ಮುಂಬೈ: ಜಿಎಸ್‌ಟಿ ಮಂಡಳಿಯು ಹೊಸ ತೆರಿಗೆ ಘೋಷಣೆ ಮಾಡಿದ ಬೆನ್ನಲ್ಲೇ ದೇಶದ ಷೇರುಪೇಟೆ ಸೂಚ್ಯಂಕಗಳು ಗುರುವಾರದ ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡಿವೆ.
ಬಿಎಸ್‌ಇ ಸೆನ್ಸೆಕ್ಸ್ 888.96 ಅಂಶ ಏರಿಕೆ ಕಂಡು 81,456.67ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 265.7 ಅಂಶ ಏರಿಕೆ ಕಂಡು 24,980.75ಕ್ಕೆ ತಲುಪಿದೆ.
ಮಹೀಂದ್ರ ಆ್ಯಂಡ್ ಮಹೀಂದ್ರ ಷೇರುಗಳು ಶೇ 7.50ರಷ್ಟು ಏರಿಕೆ ಕಂಡಿದೆ. ಬಜಾಜ್ ಫೈನಾನ್ಸ್, ಹಿಂದೂಸ್ತಾನ್ ಯೂನಿಲಿವರ್, ಬಜಾಬ್ ಫಿನ್‌ಸರ್ವ್, ಐಟಿಸಿ, ಟಾಟಾ ಮೋಟಾರ್ಸ್, ಅಲ್ಟ್ರಾಟೆಕ್ ಸಿಮೆಂಟ್ ಸಹ ಲಾಭ ಗಳಿಸಿವೆ.
ಹಾಗಿದ್ದರೂ ಎಟರ್ನಲ್, ಟಾಟಾ ಸ್ಟೀಲ್, ಎನ್‌ಟಿಪಿಸಿ ಮತ್ತು ಎಚ್‌ಸಿಎಲ್ ಟೆಕ್ ಷೇರುಗಳು ನಷ್ಟ ಅನುಭವಿಸಿವೆ.
ಜನ ಸಾಮಾನ್ಯರು ಬಳಕೆ ಮಾಡುವ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಪರಿಷ್ಕರಿಸುವ ಮಹತ್ವದ ನಿರ್ಧಾರವನ್ನು ಜಿಎಸ್‌ಟಿ ಮಂಡಳಿ ಬುಧವಾರ ತೆಗೆದುಕೊಂಡಿತ್ತು. ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಈಗ ಇರುವ ನಾಲ್ಕು ತೆರಿಗೆ ಹಂತಗಳನ್ನು ಎರಡು ಹಂತಗಳಿಗೆ ತಗ್ಗಿಸುವ ಪ್ರಸ್ತಾವಕ್ಕೆ ಮಂಡಳಿಯು ಒಪ್ಪಿಗೆ ನೀಡಿದೆ.
ಈ ಎರಡು ತೆರಿಗೆ ಹಂತಗಳ (ಶೇ 5 ಮತ್ತು ಶೇ 18) ಹೊಸ ವ್ಯವಸ್ಥೆಯು ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಈ ಮೂಲಕ ದೇಶದ ಜನರಿಗೆ ಕೇಂದ್ರ ಸರ್ಕಾರ ದಸರಾ ಭರ್ಜರಿ ಉಡುಗೊರೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.