ಜಾಗತಿಕ ಅನಿಶ್ಚಿತತೆಗಳು ಹೆಚ್ಚಾಗಿರುವ ಈ ಹೊತ್ತಿನಲ್ಲಿ ವಿದೇಶಿ ಮಾರುಕಟ್ಟೆಗಳ ಮೇಲೆ ಹೆಚ್ಚಿನ ಅವಲಂಬನೆ ಇರುವ ಹೂಡಿಕೆಗಳು ಹೆಚ್ಚಿನ ಲಾಭ ನೀಡುತ್ತಿಲ್ಲ. ಆದರೆ ವಿದೇಶಗಳ ಮೇಲೆ ಅವಲಂಬನೆ ಕಡಿಮೆ ಇರುವ ಹಾಗೂ ಬೇರೆ ಆಯಾಮಗಳಿಂದ ಸ್ಥಿರವಾಗಿಯೂ ಇರುವ ಕೆಲವು ಕಂಪನಿಗಳ ಮೇಲಿನ ಹೂಡಿಕೆಯು ಈ ಸಂದರ್ಭಕ್ಕೆ ಹೆಚ್ಚು ಸೂಕ್ತವಾಗಬಹುದು ಎಂಬ ಅನಿಸಿಕೆ ತಜ್ಞರದ್ದು.
‘ಮುಂದೇನು...?’ ಇದು ನಾವು ಜೀವನದಲ್ಲಿ ಮತ್ತೆ ಮತ್ತೆ ಕೇಳಿಕೊಳ್ಳುವ, ಕೇಳಿಸಿಕೊಳ್ಳುವ ಪ್ರಶ್ನೆ. ಜೀವನದಲ್ಲಿ ಮುಂದಕ್ಕೆ ಸಾಗಬೇಕಿರುವ ಬಹುತೇಕ ಸಂದರ್ಭಗಳಲ್ಲಿ ಈ ಪ್ರಶ್ನೆ ನಮ್ಮನ್ನು ಎದುರಾಗುತ್ತದೆ. ಪ್ರಮುಖ ಶೈಕ್ಷಣಿಕ ಪರೀಕ್ಷೆಯೊಂದರಲ್ಲಿ ಉತ್ತೀರ್ಣ ಆದ ನಂತರ, ವೃತ್ತಿಯ ಸ್ಥಳದಲ್ಲಿ ಬಡ್ತಿ ಪಡೆದ ನಂತರ, ಆರೋಗ್ಯದ ವಿಚಾರದಲ್ಲಿ ಮೈಲಿಗಲ್ಲೊಂದನ್ನು ದಾಟಿದ ನಂತರದಲ್ಲಿ... ಇಂತಹ ಸಂದರ್ಭಗಳಲ್ಲೆಲ್ಲ ಈ ಪ್ರಶ್ನೆ ಎದುರಾಗುತ್ತದೆ.
ಈ ಪ್ರಶ್ನೆ ಏಕೆ ಹೀಗೆ ಎದುರಾಗುತ್ತ ಇರುತ್ತದೆಯೆಂದರೆ, ನಾವು ಪ್ರಗತಿ ಮತ್ತು ಬೆಳವಣಿಗೆಯ ಜೊತೆ ಬೆಸೆದುಕೊಂಡಿದ್ದೇವೆ. ಮುಂದಿನ ಸವಾಲನ್ನು ನಾವು ಎದುರುನೋಡುತ್ತ ಇರುತ್ತೇವೆ, ಮುಂದೆ ಹೊಸ ಅವಕಾಶ ಎಲ್ಲಿ ಸಿಗಬಹುದು ಎಂಬುದನ್ನು ಅರಸುತ್ತ ಇರುತ್ತೇವೆ, ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಮುಂದಿನ ಹಂತದ ಬೆಳವಣಿಗೆ ಎಲ್ಲಿ ಶುರುವಾಗಬಹುದು ಎಂಬುದನ್ನು ಹುಡುಕುತ್ತ ಇರುತ್ತೇವೆ.
