ADVERTISEMENT

ಅಡಿಕೆಯ ‘ಓಜಸ್’ ಶಕ್ತಿವರ್ಧಕ

ಸಂಧ್ಯಾ ಹೆಗಡೆ
Published 14 ಜನವರಿ 2020, 19:31 IST
Last Updated 14 ಜನವರಿ 2020, 19:31 IST
ಎಸ್.ಎಂ.ಹೆಗಡೆ
ಎಸ್.ಎಂ.ಹೆಗಡೆ   

ಶಿರಸಿ ತಾಲ್ಲೂಕಿನ ಹುಗ್ಗಿಕೊಪ್ಪವೆಂಬ ಪುಟ್ಟ ಹಳ್ಳಿಯಲ್ಲಿ ಅಡಿಕೆ ತೋಟದ ನಡುವೆ ಮನೆ ಕಟ್ಟಿಕೊಂಡು, ನಿತ್ಯವೂ ಮನೆಯಿಂದ ಪೇಟೆಗೆ ಬರುತ್ತಿದ್ದ ಎಸ್.ಎಂ.ಹೆಗಡೆ ಅವರಿಗೆ, ಅದ್ಯಾಕೋ ಒಮ್ಮೆ ಸಕ್ರಿಯ ರಾಜಕೀಯದಿಂದ ದೂರ ಸರಿಯುವ ಮನಸ್ಸಾಯಿತು. ಜಗುಲಿಯಲ್ಲಿ ಕುಳಿತಾಗಲೆಲ್ಲ ಅವರಿಗೆ ಮೊದಲು ಕಣ್ಣಿಗೆ ಬೀಳುತ್ತಿದ್ದುದೇ ಅಡಿಕೆ. ಇದರಿಂದ ಹೊಸತೇನಾದರೊಂದು ಮಾಡಬೇಕೆಂಬ ಮನಸ್ಸಿನ ತುಡಿತವು ‘ಓಜಸ್’ ಉತ್ಪನ್ನವಾಗಿ ಮಾರುಕಟ್ಟೆಗೆ ಬಂದಿದೆ.

ಚಾಲಿ ಅಡಿಕೆಯಿಂದ ಸಿದ್ಧವಾಗಿರುವ ಈ ಉತ್ಪನ್ನವು ಶಕ್ತಿವರ್ಧಕ. ಟೀ, ಕಾಫಿ ಒಲ್ಲದವರಿಗೆ, ಬೂಸ್ಟ್, ಬೋರ್ನವೀಟಾದಂತೆ ಹಾಲಿನೊಂದಿಗೆ ಕುಡಿಯುವ ಬಿಸಿಯಾದ ಪೇಯ. ತಣ್ಣನೆ ಚಳಿಯಲ್ಲಿ ಬಿಸಿಬಿಸಿಯಾದ ಓಜಸ್ ಡ್ರಿಂಕ್ಸ್ ಕುಡಿದರೆ ಮೈ–ಮನಸ್ಸಿಗೆ ಹಿತಕರ ಅನುಭವಾಗಲಿದೆ.

ಹುಗ್ಗಿಕೊಪ್ಪದಲ್ಲಿ ಸಣ್ಣದೊಂದು ಇಂಡಸ್ಟ್ರಿ ಮಾಡಿಕೊಂಡಿರುವ ಅವರು, ಒಂದು ಕಪ್ ಹಾಲಿಗೆ ಮಿಶ್ರಣ ಮಾಡಿಕೊಂಡು ಕುಡಿಯುವ ಸಣ್ಣ ಸ್ಯಾಚೆಟ್‌ಗಳನ್ನು ಸಿದ್ಧಪಡಿಸುತ್ತಾರೆ. ಆರೆಂಟು ತಿಂಗಳುಗಳ ಹಿಂದೆ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಈ ಉತ್ಪನ್ನ ಶಿರಸಿಯ ಟಿಎಸ್ಎಸ್, ಕದಂಬ ಮಾರ್ಕೆಟಿಂಗ್, ಬೆಂಗಳೂರಿನ ಕೆಲವು ಕಡೆಗಳಲ್ಲಿ ಲಭ್ಯವಿದೆ.

ADVERTISEMENT

ನಡುರಾತ್ರಿ ಹುಟ್ಟಿದ ಓಜಸ್

‘ಕವಳದ ಬಟ್ಟಲಿನಲ್ಲಿ ತಂಬಾಕಿನೊಂದಿಗೆ ಸೇರಿ, ವಿನಾಕಾರಣ ಆರೋಪಿ ಸ್ಥಾನದಲ್ಲಿ ನಿಂತಿರುವ ಅಡಿಕೆ, ವಾಸ್ತವದಲ್ಲಿ ನಿರಪರಾಧಿ. ಅಡಿಕೆಯಲ್ಲಿ ಆರೋಗ್ಯವರ್ಧಕ ಗುಣಗಳಿವೆ. ಪಚನಕ್ರಿಯೆಗೆ ಸಹಕಾರಿಯಾಗಿರುವ ಅಡಿಕೆ ಅಗಿಯುವ ಸಂಪ್ರದಾಯವನ್ನು ಸಾವಿರಾರು ವರ್ಷಗಳಿಂದ ಬೆಳೆಸಿಕೊಂಡು ಬಂದವರು ನಮ್ಮ ಹಿರಿಯರು. ಇದನ್ನು ದೃಢೀಕರಿಸಲು ಅಡಿಕೆ ಆಹಾರವಾಗಿ ಪರಿವರ್ತನೆಯಾಗಬೇಕು. ಇದೇ ದಿಸೆಯಲ್ಲಿ ಯೋಚಿಸಿದಾಗ ಹೊಳೆದಿದ್ದು ಕೆಂಪಡಿಕೆಯ ಕಷಾಯ. ಈ ಪ್ರಯೋಗ ಯಶಸ್ವಿಯಾಗಲಿಲ್ಲ. ಅದರ ರುಚಿ ನನಗೇ ಸಹ್ಯವಾಗಲಿಲ್ಲ. ಆದರೆ, ತಲೆಯೊಳಗಿನ ಹುಳ ಹೊರಹೋಗಿರಲಿಲ್ಲ’ ಎಂದು ಉತ್ಪನ್ನದ ಹೊಳಹನ್ನು ಎಸ್.ಎಂ.ಹೆಗಡೆ ಬಿಚ್ಚಿಟ್ಟರು.

