ADVERTISEMENT

ವಿದೇಶಿ ಬಂಡವಾಳ ಒಳಹರಿವು ಹೆಚ್ಚಳ

ಪಿಟಿಐ
Published 2 ಸೆಪ್ಟೆಂಬರ್ 2018, 13:45 IST
Last Updated 2 ಸೆಪ್ಟೆಂಬರ್ 2018, 13:45 IST
   

ನವದೆಹಲಿ: ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ಸತತ ಎರಡನೇ ತಿಂಗಳಿನಲ್ಲಿಯೂ ವಿದೇಶಿ ಸಾಂಸ್ಥಿಕ ಬಂಡವಾಳ ಒಳಹರಿವಿನಲ್ಲಿ ಏರಿಕೆಯಾಗಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರುಜುಲೈನಲ್ಲಿ ₹ 2,300 ಕೋಟಿ ಹೂಡಿಕೆ ಮಾಡಿದ್ದರು. ಆಗಸ್ಟ್‌ನಲ್ಲಿ ₹ 5,100 ಕೋಟಿ ಹೂಡಿಕೆ ಮಾಡಿದ್ದಾರೆ.

ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಗಳ ಸಾಧನೆ ನಿರೀಕ್ಷಿತ ಮಟ್ಟದಲ್ಲಿರುವುದು, ಹಣದುಬ್ಬರ ಇಳಿಕೆಯ ಪ್ರಭಾವದಿಂದಾಗಿ ಹೂಡಿಕೆ ಚಟುವಟಿಕೆ ಸುಧಾರಿಸಿಕೊಂಡಿದೆ ಎಂದು ತಜ್ಞರು ಹೇಳಿದ್ದಾರೆ.

ADVERTISEMENT

ಏಪ್ರಿಲ್‌–ಜೂನ್‌ ಅವಧಿಯಲ್ಲಿ ₹ 61 ಸಾವಿರ ಕೋಟಿ ಹಿಂದಕ್ಕೆ ಪಡೆದಿದ್ದರು.

‘ದೇಶದ ಆರ್ಥಿ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತಿರುವುದರಿಂದ ಬಂಡವಾಳ ಒಳಹರಿವಿನಲ್ಲಿ ಚೇತರಿಕೆ ಕಂಡುಬಂದಿದೆ. ಮಧ್ಯಮ ಮತ್ತು ಕೆಳ ಮಧ್ಯಮ ಶ್ರೇಣಿ ಸೂಚ್ಯಂಕಗಳ ಏರಿಕೆ, ಭಾರತದ ಆರ್ಥಿಕತೆಯ ಬಗ್ಗೆ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌) ಸಕಾರಾತ್ಮಕ ಭಾವನೆ ಹೊಂದಿರುವುದು ಹೂಡಿಕೆಗೆ ಉತ್ತೇಜನ ನೀಡುತ್ತಿದೆ’ ಎಂದು ಮಾರ್ನಿಂಗ್‌ಸ್ಟಾರ್‌ ಸಂಸ್ಥೆಯ ಹಿರಿಯ ವಿಶ್ಲೇಷಕ ವ್ಯವಸ್ಥಾಪಕ ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ.

ವಿದೇಶಿ ಬಂಡವಾಳ ಒಳಹರಿವು ಸಕಾರಾತ್ಮಕ ಬೆಳವಣಿಗೆಯಾಗಿದೆ. ಆದರೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೂಡಿಕೆ ಪ್ರಮಾಣ ಕಡಿಮೆ ಇದೆ. ದೇಶದ ಷೇರುಪೇಟೆಯ ಸ್ಥಿತಿ ಅನಿಶ್ಚಿತವಾಗಿದ್ದು, ವಿದೇಶಿ ಹೂಡಿಕೆದಾರರು ಎಚ್ಚರಿಕೆಯಿಂದ ವಹಿವಾಟು ನಡೆಸುತ್ತಿದ್ದಾರೆ ಎನ್ನುವುದನ್ನು ಇದು ಸೂಚಿಸುತ್ತಿದೆ’ ಎಂದೂ ಅವರು ತಿಳಿಸಿದ್ದಾರೆ.

ಅಂಕಿ–ಅಂಶ

ಹೊರಹರಿವು

₹ 2,400 ಕೋಟಿ - ಮಾರಾಟ ಮಾಡಿರುವ ಷೇರುಗಳ ಮೌಲ್ಯ

₹ 38 ಸಾವಿರ ಕೋಟಿ - ಸಾಲಪತ್ರ ಮಾರುಕಟ್ಟೆಯಿಂದ ಹಿಂದಕ್ಕೆ ಪಡೆದಿರುವ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.