ಈಕ್ವಿಟಿ ಹೂಡಿಕೆದಾರರ ವಿಚಾರದಲ್ಲಿ, ‘ಮುಂದೇನು’ ಎಂಬ ಪ್ರಶ್ನೆಯು ಈಗ ದೇಶದ ಆರ್ಥಿಕ ಪ್ರಗತಿ ಹಾಗೂ ಷೇರುಪೇಟೆಗಳಿಗೆ ಅನ್ವಯವಾಗುತ್ತದೆ. ವಿಶ್ವದಲ್ಲಿ ಅತ್ಯಂತ ವೇಗದ ಬೆಳವಣಿಗೆಯನ್ನು ಕಾಣುತ್ತಿರುವ ಪ್ರಮುಖ ಅರ್ಥ ವ್ಯವಸ್ಥೆಗಳು ಹಾಗೂ ಷೇರುಪೇಟೆಗಳ ಸಾಲಿನಲ್ಲಿ ಭಾರತವು ತನ್ನ ಸ್ಥಾನ ಉಳಿಸಿಕೊಂಡಿದೆ. ಇದರ ನೇರ ಪ್ರಯೋಜನವನ್ನು ಷೇರುಪೇಟೆ ಹೂಡಿಕೆದಾರರು ಈಚಿನ ವರ್ಷಗಳಲ್ಲಿ ಕಂಡಿದ್ದಾರೆ. ಷೇರುಪೇಟೆಯಲ್ಲಿ, ಬೃಹತ್ ಗಾತ್ರದ ಉದ್ದಿಮೆಗಳಿಗೆ ಹೋಲಿಸಿದರೆ ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳು ಹೆಚ್ಚಿನ ಲಾಭವನ್ನು ಕಂಡಿವೆ.
ಮುಂದಿನ ದಿನಗಳಲ್ಲಿ ಆರ್ಥಿಕ ಬೆಳವಣಿಗೆಯ ವೇಗ ಕಡಿಮೆ ಆಗುವ ಸಾಧ್ಯತೆ ಇದೆ. ಲಾರ್ಜ್‌ಕ್ಯಾಪ್ ವಲಯದ ಷೇರುಗಳ ಬೆಲೆಯು ಸಮರ್ಥನೀಯ ಮಟ್ಟದಲ್ಲಿ ಇರುವುದು ಆರ್ಥಿಕತೆಯ ಬೆಳವಣಿಗೆಯ ವೇಗಕ್ಕೆ ಸರಿಹೊಂದುವಂತೆ ಇದೆ. ಅರ್ಥ ವ್ಯವಸ್ಥೆ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯ ಸಂದರ್ಭದಲ್ಲಿ, ದೇಶಿ ಹಾಗೂ ಜಾಗತಿಕ ಹೂಡಿಕೆದಾರರ ಆದ್ಯತೆಯು, ಸಣ್ಣ ಕಂಪನಿಗಳಿಗಿಂತಲೂ ಹೆಚ್ಚಾಗಿ ಸ್ಥಿರವಾದ ಲಾರ್ಜ್‌ಕ್ಯಾಪ್ ಕಂಪನಿಗಳೇ ಆಗಿರಬಹುದು.
ಲಾರ್ಜ್‌ಕ್ಯಾಪ್ ಕಂಪನಿಗಳಲ್ಲಿ ಹೂಡಿಕೆ ಮಾಡುವ ಹೆಚ್ಚಿನವರಿಗೆ ನಿಫ್ಟಿ–50 ಸೂಚ್ಯಂಕದ ಮೇಲಿನ ಹೂಡಿಕೆಯು ಮೊದಲ ಆಯ್ಕೆಯಾಗಿರುತ್ತದೆ. ಆದರೆ ದೇಶದ 50 ಅತಿದೊಡ್ಡ ಕಂಪನಿಗಳಲ್ಲಿ (ನಿಫ್ಟಿ 50 ಸೂಚ್ಯಂಕದಲ್ಲಿ ಇರುವ ಕಂಪನಿಗಳು) ಹೂಡಿಕೆ ಮಾಡಿದ ನಂತರ, ‘ಮುಂದೇನು’ ಎಂಬ ಪ್ರಶ್ನೆ ಸಹಜವಾಗಿ ಎದುರಾಗುತ್ತದೆ. ಇದಕ್ಕೆ ಉತ್ತರ, ಈ 50 ಅತಿದೊಡ್ಡ ಕಂಪನಿಗಳ ಆಚೆಗಿನ ದೊಡ್ಡ 50 ಕಂಪನಿಗಳು. ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳುವ ಹಾಗೂ ಲಾಭದ ಪ್ರಮಾಣವನ್ನು ಜಾಸ್ತಿ ಮಾಡಿಕೊಳ್ಳುವ ಸಾಮರ್ಥ್ಯವಿರುವ ಕಂಪನಿಗಳು ಇವು. ಇವು ಒಳ್ಳೆಯ ರೀತಿಯಲ್ಲಿ ನೆಲೆಯೂರಿರುವ ಕಂಪನಿಗಳು, ಗಟ್ಟಿಯಾದ ವಹಿವಾಟು ಹೊಂದಿರುವ ಕಂಪನಿಗಳು, ಹೊಸ ಬದಲಾವಣೆಗಳಿಂದಾಗಿ ಲಾಭ ಮಾಡಿಕೊಳ್ಳುವ ಸಾಮರ್ಥ್ಯ ಇರುವಂಥವು ಇವು. ಈ ಕಂಪನಿ ಹೂಡಿಕೆದಾರರಿಗೆ ಸ್ಥಿರತೆಯನ್ನೂ, ಬೆಳವಣಿಗೆಯ ಅವಕಾಶವನ್ನೂ ಒಟ್ಟಿಗೇ ನೀಡುತ್ತವೆ.
