ADVERTISEMENT

ಶೇ 17ರಷ್ಟು ಕುಸಿದ ಐಆರ್‌ಸಿಟಿಸಿ ಷೇರು; ಮಾರಾಟದ ಒತ್ತಡದಲ್ಲಿ ಷೇರುಪೇಟೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಅಕ್ಟೋಬರ್ 2021, 8:41 IST
Last Updated 20 ಅಕ್ಟೋಬರ್ 2021, 8:41 IST
ಐಆರ್‌ಸಿಟಿಸಿ
ಐಆರ್‌ಸಿಟಿಸಿ   

ಮುಂಬೈ: ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಷೇರು ಬೆಲೆ ಬುಧವಾರ ತೀವ್ರ ಕುಸಿತಕ್ಕೆ ಒಳಗಾಗಿದ್ದು, ಶೇಕಡ 17ಕ್ಕೂ ಹೆಚ್ಚು ಇಳಿಕೆಯಾಗಿದೆ. ಇದರಿಂದಾಗಿ ಐಆರ್‌ಸಿಟಿಸಿಯ ಪ್ರತಿ ಷೇರು ಬೆಲೆ ₹928ಕ್ಕೂ ಹೆಚ್ಚು ಕುಸಿತ ದಾಖಲಿಸಿದೆ.

ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಐಆರ್‌ಸಿಟಿಸಿ ಷೇರು ಬೆಲೆ ದಾಖಲೆಯ ₹6,393 ತಲುಪಿತ್ತು. ಆ ಮೂಲಕ ಕಂಪನಿಯ ಮಾರುಕಟ್ಟೆ ಮೌಲ್ಯವು ₹1 ಲಕ್ಷ ಕೋಟಿ ದಾಟಿತ್ತು. ಆದರೆ, ವಹಿವಾಟು ಅಂತ್ಯಕ್ಕೆ ಷೇರು ಶೇ 8.75ರಷ್ಟು ಕುಸಿದಿತ್ತು. ಇಂದು ಮತ್ತೆ ಷೇರು ಬೆಲೆ ಇಳಿಕೆ ಮುಂದುವರಿದಿದ್ದು, ಪ್ರತಿ ಷೇರಿಗೆ ₹4,527.95ರಲ್ಲಿ ವಹಿವಾಟು ನಡೆದಿದೆ.

ಐಆರ್‌ಸಿಟಿಸಿ ಷೇರುಗಳನ್ನು ಫ್ಯೂಚರ್ಸ್‌ ಆ್ಯಂಡ್‌ ಆಪ್ಷನ್ಸ್‌ (ಎಫ್‌ಆ್ಯಂಡ್‌ಒ) ವಹಿವಾಟಿನಿಂದ ನಿರ್ಬಂಧಿಸಿರುವ ಕಾರಣದಿಂದಾಗಿ ಹೂಡಿಕೆದಾರರು ಷೇರು ಮಾರಾಟಕ್ಕೆ ಮುಂದಾಗಿದ್ದಾರೆ. ಮಾರುಕಟ್ಟೆ ಸಂಗ್ರಹ ಮಿತಿಯ ಶೇ 95ರಷ್ಟು ಮಟ್ಟ ಮೀರಿರುವ ಕಾರಣದಿಂದಾಗಿ ಎಫ್‌ಆ್ಯಂಡ್‌ಒ ವಹಿವಾಟಿಗೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.

ADVERTISEMENT

ಇಂದು ಲೋಹ, ಎಫ್‌ಎಂಸಿಜಿ, ತೈಲ ಹಾಗೂ ಅನಿಲಕ್ಕೆ ಸಂಬಂಧಿಸಿದ ಷೇರುಗಳು ಮಾರಾಟ ಒತ್ತಡಕ್ಕೆ ಸಿಲುಕಿದ ಪರಿಣಾಮ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ, 73.80 ಅಂಶ ಕಡಿಮೆಯಾಗಿ 18,344.95 ಅಂಶಗಳಲ್ಲಿ ವಹಿವಾಟು ನಡೆದಿದೆ. ಸೆನ್ಸೆಕ್ಸ್‌ 195.15 ಅಂಶ ಕಡಿಮೆಯಾಗಿ 61,520.90 ಅಂಶಗಳಿಗೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.