ಳುವ ಉದ್ದೇಶದಿಂದ, ಸೆಬಿ ಸಂಸ್ಥೆಯ ಮಧ್ಯಸ್ಥಿಕೆಯೊಂದಿಗೆ ನ್ಯಾಯಮೂರ್ತಿ ಆರ್.ಎಂ. ಲೋಧಾ ಅವರ ನೇತೃತ್ವದ ಸಮಿತಿಯೊಂದನ್ನು ರಚಿಸಿ ಸಂಸ್ಥೆಯ ಸುಪರ್ದಿಯಲ್ಲಿದ್ದ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿ, ಹರಾಜು ಪ್ರಕ್ರಿಯೆಯಿಂದ ಸಂಗ್ರಹವಾದ ಹಣವನ್ನು ಹೂಡಿಕೆದಾರರಿಗೆ ಅರ್ಹತೆಯ ಮೇರೆಗೆ ಬಟವಾಡೆ ಮಾಡಿದೆ ಹಾಗೂ ಆ ದಿಸೆಯಲ್ಲಿ ಕಾರ್ಯ ಜಾರಿಯಲ್ಲಿದೆ.
ಮೋಸಹೋದ ಗ್ರಾಹಕರ ಹಣ ಮರಳಿ ಪಡೆಯುವುದಕ್ಕಾಗಿ ಇದ್ದ ಈ ಪ್ರಕ್ರಿಯೆಯಲ್ಲಿ ನೆರವಾಗಲು, ಆಯಾ ರಾಜ್ಯ ಸರ್ಕಾರಗಳ ಮೂಲಕವೂ ಇ-ಸೇವಾ ಕೇಂದ್ರದ ವ್ಯವಸ್ಥೆಯ ಜೊತೆಗೆ, ಅಗತ್ಯ ಮಾಹಿತಿ ಸಲ್ಲಿಸಲು ಅನುಕೂಲವಾಗುವ ರೀತಿಯಲ್ಲಿ ಸೆಬಿ ಪ್ರತ್ಯೇಕವಾದ ಪೋರ್ಟಲ್ (https://www.sebipaclrefund.co.in ) ತೆರಿದಿರುವುದು ನಿಮ್ಮ ಗಮನಕ್ಕೆ ಬಂದಿಲ್ಲ ಎಂದು ಭಾವಿಸಿ ಉತ್ತರಿಸಬೇಕಾಗುತ್ತದೆ. ಅರ್ಹ ಹೂಡಿಕೆದಾರರಿಂದ ಅರ್ಜಿ ಪಡೆಯಲು ಪ್ರತ್ಯೇಕವಾದ ಸಾರ್ವಜನಿಕ ವಿನಂತಿಯನ್ನೂ ಮಾಡಲಾಗಿತ್ತು ಮತ್ತು ಅದರ ವಿಸ್ತರಿಸಿದ ಕಾಲಾವಧಿ 2024ರ ಜೂನ್ 13ರತನಕ ಇತ್ತು ಎಂಬುದು ನಿಮ್ಮ ಗಮನಕ್ಕೆ ಬರದೆ ಇದ್ದಿರಬಹುದೇನೋ.
ಅದೇನೇ ಇದ್ದರೂ, ಸೆಬಿ ಸಾರ್ವಜನಿಕವಾಗಿ ನೀಡಿರುವ ಮಾಹಿತಿ ಪ್ರಕಾರ, ಹೊಸ ವಿನಂತಿ ಸಲ್ಲಿಸಲು ವಂಚಿತ ಗ್ರಾಹಕರು ಕಾಯಬೇಕು. ಪ್ರಸ್ತುತ ₹20,000ದವರೆಗಿನ ವಿನಂತಿಗಳನ್ನಷ್ಟೇ 2025ರ ಮಾರ್ಚ್ 31ರತನಕ ಪುರಸ್ಕರಿಸಲಾಗಿದೆ. ಅದಕ್ಕಿಂತ ಹೆಚ್ಚಿನ ಮೊತ್ತದ ಬಟವಾಡೆಯನ್ನು, ವಿದೇಶದಲ್ಲೂ ಇರುವ ಇನ್ನೂ ಹೆಚ್ಚಿನ ಆಸ್ತಿಗಳ ಮುಟ್ಟುಗೋಲು ಪ್ರಕ್ರಿಯೆ ನಡೆಯುತ್ತಿರುವುದರಿಂದ, ಹಣದ ಲಭ್ಯತೆ ಹಾಗೂ ನಷ್ಟ ಪರಿಹಾರದ ಆದ್ಯತೆ ಕೆಳ ಹಂತದ ಮೊತ್ತದಿಂದ ಮೇಲಿನ ಹಂತಕ್ಕೆ ಸಾಗುವುದರಿಂದ, ಹಣ ಬಿಡುಗಡೆ ಕೂಡ ಇಂತಹ ದೀರ್ಘ ಪ್ರಕ್ರಿಯೆಯಲ್ಲಿ ಅದೇ ರೀತಿ ನಡೆಯುತ್ತದೆ ಎಂಬುದು ಗಮನವಿಡಬೇಕಾದ ಸಂಗತಿ. ಆದರೆ ನಿಮ್ಮ ಹೂಡಿಕೆ ಮಾಹಿತಿ ಹಾಗೂ ಅಗತ್ಯ ದಾಖಲೆಗಳನ್ನು ಇನ್ನೂ ಸಲ್ಲಿಸದಿದ್ದರೆ ಸೆಬಿ ಸಂಸ್ಥೆಗೆ ಅಧಿಕೃತವಾಗಿ ಬರೆದು ಸಲ್ಲಿಸಿ. ನಿಮ್ಮ ಒಟ್ಟಾರೆ ಹೂಡಿಕೆ ಎಷ್ಟಿದೆಯೋ ತಿಳಿದಿಲ್ಲ. ಆದರೂ ಈ ಪ್ರಕ್ರಿಯೆ ಪೂರ್ಣ ಆಗುವವರೆಗೂ ಕಾಯಬೇಕಾಗಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.