ಕಂಪನಿಗಳ ಮಾರುಕಟ್ಟೆ ಬಂಡವಾಳದ ಲೆಕ್ಕದಲ್ಲಿ ಇವು 51ರಿಂದ 100ರವರೆಗಿನ ಸ್ಥಾನವನ್ನು ಪಡೆದಿವೆ. ಇವು ‘ನಿಫ್ಟಿ ನೆಕ್ಸ್ಟ್–50’ ಸೂಚ್ಯಂಕದಲ್ಲಿರುವ ಕಂಪನಿಗಳು. ದೇಶದ ಆರ್ಥಿಕತೆಯ ಮುಂದಿನ ಹಂತದ ಬೆಳವಣಿಗೆಯಲ್ಲಿ ಭಾಗಿಯಾಗಲು ಈ ಸೂಚ್ಯಂಕ, ಈ ಕಂಪನಿಗಳು ಉತ್ತಮ ಆಯ್ಕೆಯಾಗಬಲ್ಲವು. ನಿಫ್ಟಿ–50 ಹಾಗೂ ನಿಫ್ಟಿ ನೆಕ್ಸ್ಟ್–50 ಸೂಚ್ಯಂಕಗಳಲ್ಲಿನ ಕಂಪನಿಗಳ ಮೇಲಿನ ಹೂಡಿಕೆಯು, ಲಾರ್ಜ್‌ಕ್ಯಾಪ್ ಕಂಪನಿಗಳ ಮೇಲಿನ ಹೂಡಿಕೆಯನ್ನು ಪರಿಪೂರ್ಣ ಆಗಿಸಬಲ್ಲದು.
ಭಾರಿ ಸಾಮರ್ಥ್ಯ ಇರುವ ಈ ಕಂಪನಿಗಳ ಮೇಲೆ ಹೂಡಿಕೆದಾರರು ಎರಡು ಬಗೆಗಳಲ್ಲಿ ಹಣ ತೊಡಗಿಸಬಹುದು. ಹೂಡಿಕೆದಾರರು ತಾವಾಗಿಯೇ ಈ ಕಂಪನಿಗಳ ಷೇರುಗಳನ್ನು ಖರೀದಿಸಬಹುದು ಅಥವಾ ಮ್ಯೂಚುವಲ್ ಫಂಡ್‌ಗಳ ಮೂಲಕ ಇಲ್ಲಿ ಹಣ ವಿನಿಯೋಗಿಸಬಹುದು. ಅಲ್ಲದೆ, ಪ್ಯಾಸಿವ್ ಮಾರ್ಗದ ಮೂಲಕವೂ ಈ ಕಂಪನಿಗಳಲ್ಲಿ ಹಣ ತೊಡಗಿಸಬಹುದು. ಇದಕ್ಕೆ ನಿಫ್ಟಿ ನೆಕ್ಸ್ಟ್–50 ಸೂಚ್ಯಂಕವನ್ನು ಆಧರಿಸಿದ ಇಟಿಎಫ್ ಸೂಕ್ತ ಆಯ್ಕೆಯಾಗುತ್ತದೆ. ಈ ಇಟಿಎಫ್ ಮೂಲಕ ಹಣ ತೊಡಗಿಸಿದಾಗ, ಈ ಸೂಚ್ಯಂಕದ ಕಂಪನಿಗಳಲ್ಲಿ ಕಡಿಮೆ ವೆಚ್ಚಕ್ಕೆ ಹೂಡಿಕೆ ಮಾಡಲು ಆಗುತ್ತದೆ.
