ADVERTISEMENT

ಹೊಸ ಎತ್ತರದತ್ತ ಷೇರುಪೇಟೆ: 62,000 ಅಂಶ ದಾಟಿದ ಸೆನ್ಸೆಕ್ಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2021, 7:06 IST
Last Updated 19 ಅಕ್ಟೋಬರ್ 2021, 7:06 IST
ಷೇರುಪೇಟೆಯಲ್ಲಿ ಗೂಳಿ ಓಟ–ಪ್ರಾತಿನಿಧಿಕ ಚಿತ್ರ
ಷೇರುಪೇಟೆಯಲ್ಲಿ ಗೂಳಿ ಓಟ–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ದೇಶದ ಷೇರುಪೇಟೆಗಳಲ್ಲಿ ಮಂಗಳವಾರವೂ ಸಕಾರಾತ್ಮಕ ವಹಿವಾಟು ಮುಂದುವರಿದಿದ್ದು, ಸೆನ್ಸೆಕ್ಸ್‌ ಹೊಸ ದಾಖಲೆಯಾದ 62,000 ಮಟ್ಟ ದಾಟಿದೆ. ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಉತ್ತಮ ಗಳಿಕೆಯ ನಿರೀಕ್ಷೆಯ ಕಾರಣಗಳಿಂದಾಗಿ ಐಟಿ ವಲಯದ ಷೇರುಗಳತ್ತ ಹೂಡಿಕೆದಾರರು ಮುಖಮಾಡಿದ್ದಾರೆ.

400 ಅಂಶಗಳಷ್ಟು ಏರಿಕೆ ದಾಖಲಿಸಿದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, ಕೆಲ ನಿಮಿಷಗಳು ಮಾರಾಟದ ಒತ್ತಡಕ್ಕೆ ಸಿಲುಕಿ ಅಲ್ಪ ಇಳಿಮುಖವಾಯಿತು. ಈಗ ವಹಿವಾಟು ಮತ್ತೆ ಏರುಗತಿಯಲ್ಲಿ ಸಾಗಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 98.80 ಅಂಶ ಹೆಚ್ಚಳವಾಗಿ 18,575.85 ಅಂಶಗಳಲ್ಲಿ ವಹಿವಾಟು ಮುಂದುವರಿದಿದೆ.

ಹಣದುಬ್ಬರ ಕಡಿಮೆಯಾಗಿರುವುದು, ಹಬ್ಬದ ಸಂದರ್ಭವಾಗಿರುವುದರಿಂದ ಬೇಡಿಕೆ ಮತ್ತು ಗಳಿಕೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿಂದ ಹೂಡಿಕೆದಾರರು ಷೇರು ಖರೀದಿ ನಡೆಸಿದ್ದಾರೆ.

ADVERTISEMENT

ನಿಫ್ಟಿ ಐಟಿ ಸೂಚ್ಯಂಕ ಶೇ 2.8ರಷ್ಟು ಏರಿಕೆಯಾಗಿದೆ. ಟಿಟಿಕೆ ಪ್ರೆಸ್ಟೀಜ್‌ ಷೇರು ಮುಖಬೆಲೆ ಸೀಳಿಕೆ (ಸ್ಟಾಕ್‌ ಸ್ಪ್ಲಿಟ್‌) ಸಾಧ್ಯತೆ ಇರುವುದರಿಂದ ಷೇರು ಶೇ 13ರಷ್ಟು ಹೆಚ್ಚಳವಾಗಿದೆ. ಎಲ್‌ಆ್ಯಂಡ್‌ಟಿ ಷೇರುಗಳು ಶೇ 14ರಷ್ಟು ಏರಿಕೆಯಾಗಿದೆ. ಆದರೆ, ಐಟಿಸಿ ಷೇರು ಬೆಲೆ ಶೇ 4ರಷ್ಟು ಕುಸಿದಿದೆ.

ಸೋಮವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹512.44 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.