ADVERTISEMENT

ಪುಟಿದೆದ್ದ ಷೇರುಪೇಟೆ: 1,736 ಅಂಶ ಜಿಗಿದ ಸೆನ್ಸೆಕ್ಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಫೆಬ್ರುವರಿ 2022, 11:20 IST
Last Updated 15 ಫೆಬ್ರುವರಿ 2022, 11:20 IST
ಷೇರುಪೇಟೆಯಲ್ಲಿ ಗೂಳಿ ಓಟ–ಪ್ರಾತಿನಿಧಿಕ ಚಿತ್ರ
ಷೇರುಪೇಟೆಯಲ್ಲಿ ಗೂಳಿ ಓಟ–ಪ್ರಾತಿನಿಧಿಕ ಚಿತ್ರ   

ಮುಂಬೈ: ಸೋಮವಾರ ತೀವ್ರ ಕುಸಿತಕ್ಕೆ ಒಳಗಾಗಿದ್ದ ಭಾರತದ ಷೇರುಪೇಟೆಗಳಲ್ಲಿ ಇಂದು ಖರೀದಿಯ ಉತ್ಸಾಹ ಕಂಡು ಬಂದಿತು. ಅದರಿಂದಾಗಿ ಸೆನ್ಸೆಕ್ಸ್‌ ಶೇಕಡ 3ರಷ್ಟು ಚೇತರಿಕೆ ಕಾಣುವ ಮೂಲಕ 58,142.05 ಅಂಶಗಳಲ್ಲಿ ವಹಿವಾಟು ಕೊನೆಗೊಂಡಿತು.

ಉಕ್ರೇನ್‌ ಮತ್ತು ರಷ್ಯಾ ನಡುವೆ ಯುದ್ಧದ ವಾತಾವರಣ ಸೃಷ್ಟಿಯಾದ ಪರಿಣಾಮ ದೇಶದ ಷೇರುಪೇಟೆಗಳಲ್ಲಿ ಸೋಮವಾರ ಮಾರಾಟದ ಒತ್ತಡ ಉಂಟಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,747 ಅಂಶ ಇಳಿಕೆ ಕಂಡಿತ್ತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 531 ಅಂಶ ಕುಸಿದಿತ್ತು. ಇಂದು ರಷ್ಯಾ ಪಡೆಗಳು ಉಕ್ರೇನ್‌ ಸಮೀಪದ ಪ್ರದೇಶದಿಂದ ಹಿಂದಕ್ಕೆ ಹೊರಟಿರುವುದು ವರದಿಯಾಗಿದ್ದು, ಷೇರುಪೇಟೆಗಳಲ್ಲಿ ದಿಢೀರ್‌ ಜಿಗಿತ ದಾಖಲಾಗಿದೆ.

ಇಂದು ಸೆನ್ಸೆಕ್ಸ್‌ 1,736.21 ಅಂಶ ಹೆಚ್ಚಳವಾದರೆ, ನಿಫ್ಟಿ 509.70 ಅಂಶ (ಶೇ 3.03) ಏರಿಕೆಯಾಗಿ 17,352.50 ಅಂಶಗಳಲ್ಲಿ ವಹಿವಾಟು ಮುಗಿದಿದೆ. ಸುಮಾರು 1,996 ಷೇರುಗಳು ಚೇತರಿಕೆ ಕಂಡಿದ್ದು, 1286 ಷೇರುಗಳ ಬೆಲೆ ಇಳಿಮುಖವಾಗಿವೆ.

ADVERTISEMENT

ಟಾಟಾ ಮೋಟಾರ್ಸ್‌ ಷೇರು ಬೆಲೆ ಶೇ 6.6ಕ್ಕೂ ಅಧಿಕ ಹೆಚ್ಚಳ ದಾಖಲಿಸಿದರೆ, ಐಷರ್‌ ಮೋಟಾರ್ಸ್‌, ಬಜಾಜ್‌ ಫೈನಾನ್ಸ್‌, ಶ್ರೀ ಸಿಮೆಂಟ್ಸ್‌ ಹಾಗೂ ಹೀರೊ ಮೊಟೊಕಾರ್ಪ್‌ ಷೇರುಗಳು ಶೇಕಡ 4ರಿಂದ 5ರವರೆಗೂ ಗಳಿಕೆ ಕಂಡವು.

ಆಟೊ, ಬ್ಯಾಂಕ್‌, ರಿಯಾಲ್ಟಿ, ಐಟಿ ಹಾಗೂ ಎಫ್‌ಎಂಜಿಸಿ ವಲಯದ ಷೇರುಗಳ ಬೆಲೆ ಶೇಕಡ 2ರಿಂದ 3ರವರೆಗೂ ಏರಿಕೆಯಾಗಿವೆ. ಸಿಪ್ಲಾ ಮತ್ತು ಒಎನ್‌ಜಿಸಿ ಷೇರು ಬೆಲೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.