‘ಅಂದು ರಾತ್ರಿ 8 ಗಂಟೆ. ನಾಲ್ಕು ಚಾಲಿ ಅಡಿಕೆ ತಂದು ಕುಟ್ಟಿ ಪುಡಿ ಮಾಡಲು ಪ್ರಯತ್ನಿಸಿದೆ. ಮಿಕ್ಸಿಯ ಬ್ಲೇಡ್ ಮುರಿದು ಹೋಯಿತು. ಬೀಸುವ ಕಲ್ಲಿನಲ್ಲಿ ಕುಟ್ಟಿ ಕುಟ್ಟಿ ಅಂತೂ ಒಂದು ಹದಕ್ಕೆ ಹುಡಿ ಹಾರಿತು. ಅಷ್ಟೊತ್ತಿಗೆ ರಾತ್ರಿ 2 ಗಂಟೆ. ನಿದ್ದೆಯಲ್ಲಿದ್ದ ಹೆಂಡತಿಯನ್ನು ಎಬ್ಬಿಸಿದೆ. ಕಷಾಯದ ಮೊದಲ ಪ್ರಯೋಗ ಹೆಂಡತಿಯ ಮೇಲೆ. ಆಕೆ ರುಚಿಯನ್ನು ಕಂಡು ಬೆರಗಾದಳು. ಅಣ್ಣ–ಅತ್ತಿಗೆಯನ್ನೂ ಎಬ್ಬಿಸಿ ಕಷಾಯ ಕೊಟ್ಟೆ. ಕಷಾಯದ ರುಚಿ, ಅವರ ನಿದ್ದೆಯ ಮಂಪರನ್ನು ಓಡಿಸಿತ್ತು. ಊರೆಲ್ಲ ಮಲಗಿರುವಾಗ ನಾವು ಇದರ ಮೌಲ್ಯವರ್ಧನೆಯ ಬಗ್ಗೆ ಚರ್ಚಿಸಿದೆವು’ ಎಂದು ಓಜಸ್‌ನ ಹುಟ್ಟನ್ನು ಹೊರಗಿಕ್ಕಿದರು.

‘ಕಷಾಯದ ಕಪ್‌ನ ತಳದಲ್ಲಿ ಅಡಿಕೆ ಹುಡಿ ಶೇಖರಣೆಯಾಗದೇ, ಹಾಲಿನಲ್ಲಿ ಸಂಪೂರ್ಣ ಮಿಶ್ರಣವಾಗಬೇಕಾದ ಸವಾಲು ಎದುರಾಯಿತು. ಸತತ ಪ್ರಯೋಗದಿಂದ ಇದೂ ಯಶಸ್ವಿಯಾಯಿತು. 100 ಗ್ರಾಂ ಓಜಸ್ ಪ್ಯಾಕೆಟ್‌ನಲ್ಲಿ ಶೇ 100ರಷ್ಟು ಅಡಿಕೆ, ಮಿಕ್ಕಿದ್ದು ಏಲಕ್ಕಿ, ಲವಂಗ, ಜಾಯಿಕಾಯಿ ಇನ್ನಿತರ ಔಷಧೀಯ ಗುಣವುಳ್ಳ ತೋಟದ ಉತ್ಪನ್ನಗಳಿರುತ್ತವೆ. ಅಡಿಕೆಯನ್ನು ಆಹಾರ ಉತ್ಪನ್ನವಾಗಿ ಬಳಕೆ ಮಾಡುವ ಸಣ್ಣ ಪ್ರಯತ್ನ ಇದು.ಬಿಡುವಿನ ವೇಳೆಯಲ್ಲಿ ಕುಟುಂಬದ ಸದಸ್ಯರಿಗೆ ಓಜಸ್ ಕೆಲಸ ಕೊಟ್ಟಿದೆ. ಬೆಂಗಳೂರಿನ ಸ್ನೇಹಿತರ ಮನವನ್ನೂ ಗೆದ್ದಿದ್ದಾನೆ ಓಜಸ್’ ಎಂದ ಅವರ ಮಗ ಅವಿನಾಶ್, ಇದಕ್ಕಾಗಿ ಒಂದು ವೆಬ್‌ಸೈಟ್ ಸಿದ್ಧಗೊಳ್ಳುತ್ತಿದೆ.
ಎಸ್.ಎಂ.ಹೆಗಡೆ ಸಂಪರ್ಕ ಸಂಖ್ಯೆ: 9449453797.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.