ADVERTISEMENT

ವಿದೇಶಿ ಷೇರು ಪೇಟೆಗಳಲ್ಲಿ ಸರ್ಕಾರಿ ಬಾಂಡ್‌ ವಹಿವಾಟು: ಶಕ್ತಿಕಾಂತ್ ದಾಸ್‌

ಪಿಟಿಐ
Published 21 ಫೆಬ್ರುವರಿ 2020, 20:07 IST
Last Updated 21 ಫೆಬ್ರುವರಿ 2020, 20:07 IST
ಶಕ್ತಿಕಾಂತ್‌ ದಾಸ್‌
ಶಕ್ತಿಕಾಂತ್‌ ದಾಸ್‌   

ನವದೆಹಲಿ: ಕೇಂದ್ರ ಸರ್ಕಾರದ ಬಾಂಡ್‌ಗಳನ್ನು ವಿದೇಶದ ಷೇರುಪೇಟೆಗಳಲ್ಲಿ ವಹಿವಾಟು ನಡೆಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ.

‘ಈ ಸಂಬಂಧ ಈಗಾಗಲೇ ಕೆಲ ಸಂಸ್ಥೆಗಳ ಜತೆ ಚರ್ಚೆ ನಡೆಸಲಾಗಿದೆ. ಸಾಧ್ಯವಾದಷ್ಟು ಬೇಗ ಈ ಆಲೋಚನೆ ಕಾರ್ಯರೂಪಕ್ಕೆ ಬರಲಿದೆ. ತಕ್ಷಣಕ್ಕೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ್ ದಾಸ್‌ ಹೇಳಿದ್ದಾರೆ.

ಸರ್ಕಾರಿ ಬಾಂಡ್‌ಗಳು ವಿದೇಶಿ ಷೇರುಪೇಟೆಗಳಲ್ಲಿ ವಹಿವಾಟು ನಡೆಸುವುದರಿಂದ ವಿದೇಶಿ ಬಂಡವಾಳದ ಒಳ ಹರಿವು ಹೆಚ್ಚಲಿದೆ. ದೀರ್ಘಾವಧಿ ಉದ್ದೇಶದ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಲೂ ಇದು ನೆರವಾಗಲಿದೆ.

ADVERTISEMENT

ವಿದೇಶಿ ಹೂಡಿಕೆದಾರರು ಬಹಳ ದಿನಗಳಿಂದ ಈ ಸಲಹೆ ಮುಂದಿಟ್ಟಿದ್ದರು. 2020–21ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದೆ. ‘ಕೆಲ ನಿರ್ದಿಷ್ಟ ಸಾಲ ಪತ್ರಗಳನ್ನು ವಿದೇಶಿ ಹೂಡಿಕೆದಾರರಿಗೂ ಮುಕ್ತಗೊಳಿಸಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಬಜೆಟ್‌ ಭಾಷಣದಲ್ಲಿ ತಿಳಿಸಿದ್ದರು.

‘ಮುಂಚೂಣಿ 50 ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ಕಾರ್ಯವೈಖರಿಯ ಮೇಲೆ ಕೇಂದ್ರೀಯ ಬ್ಯಾಂಕ್‌ ತೀವ್ರ ಸ್ವರೂಪದ ನಿಗಾ ಇರಿಸಿದೆ. ವಾಣಿಜ್ಯ ಬ್ಯಾಂಕ್‌ಗಳೂ ಸೇರಿದಂತೆ ಒಟ್ಟಾರೆ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದಕ್ಕೆ ಆರ್‌ಬಿಐ ಬದ್ಧವಾಗಿದೆ.

‘ಎನ್‌ಬಿಎಫ್‌ಸಿ’ಗಳ ಆಡಳಿತ ಮಂಡಳಿ, ಪ್ರವರ್ತಕರ ಜತೆ ಆರ್‌ಬಿಐ ನಿರಂತರವಾಗಿ ಸಂಪರ್ಕದಲ್ಲಿ ಇದೆ. ಮಾರುಕಟ್ಟೆ ಆಧಾರಿತ ಪರಿಹಾರ ಕ್ರಮಗಳ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು, ಹೆಚ್ಚುವರಿ ಹಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಇತ್ತೀಚಿನ ಕೆಲ ತಿಂಗಳುಗಳಿಂದ ಈ ವಲಯದಲ್ಲಿ ಸಾಲ ನೀಡಿಕೆ ಪ್ರಮಾಣದಲ್ಲಿ ಏರಿಕೆ ಕಂಡು ಬರುತ್ತಿದೆ’ ಎಂದೂ ದಾಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.