ನಿಫ್ಟಿ ನೆಕ್ಸ್ಟ್–50 ಇಟಿಎಫ್‌ಗಳು ನಿಫ್ಟಿ ನೆಕ್ಸ್ಟ್–50 ಸೂಚ್ಯಂಕದಲ್ಲಿನ ಕಂಪನಿಗಳ ಮೇಲೆ, ಅವುಗಳಿಗೆ ಆ ಸೂಚ್ಯಂಕದಲ್ಲಿ ಇರುವ ಆದ್ಯತೆಗೆ ಅನುಗುಣವಾಗಿ ಹಣ ತೊಡಗಿಸುತ್ತವೆ. ಈ ಬಗೆಯ ಇಟಿಎಫ್‌ಗಳಲ್ಲಿ ಹಣ ತೊಡಗಿಸುವ ಮೂಲಕ ಸೀಮಿತ ಬಂಡವಾಳ ಬಳಸಿಯೂ, ವೈವಿಧ್ಯಮಯ ಕಂಪನಿಗಳಲ್ಲಿ ಹಣ ತೊಡಗಿಸಲು ಸಾಧ್ಯವಾಗುತ್ತದೆ. ಈ ಇಟಿಎಫ್‌ನಲ್ಲಿ ತೊಡಗಿಸಿದ ಹಣಕ್ಕೆ ಸಿಗುವ ಲಾಭದ ಪ್ರಮಾಣವು, ನಿಫ್ಟಿ ನೆಕ್ಸ್ಟ್–50 ಸೂಚ್ಯಂಕದ ಏರಿಕೆಯ ಪ್ರಮಾಣಕ್ಕೆ ತೀರಾ ಹತ್ತಿರದಲ್ಲಿರುತ್ತದೆ.
ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುವುದು ಹಾಗೂ ಷೇರುಗಳಲ್ಲಿ ಹೂಡಿಕೆ ಮಾಡುವುದು ಬಹುತೇಕ ಒಂದೇ ಬಗೆಯಲ್ಲಿ ಇರುತ್ತದೆ. ಇಟಿಎಫ್ ಯೂನಿಟ್‌ಗಳನ್ನು ಷೇರುಪೇಟೆಯ ಮೂಲಕ ಖರೀದಿಸಬಹುದು, ಮಾರಾಟ ಮಾಡಬಹುದು. ಆದರೆ ಇದಕ್ಕೆ ಡಿಮ್ಯಾಟ್ ಖಾತೆಯ ಅಗತ್ಯ ಇದೆ.
ನಿಫ್ಟಿ ನೆಕ್ಸ್ಟ್ 50 ಸೂಚ್ಯಂಕ ಹಾಗೂ ನಿಫ್ಟಿ ನೆಕ್ಸ್ಟ್ 50 ಇಟಿಎಫ್‌ಗಳು ಈಗಿನ ಸಂದರ್ಭದಲ್ಲಿ ಹೆಚ್ಚು ಆಕರ್ಷಕವಾಗಿ ಕಾಣುತ್ತಿವೆ. ಏಕೆಂದರೆ ಈ ಸೂಚ್ಯಂಕದಲ್ಲಿ ಜಾಗತಿಕ ಮಾರುಕಟ್ಟೆಯ ಮೇಲೆ, ರಫ್ತು ಆಧಾರಿತ ವಲಯಗಳ ಮೇಲೆ ಅವಲಂಬಿತವಾಗಿರುವ ಕಂಪನಿಗಳು ಕಡಿಮೆ ಇವೆ. ಜಾಗತಿಕ ಬೆಳವಣಿಗೆಗಳು, ಜಾಗತಿಕ ರಾಜಕೀಯ ವಿದ್ಯಮಾನಗಳು, ಕರೆನ್ಸಿ ಮಾರುಕಟ್ಟೆಯಲ್ಲಿನ ಏರಿಳಿತಗಳಿಗೆ ಸ್ಪಂದಿಸುವ ಮಾಹಿತಿ ತಂತ್ರಜ್ಞಾನದಂತಹ ವಲಯಗಳಿಗೆ ಈ ಸೂಚ್ಯಂಕದಲ್ಲಿ ಆದ್ಯತೆ ಕಡಿಮೆ ಇದೆ.
(ಲೇಖಕ ಐಸಿಐಸಿಐ ಪ್ರುಡೆನ್ಶಿಯಲ್ ಎಎಂಸಿ ಕಂಪನಿ ಹೂಡಿಕೆ ಕಾರ್ಯತಂತ್ರದ ಮುಖ್ಯಸ್ಥ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.